ಮಂಗಳೂರು ನರ್ಸಿಂಗ್ ಕಾಲೇಜಿನಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳಿಂದ ರ್‍ಯಾಗಿಂಗ್
ನಗರದ ನರ್ಸಿಂಗ್ ಕಾಲೇಜೊಂದರ ಕೇರಳ ಮೂಲದ ವಿದ್ಯಾರ್ಥಿಗಳನ್ನು ತಮ್ಮ ಕೊಠಡಿಗೆ ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟು ಗಡ್ಡ ಬೋಳಿಸಿ, ಹಣ ನೀಡುವಂತೆ ಪೀಡಿಸಿ, ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿದ ಆರೋಪದಲ್ಲಿ 9 ಮಂದಿಯನ್ನು ಪಾಂಡೇಶ್ವರ ಪೊಲೀಸರು ರವಿವಾರ ಬಂಧಿಸಿದ್ದಾರೆ.ಅಭಿ, ಅಲೆಕ್ಸ್, ನಂದು, ಶ್ರೀಕುಮಾರ್, ಶಿಹಾಸ್, ಪ್ರವೀಶ್, ಗೋಪಿಕೃಷ್ಣ, ಹಸನ್, ವಿಷ್ಣು, ಜಾಸಿಲ್, ಅಲೆನ್ ಎಂಬರನ್ನು ರೈಲ್ವೇ ನಿಲ್ದಾಣ ಬಳಿಯಿಂದ ಬಂಧಿಸಲಾಗಿದೆ. ಈ ಪೈಕಿ 7 ಮಂದಿ ಗಾಂಜಾ ಸೇವನೆ ಮಾಡಿದ್ದು, ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ದೃಢಪಟ್ಟಿದೆ. ಬಂಧಿತರಲ್ಲಿ ಓರ್ವ ಸಂತ್ರಸ್ತ ವಿದ್ಯಾರ್ಥಿಗಳ ಸೀನಿಯರ್ ಆಗಿದ್ದು, ಏಳು ಮಂದಿ ಬಲ್ಮಠದ ನರ್ಸಿಂಗ್ ಕಾಲೇಜಿನ ಕೇರಳ ಮೂಲದ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳದ ಕಣ್ಣೂರು ಮೂಲದವರಾಗಿದ್ದು, ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ ಅಮಲ್ ಗಿರೀಶ್ ಸ್ನೇಹಿತ ಕಾರ್ತಿಕ್ ವಿಜಯನ್ ಜತೆ ಅತ್ತಾವರದ ಡಿ ಮಾರ್ಟ್‌ನಿಂದ ಫಳ್ನೀರ್‌ನಲ್ಲಿರುವ ಅಪಾರ್ಟ್‌ಮೆಂಟ್‌ಗೆ ಶುಕ್ರವಾರ ರಾತ್ರಿ 7.30ರ ವೇಳೆಗೆ ಹೋಗುತ್ತಿದ್ದಾಗ ಆರೋಪಿಗಳು ಎದುರು ಸಿಕ್ಕಿದ್ದರು. ಅವರಿಗೆ ಹಾಯ್ ಎಂದು ಹೇಳಿದಾಗ ಎಲ್ಲರೂ ಕಿರುಚಾಡಿಕೊಂಡು ಬಂದು ಇಬ್ಬರನ್ನು ಅವರ ರೂಮಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ಹಾಡಿಸಿದ್ದಾರೆ. ಗಡ್ಡವನ್ನು ಬೋಳಿಸಿದ್ದಾರೆ. ಹಣ ನೀಡುವಂತೆ ಒತ್ತಾಯಿಸಿದ್ದು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. 270 ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹೆಲ್ಮೆಟ್ ಮತ್ತು ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ಅಮಲ್ ಗಿರೀಶ್ ಪೊಲೀಸರಿಗೆ ದೂರು ನೀಡಿದ್ದರು.
ಪಾಂಡೇಶ್ವರ ಠಾಣೆ ಇನ್‌ಸ್ಪೆಕ್ಟರ್ ಲೋಕೇಶ್ ಎ.ಸಿ. ಹಾಗು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ಶೀತಲ್ ಅಲಗೂರ್ ಅವರು ಸಿಬ್ಬಂದಿ ಜತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
Leave A Reply