ಒಂದು ಮಳೆ ಎಚ್ಚರಿಸಿದ ಕಥೆ!
ಕೆಲವು ವಿಷಯ ಗೊತ್ತಾಗಲು ಇಡೀ ಸಿನೆಮಾ ನೋಡಬೇಕಾಗಿಲ್ಲ. ಒಂದು ಟ್ರೇಲರ್ ನೋಡಿದರೆ ಸಾಕು. ಅದೇ ರೀತಿಯಲ್ಲಿ ಮಂಗಳೂರು ನಗರದಲ್ಲಿ ಈ ಮಳೆಗಾಲ ಹೇಗಿರಲಿದೆ ಎನ್ನುವುದನ್ನು ನೋಡಲು ಜೂನ್ ತನಕ ಕಾಯಬೇಕಾಗಿಲ್ಲ. ಮೊನ್ನೆ ಶನಿವಾರ, ಭಾನುವಾರ ಕೆಲಹೊತ್ತು ಮಳೆ ಬಂದಿತ್ತಲ್ಲ, ಆಗ ಮಂಗಳೂರು ಹೇಗಾಗಿತ್ತು ಎನ್ನುವುದನ್ನು ನೋಡುವಾಗಲೇ ನಿಮಗೆ ಮುಂದಿನ ಮಳೆಗಾಲದ ಒಂದು ಝಲಕ್ ಗೊತ್ತಾಗಿಬಿಡುತ್ತದೆ. ಹಿಂದಿನ ಸಿನೆಮಾಗಳಲ್ಲಿ ಎಲ್ಲಾ ಮುಗಿದ ಬಳಿಕ ಪೊಲೀಸರು ಬರುವುದನ್ನು ನೋಡಿ ನಿಮಗೆ ಸಿನಿಕತನ ಮೂಡಿದ್ದಿರಬಹುದು. ಎಲ್ಲವೂ ಆದ ನಂತರ ಹೇಳುವುದಕ್ಕಿಂತ ಮೊದಲೇ ಎಚ್ಚರಿಸುವುದು ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ. ಆದ್ದರಿಂದ ಇವತ್ತೇ ಕೆಲವು ಫೋಟೋಗಳನ್ನು ಇಲ್ಲಿ ಪೋಸ್ಟ್ ಮಾಡಿದ್ದೇನೆ. ಅವು ಇಡೀ ಕಥೆಯನ್ನು ಹೇಳುತ್ತವೆ. ಆದರೆ ಹೀಗೆ ಬಿಟ್ಟರೆ ಏನಾಗಬಹುದು ಮತ್ತು ಇದು ಬರದಂತೆ ಕೃತಕ ನೆರೆಯನ್ನು ತಡೆಯುವುದು ಹೇಗೆ ಎನ್ನುವುದನ್ನು ಈ ಜಾಗೃತ ಅಂಕಣದಲ್ಲಿ ಹೇಳಲಿದ್ದೇನೆ.
ಈ ಫೋಟೋಗಳು ರಥಬೀದಿ ಸಮೀಪದ ಮಹಾಮಾಯ ದೇವಸ್ಥಾನದ ರಸ್ತೆಯದ್ದು. ಇದನ್ನು ಸ್ಮಾರ್ಟ್ ಸಿಟಿ ಫಂಡಿನಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಸಹಜವಾಗಿ ರಸ್ತೆ ಸಾಮಾನ್ಯ ದಿನಗಳಲ್ಲಿ ಚೆಂದ ಕಾಣಿಸುತ್ತದೆ. ಮಳೆ ಬಂದರೂ ಅದೇ ಚೆಂದತನ ಉಳಿಸಬೇಕು ಎಂದು ರಸ್ತೆ ಮತ್ತು ಫುಟ್ ಪಾತ್ ನಡುವೆ ಗಲ್ಲಿ ಟ್ರಾಪ್ ಎನ್ನುವ ವ್ಯವಸ್ಥೆ ಅಳವಡಿಸಿದ್ದಾರೆ. ಇದು ಕಬ್ಬಿನ ಹಾಲನ್ನು ಗ್ಲಾಸಿನಲ್ಲಿ ಹಾಕುವಾಗ ಪಾತ್ರೆ ಮತ್ತು ಗ್ಲಾಸ್ ನಡುವೆ ಹಿಡಿಯುತ್ತಾರಲ್ಲ ಆ ವಸ್ತುವಿನ ತರಹ ಕೆಲಸ ಮಾಡುತ್ತದೆ. ಇಲ್ಲಿಯೂ ಹಾಗೆ. ಆದರೆ ಕಬ್ಬಿನ ರಸ ಸೋಸಿದ ನಂತರ ಜರಿಗೆಯಲ್ಲಿ ಉಳಿದ ಕಸವನ್ನು ಪಕ್ಕದ ಡಸ್ಟಬೀನ್ ನಲ್ಲಿ ಬಿಸಾಡಲಾಗುತ್ತದೆ. ರಸ್ತೆಯ ಮೇಲೆ ಬಿದ್ದ ಕಸಕಡ್ಡಿ, ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಕವರ್ ಗಳು, ಎಲೆಗಳು, ಮಣ್ಣು ಎಲ್ಲವೂ ಮಳೆ ನೀರಿನೊಂದಿಗೆ ಈ ಗಲ್ಲಿ ಟ್ರಾಪ್ ನ ಮೇಲೆ ಹೋಗಿ ನಿಂತರೆ ಏನಾಗುತ್ತದೆ. ಮಳೆಯ ನೀರು ಗಲ್ಲಿ ಟ್ರಾಪ್ ನಿಂದ ಇಳಿದು ಫುಟ್ ಪಾತ್ ಕೆಳಗೆ ಇರುವ ಚರಂಡಿಗೆ ಹೋಗದಂತೆ ಆ ತ್ಯಾಜ್ಯಗಳು ಮಳೆನೀರನ್ನು ಬ್ಲಾಕ್ ಮಾಡಿಬಿಡುತ್ತದೆ. ಮೊನ್ನೆ ಕೂಡ ಹೀಗೆ ಆಯಿತು. ಡೊಂಗರಕೇರಿ, ಗಣಪತಿ ದೇವಸ್ಥಾನ ರಸ್ತೆ ಹೀಗೆ ಆಸುಪಾಸಿನ ರಸ್ತೆಗಳಲ್ಲಿ ಇದೇ ಕಥೆ. ಮೊದಲನೇಯದಾಗಿ ಮಂಗಳೂರಿನಲ್ಲಿ ಮಳೆಗಾಲದಲ್ಲಿ ಮಳೆ ಧಾರಾಕಾರವಾಗಿ ಬರುತ್ತದೆ. ಆದ್ದರಿಂದ ಬೇರೆ ಜಿಲ್ಲೆಗಳನ್ನು ಹೋಲಿಸಿ ಅಲ್ಲಿಟ್ಟಷ್ಟೇ ಗಲ್ಲಿ ಟ್ರಾಪ್ ಇಲ್ಲಿ ಸಾಕಾಗುವುದಿಲ್ಲ. ಇಲ್ಲಿ ಸ್ಮಾರ್ಟ್ ಸಿಟಿಯವರು ಇದರ ಪ್ರಮಾಣ ಹೆಚ್ಚಿಸಬೇಕು. ಅದರೊಂದಿಗೆ ಎಷ್ಟೇ ಗಲ್ಲಿ ಟ್ರಾಪ್ ಹಾಕಿಸಿದರೂ ಮಂಗಳೂರಿನ ಸ್ವಚ್ಚತೆಯ ಗುತ್ತಿಗೆಯನ್ನು ವಹಿಸಿಕೊಂಡಿರುವ ಆಂಟೋನಿ ವೇಸ್ಟ್ ಮ್ಯಾನೇಜಮೆಂಟಿನವರು ತಾವು ಮಾಡಬೇಕಾದ ಕರ್ತವ್ಯವನ್ನು ಸಮರ್ಪಕವಾಗಿ ಮಾತನಾಡದಿದ್ದರೆ ಕೃತಕ ನೆರೆ ಆಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಆಂಟೋನಿ ವೇಸ್ಟಿನವರು ರಸ್ತೆಯನ್ನು ಗುಡಿಸಲ್ಲ. ರಸ್ತೆಯಲ್ಲಿ ಬಿದ್ದ ಕಸಕಡ್ಡಿ, ಪ್ಲಾಸ್ಟಿಕ್ ಗಳನ್ನು ಕೇಳುವವರು ಇಲ್ಲ.
ವಾರ್ಡಿನಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂದು ಆರಿಸಿಬಂದ ಕಾರ್ಪೋರೇಟರ್ ಗಳು ಆಂಟೋನಿಯವರಿಂದ ಕನಿಷ್ಟ ಕ್ಲೀನ್ ಕೂಡ ಮಾಡಿಸಲ್ಲ. ಆಂಟೋನಿಯವರು ಕಾರ್ಪೋರೇಟರ್ಸ್ ಹಾಗೂ ಪಾಲಿಕೆಯ ಅಧಿಕಾರಿಗಳನ್ನು “ಚೆನ್ನಾಗಿ” ಇಟ್ಟುಕೊಂಡಿದ್ದಾರೆ. ಈಗ ಪಾಲಿಕೆ ಆಯುಕ್ತರು ತಡಮಾಡದೇ ಹದಿನೈದು ದಿನಗಳ ಒಳಗೆ ಮಂಗಳೂರಿನ ರಸ್ತೆಗಳನ್ನು ಗುಡಿಸಿ ಸ್ವಚ್ಚವಾಗಿ ಇಡಲು ಆಂಟೋನಿಯವರಿಗೆ ಸೂಚನೆ ಕೊಡಬೇಕು. ಅದನ್ನು ಗಮನಿಸಲು ಆರೋಗ್ಯ ನಿರೀಕ್ಷಕರು ಅಂದರೆ ಹೆಲ್ತ್ ಇನ್ಸಪೆಕ್ಟರ್ ಗಳಿಗೆ ಆದೇಶ ನೀಡಬೇಕು. ಹದಿನೈದು ದಿನಗಳ ನಂತರ ವರದಿ ನೀಡಲು ಹೇಳಬೇಕು. ಯಾವ ವಾರ್ಡಿನಲ್ಲಿ ಸ್ವಚ್ಚತೆ ಆಗಿಲ್ಲ ಎಂದು ವರದಿ ಬರುತ್ತದೋ ಆಂಟೋನಿಯವರ ವಿರುದ್ಧ ಆಯುಕ್ತರು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಯಾವ ವಾರ್ಡಿನಿಂದ ವರದಿಯೇ ಬರಲ್ಲವೋ ಅಥವಾ ಸುಳ್ಳು ವರದಿ ಬರುತ್ತದೋ ಅದನ್ನು ಕೂಡ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು. ಇನ್ನು ಯಾರ ವಾರ್ಡಿನಲ್ಲಿ ಹೀಗೆ ಕೃತಕ ನೆರೆ ಉಂಟಾಗುತ್ತದೆಯೋ ಆ ಕಾರ್ಪೋರೇಟರ್ ಗಳು ಆಂಟೋನಿ ವೇಸ್ಟ್ ವಿರುದ್ಧ ಲಖಿತ ದೂರು ಕೊಟ್ಟಿದ್ದಾರಾ, ಅವರಿಂದ ತಮ್ಮ ವಾರ್ಡಿನಲ್ಲಿ ಯಾಕೆ ಕೆಲಸ ಮಾಡಿಸಿಲ್ಲ, ಕವರ್ ತೆಗೆದುಕೊಂಡು ಹೊಂದಾಣಿಕೆ ಮಾಡಿಕೊಂಡಿದ್ದಾರಾ ಎಂದು ಕೂಡ ಪಕ್ಷದ ಮುಖಂಡರು ನೋಡಬೇಕು. ಯಾಕೆಂದರೆ ಇವರೆಲ್ಲರೂ ಆಂಟೋನಿ ವೇಸ್ಟಿನವರೊಂದಿಗೆ ಅಡ್ಜಸ್ಟಮೆಂಟ್ ಮಾಡಿಕೊಂಡಿದ್ದಾರಾ ಎಂದುಕೂಡ ಗೊತ್ತಾಗುತ್ತದೆ. ಕೊನೆಯಲ್ಲಿ ಇವರ ಅಪವಿತ್ರ ಮೈತ್ರಿಯಿಂದ ತೊಂದರೆಗೆ ಒಳಗಾಗುವವರು ರಸ್ತೆಯಲ್ಲಿ ನಡೆದುಕೊಂಡು ಹೋಗುವ ಜನಸಾಮಾನ್ಯರು. ಈ ಮಳೆಯ ನೀರು ನಮ್ಮ ಮೈಮೇಲೆ ಬಿದ್ದಾಗ ಆಗ ಯಾವ ಕಾರ್ಪೋರೇಟರ್ ಕೂಡ ಬರುವುದಿಲ್ಲ. ಯಾರು ಈಗ ಮೌನವಾಗಿ ಕೃತಕ ನೆರೆಗೆ ಕಾಯುತ್ತಿದ್ದಾರೋ ಅವರಿಗೆ ಪಾಪದವರ ಶಾಪ ಕಟ್ಟಿಟ್ಟ ಬುತ್ತಿ!
Leave A Reply