ಕೇಂದ್ರದ ಸಾಲ ಬೇಡಾ ಎಂದರೂ ತೆಗೆದುಕೊಂಡರೂ ಲಾಭ ಮೋದಿಗೆ!!
ಯಾವುದೇ ಪಕ್ಷ ಕೇಂದ್ರ ಸರಕಾರದಲ್ಲಿರಲಿ, ಅದರ ಬಜೆಟಿನಲ್ಲಿ ಜನ ಸಾಮಾನ್ಯರು ನೋಡುವುದು ಎಷ್ಟು ನೇರ ತೆರಿಗೆಯಲ್ಲಿ ವಿನಾಯತಿ ಸಿಗುತ್ತದೆ ಎನ್ನುವುದು. ಆದರೆ ಈ ಬಾರಿ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆಯ ಸ್ಲ್ಯಾಬ್ ಗೆ ಕೈ ಹಾಕಲು ಹೋಗಲೇ ಇಲ್ಲ. ಅದರ ಬದಲು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಕೇಂದ್ರ ಸರಕಾರ ಹೆಚ್ಚಿನ ಅನುದಾನವನ್ನು ಇಟ್ಟಿದೆ. ಸುಮಾರು 48 ಸಾವಿರ ಕೋಟಿ ಏನೂ ಚಿಕ್ಕಮೊತ್ತವಲ್ಲ. ಇನ್ನು ಮೂಲಭೂತ ಸೌಕರ್ಯ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿ ಯೋಜನೆ, ಮನೆಮನೆಗೆ ಗಂಗೆ ಸೇರಿದಂತೆ ಸೋಲಾರ್ ಕೂಡ ಸೇರಿಸಿ ದೇಶದ ಮುಂದಿನ 10-15 ವರ್ಷ ಹೇಗೆ ಇರಬೇಕು ಎನ್ನುವ ರೂಪುರೇಶೆಯನ್ನು ಮೋದಿಯವರ ನೇತೃತ್ವದಲ್ಲಿ ನಿರ್ಮಲಾ ಸೀತಾರಾಮನ್ ಹಾಕಿಕೊಟ್ಟಿದ್ದಾರೆ. ಇನ್ನು ವಂದೇ ಮಾತರಂ ರೈಲು ಯೋಜನೆಯನ್ನೇ ತೆಗೆದುಕೊಂಡರೂ 200 ಕಿ.ಮೀ ವೇಗದಲ್ಲಿ ಓಡುವ ಈ ರೈಲು ಕರ್ನಾಟಕಕ್ಕೆ ಎಷ್ಟು ಸಿಗುತ್ತೆ ಎನ್ನುವುದನ್ನು ಬರುವ ದಿನಗಳಲ್ಲಿ ಕಾದು ನೋಡಬಹುದು. 25 ಸಾವಿರ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಲ್ಲಿ ಎಷ್ಟು ಕರ್ನಾಟಕದಲ್ಲಿ ಬರುತ್ತದೆ ಎನ್ನುವುದು ಕೂಡ ಭವಿಷ್ಯವೇ ಹೇಳುತ್ತದೆ. ಇದನ್ನೆಲ್ಲ ನಮ್ಮ ರಾಜ್ಯದ ಭಾರತೀಯ ಜನತಾ ಪಾರ್ಟಿಯಿಂದ ಗೆದ್ದು ಹೋಗಿರುವ 25 ಸಂಸದರೂ ಹೇಳಬೇಕು. ಕೇಂದ್ರದ ಬಜೆಟ್ ಹೇಗೆ ಇರುತ್ತದೆ ಎಂದರೆ “ನಮ್ಮ ಹಂಡೆ ತುಂಬಿಸಿಟ್ಟಿದ್ದೇವೆ. ನಿಮ್ಮ ನಿಮ್ಮ ಕೊಡಪಾನ ತಂದು ಎಷ್ಟು ಸಾಧ್ಯವೋ ಅಷ್ಟು ಬಿಸಿ ನೀರು ತೆಗೆದುಕೊಂಡು ಹೋಗಿ” ಎನ್ನುವುದೇ ಬೇಸಿಕ್ ಅಂಶ. ಮೇಲೆ ಕೇಂದ್ರದಲ್ಲಿ ಕೂಡ ಬಿಜೆಪಿ, ರಾಜ್ಯದಲ್ಲಿಯೂ ಬಿಜೆಪಿ ಇರುವುದರಿಂದ ಇವರು ಅಲ್ಲಿ ಕ್ಯೂನಲ್ಲಿ ನಿಲ್ಲದೆ ಸೀದಾ ಹಂಡೆಗೆ ಕೈ ಹಾಕಬಹುದು. ಆದರೆ ಆಶ್ಚರ್ಯ ಎಂದರೆ ಒಂದೆರಡು ಬಿಜೆಪಿ ಸಂಸದರನ್ನು ಗೆಲ್ಲಿಸಿಕೊಡುವ ಪ್ರಾದೇಶಿಕ ಪಕ್ಷಗಳ ಕಪಿಮುಷ್ಟಿಯಲ್ಲಿರುವ ರಾಜ್ಯಗಳ ಸಂಸದರು ಕೇಂದ್ರದ ಹೆಚ್ಚಿನ ಸೌಲಭ್ಯಗಳನ್ನು ಗಲಾಟೆ ಮಾಡಿಯಾದರೂ ತಮ್ಮ ರಾಜ್ಯಕ್ಕೆ ತೆಗೆದುಕೊಂಡು ಹೋಗುತ್ತಾರೆ.
ಇನ್ನು ದರ ಇಳಿಕೆ ಕಾಣಲಿರುವ ಅಥವಾ ಕಡಿಮೆಯಾಗಲಿರುವ ಕೆಲವು ಕ್ಷೇತ್ರಗಳಲ್ಲಿ ಕೃಷಿ ಉಪಕರಣಗಳು ಎನ್ನುವುದನ್ನು ಯಾವ ಬಿಜೆಪಿ ಮುಖಂಡ ಕೂಡ ಹೆಮ್ಮೆಯಿಂದ ಹೇಳಬಹುದು. ಅದರೊಂದಿಗೆ ಸಾಮಾನ್ಯ ಜನರಿಗೆ ಚಪ್ಪಲಿ, ಮೊಬೈಲ್, ಚಾರ್ಜರ್, ಬಟ್ಟೆಗಳ ದರ ಇಳಿಕೆಯಾಗಲಿದೆ. ಆದರೆ ಆತಂಕ ಇರುವುದು ಪೆಟ್ರೋಲ್ ಅಥವಾ ಡಿಸೀಲ್ ದರ ಪಂಚ ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ಏರಿಕೆ ಕಾಣುತ್ತಾ ಎನ್ನುವುದು ಮಾತ್ರ. ಅದರ ಸುಳಿವು ಜನರಿಗೆ ಸಿಗುತ್ತಿದೆ. ಒಂದು ವೇಳೆ ಅದು ಹೆಚ್ಚಾದರೆ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದು ನಂತರ ಗೊತ್ತಾಗಲಿದೆ. ಇನ್ನು ಮೊದಲ ಬಾರಿಗೆ ಕೇಂದ್ರದಿಂದ ರಾಜ್ಯಗಳಿಗೆ ಬಡ್ಡಿರಹಿತ ಸಾಲವನ್ನು ಸಿಗಲಿದೆ. ಅದನ್ನು 50 ವರ್ಷಗಳ ಅವಧಿಯಲ್ಲಿ ಮರು ಪಾವತಿಸಬಹುದು. ಆದರೆ ಸಾಲವನ್ನು ಸುಮ್ಮನೆ ಕೊಡಲಾಗುವುದಿಲ್ಲ. ಕೇಂದ್ರ ಸರಕಾರದ ಯಾವುದಾದರೂ ಯೋಜನೆಯನ್ನು ಅನುಷ್ಟಾನಕ್ಕೆ ತರಲು ರಾಜ್ಯ ಸರಕಾರ ತನ್ನ ಬಳಿ ದುಡ್ಡಿಲ್ಲ ಎಂದು ಜನರಿಗೆ ಸಬೂಬು ಹೇಳುತ್ತಾ ಇದ್ದರೆ ಇನ್ನು ಮುಂದೆ ನಾಗರಿಕರು ಕೇಂದ್ರದಿಂದ ಸಾಲ ಪಡೆದುಕೊಳ್ಳಿ ಎಂದು ಹೇಳಬಹುದು. ಯಾರು ಸಾಲ ಪಡೆಯುವುದಿಲ್ಲವೋ ಅವರು ಸಾಲ ಪಡೆದು ಕೇಂದ್ರದ ಅಭಿವೃದ್ಧಿ ಕಾರ್ಯಗಳನ್ನು ಜಾರಿ ಮಾಡುವ ರಾಜ್ಯಗಳ ಎದುರು ಸಪ್ಪೆಯಾಗಲಿವೆ. ಇನ್ನು ಕೇಂದ್ರದ ಸಾಲ ಪಡೆದು ಅ ರಾಜ್ಯ ಅಭಿವೃದ್ಧಿಯಾದರೆ ಕೇಂದ್ರವೇ ಅದರ ಮೈಲೇಜು ಕೂಡ ಪಡೆಯಲಿದೆ. ಈ ಮೂಲಕ ಸಾಲ ಪಡೆದರೂ, ಪಡೆಯದಿದ್ದರೂ ತಮಗೆನೆ ಲಾಭ ಆಗುವ ಮೂಲಕ ಮೋದಿ ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆದಿದ್ದಾರೆ. ಇನ್ನು ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ. 2025ರಲ್ಲಿ ದೇಶದ ಪ್ರತಿ ಗ್ರಾಮಗಳಿಗೂ ಇಂಟರನೆಟ್ ತಲುಪಲಿದೆಯಂತೆ. ಇದನ್ನೇ ವಿಪಕ್ಷಗಳು ಇದು ಅಂಬಾನಿ, ಅದಾನಿಗಾಗಿ ಮಾಡಿದ ಯೋಜನೆ ಎಂದು ಹೇಳುತ್ತಿರುವುದು. ಒಂದು ವೇಳೆ ವಿಪಕ್ಷಗಳ ಬಳಿ ಬೇರೆ ಪ್ಲೇಯರ್ಸ್ ಇದ್ರೆ ಅವರು ಕೂಡ ಕಣಕ್ಕೆ ಇಳಿಯಲಿ. ಅದು ಬಿಟ್ಟು ಯಾರಿಗೋ ಮಾಡಿದ ಯೋಜನೆ ಎಂದು ಟೀಕೆ ಮಾಡಲು ಹೋದರೆ ಜನರೇ ಬುದ್ಧಿ ಕಲಿಸುತ್ತಾರೆ.
ಸಹಕಾರಿ ಸಂಘಗಳ ತೆರಿಗೆಯನ್ನು ಮೂರು ಶೇಕಡಾ ಇಳಿಸಿದ್ದು, 2 ಲಕ್ಷ ಅಂಗನವಾಡಿಗಳ ಅಭಿವೃದ್ಧಿ ಇದೆಲ್ಲ ತುಂಬಾ ಉತ್ತಮ ಯೋಜನೆಗಳು. ಈಶಾನ್ಯ ರಾಜ್ಯಗಳ ಅಭಿವೃದ್ಧಿ, ಮನೆಮನೆಗೆ ಗಂಗೆ ಸಾಮಾನ್ಯ ಜನರಿಗೆ ಲಾಭ ಆಗುವ ಪ್ರಾಜೆಕ್ಟ್. ಕಿರು ಉದ್ದಿಮೆಗಳ ಪುನಶ್ಚೇತನಕ್ಕೆ 50 ಸಾವಿರ ಇಟ್ಟಿದ್ದು, ಸ್ಟಾಟ್ ಅಪ್ ಗಳಿಗೆ ಐದು ಲಕ್ಷ ಕೋಟಿ ಗ್ಯಾರಂಟಿ ನೀಡುತ್ತಿರುವುದು ಕೂಡ ದೂರಗಾಮಿ ಪ್ರಯೋಜನ ಕಾಣುವ ಯೋಜನೆಗಳು. ಕೋವಿಡ್ ಅವಧಿಯಲ್ಲಿಯೂ ಜಿಎಸ್ ಟಿ ಸಂಗ್ರಹ ಹೆಚ್ಚಳವಾಗಿರುವುದಕ್ಕೆ ಕೈಗಾರಿಕೆಗಳನ್ನು ಮೆಚ್ಚಬೇಕು. ಎಲ್ಲಿ ಮೋದಿ ಸ್ವಲ್ಪ ಟೈಟ್ ಮಾಡಿದ್ದಾರೋ ಆ ಹಣ ಜನರ ಕಲ್ಯಾಣಕ್ಕೆನೆ ಬಳಕೆಯಾಗುತ್ತದೆ ಎನ್ನುವ ಧೈರ್ಯ ಜನರಲ್ಲಿ ಬಂದಿದೆ. ದೇಶದ ಗಡಿರಾಜ್ಯಗಳಲ್ಲಿ ರಸ್ತೆ, ಕಾಶ್ಮೀರದ ಅಭಿವೃದ್ಧಿ, ಸೈನ್ಯದ ಸಶಕ್ತಿಕರಣಕ್ಕೆ ಹಣ ಬಳಕೆ ಸಹಿತ ಅನೇಕ ಯೋಜನೆಗಳು ಮೋದಿಯವರಿಂದಲೇ ಆಗಿದೆ ಎನ್ನುವುದನ್ನು ಸಾಮಾನ್ಯ ನಾಗರಿಕ ಅರಿತುಕೊಂಡಿದ್ದಾನೆ. ಬಿಜೆಪಿಯ ಸಾಮಾಜಿಕ ಜಾಲತಾಣಗಳು ಇದನ್ನು ಸಮರ್ಥವಾಗಿ ಜನರಿಗೆ ತಲುಪಿಸಿವೆ. ಇನ್ನು ಮೋದಿಯವರಿಗೂ ತಾವು ಮಾಡುವ ಕಾರ್ಯ ಹೇಗೆ ಜನರನ್ನು ತಲುಪಬೇಕು ಎಂದು ಗೊತ್ತಿದೆ. ಅದನ್ನು ಅವರು ಮಾಡುತ್ತಾರೆ!
Leave A Reply