ಅಕ್ರಮ ಗೋಸಾಗಾಟ, ಕಸಾಯಿಖಾನೆ ನಿಲ್ಲಿಸಲು ನ್ಯಾಯಾಯಲವೇ ಹೇಳಬೇಕಾಯಿತಾ ಪೊಲೀಸರೇ!!
ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುವುದು ಮತ್ತು ಕಸಾಯಿ ಖಾನೆಗಳನ್ನು ನಡೆಸುವುದನ್ನು ರಾಜ್ಯ ಉಚ್ಚ ನ್ಯಾಯಾಲಯ ಅಪರಾಧ ಎಂದು ತೀರ್ಪೋಂದರಲ್ಲಿ ಸ್ಪಷ್ಟಪಡಿಸಿದೆ. ಚನ್ನರಾಯಪಟ್ಟಣದಲ್ಲಿ ಅಕ್ರಮ ಕಸಾಯಿಖಾನೆಗೆ ಸಂಬಂಧಪಟ್ಟ ಪ್ರಕರಣವೊಂದರಲ್ಲಿ ತೀರ್ಪು ನೀಡಿದ ನ್ಯಾಯಾಲಯ ಇದರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಮತ್ತು ಇದು ಇಡೀ ರಾಜ್ಯಕ್ಕೆ ಅನ್ವಯವಾಗಬೇಕು ಎನ್ನುವುದನ್ನು ಹೇಳಿದೆ. ಕರ್ನಾಟಕದಲ್ಲಿ 1964 ರಲ್ಲಿಯೇ ಗೋಹತ್ಯಾ ನಿಷೇಧ ಕಾನೂನು ಜಾರಿಯಲ್ಲಿದೆ. ಆದರೆ ಅದರಲ್ಲಿ ಇರುವ ಅಂಶಗಳು, ಶಿಕ್ಷೆಗೆ ಸಂಬಂಧಿಸಿದಂತೆ ಏನೂ ಸ್ಟ್ರಾಂಗ್ ಆಗಿ ಇಲ್ಲದೆ ಇದ್ದ ಕಾರಣ ಕರ್ನಾಟಕದಲ್ಲಿ ಸಂಪೂರ್ಣ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ತರುವ ಅವಶ್ಯಕತೆ ಇತ್ತು. ಭಾರತೀಯ ಜನತಾ ಪಾರ್ಟಿಯ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅದನ್ನು ಜಾರಿಗೊಳಿಸಲಾಗಿದೆ. ಆದರೆ ಯಾವುದೇ ಒಂದು ಕಾನೂನು ಜಾರಿಗೆ ಬಂದ ನಂತರ ಅದು ಸಮರ್ಪಕವಾಗಿ ಅನುಷ್ಟಾನಕ್ಕೆ ಬರಬೇಕಾದರೆ ಪೊಲೀಸರ ಪಾತ್ರ ಕೂಡ ಮುಖ್ಯ. ಇಲ್ಲದೇ ಹೋದರೆ ಅದು ಕೇವಲ ಕಾಗದ ಪತ್ರದಲ್ಲಿ ದಾಖಲೆಯಾಗಿ ಉಳಿಯುತ್ತದೆ. ಇತ್ತ ಅಕ್ರಮವಾಗಿ ಗೋವುಗಳು ಕೊಲ್ಲಲ್ಪಡುತ್ತಿದ್ದರೆ ಅತ್ತ ಸಂಪೂರ್ಣ ಗೋಹತ್ಯಾ ನಿಷೇಧ ಕಾನೂನು ಪುಸ್ತಕದಲ್ಲಿ ಮಾತ್ರ ಕಂಗೊಳಿಸುತ್ತದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಅನಧಿಕೃತವಾಗಿ ಕಸಾಯಿಖಾನೆಗಳನ್ನು ನಡೆಸುತ್ತಿರುವ ಅಬ್ದುಲ್ ಹಕ್ ಎಂಬುವರು ಬೆಂಗಳೂರು, ರಾಮನಗರ ಸಹಿತ ಹಲವು ಜಿಲ್ಲೆಗಳಿಗೆ ಅಕ್ರಮವಾಗಿ ದನದ ಮಾಂಸ ರಫ್ತು ಮಾಡುತ್ತಿದ್ದಾರೆ ಎಂದು ಆರೋಪಿಸಿ ಹೊಸದಿಲ್ಲಿ ಮೂಲದ ಗೋ ಗ್ಯಾನ್ ಫೌಂಡೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿತು. ಸರಿಯಾಗಿ ನೋಡಿದರೆ ಇದು ಕೇವಲ ಚನ್ನರಾಯಪಟ್ಟಣಕ್ಕೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ರಾಜ್ಯದ ಅನೇಕ ಕಡೆ ಈಗಲೂ ಅಕ್ರಮ ಗೋಸಾಗಾಟ ಮತ್ತು ಕಸಾಯಿಖಾನೆಗಳು ಗುಪ್ತವಾಗಿ ನಡೆಯುತ್ತಲೇ ಇವೆ. ವಿಷಯ ಏನೆಂದರೆ ತಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಗಾಟ ನಡೆಯುತ್ತಿದೆ ಎಂದಾದರೆ ಅದು ಆ ಭಾಗದ ಪೊಲೀಸ್ ಅಧಿಕಾರಿಗಳಿಗೆ ಗೊತ್ತೆ ಇರುತ್ತದೆ. ಅವರು ಅದನ್ನು ನಿಲ್ಲಿಸುವುದು ಕಷ್ಟವೇನಲ್ಲ. ಆದರೆ ಎಷ್ಟು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಈ ಕೆಲಸದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದಾರೆ ಎನ್ನುವುದು ಕೂಡ ಮುಖ್ಯ. ಈಗಲೂ ಹಿಂದೂ ಸಂಘಟನೆಗಳ ಕಾರ್ಯಕರ್ತರೇ ಅಕ್ರಮ ಗೋಸಾಗಾಟದ ವಾಹನಗಳನ್ನು ಅಡ್ಡ ಹಾಕಿ ನಿಲ್ಲಿಸಬೇಕು ಎಂದಾದರೆ ಏನು ಪ್ರಯೋಜನ? ಇತ್ತೀಚೆಗಷ್ಟೇ ತೀರ್ಥಹಳ್ಳಿಯ ಸೋದರರಿಬ್ಬರು ಅಕ್ರಮ ಗೋಸಾಗಾಟದ ವಾಹನಗಳನ್ನು ತಡೆಯಲು ಹೋಗಿ ಅವರ ಮೇಲೆಯೇ ವಾಹನ ಚಲಾಯಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡವರನ್ನು ಬಳಿಕ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು. ಹೀಗೆ ಇದು ಮುಂದುವರೆದರೆ ಇನ್ನಷ್ಟು ಹಿಂದೂ ಸಂಘಟನೆಯ ಯುವಕರು ಗೋಹಂತಕರ ದ್ವೇಷಕ್ಕೆ ಬಲಿಯಾಗಬೇಕಾಗಬಹುದು.
ಇದನ್ನು ತಡೆಯುವ ಕೆಲಸ ಪೊಲೀಸರು ಮಾಡಬೇಕಿದೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಪೊಲೀಸರು ಮಾಡುತ್ತಿರುವುದೇನು? ಹೆಲ್ಮೆಟ್ ಹಾಕದವರನ್ನು, ನೋಎಂಟ್ರಿಯಲ್ಲಿ ಬಂದವರನ್ನು ಹಿಡಿಯುವುದು ಬಿಟ್ಟು ಇಂತಹ ಅಕ್ರಮ ಗೋಸಾಗಾಟದ ಎಷ್ಟು ವಾಹನಗಳನ್ನು ತಡೆದು ನಿಲ್ಲಿಸಿದ್ದಾರೆ. ಇವರು ಹೀಗೆ ತಾವು ಮಾಡಲೇಬೇಕಾದ ಕರ್ತವ್ಯವನ್ನು ಮಾಡದೇ ಹೋದರೆ ಎರಡು ರೀತಿಯ ಸಂಶಯ ಮೂಡುತ್ತದೆ. ಒಂದು ನಮ್ಮ ಪೊಲೀಸರು ಅಕ್ರಮ ಗೋಹತ್ಯೆಗಳನ್ನು ತಡೆಯಲು ಸಮರ್ಥರಾಗಿಲ್ಲ. ಎರಡನೇಯದಾಗಿ ಇವರು ಅಕ್ರಮ ಗೋಸಾಗಾಟದ ವ್ಯಾಪಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಈ ಎರಡೂ ಅಲ್ಲದಿದ್ದರೆ ಪೊಲೀಸರು ಯಾಕೆ ಗೋಸಾಗಾಟವನ್ನು ತಡೆಯಲು ಆಗುತ್ತಿಲ್ಲ. ಹಾಗೆ ನೋಡಿದರೆ ಬಹಳ ಸಿಂಪಲ್ಲಾಗಿರುವ ವಿಷಯ ಹೇಳುತ್ತೇನೆ. ಪೊಲೀಸರಿಗೆ ಬೀದಿಬದಿ ವ್ಯಾಪಾರ ಮಾಡುವವರನ್ನು ಕೂಡ ಅಲ್ಲಿಂದ ಸ್ಥಳಾಂತರಿಸುವ ಅಧಿಕಾರ ಇದೆ. ಯಾಕೆಂದರೆ ನ್ಯಾಯಾಲಯವೇ ಹೇಳಿರುವ ಹಾಗೆ ಬೀದಿಬದಿ ವ್ಯಾಪಾರಿಗಳನ್ನು ಎಲ್ಲೆಲ್ಲಿಯೋ ವ್ಯಾಪಾರ ಮಾಡಲು ಬಿಡದೇ ಅವರಿಗೆ ನಿರ್ದೀಷ್ಟ್ಯ ಜಾಗದಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶ ಕೊಡಬೇಕು ಎಂದು ಹೇಳಲಾಗಿದೆ. ಸರಿಯಾಗಿ ನೋಡಿದರೆ ಪೊಲೀಸರು ಆ ಕೆಲಸವನ್ನು ಕೂಡ ಸರಿಯಾಗಿ ಮಾಡುವುದಿಲ್ಲ. ಇನ್ನು ಈಗ ಎಲ್ಲಾ ಕಡೆ ರಸ್ತೆ ಅಗಲೀಕರಣ ಆಗುತ್ತಿದೆ. ಬಹುತೇಕ ಮುಖ್ಯರಸ್ತೆಗಳು ಅಗಲಗೊಂಡಿವೆ. ಈಗ ಅಗಲಗೊಂಡಿರುವ ರಸ್ತೆಗಳಲ್ಲಿಯೇ ಜನರು ಕಾರುಗಳನ್ನು ಪಾರ್ಕ್ ಮಾಡುತ್ತಿದ್ದಾರೆ. ಇದರಿಂದ ಹಿಂದಿಗಿಂತ ಹೆಚ್ಚಾಗಿ ಈ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿರುತ್ತದೆ. ಇದರಿಂದ ಏನು ಪ್ರಯೋಜನ? ನೋ ಪಾರ್ಕಿಂಗ್ ನಲ್ಲಿ ವಾಹನಗಳನ್ನು ನಿಲ್ಲಿಸಿ ಹೋಗುವ ನಾಗರಿಕರ ಮೇಲಾದರೂ ಕ್ರಮ ಇದೆಯಾ? ಅದು ಕೂಡ ಕಾಣಿಸುತ್ತಿಲ್ಲ. ಹಾಗಾದರೆ ಪೊಲೀಸರು ಏನು ಮಾಡುತ್ತಿದ್ದಾರೆ. ಅಕ್ರಮ ಗೋಸಾಗಾಟ ಮತ್ತು ಕಸಾಯಿ ಖಾನೆಗಳನ್ನು ಅವರು ತಡೆಯದೇ ಹೋದರೆ ನಂತರ ಹಿಂದೂ ಸಂಘಟನೆಗಳು ನಿಲ್ಲಿಸಿದಾಗ ಅದು ಅನೈತಿಕ ಪೊಲೀಸಗಿರಿ ಆಗುತ್ತದೆ ಎಂದು ಎಡಚರರು ಬೊಬ್ಬೆ ಹಾಕುತ್ತಾರೆ. ನ್ಯಾಯಾಲಯ ಮತ್ತೆ ಚಾಟಿ ಬೀಸಬೇಕಾಗುತ್ತದೆ. ಪೊಲೀಸ್ ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಟ್ಟರೆ ಹೀಗೆ ಆಗುವುದು!!
Leave A Reply