ಹಿಜಾಬ್ ನಡುವೆ ದೇವಸ್ಥಾನಗಳಿಗೆ ಬಿಜೆಪಿ ನೋಟಿಸು ಕೊಟ್ಟದ್ದೇ ಗೊತ್ತಾಗಿಲ್ಲ!!
ಬಹುಶ: ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿಯವರು ಹಿಜಾಬ್ ಗಲಾಟೆಯಲ್ಲಿ ಬಿಝಿ ಇರುವಾಗ ಪೊಲೀಸರು ಮತ್ತು ಧಾರ್ಮಿಕ ದತ್ತಿ ಇಲಾಖೆಯಿಂದ ಬೆಂಗಳೂರಿನ ಕೆಲವು ದೇವಸ್ಥಾನಗಳಿಗೆ ನೋಟಿಸು ಹೋಗಿದೆ. ನಿಮ್ಮ ದೇವಸ್ಥಾನಗಳಲ್ಲಿ ಹೊಡೆಯುವ ಗಂಟೆ, ಜಾಗಟೆ ಮತ್ತು ಇತರ ಪರಿಕರಗಳಿಂದ ಶಬ್ದ ಜಾಸ್ತಿಯಾಗುತ್ತೆ ಎಂದು ನೋಟಿಸು ನೀಡಲಾಗಿದೆ. ಬಿಜೆಪಿ ಸರಕಾರ ಇರುವಾಗಲೇ ದೇವಸ್ಥಾನಗಳಿಗೆ ನೋಟಿಸಾ ಎಂದು ನಿಮಗೆ ಆಶ್ಚರ್ಯವಾಗಬಹುದು. ಇಂತಹುದ್ದೆಲ್ಲಾ ಆಗುವುದೇ ಬಿಜೆಪಿ ಸರಕಾರ ಇದ್ದಾಗ. ಯಾಕೆಂದರೆ ಕಾಂಗ್ರೆಸ್ ಇಂತಹ ಮನೆಹಾಳು ಕೆಲಸ ಮಾಡಲು ಧೈರ್ಯ ಮಾಡುವುದು ಇಲ್ಲ. ಮಾಡಿದರೆ ಬಿಜೆಪಿಯವರು ಸುಮ್ಮನೆ ಬಿಡುವುದಿಲ್ಲ ಎಂದು ಒಳಗೊಳಗೆ ಆತಂಕ ಇರುವುದರಿಂದ ಅವರು ಸುಮ್ಮನೆ ಕುಳಿತುಕೊಂಡು ಇರುತ್ತಾರೆ. ಆದರೆ ಬಿಜೆಪಿಯವರಿಗೆ ತಮ್ಮನ್ನು ಯಾರೂ ಪ್ರಶ್ನಿಸುವುದಿಲ್ಲ ಎನ್ನುವ ಭ್ರಮೆ ಇದೆ. ಅವರಿಗೆ ಗೊತ್ತು, ಕಾಂಗ್ರೆಸ್ ನವರು ಪ್ರಶ್ನಿಸುವಂತಹ ನೈತಿಕತೆಯನ್ನು ಹೊಂದಿಲ್ಲ.
ಯಾಕೆಂದರೆ ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆಯಲ್ಲಿ ಎಷ್ಟು ಮುಳುಗಿದೆ ಎಂದರೆ ದೇವಸ್ಥಾನಗಳಲ್ಲಿ ಉಗ್ರಗಾಮಿಗಳು ನುಗ್ಗಿದರೂ “ಪಾಪ, ದಾರಿ ತಪ್ಪಿ ಬಂದಿರಬೇಕು” ಎಂದು ಕಾಂಗ್ರೆಸ್ ಹೇಳುತ್ತದೆ ವಿನ: ಖಂಡಿಸುತ್ತೆ ಎನ್ನುವ ನಿರೀಕ್ಷೆ ಅವರ ಪಕ್ಷದ ಹಿಂದೂಗಳಿಗೂ ಇಲ್ಲ. ಹಾಗಾದರೆ ಕಾಂಗ್ರೆಸ್ ನವರು ಪ್ರಶ್ನಿಸುವುದಿಲ್ಲ ಎನ್ನುವ ಒಂದೇ ಕಾರಣಕ್ಕೆ ಬಿಜೆಪಿಯವರು ಹೀಗೆ ಮಾಡ್ತಾರಾ? ಇಲ್ಲ, ಇದರ ಹಿಂದೆ ಇನ್ನೊಂದು ಏಜೆಂಡಾ ಇದ್ದರೂ ಇರಬಹುದು. ಸುಪ್ರೀಂಕೋರ್ಟ್ ಈಗಾಗಲೇ ಮಸೀದಿಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಧ್ವನಿವರ್ಧಕಗಳ ಮೂಲಕ ಅಝಾನ್ ಕೂಗುವುದನ್ನು ನಿಲ್ಲಿಸಿ, ಕೇವಲ ಮಸೀದಿಯ ಒಳಗೆ ಮಾತ್ರ ಕೇಳಿಸುವಂತೆ ಇಡಲು ಸೂಚಿಸಿದೆ. ಇದನ್ನು ಯಾವ ಮಸೀದಿಯವರು ಕೂಡ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಅವರಿಗೆ ನೋಟಿಸು ಕೊಡುವಷ್ಟು ಧೈರ್ಯ ಪೊಲೀಸರಿಗೆ ಇದ್ದಂತೆ ಕಾಣುತ್ತಿಲ್ಲ. ಸರಕಾರದಲ್ಲಿರುವ ಅಧಿಕಾರಿಗಳಿಗೆ ನೋಟಿಸನ್ನು ಟೈಪ್ ಮಾಡಲು ಧೈರ್ಯ ಇದ್ದರೆ ತಾನೆ, ಕೊಡಲು ಪೊಲೀಸರಿಗೆ ಹುಮ್ಮಸ್ಸು ಬರುವುದು. ಒಂದು ವೇಳೆ ಕೊರಿಯರ್ ನಲ್ಲಿ ನೋಟಿಸು ಕೊಟ್ಟರೂ ಏನು ಉಪಯೋಗ? ಮಸೀದಿಯವರು ಕ್ಯಾರೇ ಮಾಡುವುದಿಲ್ಲ. ಬಹುಶ: ಬೆಂಗಳೂರಿನಲ್ಲಿರುವ ಮಸೀದಿಯ ಧ್ವನಿವರ್ಧಕ ತೆಗೆಯಬೇಕಾದರೆ ರಾಜ್ಯ ಸರಕಾರ ಕೇಂದ್ರಕ್ಕೆ ವಿನಂತಿಸಿ “ಮಿಲಿಟರಿ ಕಳುಹಿಸಿ, ಮಸೀದಿಯೊಂದರ ಸ್ಪೀಕರ್ ತೆಗೆಯಲು ಇದೆ” ಎಂದು ಮನವಿ ಮಾಡಬೇಕಾದಿತು. ಅಂತಹ ನಾಚಿಕೆಗೇಡಿನ ಮನವಿ ಮಾಡುವುದಕ್ಕಿಂತ ತೆಗೆಯುವ ಯೋಚನೆ ಮಾಡುವುದೇ ಬೇಡಾ ಎಂದು ನಿರ್ಧರಿಸಿದಂತಿದೆ. ಹಾಗಂತ ಕೈ ತುರಿಸುವುದು ನಿಲ್ಲುತ್ತಾ? ಅದಕ್ಕೆ ಒಂದು ಪ್ಲಾನ್ ಮಾಡಲಾಗಿದೆ. ಮೊದಲಿಗೆ ಮೂರ್ನಾಕು ದೇವಸ್ಥಾನಗಳಿಗೆ ನೋಟಿಸು ಕೊಡುವುದು, ನಂತರ ಕೇಳಿಲ್ಲ ಎಂದು ಸಾಂಕೇತಿಕವಾಗಿ ಅಲ್ಲಿನ ಧ್ವನಿವರ್ಧಕದ ಸಂಪರ್ಕ ತೆಗೆಯುವುದು ಮತ್ತೆ ಕೂಡ ಶಬ್ದ ಹೊರಗೆ ಬಂದರೆ ದೇವಸ್ಥಾನದ ವಿರುದ್ಧ ಪ್ರಕರಣ ದಾಖಲಿಸುವುದು. ಎರಡು, ಮೂರು ಹೀಗೆ ಮಾಡಿದ ನಂತರ ಮಸೀದಿಗಳಿಗೆ ಕೈ ಹಾಕುವುದು. ನೋಡಿ, ನಾವು ದೇವಸ್ಥಾನಗಳನ್ನೇ ಬಿಟ್ಟಿಲ್ಲ, ಇನ್ನು ನಿಮ್ಮನ್ನು ಬಿಡಲು ಆಗುತ್ತಾ ಎಂದು ಹೇಳಿ ಉದ್ದೇಶ ಈಡೇರಿಸುವುದು.
ಹೀಗೆ ಮಾಡುವ ನಡುವೆ ಕಾಂಗ್ರೆಸ್ ಅಪ್ಪಿತಪ್ಪಿ ಅಡ್ಡಬಂದು “ನೋಡಿ, ಹಿಂದೂ ದೇವಾಲಯಗಳ ಸೌಂಡ್ ಆಫ್ ಮಾಡಲು ಬಿಜೆಪಿಯವರು ಹೊರಟಿದ್ದಾರೆ” ಎಂದು ಪುಕಾರು ಎಬ್ಬಿಸಿದರೆ? ಆಗ ನೇರವಾಗಿ ಇದು ನಮ್ಮ ಅರಿವಿಗೆ ಬರದೇ ನಡೆದ ಘಟನೆ ಎನ್ನುವ ಫಿಕ್ಸ್ಡ್ ಡೈಲಾಗ್ ಬಿಜೆಪಿಗರ ಕಿಸೆಯಲ್ಲಿಯೇ ಇರುತ್ತದೆ. ಒಂದು ವೇಳೆ ವಿಷಯ ಜೋರಾಗಿ ಪ್ರತಿಭಟನೆ, ಮಾಧ್ಯಮಗಳಲ್ಲಿ ಚರ್ಚೆ ಹೆಚ್ಚಾದರೆ ಇದು ಅಧಿಕಾರಿಗಳ ಕೃತ್ಯ. ಕಾಂಗ್ರೆಸ್ ಮನಸ್ಸಿನ ಅಧಿಕಾರಿಗಳು ನಮ್ಮ ರಾಜ್ಯದಲ್ಲಿ ಹೆಚ್ಚಿದ್ದಾರೆ ಎಂದು ಮತ್ತೆ ಕಾಂಗ್ರೆಸ್ ಮೇಲೆನೆ ಸವಾರಿ ಮಾಡುವುದು. ಒಟ್ಟಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡಿದರೂ ಬಿಜೆಪಿಗೆ ಲಾಭ. ಮಾಡದಿದ್ದರೂ ಲಾಭ. ಇಂತಹ ಒಂದು ಐಡಿಯಾ ಹಿಡಿದುಕೊಂಡು ಹೊರಟಿರುವ ಬಿಜೆಪಿಯ ನಡೆ ಕುತೂಹಲಕರವಾಗಿದೆ. ಅದರೊಂದಿಗೆ ಕೆಲವು ದೇವಸ್ಥಾನಗಳಿಗೆ ಬಿಜೆಪಿಯ ಶಾಸಕರು, ಸಚಿವರು, ಜನಪ್ರತಿನಿಧಿಗಳು ಹೊಸ ಗಂಟೆ, ಡಮರು, ನಗಾರಿ ಎಲ್ಲಾ ಕೊಟ್ಟು ನಾವು ಯಾವಾಗಲೂ ಧರ್ಮದ ಪರ ಎಂದು ನಾಲ್ಕು ಫೋಟೋ ತೆಗೆದರೆ ಮುಗಿಯಿತು. ಅದನ್ನು ಪತ್ರಿಕೆ, ಟಿವಿ, ಸೋಶಿಯಲ್ ಮೀಡಿಯಾಗಳಲ್ಲಿ ಪಸರಿಸಿದರೆ ಇದು ಇನ್ನು ಕೂಡ ಲಾಭದಾಯಕ. ಆದ್ದರಿಂದ ಬಿಜೆಪಿಯವರು ಏನು ಮಾಡಿದರೂ ಅದರ ಹಿಂದೆ ಲಾಭದ ಉದ್ದೇಶ ಇರುತ್ತದೆ. ಈಗ ನೋಡಿ, ಹಿಜಾಬ್ ವಿಷಯ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ನಾವು ಹಿಂದೂ ರಾಷ್ಟ್ರ ಮಾಡಿದರೆ ಕೆಂಪುಕೋಟೆಯ ಮೇಲೆಯೂ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಈಶ್ವರಪ್ಪ ಹೇಳಿದರು. ಇದರಿಂದ ಕಾಂಗ್ರೆಸ್ಸಿಗೆ ಕೋಪ ಬಂತು. ಪ್ರತಿಭಟನೆ ಮಾಡಿದರು. ಜನರಿಗೆ ಯಾರು ಕೇಸರಿ ಪರ ಇದ್ದಾರೆ ಎಂದು ಗ್ಯಾರಂಟಿಯಾಯಿತು. ಇಲ್ಲದಿದ್ದರೆ ಮೇಲಿನಿಂದ ಸೂಚನೆ ಬರದಿದ್ದರೆ ಅಂತಹ ಹೇಳಿಕೆ ಕೊಡಲು ಈಶ್ವರಪ್ಪ ಬರೆ ಯಾವುದಾದರೂ ವಾರ್ಡಿನ ಅಧ್ಯಕ್ಷ ಅಲ್ಲ. ಅವರು ರಾಜ್ಯದ ಪ್ರಮುಖ ಖಾತೆಯ ಸಚಿವರು. ಬಿಜೆಪಿ 75 ದಾಟಿದವರಿಗೆ ಟಿಕೆಟ್ ಕೊಡಲ್ಲ ಎನ್ನುವುದೇ ನಿಜವಾದರೆ ಇದೇ ಈಶ್ವರಪ್ಪನವರ ಕೊನೆಯ ಅವಧಿ. ಅಷ್ಟಿರುವಾಗ ಎಲ್ಲಿಂದ ಬಾಣ ಬಿಡಬೇಕು ಮತ್ತು ಯಾವ ಮರದಲ್ಲಿ ಹಣ್ಣು ಬಿಟ್ಟಿದೆ ಎಂದು ಗೊತ್ತಿಲ್ಲದೆ ಕೇಶವನ ಕೃಪೆಯಲ್ಲಿರುವ ಬಿಜೆಪಿಗರು ಸುಮ್ಮನೆ ಕೆಮ್ಮುವುದು ಕೂಡ ಇಲ್ಲ!!
Leave A Reply