ಪೊಲೀಸ್ ಕಮೀಷನರ್, ಆ ಇನ್ಸಪೆಕ್ಟರ್ ಗೆ ಬುದ್ಧಿ ಹೇಳುತ್ತೀರಾ?
ಮಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಬಗ್ಗೆ ಹೊಸ ನಿಯಮವೊಂದನ್ನು ಮಾಡುವುದು ಒಳ್ಳೆಯದು. ಏನೆಂದರೆ ಯಾರು ನಿಯಮಗಳನ್ನು ಉಲ್ಲಂಘಿಸುತ್ತಾರೋ ಅವರಿಗೆ ಯಾವುದೇ ಪೊಲೀಸರು ಅಡ್ಡ ಹಾಕುವುದಿಲ್ಲ. ಯಾವುದೇ ದಂಡವನ್ನು ಹಾಕುವುದಿಲ್ಲ. ಯಾರು ಬೇಕಾದರೂ ಯಾವಾಗ ಬೇಕಾದರೂ ಹೇಗೆ ಬೇಕಾದರೂ ಹೋಗಬಹುದು, ಬರಬಹುದು ಎಂದು ನಿಯಮ ಮಾಡಿದರೆ ರಗಳೆ ಇಲ್ಲ. ಪೊಲೀಸ್ ಕಮೀಷನರ್ ಒಂದು ಮೀಟಿಂಗ್ ಮಾಡಿ ಕೆಲವು ಜನಪ್ರತಿನಿಧಿಗಳಿಗೆ ಮಾಹಿತಿ ಕೊಟ್ಟು ಒಂದು ಪತ್ರಿಕಾ ಹೇಳಿಕೆ ಕೊಟ್ಟುಬಿಡಿ. ಇಲ್ಲದಿದ್ದರೆ ಏನಾಗುತ್ತದೆ ಎಂದರೆ ಇತ್ತೀಚೆಗೆ ಬಳ್ಳಾಲ್ ಭಾಗ್ ನಲ್ಲಿ ಆದ ಘಟನೆ ಅಲ್ಲಲ್ಲಿ ಆಗುತ್ತದೆ. ಅದರಿಂದ ಮುಜುಗರಕ್ಕೆ ಮತ್ತು ಅವಮಾನಕ್ಕೆ ಒಳಗಾಗುವವರು ಕೆಳಹಂತದ ಪೊಲೀಸ್ ಸಿಬ್ಬಂದಿಗಳು. ಅವರಿಗೆ ಅವಮಾನ ಆಗಬಾರದು ಎಂದರೆ ಒಂದೋ ಯಾವ ಪ್ರಭಾವಿ ಫೋನ್ ಮಾಡಿದರೂ ನಾವು ಟ್ರಾಫಿಕ್ ವ್ಯವಸ್ಥೆಗೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರತಿಜ್ಞೆ ಮಾಡಬೇಕು.
ಮಂಗಳೂರಿನಲ್ಲಿ ಮೊನ್ನೆ ನಡೆದ ಒಂದು ಘಟನೆಯ ಬಗ್ಗೆ ನಿಮಗೆ ಗೊತ್ತಾದರೆ ಈ ವ್ಯವಸ್ಥೆಯ ಬಗ್ಗೆ ನಿಮಗೆ ಅಸಹ್ಯ ಮೂಡಬಹುದು. ಪಿವಿಎಸ್ ಜಂಕ್ಷನ್ ಅಥವಾ ಬೆಸೆಂಟ್ ನಿಂದ ಎಂಜಿ ರಸ್ತೆಯಲ್ಲಿ ಬರುವ ವಾಹನಗಳು ಬಳ್ಳಾಲ್ ಭಾಗ್ ಬಳಿ ಏಕಾಏಕಿ ಯು ಟರ್ನ್ ತೆಗೆದುಕೊಳ್ಳುವಂತಿಲ್ಲ. ಆದರೆ ಮೊನ್ನೆ ಒಬ್ಬ ಮಹಾನುಭಾವ ಸಡನ್ನಾಗಿ ಯೂ-ಟರ್ನ್ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಅದನ್ನು ಅಲ್ಲಿಯೇ ಕರ್ತವ್ಯದಲ್ಲಿದ್ದ ಲೇಡಿ ಕಾನ್ಸಟೇಬಲ್ ಪ್ರಶ್ನಿಸಿದ್ದಾರೆ. ಅದರಿಂದ ಕೋಪಗೊಂಡ ಆ ಮನುಷ್ಯ ನೇರವಾಗಿ ಯಾರಿಗೋ ಫೋನ್ ಮಾಡಿದ್ದಾನೆ. ಅಲ್ಲಿ ಆ ವ್ಯಕ್ತಿ ಫೋನ್ ರಿಸೀವ್ ಮಾಡಿ ಕಾನ್ಸಟೇಬಲ್ ಅವರಿಗೆ ಕೊಡಲು ಹೇಳಿದ್ದಾರೆ. ಅಷ್ಟೊತ್ತಿಗೆ ಲೇಡಿ ಕಾನ್ಸಟೇಬಲ್ ಅವರಿಗೆ ಇದು ಇನ್ ಫ್ಯೂಯೆನ್ಸ್ ಮಾಡಲು ಯಾರಿಗೋ ಮಾಡಿದ ಫೋನ್ ಎಂದು ಗೊತ್ತಾಗಿದೆ. ನೀವು ಯಾರಿಗೋ ಫೋನ್ ಮಾಡಿದರೆ ನಾವು ಯಾರ ಬಳಿಯೂ ಮಾತನಾಡುವ ಅವಶ್ಯಕತೆ ಇಲ್ಲ. ನಾವು ನಮ್ಮ ಸುಪೀರಿಯರ್ ಆಫೀಸರ್ ಅವರ ಬಳಿ ಮಾತನಾಡುತ್ತೇನೆ ಎಂದು ಆ ಲೇಡಿ ಕಾನ್ಸಟೇಬಲ್ ಹೇಳಿದ್ದಾರೆ. ಅವರು ಅಷ್ಟರಲ್ಲಿ ತಮ್ಮ ಮೇಲಾಧಿಕಾರಿಯಾದ ಟ್ರಾಫಿಕ್ ಎಎಸ್ ಐ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಅವರು ಅಲ್ಲಿಗೆ ಬಂದಿದ್ದಾರೆ. ಇಲ್ಲಿ ಈ ವ್ಯಕ್ತಿ ಕೇಳುವ ಸ್ಥಿತಿಯಲ್ಲಿ ಇಲ್ಲ. ಅಲ್ಲಿ ಟ್ರಾಫಿಕ್ ಜಾಮ್ ಜಾಸ್ತಿಯಾಗುತ್ತಿದೆ. ಅಷ್ಟರಲ್ಲಿ ಪೊಲೀಸ್ ಇನ್ಸಪೆಕ್ಟರ್ ಒಬ್ಬರು ಬರುತ್ತಾರೆ. ಪೊಲೀಸ್ ಇಲಾಖೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಟ್ರಾಫಿಕ್ ವ್ಯವಸ್ಥೆ ನೋಡಿಕೊಳ್ಳಲು ಎರಡು ರೀತಿಯ ವಿಭಾಗಗಳು ಇರುತ್ತವೆ. ಅದಕ್ಕೆ ಅನುಗುಣವಾಗಿ ಅವರ ಸಮವಸ್ತ್ರ ಕೂಡ ಇರುತ್ತದೆ. ಅದರಿಂದಲೇ ಅವರು ಯಾವ ವಿಭಾಗದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುತ್ತಾರೆ ಎಂದು ಗೊತ್ತಾಗುತ್ತದೆ. ಹೀಗಿರುವಾಗ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಇನ್ಸಪೆಕ್ಟರ್ ಬಂದು ಟ್ರಾಫಿಕ್ ವಿಭಾಗದ ಕಾನ್ಸಟೇಬಲ್ ಅವರಿಗೆ ” ಅವರು ಫೋನ್ ನನಗೆ ಮಾಡಿದಾಗ ನೀವು ಮಾತನಾಡುವುದಿಲ್ಲ ಎಂದು ಹೇಳಿದ್ದಿರಂತೆ, ನಿಮಗೆ ನನ್ನ ಬಳಿ ಮಾತನಾಡಲಾಗದಷ್ಟು ಅಹಂಕಾರನಾ” ಎಂದು ಜೋರು ಮಾಡಿದ್ದಾರೆ. ಇದರಿಂದ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಆ ಶ್ರೀಮಂತನಿಗೆ ಕೊಂಬು ಬಂದುಬಿಟ್ಟಿದೆ. ಹೇಗೆ, ತಾನು ಆ ಟ್ರಾಫಿಕ್ ಕಾನ್ಸಟೇಬಲ್ ಗೆ ಬುದ್ಧಿ ಕಲಿಸಿದೆ ಎಂದು ಜಂಭ ಮೂಡಿದೆ. ಇನ್ನು ತನ್ನನ್ನು ಯಾರೂ ಪ್ರಶ್ನಿಸುವುದಿಲ್ಲ, ನನ್ನ ಪವರ್ ಎಲ್ಲರಿಗೂ ಗೊತ್ತಾಯಿತು ಎಂದು ತಲೆಗೆ ಅಹಂಕಾರ ಏರಿದೆ. ಈ ಕಾನೂನು ಭಂಜಕನಿಗೆ ಸಹಾಯ ಮಾಡಿದ ಆ ಪೊಲೀಸ್ ಇನ್ಸಪೆಕ್ಟರ್ ಧರ್ಮಕ್ಕೆ ಏನೂ ಮಾಡಿರುವುದಿಲ್ಲ. ಯಾವಾಗಲಾದರೂ ಈ ಋಣ ಸಂದಾಯ ಯಾವುದಾದರೂ ರೂಪದಲ್ಲಿ ಆಗಿಯೇ ಆಗಿರುತ್ತದೆ.
ಹಾಗಿರುವಾಗ ಇಲ್ಲಿ ನೀವು ಸಾಮಾನ್ಯ ಕಾನ್ಸಟೇಬಲ್ ಎದುರು ಕೆಲವು ಕ್ಷಣ ಹೀರೋ ಆಗಿರಬಹುದು. ಆದರೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರನ್ನು ಸಹಾಯ ಮಾಡುವ ಪೊಲೀಸ್ ಅಧಿಕಾರಿಗಳು ಕೂಡ ಅಷ್ಟೇ ನಿಯಮ ಭಂಜಕರು ಆಗಿರುತ್ತಾರೆ. ಅವರು ಕೆಳಹಂತಹ ಸಿಬ್ಬಂದಿಗಳಲ್ಲಿ ನಿರುತ್ಸಾಹ ಮೂಡಿಸುವುದು ಮಾತ್ರವಲ್ಲದೆ ಅಹಂಕಾರದಿಂದ ಮಾತನಾಡಿ ಎಲ್ಲರ ಎದುರು ಅವಮಾನ ಕೂಡ ಮಾಡಿರುತ್ತಾರೆ. ಇದನ್ನು ಮಂಗಳೂರು ಪೊಲೀಸ್ ಕಮೀಷನರ್ ಗಂಭೀರವಾಗಿ ತೆಗೆದುಕೊಳ್ಳಬೇಕು. ತೆಗೆದುಕೊಳ್ತಾರಾ ಎನ್ನುವುದು ಪ್ರಶ್ನೆ. ಈಗೀಗ ಸಣ್ಣ ವಯಸ್ಸಿನ ಯಾರ್ಯಾರೋ ಹುಡುಗರು ಪೊಲೀಸ್ ಕಮೀಷನರ್ ಅವರಿಗೆ ಫೋನ್ ಮಾಡಿ ಟ್ರಾಫಿಕ್ ಪೊಲೀಸರಿಗೆ ಕಕ್ಕಾಬಿಕ್ಕಿ ಮಾಡುತ್ತಾರೆ ಎನ್ನುವುದು ಚಾಲ್ತಿಯಲ್ಲಿರುವ ಮಾತು. ಶಶಿಕುಮಾರ್ ಈ ವಿಷಯದ ಬಗ್ಗೆ ಯೋಗ್ಯ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಕೆಲವರಿಗೆ ಇದೆ. ಆ ಲೇಡಿ ಕಾನ್ಸಟೇಬಲ್ ಅವರನ್ನು ಚೇಂಬರಿಗೆ ಕರೆಸಿ ಮಾತನಾಡಿದರೆ ಆಕೆಗೆ ಬೈದ ಪೊಲೀಸ್ ಇನ್ಸಪೆಕ್ಟರ್ ಯಾರೆಂದು ಗೊತ್ತಾಗುತ್ತದೆ. ಅದು ಆಗಲಿ ಎನ್ನುವುದು ನಮ್ಮ ನಿರೀಕ್ಷೆ. ಹಾಗಂತ ಎಲ್ಲಾ ಕಾನ್ಸಟೇಬಲ್ ಕೂಡ ಸಮರ್ಪಕವಾಗಿ ಡ್ಯೂಟಿ ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರಿಗೆ ಎಲ್ಲಿಯೋ ಡ್ಯೂಟಿ ಹಾಕಿರುತ್ತಾರೆ. ಅವರು ಮತ್ತೆಲ್ಲಿಯೋ ನೆರಳಿನಲ್ಲಿ ಕೂಡ ಮೊಬೈಲ್ ಕುಟ್ಟುತ್ತಿರುತ್ತಾರೆ. ಟ್ರಾಫಿಕ್ ಜಾಮ್ ಆದ ಎಷ್ಟೋ ಹೊತ್ತಿನ ಬಳಿಕ ಓಡಿ ಬರುತ್ತಾರೆ. ಎಲ್ಲಿದ್ದೀರಿ ಎಂದರೆ ನಿಮಗ್ಯಾಕೆ? ನಾವು ಬಿಸಿಲಿನಲ್ಲಿ ನಿಂತು ಸಾಯಬೇಕಾ ಎನ್ನುತ್ತಾರೆ!
Leave A Reply