ಹಾಲಿನ ಬೂತ್ ಕೆಎಂಎಫ್ ಬದಲಿಗೆ ಪಾಲಿಕೆಯೇ ಚಲಾಯಿಸುವಂತಾಗಲಿ!!
ಬೀದಿಬದಿ ವ್ಯಾಪಾರಿಗಳಿಗಾಗಿ ಕೇಂದ್ರದ ಮೋದಿ ಸರಕಾರ ವಿಶೇಷ ನಿಯಮವೊಂದನ್ನು ಮಾಡಿದೆ. ಅದರ ಪ್ರಕಾರ ಆಯಾ ಪಾಲಿಕೆ ವತಿಯಿಂದ ಬೀದಿಬದಿ ವ್ಯಾಪಾರಿಗಳ ಸಮಿತಿ ರಚಿಸಬೇಕು. ಆ ಸಮಿತಿಯಲ್ಲಿ ಬೀದಿಬದಿ ವ್ಯಾಪಾರಿಗಳ ಪ್ರಮುಖರು, ಸರಕಾರೇತರ ಸಂಘ ಸಂಸ್ಥೆಗಳ ಪ್ರಮುಖರು ಇರಬೇಕು ಎಂದು ತಿಳಿಸಲಾಗಿದೆ. ಇವರು ಸೇರಿ ಸಭೆ ಮಾಡಿ ಬೀದಿಬದಿ ವ್ಯಾಪಾರಿಗಳಿಗಾಗಿಯೇ ಪ್ರತ್ಯೇಕ ಮಾರಾಟ ಜಾಗಗಳನ್ನು ಗುರುತಿಸಬೇಕು. ಈ ಮೂಲಕ ಬೀದಿಬದಿ ವ್ಯಾಪಾರಿಗಳಿಗೂ ಮಾರಾಟದ ಹಕ್ಕನ್ನು ಖಾತ್ರಿಗೊಳಿಸಬೇಕು ಎಂದು ಈ ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ. ಇನ್ನು ಈ ಬೀದಿಬದಿ ವ್ಯಾಪಾರಿಗಳು ಕೂಡ ಆ ಸಮಿತಿ ನಿಗದಿಪಡಿಸಿದ ಜಾಗಗಳಲ್ಲಿಯೇ ವ್ಯಾಪಾರ ಮಾಡಬೇಕೆಂದು ಕೂಡ ನಿಯಮದಲ್ಲಿ ತಿಳಿಸಲಾಗಿದೆ. ಆ ಸಮಿತಿಯ ಜವಾಬ್ದಾರಿ ಎಷ್ಟು ಮುಖ್ಯವೋ ಅವರು ಹೇಳಿದ್ದನ್ನು ಅನುಸರಿಸಬೇಕಾದ ಕರ್ತವ್ಯ ಕೂಡ ಬೀದಿಬದಿ ವ್ಯಾಪಾರಿಗಳ ಮೇಲಿದೆ. ಆದರೆ ಸ್ಟ್ರೀಟ್ ವೆಂಡರ್ ಸಮಿತಿ ಕೇವಲ ನಾಮಕಾವಸ್ತೆ ಮಾತ್ರ ಇದೆ ವಿನ: ಅದರಿಂದ ಆಗುವಂತದ್ದು ಏನೂ ಇಲ್ಲ. ಹಾಗಾದರೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಈ ಸಮಿತಿ ಏನೂ ಮಾಡೇ ಇಲ್ವಾ? ಮಾಡಿದೆ, ಆದರೆ ಪ್ರಯೋಜನ ಏನೂ ಆಗಿಲ್ಲ. ಹಾಗಾದರೆ ಆದದ್ದು ಏನು? ಕೇಂದ್ರ ಮೈದಾನಕ್ಕೆ ಆತುಕೊಂಡೆ ಇರುವ ಯಕ್ಷಗಾನಕ್ಕೆ ನಿಗದಿಪಡಿಸಿದ್ದ ಜಾಗವನ್ನು ಬೀದಿಬದಿ ವ್ಯಾಪಾರಿಗಳಿಗಾಗಿ ಬಿಟ್ಟುಕೊಡುವ ರೂಪುರೇಶೆ ಹಾಕಲಾಯಿತು. ಕೆಲವು ದಿನಗಳ ತನಕ ಅಲ್ಲಿ ಕುಳಿತು ವ್ಯಾಪಾರ ಕೂಡ ಮಾಡಿದ ಈ ಬೀದಿಬದಿ ವ್ಯಾಪಾರಿಗಳು ನಂತರ ಅಲ್ಲಿ ಸರಿಯಾಗಲ್ಲ ಎಂದು ಮತ್ತೆ ಯಥಾಪ್ರಕಾರ ಫುಟ್ ಪಾತ್, ರಸ್ತೆಗಳಿಗೆ ಬಂದು ಅಂಗಡಿ ತೆರೆದು ಕುಳಿತರು. ಇನ್ನು ಬೀದಿಬದಿ ವ್ಯಾಪಾರಿಗಳು ಎಂದರೆ ಅವರು ಪ್ಲಾಸ್ಟಿಕ್ ವಸ್ತುಗಳಾದ ಟಬ್, ಮಗ್, ಜಗ್ ಸಹಿತ ಅಂತಹ ವಸ್ತುಗಳನ್ನು ಮಾರುವಂತಿಲ್ಲ. ಚಪ್ಪಲಿ ಮಾರುವಂತಿಲ್ಲ. ಆದರೆ ಪುಸ್ತಕಗಳಿಂದ ಹಿಡಿದು ಜಿನಸಿ ಪೊಟ್ಟಣಗಳ ತನಕ ಇಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ಬಟ್ಟೆಗಳ ತನಕ ಇವರು ಮಾರುತ್ತಾರೆ.
ಇನ್ನು ಒಂದು ನಗರದಲ್ಲಿ ಬೀದಿಬದಿ ವ್ಯಾಪಾರಿಗಳು ಎಷ್ಟು ಕಡಿಮೆ ಇರುತ್ತಾರೋ ಅಷ್ಟು ಆ ನಗರದ ಘನಸ್ಥಿಕೆ ಜಾಸ್ತಿಯಾಗುತ್ತದೆ. ಆದರೆ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮಂಗಳೂರಿನ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಕೆಳಗೆ ತೋರಿಸಲು ಇಲ್ಲಿ ಒಂದು ಸಾವಿರ ಬೀದಿಬದಿ ವ್ಯಾಪಾರಿಗಳು ಇದ್ದಾರೆ ಎಂದು ದಾಖಲೆ ಸಮೇತ ತೋರಿಸಿದ್ದಾರೆ. ಮೋದಿ ಕೊಟ್ಟ ತಲಾ ಹತ್ತು ಸಾವಿರ ರೂಪಾಯಿ ಸಾಲವನ್ನು ಒಂದು ಸಾವಿರ ತನಕ ಬೀದಿಬದಿ ವ್ಯಾಪಾರಿಗಳಿಗೆ ಕೊಡಬಹುದು ಎನ್ನುವ ವಿನಾಯಿತಿ ನೋಡಿ ಕೇವಲ ಮುನ್ನೂರು ಚಿಲ್ಲರೆಯಷ್ಟು ಇರುವ ಬೀದಿ ಬದಿ ವ್ಯಾಪಾರಿಗಳ ಜೊತೆಗೆ ಯಾರನ್ನೆಲ್ಲ ಕರೆದು ಸಾಲ ಹಂಚಿದ್ದಾರೆ. ಅದನ್ನು ಕೊರೊನಾ ಸಮಯದಲ್ಲಿ ಹಂಚಿದ್ದ ಪಾಲಿಕೆ ಜಂಟಿ ಆಯುಕ್ತ ವರ್ಗಾವಣೆಗೊಂಡು ಹೋಗಿದ್ದಾರೆ. ಈಗ ಆ ಒಂದು ಸಾವಿರ ಜನ ನಾವು ಕೂಡ ಬೀದಿ ಬದಿ ವ್ಯಾಪಾರಿಗಳು, ನಮಗೂ ಜಾಗ ತೋರಿಸಿ ಎಂದು ಪಾಲಿಕೆಗೆ ಗಂಟು ಬಿದ್ದಿದ್ದಾರೆ.
ಇನ್ನು ಪಾಲಿಕೆ ವ್ಯಾಪ್ತಿಯಲ್ಲಿ ವಿಕಲಚೇತನರು ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ಕಾರಣಕ್ಕೆ ಹಿಂದೆ ಟೆಲಿಫೋನ್ ಬೂತ್ ಮತ್ತು ಮಿಲ್ಕ್ ಬೂತ್ ಗಳನ್ನು ಹಾಕಿಕೊಡಲಾಗಿತ್ತು. ಆದರೆ ಈಗ ಟೆಲಿಫೋನ್ ಬೂತ್ ಅಸ್ತಿತ್ವದಲ್ಲಿ ಇಲ್ಲ. ಅಂತಹ ಬೂತ್ ಗಳಲ್ಲಿ ಬೇರೆ ವಸ್ತುಗಳನ್ನು ಇಟ್ಟು ಮಾರಾಟ ಮಾಡಲಾಗುತ್ತಿದೆ. ಹಾಲಿನ ಬೂತ್ ಗಳ ಕಥೆಯೂ ಇದಕ್ಕಿಂತ ಹೊರತಾಗಿಲ್ಲ. ಇನ್ನು ಅನೇಕ ಕಡೆಗಳಲ್ಲಿ ಈ ಟೆಲಿಫೋನ್ ಬೂತ್ ಹಾಗೂ ಹಾಲಿನ ಬೂತ್ ಗಳನ್ನು ವಿಕಲಚೇತನರ ಹೆಸರಿನಲ್ಲಿ ಯಾರ್ಯಾರೋ ಚಲಾಯಿಸುತ್ತಿದ್ದಾರೆ. ಒಂದೋ ಎಷ್ಟೋ ಸಾವಿರ ರೂಪಾಯಿಗಳಿಗೆ ಒಳಬಾಡಿಗೆ ಕೊಟ್ಟು ಕೆಲವರು ತಾವು ನಡೆಸುತ್ತಿದ್ದಾರೆ. ಇನ್ನು ಕೆಲವು ಕಡೆ ಲಕ್ಷಾಂತರ ರೂಪಾಯಿಗಳಿಗೆ ಹಕ್ಕುಗಳನ್ನೇ ಮಾರಲಾಗಿದೆ. ಇದರಿಂದ ನೈಜ ವಿಕಲಚೇತನರು ಅವಕಾಶ ವಂಚಿತರಾಗಿ ಮನಸ್ಸಿನಲ್ಲಿಯೇ ಕೊರಗುವಂತಾಗಿದೆ. ಆದ್ದರಿಂದ ಈ ಬೂತ್ ಗಳ ಪರವಾನಿಗೆಯನ್ನು ನವೀಕರಿಸುವಾಗ ಪ್ರತಿ ವರ್ಷ ಅದೇ ವಿಕಲಚೇತನ ಮಾಲೀಕರು ಬರಬೇಕು ಎಂದು ನಿಯಮ ಮಾಡಬೇಕು. ಒಂದು ವೇಳೆ ಬರಲಿಲ್ಲ ಎಂದರೆ ಪರವಾನಿಗೆ ನವೀಕರಣ ಮಾಡದೇ ಬೇರೆ ನೈಜ ವಿಕಲಚೇತನರಿಗೆ ಕೊಟ್ಟುಬಿಡಬೇಕು. ಇನ್ನು ಕೆಎಂಎಫ್ ನವರು ಪಾಲಿಕೆ ವ್ಯಾಪ್ತಿಯಲ್ಲಿ ಹಾಲಿನ ಬೂತ್ ಹಾಕಲು ಅನುಮತಿ ತೆಗೆದುಕೊಳ್ಳುತ್ತಾರೆ. ಅದಕ್ಕೆ ಅವರು ತಿಂಗಳಿಗೆ ಪಾಲಿಕೆಗೆ 10-15 ಸಾವಿರದ ತನಕ ಕಟ್ಟಬೇಕಾಗುತ್ತದೆ. ಆದರೆ ಅದೇ ಕೆಎಂಎಫ್ ನವರು ಆ ಪರವಾನಿಗೆ ಹೊಂದಿದ ಅಂಗಡಿಗಳನ್ನು 60-70 ಸಾವಿರ ರೂಪಾಯಿಗಳಿಗೆ ಯಾರ್ಯಾರಿಗೋ ಟೆಂಡರ್ ಕರೆದು ಮಾರುತ್ತಾರೆ. ಅದರ ಬದಲು ಪಾಲಿಕೆಯೇ ಟೆಂಡರ್ ಕರೆದು ಮಾರಿದರೆ 15 ಸಾವಿರ ಸಿಗುವ ಕಡೆ 70 ಸಾವಿರ ರೂಪಾಯಿ ಸಿಗಲ್ವ? ಇನ್ನು ರೇಡ್ ಮಾಡಿದ ನಂತರ ಇನ್ ಫ್ಲೂಯೆನ್ಸ್ ಮಾಡಿ ಕೆಲವರು ತಮ್ಮ ವಸ್ತುಗಳನ್ನು ಮತ್ತೆ ಪಡೆದುಕೊಳ್ಳುವ ಮೂಲಕ ನಮ್ಮ ತೆರಿಗೆಯ ಹಣ ಏನು ರೇಡಿಗೆ ಖರ್ಚಾಗುತ್ತದೆ ಅದಕ್ಕೆ ಮರ್ಯಾದೆಯೇ ಇಲ್ಲದಂತೆ ಮಾಡಿದ್ದಾರೆ. ಈ ಬೀದಿಬದಿ ವ್ಯಾಪಾರಿಗಳಲ್ಲಿ ಒಂದಷ್ಟು ಮಂದಿ ಕಾಂಗ್ರೆಸ್ ಇನ್ನೊಂದಿಷ್ಟು ಭಾಜಪಾ ಇರುವುದರಿಂದ ಅವರು ತಮ್ಮ ಸಂಬಂಧಪಟ್ಟ ಕಾರ್ಪೋರೇಟರಿಗೆ ಫೋನ್ ಮಾಡಿ ಮೇಯರ್ ಅವರಿಗೆ ಹೇಳಿಸಿ ವಸ್ತುಗಳನ್ನು ಬಿಡಿಸಿಕೊಂಡು ಹೋಗುವುದು ನಮ್ಮ ತೆರಿಗೆ ಹಣ ದಂಡ ಎಂದು ಸಾಬೀತು ಪಡಿಸಿದಂತೆ ಆಗುವುದಿಲ್ಲವೇ
Leave A Reply