ಉದ್ಯಮಗಳು ರಾಜ್ಯ ಬಿಡುವ ಮೊದಲು ಎಚ್ಚರಗೊಳ್ಳಿ, ಟ್ವೀಟ್ ಮತ್ತೆ ಮಾಡಿ!!
ಯಾವುದು ನಮ್ಮ ತಟ್ಟೆಯಲ್ಲಿ ಅನಾಯಾಸವಾಗಿ ಬಂದು ಬೀಳುತ್ತದೆ ಎನ್ನುವಾಗ ನಮಗೆ ಅದರ ಮಹತ್ವ ಗೊತ್ತಾಗುವುದಿಲ್ಲ. ಯಾವಾಗ ಅದು ಬರುವುದು ನಿಲ್ಲುತ್ತೋ ಆಗ ನಮಗೆ ಎಚ್ಚರವಾಗುವುದು. ಇಂತಹ ಒಂದು ಪರಿಸ್ಥಿತಿಯನ್ನು ನಮ್ಮ ರಾಜ್ಯ ಸರಕಾರ ಅನುಭವಿಸುತ್ತಿದೆ. ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರನ್ನು ಎದೆಯ ಮೇಲಿಟ್ಟು ಬೆಳೆಸಿದರು. ಆದರೆ ಬೆಂಗಳೂರನ್ನು ಮಾತ್ರ ಬೆಳೆಸಿದ್ದರಿಂದ ಅದು ಅವರ ಪಾಲಿಗೆ ರಾಜಕೀಯ ಭವಿಷ್ಯದಲ್ಲಿ ಮೈನಸ್ ಕೂಡ ಆಯಿತು, ಅದು ಬೇರೆ ವಿಷಯ. ಆದರೆ ಬೆಂಗಳೂರು ಬೆಳೆದ ರೀತಿ ನೋಡಿದ ದೇಶದ ಬೇರೆ ಬೇರೆ ಉದ್ಯಮಗಳು ಪೈಪೋಟಿಗೆ ಬಿದ್ದಂತೆ ಬೆಂಗಳೂರಿಗೆ ಧಾವಿಸಿದವು. ಬೆಂಗಳೂರಿನ ಸೆರಗು ವಿಸ್ತರಿಸುತ್ತಾ ಹೋಯಿತು. ದೇಶ, ವಿದೇಶಗಳ ತಾಂತ್ರಿಕ ನಿಪುಣರು ಬೆಂಗಳೂರಿನಲ್ಲಿ ಬಂದು ಇಳಿದರು. ಬೆಂಗಳೂರಿನ ವಿಸ್ತಾರ ಇನ್ನಷ್ಟು ಬೆಳೆಯಿತು. ಬೆಂಗಳೂರು ಸಿಲಿಕಾನ್ ವ್ಯಾಲಿ ಎಂದು ಅಂತರಾಷ್ಟ್ರೀಯವಾಗಿ ಗುರುತಿಸಿಕೊಂಡಿತು. ಯಾವಾಗ ಒಂದು ರಾಜಧಾನಿ ಮಾತ್ರ ಬೆಳೆಯುತ್ತಾ ಆ ರಾಜ್ಯದ ಬೇರೆ ಬೇರೆ ಭಾಗಳು ಸೊರಗಿಕೊಳ್ಳುತ್ತದೆಯೋ ಅದು ಆ ರಾಜ್ಯಕ್ಕೆ ಲಾಭ ಮತ್ತು ನಷ್ಟ ಎರಡನ್ನು ತಂದುಕೊಡುತ್ತದೆ. ಕೋಟ್ಯಾಂತರ ತೆರಿಗೆ ಬೆಂಗಳೂರಿನಿಂದ ಹರಿದು ಬಂದು ರಾಜ್ಯದ ಬೊಕ್ಕಸ ಸೇರಿತು. ಅದು ಬೆಂಗಳೂರಿನ ಅಭಿವೃದ್ಧಿಗೆ ಮಾತ್ರ ವಿನಿಯೋಗವಾಯಿತು. ಬೇರೆ ಜಿಲ್ಲೆಗಳಿಗೆ ಚಿಕ್ಕಾಸು ದೊರೆಯಿತು. ಮುಂದಿನ ಚುನಾವಣೆಯಲ್ಲಿ ಕೃಷ್ಣ ಸರಕಾರ ಸೋತಿತು. ಬೆಂಗಳೂರು ಗೆದ್ದಿತ್ತು. ಮುಂದೆ ಬಂದ ಯಾವ ಸರಕಾರ ಕೂಡ ಬೆಂಗಳೂರನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಹೊರವಲಯದ ರಸ್ತೆಗಳು ಕಾಯಿಲೆಗೆ ಬಿದ್ದವು. ಟ್ರಾಫಿಕ್ ಜಾಮ್ ಹೆಚ್ಚಾಯಿತು. ವಿದ್ಯುತ್ ಕೊರತೆ ಐಟಿಬಿಟಿಯನ್ನು ಕಾಡಿತು. ಕುಡಿಯುವ ನೀರು ಗುಣಮಟ್ಟ ಕಳೆದುಕೊಂಡಿತು. ಉದ್ಯಮಿಗಳಲ್ಲಿ ಅಪಸ್ವರ ಏಳಲು ತುಂಬಾ ಕಾಲ ಹಿಡಿಯಲಿಲ್ಲ. ಈಗ ಅದು ಹೊರಗೆ ಬಂದಿದೆ. ಬೆಂಗಳೂರಿನ ಒಬ್ಬರು ಸ್ಟಾಟ್ ಅಪ್ ಉದ್ಯಮಿ ತಮ್ಮ ಸಂಕಟಗಳನ್ನು ಟ್ವಿಟ್ ಮಾಡುತ್ತಿದ್ದಂತೆ ರಾಜಕೀಯ ಆರೋಪ-ಪ್ರತ್ಯಾರೋಪಗಳು ಎದ್ದು ನಿಂತಿದೆ.
ಉದ್ಯಮಿ ರವೀಶ್ ನರೇಶ್ ಎನ್ನುವವರು ತಮ್ಮ ಉದ್ಯಮಕ್ಕೆ ಆಗುತ್ತಿರುವ ತೊಂದರೆಯನ್ನು ಬರೆಯುತ್ತಿದ್ದಂತೆ ಮೊದಲು ಎದ್ದು ನಿಂತವರು ಪಕ್ಕದ ತೆಲಂಗಾಣದ ಮುಖ್ಯಮಂತ್ರಿಯವರ ಮಗ ಮತ್ತು ಸಚಿವರೂ ಆಗಿರುವ ಕೆ ಟಿ ರಾಮರಾವ್. “ನೀವು ನಿಮ್ಮ ಬ್ಯಾಗ್ ಪ್ಯಾಕ್ ಮಾಡಿ ತೆಲಂಗಾಣಕ್ಕೆ ಬನ್ನಿ” ಎಂದು ರೀಟ್ವಿಟ್ ಮಾಡಿದ್ದರು. ಅದು ಅವರು ಕೇವಲ ರವೀಶ್ ಅವರಿಗೆ ಮಾತ್ರ ಮಾಡಿದ ಟ್ವೀಟ್ ತರಹ ಕಂಡಬಂದರೂ ಅದರ ಹಿಂದೆ ಬೆಂಗಳೂರಿನ ಬೇರೆ ಉದ್ಯಮಿಗಳಿಗೂ ಆಹ್ವಾನವಿತ್ತು. ಯಾವುದೇ ರಾಜ್ಯ ಅಭಿವೃದ್ಧಿಗೊಳ್ಳಬೇಕಾದರೆ ಅಲ್ಲಿ ಪರಿಸರ ಸಹ್ಯ ಉದ್ಯಮಗಳು ಬಂದಷ್ಟು ಒಳ್ಳೆಯದು. ಅದರಲ್ಲಿಯೂ ಐಟಿಬಿಟಿಗಳು ಬಂದಷ್ಟು ಇನ್ನೂ ಒಳ್ಳೆಯದು. ಮೊದಲನೇಯದಾಗಿ ಅವು ಪರಿಸರಕ್ಕೆ ಪೂರಕ. ಅದರಲ್ಲಿ ಉದ್ಯೋಗಿಗಳಿಗೆ ಭರಪೂರ ಸಂಬಳ ಇರುತ್ತದೆ. ಅವರು ಆ ರಾಜ್ಯದಲ್ಲಿ ವಾಸಿಸುವುದರಿಂದ ಹಣದ ಹರಿವು ಚೆನ್ನಾಗಿರುತ್ತದೆ. ವೈಟ್ ಕಾಲರ್ ಜಾಬ್ ಆಗಿರುವುದರಿಂದ ಯಾವ ರಗಳೆ ಕೂಡ ಇಲ್ಲ. ಆದ್ದರಿಂದ ಅವು ನಮ್ಮ ರಾಜ್ಯಕ್ಕೆ ಬರಲಿ ಎಂದು ಪ್ರತಿ ರಾಜ್ಯದ ಆಡಳಿತ ಬಯಸುತ್ತಿರುತ್ತದೆ. ಅದನ್ನು ಕೆಟಿಆರ್ ಮಾಡಿದ್ದಾರೆ ಅಷ್ಟೇ. ತಮಾಷೆ ಎಂದರೆ ಈ ಟ್ವೀಟನ್ನು ಡಿಕೆಶಿಯ ಟ್ವೀಟರ್ ಹ್ಯಾಂಡಲ್ ಮಾಡುವ ವ್ಯಕ್ತಿಗಳು ನೋಡಿರುವುದು. ಅವರು ಸಿಕ್ಕಿದ ಒಂದು ಬಾಲ್ ನಲ್ಲಿ ಸಿಕ್ಸರ್ ಹೊಡೆಯುವ ಉಮ್ಮೇದು ತೋರಿಸಿದ್ದಾರೆ. 2023 ರಲ್ಲಿ ನಮ್ಮದೇ ಸರಕಾರ ಬರಲಿದೆ. ಆಗ ನಾವು ಅದೆಲ್ಲವನ್ನು ಸರಿ ಮಾಡಿ ಉದ್ಯಮ ಸ್ನೇಹ ವಾತಾವರಣ ನಿರ್ಮಿಸುತ್ತೇವೆ ಎಂದು ಟಾಂಗ್ ಕೊಟ್ಟಿದ್ದಾರೆ. ಆಗ ನಮ್ಮ ಭಾರತೀಯ ಜನತಾ ಪಾರ್ಟಿಯ ರಾಜ್ಯದ ಸಚಿವರು ಎದ್ದಿದ್ದಾರೆ. ಅಶ್ವಥನಾರಾಯಣ್ ಹಾಗೂ ಸುಧಾಕರ್ ಏನೇನೋ ಕೌಂಟರ್ ಕೊಡಲು ಹೋಗಿ ಅಸಂಬದ್ಧವಾಗಿ ವರ್ತಿಸಿದ್ದಾರೆ. ಒಬ್ಬ ಉದ್ಯಮಿ ಏನು ಕೇಳುತ್ತಾನೆ. ಉತ್ತಮ ರಸ್ತೆ, ಉತ್ತಮ ನೀರು, ಗಾಳಿ, ಬೆಳಕು, ವಿಮಾನ ನಿಲ್ದಾಣ ಇಷ್ಟೇ. ಅದನ್ನು ಕೊಡಬೇಕಾಗಿರುವುದು ನಿಮ್ಮ ಆದ್ಯ ಕರ್ತವ್ಯ. ಇಲ್ಲಿ ತೆಲಂಗಾಣದ ಸಚಿವರದ್ದು ತಪ್ಪಿಲ್ಲ. ಅವರು ತಮ್ಮ ರಾಜಕಾರಣ ಮಾಡುತ್ತಾರೆ. ಡಿಕೆಶಿ ಕೂಡ ಟಾಂಗ್ ಕೊಟ್ಟಿರುವುದರಲ್ಲಿ ಅವರ ರಾಜಕೀಯ ಜಾಣ್ಮೆ ಅಡಗಿದೆ. ಈಗ ಬೆಂಗಳೂರಿಗೆ ಅಗತ್ಯವಾಗಿ ಆಗಬೇಕಾಗಿರುವುದು ಏನು ಅದನ್ನು ಮಾಡಿ. ರೋಡ್ ಹಾಳಾಗಿದ್ದರೆ ಅದನ್ನು ಸರಿಮಾಡಿಕೊಡಿ. ಆ ಉದ್ಯಮಿ ಹಾಗೆ ಟ್ವಿಟ್ ಮಾಡಿದ್ದು ಅಧಿಕಪ್ರಸಂಗ ಅಂದುಕೊಳ್ಳಬೇಡಿ. ಅವರು ಅನೇಕ ಉದ್ಯಮಿಗಳ ಪರವಾಗಿ ಹಾಗೆ ಮಾಡಿದ್ದಾರೆ. ಉದ್ಯಮಗಳಿಗೆ 24 ಗಂಟೆ ವಿದ್ಯುತ್ ಪೂರೈಕೆ ಮಾಡಿ. ಅವರು ಅದಕ್ಕೆ ಹಣ ಕಟ್ಟಲು ಸಿದ್ಧರಿದ್ದಾಗ ನಿಮಗೆ ಕೊಡಲು ಯಾಕೆ ಹಿಂಜರಿಕೆ? ಇನ್ನು ಮುಂಬೈಯಲ್ಲಿ ಅಲ್ಲಿನ ಸರಕಾರಿ ಬಸ್ ವ್ಯವಸ್ಥೆಗೆ ಪ್ರತ್ಯೇಕ ಪಾಥ್ ವೇ ಇದ್ದಂತೆ ಬೆಂಗಳೂರಿನಲ್ಲಿಯೂ ಐಟಿಬಿಟಿ ವಾಹನಗಳಿಗೆ ದಿನದ ಇಂತಿಷ್ಟು ಹೊತ್ತು ಪ್ರತ್ಯೇಕ ಪಾಥ್ ವೇ ಮಾಡಿ ಅಥವಾ ಇಂತಹ ಉದ್ಯಮಗಳು ಹೆಚ್ಚು ಇರುವ ಏರಿಯಾಗಳಲ್ಲಿ ಫ್ಲೈಓವರ್ ನಿರ್ಮಾಣ ಮಾಡಿದರೂ ಒಳ್ಳೆಯದು. ಟ್ರಾಫಿಕ್ ಜಾಮ್ ಕಡಿಮೆ ಮಾಡಿ. ಉತ್ತಮ ನೀರಿನ ವ್ಯವಸ್ಥೆ ಮಾಡಿ. ಹೇಗೂ ಅವರು ನಿಮಗೆ ಬೇಕು. ಅವರಿಗೆ ನೀವು ಬೇಕು. ಉತ್ತಮ ಮೂಲಭೂತ ಸೌಕರ್ಯ ಕೊಟ್ಟರೆ ಇನ್ನಷ್ಟು ಉದ್ಯಮಗಳು ಬರಬಹುದು. ಅದು ಬಿಟ್ಟು ಅವರು ಕೇಳಿದ್ದೇ ಸಮಸ್ಯೆ, ಡಿಕೆಶಿ ಹೇಳಿದ್ದೇ ರಾಜಕೀಯ ಎಂದುಕೊಂಡು ಪಿಟೀಲು ಊದುತ್ತಾ ಕುಳಿತರೆ ನಾವು ನಿಂತ ನೀರಾಗುತ್ತೇವೆ.!
Leave A Reply