ಉಕ್ರೇನಿನಲ್ಲಿ ವೈದ್ಯರಾಗಲು ಹೊರಡುವ ಹಿಂದಿನ ಲಾಭ ಮತ್ತು ನಷ್ಟ!
ಪ್ರತಿ ವರ್ಷ ಭಾರತದಿಂದ ಉಕ್ರೇನಿಗೆ ಕನಿಷ್ಟ 25 ರಿಂದ 30 ಸಾವಿರ ವಿದ್ಯಾರ್ಥಿಗಳು ಮೆಡಿಕಲ್ ಸೀಟಿಗಾಗಿ ಹೋಗುತ್ತಾರೆ. ಹಾಗಾದರೆ ಈಗ ಲೆಕ್ಕ ಹಾಕಿ. ಅಲ್ಲಿ ಯುದ್ಧ ಆಗುತ್ತಿರುವಾಗ ಎಷ್ಟು ಮಂದಿ ಇಲ್ಲಿನ ವಿದ್ಯಾರ್ಥಿಗಳು ಸಿಲುಕಿದ್ದಾರೆ ಎನ್ನುವ ಅಂದಾಜು ಲೆಕ್ಕ ನಿಮಗೆ ಸಿಗುತ್ತದೆ. ಉಕ್ರೇನ್ ಮಾತ್ರ ಅಲ್ಲ, ಪಕ್ಕದ ರಷ್ಯಾ, ಈಚೇಗಿನ ಚೀನಾ ಸಹಿತ ಅಮೇರಿಕಾವನ್ನು ಬಿಟ್ಟು ಅನೇಕ ರಾಷ್ಟ್ರಗಳಲ್ಲಿ ಮೆಡಿಕಲ್ ಸೀಟು ಹುಡುಕಿ ಹೋಗುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಲಕ್ಷಗಳಲ್ಲಿ ಇದೆ. ಅದು ಇಲ್ಲಿಯ ತನಕ ಜನಸಾಮಾನ್ಯರಿಗೆ ಇದರ ಅಂದಾಜು ಇರಲಿಲ್ಲ. ಈಗ ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿರುವಾಗ ಭಾರತದ ಹತ್ತಾರು ವಿಮಾನಗಳಲ್ಲಿ ಕೇಂದ್ರ ಸರಕಾರ ಕರೆದುಕೊಂಡು ಬರುತ್ತಿರುವ ವಿದ್ಯಾರ್ಥಿಗಳನ್ನು ನೋಡುವಾಗ ಇಷ್ಟು ಮಕ್ಕಳು ಅಲ್ಲಿಗೇಕೆ ಹೋದರು ಎನ್ನುವ ಪ್ರಶ್ನೆ ಟಿವಿ ನೋಡುತ್ತಿರುವ ಅನೇಕ ಮನೆಗಳ ಅಡುಗೆ ಕೋಣೆಗಳಲ್ಲಿ ಮಹಿಳೆಯರು ಮಾತನಾಡಿಕೊಳ್ಳುತ್ತಿರುವ ವಿಷಯ.
ನಮ್ಮ ಮಗ ಅಥವಾ ಮಗಳನ್ನು ಉಕ್ರೇನಿಗೆ ಓದಲು ಕಳುಹಿಸಿದ್ದೇವೆ ಎಂದು ವರ್ಷದ ಹಿಂದೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಪೋಷಕರು ಈಗ ಅಲ್ಲಿ ಕಳುಹಿಸಿದ್ದಕ್ಕೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಒಂದು ಕಾಲದಲ್ಲಿ ವಿದೇಶಕ್ಕೆ ಓದಲು ಕಳುಹಿಸುವುದು ಎಂದರೆ ಅವರು ಶ್ರೀಮಂತರು ಎಂದೇ ಎಲ್ಲರೂ ಅಂದುಕೊಳ್ಳುತ್ತಿದ್ದರು. ಫಾರಿನ್ ನಲ್ಲಿ ಅವರ ಮಗ ಓದುತ್ತಿದ್ದಾನೆ ಎನ್ನುವುದು ಆಯಾ ಏರಿಯಾಗಳಲ್ಲಿ ಅಂತಹ ಕುಟುಂಬಗಳ ಘನತೆಯನ್ನು ಹೆಚ್ಚಿಸುತ್ತಿತ್ತು. ಫಾರಿನ್ ರಿಟರ್ನ್ದ್ ಎನ್ನುವುದು ಆ ವಿದ್ಯಾರ್ಥಿಯ ತಲೆಗೆ ಹೆಚ್ಚುವರಿ ಕೊಂಬನ್ನು ನೀಡುತ್ತಿತ್ತು. ಆದರೆ ಈಗ ಒಂದು ಯುದ್ಧ ಅಂತಹ ಭ್ರಮೆಯಲ್ಲಿ ಇದ್ದವರನ್ನು ಧರೆಗೆ ಇಳಿಸಿದೆ. ಅದು ಹೇಗೆ? ಮೊದಲನೇಯದಾಗಿ ವಿದೇಶಗಳಿಗೆ ಮೆಡಿಕಲ್ ಸೀಟಿಗಾಗಿ ಹೋದ 90% ದಷ್ಟು ವಿದ್ಯಾರ್ಥಿಗಳಲ್ಲಿ ಬಹುತೇಕರು ಭಾರತದ ನೀಟ್ ಪರೀಕ್ಷೆಯನ್ನು ಪಾಸು ಮಾಡದೇ ಕೈಚೆಲ್ಲಿದವರು. ಅಂತವರಿಗಾಗಿಯೇ ವಿದೇಶದ ಹಲವಾರು ಶಿಕ್ಷಣ ಸಂಸ್ಥೆಗಳು ಕಾದುಕುಳಿತುಕೊಂಡಿರುತ್ತವೆ. ಅದಕ್ಕೆ ಉಕ್ರೇನ್ ಹೊರತಲ್ಲ. ನೀಟ್ ಫೇಲ್ ಆದ ವಿದ್ಯಾರ್ಥಿಗಳನ್ನು ಅಲ್ಲಿ ವೈದ್ಯರನ್ನಾಗಿ ಮಾಡುವ ಗುತ್ತಿಗೆ ಪಡೆದುಕೊಳ್ಳುವ ಅಲ್ಲಿನ ಶಿಕ್ಷಣ ಸಂಸ್ಥೆಗಳು ಇಲ್ಲಿ ಖರ್ಚಾಗುವ ಹಣದ ಕಾಲು ಭಾಗವನ್ನು ಮಾತ್ರ ಪಡೆದುಕೊಳ್ಳುತ್ತವೆ. ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ನೀಟ್ ಬರೆಯದೇ ಅಥವಾ ಪಾಸಾಗದೇ ಮತ್ತು ನೂರು ರೂಪಾಯಿಯ ಸಾಮಾನು 25-30 ರೂಪಾಯಿಗಳಿಗೆ ವಿದೇಶದಲ್ಲಿ ಸಿಕ್ಕಿದರೆ ಯಾರಿಗೆ ಬೇಡಾ. ಇನ್ನು ಹೆಚ್ಚಿನವರು ಉಕ್ರೇನ್ ದೇಶವನ್ನೇ ವೈದ್ಯಕೀಯ ಶಿಕ್ಷಣಕ್ಕೆ ಯಾಕೆ ಬಳಸುತ್ತಾರೆ ಎಂದರೆ ಅಲ್ಲಿ ಸಿಗುವ ಡಿಗ್ರಿಗೆ ಭಾರತದ ವೈದ್ಯಕೀಯ ಸಂಘದಲ್ಲಿ ಮಾನ್ಯತೆ ಇದೆ. ಅದೇ ನೀವು ರಷ್ಯಾದಲ್ಲಿ ಡಾಕ್ಟರಿಕೆ ಕಲಿತು ಭಾರತಕ್ಕೆ ಕಾಲಿಟ್ಟರೆ ಇಲ್ಲಿ ಮತ್ತೊಂದು ಕಠಿಣ ಹೆಚ್ಚು ಕಡಿಮೆ ನೀಟ್ ನಷ್ಟೇ ಸವಾಲಿನ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಇನ್ನು ಆಶ್ಚರ್ಯ ಎಂದರೆ ಈ ಪರೀಕ್ಷೆ ಬರೆಯುವ ನೂರರಲ್ಲಿ 15 ಶೇಕಡಾ ಜನ ಮಾತ್ರ ಪರೀಕ್ಷೆ ಪಾಸಾಗುತ್ತಾರೆ. ಆದರೆ ಫೇಲ್ ಆದ ಹೆಚ್ಚಿನವರು ಅದನ್ನು ಮುಚ್ಚಿಟ್ಟು ಇಲ್ಲಿ ಪ್ರಾಕ್ಟೀಸ್ ಶುರು ಮಾಡುತ್ತಾರೆ. ಇದು ಇನ್ನು ಡೇಂಜರ್ ವಿಷಯ. ಇನ್ನು ಕೆಲವರು ವಿದೇಶದಲ್ಲಿ ಎಂಬಿಬಿಎಸ್ ಕಲಿತು ಇಲ್ಲಿ ಬಂದು ಇಲ್ಲಿನ ಸರಕಾರ ಮಾಡುವ ಪರೀಕ್ಷೆಯಲ್ಲಿ ಪಾಸಾಗದೇ ಇಲ್ಲಿ ಸಿಕ್ಕಿಬಿದ್ದರೆ ಏನು ಗತಿ ಎಂದು ಎಲ್ಲಿ ಕಲಿತರೋ ಅಲ್ಲಿಗೆ ವಾಪಾಸಾಗಿ ಪ್ರಾಕ್ಟೀಸಿಗೆ ಕೈ ಹಾಕುತ್ತಾರೆ. ಕೆಲವರು ಅಲ್ಲಿನ ಅಕ್ಕಪಕ್ಕದ ರಾಷ್ಟ್ರಗಳಲ್ಲಿ ವೈದ್ಯರಾಗಲು ಹೊರಡುತ್ತಾರೆ. ಇಂತಹ ಯುದ್ಧ ಬಂದಾಗ ಮಾತ್ರ ಅಂತವರಿಗೆ ಭಾರತದ ನೆನಪಾಗುತ್ತದೆ. ಹಾಗಾದರೆ ವಿದೇಶದಲ್ಲಿ ಕಲಿಯದೇ ಇಲ್ಲಿಯೇ ಇಲ್ಲಿನ ವಿದ್ಯಾರ್ಥಿಗಳು ಕಲಿಯುವಂತೆ ಮಾಡಬಹುದಾ?
ಹೀಗೆ ಮಾಡಬೇಕಾದರೆ ಇಲ್ಲಿನ ಫೀಸ್ ವ್ಯವಸ್ಥೆಯನ್ನು ಅಮೂಲಾಗ್ರ ಬದಲಾವಣೆ ಮಾಡಬೇಕು. ಹೆಸರಿಗೆ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಇದೆ. ಇನ್ನು ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಕೂಡ ಸರಕಾರಿ ಸೀಟುಗಳಿವೆ. ಆದರೆ ಜನಸಾಮಾನ್ಯರಿಗೆ ಈ ಸೀಟುಗಳು ಸಿಗುತ್ತಾ? ಬಹುತೇಕ ಸಂದರ್ಭಗಳಲ್ಲಿ ಇಲ್ಲ. ಒಂದೊಂದು ಸೀಟು ಬಿಡ್ ಮಾಡಿ ತೆಗೆದುಕೊಳ್ಳುವ ಇವತ್ತಿನ ಮೆಡಿಕಲ್ ಶಿಕ್ಷಣ ವ್ಯವಸ್ಥೆಯಲ್ಲಿ ಮಧ್ಯಮ ವರ್ಗದವರಿಗೆ ಮೆಡಿಕಲ್ ಸಿಗುವುದು ಎಂದರೆ ಭಾರತದಲ್ಲಿ ತುಂಬಾ ಕಷ್ಟ. ಮೋದಿ ಇದಕ್ಕೆ ಏನಾದರೂ ಪರಿಹಾರ ಹುಡುಕಲು ಪ್ರಯತ್ನಿಸಬೇಕು. ಸರಕಾರಿ ಮೆಡಿಕಲ್ ಸೀಟು ಅರ್ಹ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ಸಿಗಲು ಏನಾದರೂ ರೂಪುರೇಶೆ ಸಿದ್ಧಪಡಿಸಿಕೊಳ್ಳಬೇಕು. ಭಾರತದಲ್ಲಿ ಮೆಡಿಕಲ್ ಸೀಟು ಮಾರುವುದೇ ಒಂದು ದಂಧೆ. ಇದರ ಹಿಂದೆ ಲಾಬಿ ಪ್ರಬಲವಾಗಿದೆ. ನೀಟ್ ನ ಕೋಚಿಂಗ್ ಕ್ಲಾಸುಗಳಿಂದ ಹಿಡಿದು, ಕೌನ್ಸಿಲಿಂಗ್ ವ್ಯವಸ್ಥೆಯನ್ನು ಕೂಡ ಸೇರಿಸಿ, ಏಜೆನ್ಸಿಗಳ ಮೂಲಕ ಕಾಲೇಜುಗಳನ್ನು ಸಂಪರ್ಕಿಸಿ ಅಲ್ಲಿ ಸೀಟು ಪಡೆದುಕೊಳ್ಳುವ ತನಕದ ಹೋರಾಟ ಮತ್ತು ಅದಕ್ಕೆ ಸುರಿಯುವ ಹಣದ ಮೊತ್ತವನ್ನು ನೋಡಿಯೇ ಎಷ್ಟೋ ಜನ ವಿದ್ಯಾರ್ಥಿಗಳು ವೈದ್ಯರಾಗುವ ತಮ್ಮ ಕನಸನ್ನು ಅದುಮಿ ಇಟ್ಟುಕೊಳ್ಳುತ್ತಾರೆ. ಅಂತವರಲ್ಲಿ ಕೆಲವರು ವಿದೇಶಗಳಿಗೆ ಹೋಗುತ್ತಾರೆ. ಅಲ್ಲಿಯೇ ಕಲಿಯುತ್ತಾರೆ ಮತ್ತು ಅಲ್ಲಿಯೇ ಸೆಟಲ್ ಆಗುತ್ತಾರೆ. ಅದು ನಿಲ್ಲಬೇಕು ಎನ್ನುವುದು ಮೋದಿಯವರ ಕನಸಿರಬಹುದು ಆದರೆ ಇಲ್ಲಿನ ಮೆಡಿಕಲ್ ಮಾಫಿಯಾ ಅವರ ಉದ್ದೇಶವನ್ನು ಹಾಳು ಮಾಡುತ್ತದೆ. ಇಲ್ಲದೇ ಹೋದರೆ ಗಾಂಧಿಯೊಬ್ಬರ ಹೆಸರಿನಲ್ಲಿ ಇರುವ ವೈದ್ಯಕೀಯ ಕೇಂದ್ರವೊಂದಕ್ಕೆ ಸೆನೆಟ್ ಅಥವಾ ಸಿಂಡಿಕೇಟ್ ಸದಸ್ಯರಾಗಲು ಯಾಕೆ ಅಷ್ಟು ಹೋರಾಟ ಮತ್ತು ಕದನ ಅಲ್ಲವೇ??
Leave A Reply