ಖಾಸಗಿ ಬಸ್ಸಿನವರಿಗೆ ಕಷ್ಟವಾಗುವುದಾದರೆ ಡಿಸಿ ಉಳಿದ 9 ಬಸ್ಸುಗಳನ್ನು ರಸ್ತೆಗೆ ಬಿಡಲಿ!
ನಾನು ನಿನ್ನೆಯ ಜಾಗೃತ ಅಂಕಣವನ್ನು ಎಲ್ಲಿ ನಿಲ್ಲಿಸಿದ್ದೇನೋ ಅಲ್ಲಿಂದಲೇ ಆರಂಭ ಮಾಡುತ್ತೇನೆ. ಯಾವ ಖಾಸಗಿ ಬಸ್ಸಿನ ಮಾಲೀಕರು ತಮ್ಮ ಬಸ್ಸುಗಳನ್ನು ಓಡಿಸುತ್ತಿಲ್ಲವೋ ಆ ರೂಟಿನಲ್ಲಿ ಸರಕಾರಿ ಬಸ್ಸುಗಳನ್ನು ಓಡಿಸುತ್ತೇವೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಪದನಿಮಿತ್ತ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರು ಹೇಳಿದ್ದಾರೆ. ಆದರೆ ವಾಸ್ತವ ಏನೆಂದರೆ ಈಗ ಮಂಗಳೂರಿನಲ್ಲಿ ಓಡಾಡಬೇಕಾಗಿದ್ದ 35 ನರ್ಮ್ ಬಸ್ಸುಗಳಲ್ಲಿ ಒಂಭತ್ತನ್ನು ಇನ್ನು ಹೊರಗೆ ತೆಗೆಯಲಾಗಿಲ್ಲ. ಮೊದಲು ಜಿಲ್ಲಾಧಿಕಾರಿಯವರು ಅದನ್ನು ಕೂಡ ನೋಡಬೇಕು. ಯಾಕೆ ಮಂಜೂರಾಗಿರುವ ಎಲ್ಲ ನರ್ಮ್ ಬಸ್ಸುಗಳು ರಸ್ತೆಗೆ ಇಳಿಯುತ್ತಿಲ್ಲ ಎಂದು ಹೇಳಬೇಕು. ಇನ್ನೊಂದು ಕಡೆ ಖಾಸಗಿ ಬಸ್ಸಿನವರು ನಮಗೆ ಬಸ್ಸು ಓಡಿಸಲು ಕಷ್ಟವಿದೆ ಎಂದು ಹೇಳುತ್ತಾ ಬರುತ್ತಿದ್ದಾರೆ. ಪೋಸ್ಟ್ ಕೋವಿಡ್ ಅವಧಿಯಲ್ಲಿ ಹೆಚ್ಚಿನವರು ದ್ವಿಚಕ್ರಕ್ಕೆ ಹೊಂದಿಕೊಂಡಿರುವುದರಿಂದ ಜನ ಬರುವುದು ಕಡಿಮೆ ಎಂದು ಸಿಟಿ ಬಸ್ ಮಾಲೀಕರ ಸಂಘದ ಅದ್ಯಕ್ಷ ಜಯಶೀಲ ಅಡ್ಯಂತಾಯ ಹೇಳಿರುವುದು ಪತ್ರಿಕೆಗಳಲ್ಲಿ ಬಂದಿದೆ. ಸರಿ, ಅವರಿಗೆ ಬಸ್ ಓಡಿಸುವುದು ಕಷ್ಟವಾಗಿರುವುದಾದರೆ ಡಿಸಿಯವರು ಸರಕಾರಿ ಬಸ್ಸುಗಳನ್ನೇ ಓಡಿಸಲಿ.
ಯಾಕೆಂದರೆ ಕಷ್ಟವಾಗುವುದಾದರೆ ಸಿಟಿ ಬಸ್ಸಿನವರು ಬಸ್ಸುಗಳನ್ನು ಓಡಿಸುವುದು ಬೇಡಾ. ಇದೇ ಸಮಯಕ್ಕೆ ಏನು 14 ನರ್ಮ್ ಬಸ್ಸುಗಳನ್ನು ಮಂಗಳೂರಿನಲ್ಲಿ ಓಡಿಸಬಾರದು ಎಂದು ಇದೇ ಸಿಟಿ ಬಸ್ಸು ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೋ, ಅದನ್ನು ನ್ಯಾಯಾಲಯ ತ್ವರಿತವಾಗಿ ವಿಲೇವಾರಿ ಮಾಡಿ ಮಂಜೂರಾಗಿರುವ 14 ನರ್ಮ್ ಬಸ್ಸುಗಳನ್ನು ಮಂಗಳೂರಿನಲ್ಲಿ ಓಡಿಸಲು ಅನುಮತಿ ನೀಡಿ ಈ ಕೆಲಸ ಶೀಘ್ರದಲ್ಲಿ ಆಗಬೇಕೆಂದು ಡಿಸಿಯವರಿಗೆ ಸೂಚನೆ ಕೂಡ ಕೊಡಬೇಕು. ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಯ ಹಂತದಲ್ಲಿದ್ದು ಈಗ ಐದು ವರ್ಷ ಕಳೆದಿದೆ. ನ್ಯಾಯಾಲಯ ಯಾವುದೆಲ್ಲ ವಿಷಯಕ್ಕೆ ಮಧ್ಯರಾತ್ರಿ ತನಕ ಕೆಲಸ ಮಾಡಿದ್ದನ್ನು ಈ ದೇಶ ನೋಡಿದೆ. ಈಗ ಜನಸಾಮಾನ್ಯರ ಅತ್ಯಂತ ಅಗತ್ಯದ ಸಾರಿಗೆ ವ್ಯವಸ್ಥೆ ಆಗಿರುವ ನರ್ಮ್ ಬಸ್ಸುಗಳ ವಿಷಯವನ್ನು ಆದಷ್ಟು ಬೇಗ ಪರಿಹರಿಸಲು ತೀರ್ಮಾನ ಮಾಡಬೇಕು. ಇನ್ನು ಸಿಟಿ ಬಸ್ಸಿನ ಮಾಲೀಕರು ಕೂಡ ಆ 14 ನರ್ಮ್ ಬಸ್ಸುಗಳನ್ನು ನ್ಯಾಯಾಲಯ ಓಡಿಸಲು ಸೂಚನೆ ಕೊಟ್ಟರೆ ಮುಕ್ತಕಂಠದಿಂದ ಸ್ವಾಗತಿಸಬೇಕು. ಈಗ ಏನಾಗಿದೆ ಎಂದರೆ ಸಿಟಿ ಬಸ್ಸು ಮಾಲೀಕರು ಲಾಭ ಇಲ್ಲ ಎನ್ನುವುದು ಒಂದು ಕಡೆಯಾದರೆ ಸರಕಾರಿ ಬಸ್ಸುಗಳನ್ನು ಹಾಕಿದರೆ ನ್ಯಾಯಾಲಯಕ್ಕೆ ಹೋಗುವುದು ಇನ್ನೊಂದು ಕಡೆ, ಇತ್ತ ಡಿಸಿಯವರು ನೀವು ಓಡಿಸದಿದ್ದರೆ ನಾವು ಸರಕಾರಿ ಬಸ್ಸುಗಳನ್ನು ಹಾಕುತ್ತೇವೆ ಎನ್ನುವುದು ಆದರೆ ಇದ್ದ ಬಸ್ಸುಗಳನ್ನೇ ಓಡಿಸದೇ ಇರುವುದು ನಡೆಯುತ್ತಲೇ ಬರುತ್ತಿದೆ. ಇದೆಲ್ಲವೂ ಕೇವಲ ಹೇಳಿಕೆಗಳಾಗಿಯೇ ಉಳಿಯಬಾರದು. ಅದು ಕಾರ್ಯರೂಪಕ್ಕೆ ಕೂಡ ಬರಬೇಕು ಎನ್ನುವುದು ಜನರ ಅಪೇಕ್ಷೆ. ಯಾಕೆಂದರೆ ನರ್ಮ್ ಬಸ್ಸುಗಳಲ್ಲಿ ಟಿಕೆಟ್ ದರ ತುಂಬಾ ಕಡಿಮೆ ಇದೆ.
ಪಿವಿಎಸ್ ನಿಂದ ಬೈಕಂಪಾಡಿಗೆ ಸಿಟಿ ಬಸ್ಸಿನವರು 19 ರೂಪಾಯಿ ತೆಗೆದುಕೊಂಡರೆ ನರ್ಮ್ ಬಸ್ಸಿನಲ್ಲಿ ಕೇವಲ ಹತ್ತು ರೂಪಾಯಿಯಲ್ಲಿ ಹೋಗಬಹುದು. ಇಂತಹ ಅವಕಾಶ ಯಾರಿಗೆ ಬೇಡಾ. ಇನ್ನು ನರ್ಮ್ ಬಸ್ಸಿನವರು ಜನರನ್ನು ಕುರಿಗಳಂತೆ ತುಂಬಿಸಿ ತೆಗೆದುಕೊಂಡು ಹೋಗುವುದಿಲ್ಲ. ಇನ್ನು ನರ್ಮ್ ಬಸ್ಸಿನಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಸೂಕ್ತವಾದ ವ್ಯವಸ್ಥೆ ಇದೆ. ಕಾಲು ಇಡಲು, ನಿಲ್ಲಲು ಅನುಕೂಲಕರ ಸ್ಥಳಾವಕಾಶ ಇರುತ್ತದೆ. ಆದರೆ ಸಿಟಿ ಬಸ್ಸಿನಲ್ಲಿ ಹಾಗಿರುವುದಿಲ್ಲ. ಅದರಲ್ಲಿಯೂ ಎರಡು ಬಸ್ಸುಗಳ ನಡುವೆ ಒಂದು ಬಸ್ಸನ್ನು ಕ್ಯಾನ್ಸಲ್ ಮಾಡಿದರೆ ಅದರಿಂದ ಉಳಿದ ಎರಡು ಬಸ್ಸುಗಳಲ್ಲಿ ಜನರು ತುಂಬುತ್ತಾರೆ. ನಮ್ಮಲ್ಲಿ ಈಗಲೂ 75 ಶೇಕಡಾ ಜನರು ಮಾಸ್ಕ್ ಹಾಕುವುದಿಲ್ಲ.
ಇನ್ನು ನಮ್ಮ ಬಸ್ಸಿನವರು ಏನು ತಪ್ಪು ಮಾಡಿದರೂ ಆರ್ ಟಿಒ, ಟ್ರಾಫಿಕ್ ಪೊಲೀಸ್ ಹಾಗೂ ಬಸ್ ಮಾಲೀಕರ ನಡುವೆ ಒಂದು ಅಪವಿತ್ರ ಮೈತ್ರಿ ಇದೆ. ಬಸ್ಸಿನವರು ಕರ್ಕಶ ಹಾರ್ನ್ ಹೊಡೆಯುತ್ತಾರೆ, ಅದನ್ನು ಕಿತ್ತು ಬಿಸಾಡುತ್ತೇವೆ ಎಂದು ಪೊಲೀಸ್ ಕಮೀಷನರ್ ಹಿಂದೆಮ್ಮೊ ಹೇಳಿದ ನೆನಪು. ಅದು ನಾಲ್ಕು ದಿನ ಜೋರಾಗಿ ನಡೆಯಿತು. ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಸುದ್ದಿಯಾಯಿತು. ನಂತರ ಅದರ ವಿಷಯವೇ ಇಲ್ಲ. ಇನ್ನು ಬಸ್ ಮಾಲೀಕರಿಗೆ ಪ್ರಯಾಣಿಕರ ಸಂಖ್ಯೆಯ ಮೇಲೆ ತೆರಿಗೆ ಬೀಳುತ್ತದೆ. ಉದಾಹರಣೆಗೆ 34 ಸಿಟ್ಟಿಂಗ್, 9 ಸ್ಟ್ಯಾಂಡಿಂಗ್ ಗೆ ಒಂದು ತೆರಿಗೆ ದರ ಇರುತ್ತದೆ. ಆದರೆ ಬಸ್ಸಿನವರು ಕೇವಲ 5 ಸ್ಟ್ಯಾಂಡಿಂಗ್ ಎಂದು ಮಾತ್ರ ತೋರಿಸುತ್ತಾರೆ. ಇನ್ನೊಂದು ಕಡೆಯಲ್ಲಿ 20 ಸ್ಟ್ಯಾಂಡಿಂಗ್ ಹಾಕುತ್ತಾರೆ. ಅದರಿಂದ ಯಾರಿಗೂ ಗೊತ್ತಾಗದ ರೀತಿಯಲ್ಲಿ ಲಾಭ ಗಳಿಸುತ್ತಾರೆ. ಇದನ್ನು ಆರ್ ಟಿಒ ಪ್ರಶ್ನಿಸುವುದಿಲ್ಲ. ಒಟ್ಟಿನಲ್ಲಿ ಎಲ್ಲರಿಗೂ ಬದ್ಧತೆ ಬೇಕು. ಅದು ಇಲ್ಲ ಎಂದರೆ ಬಸ್ಸಿನವರು ಮಾಡಿದ್ದೇ ಕಾನೂನು. ಪ್ರಯಾಣಿಕರು ಅನುಭವಿಸಿದ್ದೇ ಸಂಕಷ್ಟ. ಯಾರೂ ಕೇಳುವುದಿಲ್ಲ!
Leave A Reply