ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
ನ್ಯಾಯಾಧೀಶರು ಎನಿಸಿಕೊಂಡವರು ಟಿವಿ ವಾಹಿನಿಯ ನಿರೂಪಕರ ಹಾಗೆ ಹೇಳಿಕೆ ಕೊಡಬಾರದು. ಶಾಲೆಯ ಶಿಕ್ಷಕರ ಹಾಗೆ, ರಾಜಕೀಯ ಪಕ್ಷದ ಅಧ್ಯಕ್ಷರ ಹಾಗೆ ಕೂಡ ಮಾತನಾಡಲೇಬಾರದು. ಅವರು ತಮ್ಮ ಮುಂದಿರುವ ಸಾಕ್ಷ್ಯಗಳನ್ನು ಪರಿಶೀಲಿಸಿ ಮಾತ್ರ ಮಾತನಾಡಬೇಕು. ಅದಕ್ಕಾಗಿ ಒಬ್ಬ ವ್ಯಕ್ತಿ ಕೊಲೆ ಆರೋಪದಲ್ಲಿ ವಿಚಾರಣೆಗೆ ಒಳಪಟ್ಟರೆ ಅಂತಿಮವಾಗಿ ತೀರ್ಪು ನೀಡುವಾಗ ನ್ಯಾಯಾಧೀಶರು ಕಾನೂನು ಭಾಷೆಯಲ್ಲಿ ಹೇಳುವುದಾದರೆ “ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪ ಸಾಬೀತಾಗಿಲ್ಲ” ಎಂದು ತೀರ್ಪಿನಲ್ಲಿ ಹೇಳುತ್ತಾರೆ. ಇಷ್ಟೆಲ್ಲ ಇರುವಾಗ ಏಕಾಏಕಿ ನುಪೂರ್ ಶರ್ಮಾ ಅವರನ್ನು ಎದುರಿಗೆ ನಿಲ್ಲಿಸಿ ಈ ದೇಶದಲ್ಲಿ ಆಗಿರುವ ಘಟನೆ, ದೊಂಬಿಗಳಿಗೆ ಕಾರಣರಾದ ನೀವು ದೇಶದ ಕ್ಷಮೆ ಕೇಳಬೇಕು ಎಂದು ಹೇಳುವುದು ಎಷ್ಟು ಸರಿ? ಇಂತಹ ಸ್ಟೇಟ್ ಮೆಂಟ್ ಕೇಳಲು ಅವರು ಸುಪ್ರೀಂಕೋರ್ಟಿಗೆ ಬಂದದ್ದಾ? ಯಾಕೆಂದರೆ ನ್ಯಾಯಾಧೀಶರು ನೀಡಿದ್ದು ಅದು ತೀರ್ಪಲ್ಲ, ಅದು ಹೇಳಿಕೆ. ತಮ್ಮ ಮೇಲೆ ದೇಶದ ವಿವಿದ ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿದೆ. ಸುರಕ್ಷತೆಯ ಕಾರಣ ಮತ್ತು ಸಮಯ, ಶ್ರಮದ ಕಾರಣ ಆ ಪ್ರಕರಣಗಳನ್ನು ಒಂದೇ ಕಡೆ ಅಂದರೆ ದೆಹಲಿಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿ ಅವರು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದರು. ಅಲ್ಲಿ ಅವರಿಗೆ ಸಿಕ್ಕಿದ ದುಬಾರಿ ಉಪದೇಶ ಎಂದರೆ ದೇಶದ ಕ್ಷಮೆಯಾಚನೆ.
ಈ ಬಗ್ಗೆ ಬೇಸರ ವ್ಯಕ್ತಪಡಿಸಿ ದೇಶದ ಕಾನೂನು ಸಚಿವರಾದ ಕಿರಣ್ ರೀಜು ಅವರು ಪತ್ರ ಬರೆದಿದ್ದು, ಸುಪ್ರೀಂ ಕೋರ್ಟಿನ ನ್ಯಾಯಾಧೀಶರಿಂದ ಇಂತಹ ಬಾಲಿಶ ಹೇಳಿಕೆಗಳ ನಿರೀಕ್ಷೆ ಇರಲಿಲ್ಲ ಎಂದಿದ್ದಾರೆ. ಅಷ್ಟಕ್ಕೂ ಇಂತಹ ಹೇಳಿಕೆ ಕೊಟ್ಟ ಜೆ.ಬಿ.ಪರ್ದಿವಾಲ ಅವರು 1989 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದವರು ಎನ್ನುವ ಸುದ್ದಿ ಕೂಡ ಹೊರಗೆ ಬಂದಿದೆ. ಅವರು ಹಸ್ತಲಾಘವಕ್ಕಾಗಿ ಸೋನಿಯಾ ಗಾಂಧಿಯವರ ಎದುರು ಕೈ ಚಾಚಿರುವ ಫೋಟೋ ಈಗ ವೈರಲ್ ಆಗುತ್ತಿದೆ. ಯಾವುದೇ ಒಂದು ನ್ಯಾಯಾಲಯ, ಅದು ಕೆಳಹಂತ ಅಥವಾ ಮೇಲಿನ ಹಂತ ಯಾವುದೇ ಇರಬಹುದು, ಅಲ್ಲಿ ಸೇವೆ ಸಲ್ಲಿಸುವ ನ್ಯಾಯಾಧೀಶರು ಯಾವುದೇ ಪಕ್ಷ, ಜಾತಿ, ಧರ್ಮ, ಸಿದ್ಧಾಂತವನ್ನು ಮೀರಿ ಬೆಳೆದಿರಬೇಕು. ಅವರು ಯಾವುದೇ ಟಿವಿ ವಾಹಿನಿಯ ಡಿಬೇಟಿಗೆ ಅಥವಾ ಯಾವುದೇ ಪತ್ರಿಕೆಯ ಅಂಕಣದ ಪ್ರಭಾವಕ್ಕೆ ಒಳಗಾಗಬಾರದು. ಆದ್ದರಿಂದ ಅವರನ್ನು ಮೈ ಲಾರ್ಡ್ ಎನ್ನಲಾಗುತ್ತಿತ್ತು. ಲಾರ್ಡ್ ಎಂದರೆ ದೇವರು. ದೇವರ ಸ್ಥಾನದಲ್ಲಿ ಕುಳಿತು ನ್ಯಾಯ ನೀಡುವವರು ಹೀಗೆ ಯಾವುದೋ ಪಕ್ಷದ ರಾಜಕಾರಣಿಯಂತೆ ಮಾತನಾಡಿದರೆ ಅದರಿಂದ ಕೆಳಹಂತದ ನ್ಯಾಯಾಲಯಗಳ ನ್ಯಾಯಾಧೀಶರು ಕೂಡ ಅದನ್ನೇ ಪಾಲಿಸುವಂತಾಗುತ್ತದೆ. ಅದು ದೂರಗಾಮಿ ಪರಿಣಾಮಗಳನ್ನು ಉಂಟು ಮಾಡಲು ಆರಂಭವಾಗುತ್ತದೆ. ನಂತರ ನ್ಯಾಯಮೂರ್ತಿಗಳು ದಾಖಲೆಗಳಿಗಿಂತ ಹೆಚ್ಚಾಗಿ ತಮ್ಮ ನಿಲುವುಗಳನ್ನು ಹೇಳಲು ಶುರು ಮಾಡಿದರೆ ಭಾರತದ ನ್ಯಾಯಾಂಗ ವ್ಯವಸ್ಥೆ ಹಳ್ಳಹಿಡಿಯುತ್ತದೆ.
ಇನ್ನು ನುಪೂರ್ ಶರ್ಮಾ ಈಗಾಗಲೇ ಕ್ಷಮೆ ಕೋರಿದ್ದಾರೆ. ಇನ್ನು ಮತ್ತೊಮ್ಮೆ ಹೇಳುವುದಾದರೆ ಅವರು ಟಿವಿ ಡಿಬೇಟಿನಲ್ಲಿ ಹೇಳಿದ ಮಾತು ಅವರ ಪರ್ಸಿನಿಂದ ತೆಗೆದು ಹೇಳಿದ್ದಲ್ಲ, ಅದಕ್ಕೆ ಹದೀಸ್ ನಲ್ಲಿ ದಾಖಲೆ ಇದೆ ಎಂದು ಹಲವರು ಒಪ್ಪಿಕೊಂಡಿದ್ದಾರೆ. ಇನ್ನು ಲಕ್ಷಾಂತರ ಬೆದರಿಕೆ ಕರೆಗಳು, ಅತ್ಯಾಚಾರದೊಂದಿಗೆ ಶಿರಚ್ಚೇದದ ಧಮ್ಕಿಗಳು ಮತ್ತು ಕೊಲೆ ಬೆದರಿಕೆಗಳನ್ನು ಅವರು ಅನುಭವಿಸಿದ್ದಾರೆ. ಅವರ ತಲೆಗೆ ಕೋಟಿ ರೂಪಾಯಿ ಬೆಲೆಯನ್ನು ಮತಾಂಧರು ಕಟ್ಟಿದ್ದಾರೆ. ಒಂದು ಸತ್ಯ ಅವರಿಗೆ ದುಬಾರಿಯಾಗಿದೆ. ಇದರ ನಡುವೆ ಕನ್ನಯ್ಯಾ ಲಾಲ್ ಶಿರಚ್ಚೇದಕ್ಕೆ ನುಪೂರ್ ಹೇಳಿಕೆಯೇ ಪರೋಕ್ಷ ಕಾರಣ ಎಂದು ಹೇಳಲಾಗುತ್ತಿದೆ. ಹಾಗಾದರೆ ಮತಾಂಧರು ಈ ದೇಶದಲ್ಲಿ ಏನು ಮಾಡಿದರೂ ಸರಿ. ಆದರೆ ಹಿಂದೂ ಧರ್ಮದ, ದೇವರ ವಿರುದ್ಧ ಮೂಲಭೂತವಾದಿಗಳು ಎಷ್ಟೇ ನಿಂದನೆ ಮಾಡಿದರೂ ಹಿಂದೂಗಳು ಮೌನವಾಗಿ ಸಹಿಸಿಕೊಳ್ಳಬೇಕು ಎನ್ನುವುದು ಸುಪ್ರೀಂ ಕೋರ್ಟಿನ ಪರ್ದಿವಾಲ್ ಅಭಿಪ್ರಾಯವೇ? ಅವರು ರಾಷ್ಟ್ರಕ್ಕೆ ಏನು ಸಂದೇಶ ನೀಡಲು ಹೊರಟಿದ್ದಾರೆ. ಹಿಂದೂಗಳ ನಂಬಿಕೆಯ ವಿರುದ್ಧ ಎಂತದ್ದೇ ದಾಳಿಯಾದರೂ ಸಹಿಸಿಕೊಳ್ಳದೇ ಬೇರೆ ವಿಧಿಯಿಲ್ಲ ಎನ್ನುವುದೇ ಒಂದು ವಾಕ್ಯದ ಪರಿಹಾರವೇ? ಇನ್ನು ನುಪೂರ್ ಶರ್ಮಾರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ ಎಂದು ಕೆಲವರು ಸಂಭ್ರಮ ಪಡುತ್ತಿದ್ದಾರೆ. ಇದು ಸುಪ್ರೀಂಕೋರ್ಟಿನ ತೀರ್ಪು ಅಲ್ಲ. ಓರ್ವ ನ್ಯಾಯಾಧೀಶರ ಆರಂಭಿಕ ಹೇಳಿಕೆ.
ಇದರೊಂದಿಗೆ ಕನ್ನಯ್ಯ ಲಾಲ್ ಕುಟುಂಬಕ್ಕೆ ಕೋಟ್ಯಾಂತರ ರೂಪಾಯಿ ಹರಿದು ಬರುತ್ತಿದೆ. ಆದರೆ ಒಂದು ಜೀವ ಉಳಿಸಲು ಆಗಿಲ್ಲವಲ್ಲ ಎನ್ನುವ ಬೇಸರ ದೇಶಪ್ರೇಮಿಗಳಲ್ಲಿ ಇದ್ದೇ ಇದೆ. ಈಗ ಆ ಹಂತಕರಿಗೆ ಕೆಳಹಂತ ಗಲ್ಲುಶಿಕ್ಷೆ ವಿಧಿಸಿದರೆ ಯಾವುದೇ ತಡ ಮಾಡದೇ ಸುಪ್ರೀಂ ಕೋರ್ಟ್ ಕೂಡ ಅದನ್ನು ತಕ್ಷಣ ಅನುಷ್ಟಾನಕ್ಕೆ ತರಲು ಸೂಚನೆ ನೀಡಬೇಕು. ಇನ್ನು ನ್ಯಾಯಾಧೀಶರ ಆರಂಭಿಕ ಹೇಳಿಕೆ ನೋಡಿದ್ರೆ ಅವರ ಅಂತಿಮ ತೀರ್ಪು ಹೇಗೆ ಬರುತ್ತದೆ ಎಂದು ಕೂಡ ಗೊತ್ತಾಗುತ್ತದೆ. ಯಾಕೆಂದರೆ ಇದು ರಜಾಕಾಲದ ನ್ಯಾಯಪೀಠ. ನುಪೂರ್ ಶರ್ಮಾ ಅವರು ತಮಗೆ ನ್ಯಾಯ ಸಿಗುವ ನಂಬಿಕೆ ಇಲ್ಲ ಎಂದು ಲಿಖಿತ ಮನವಿ ಕೊಟ್ಟರೆ ನ್ಯಾಯಾಲಯ ಬೇರೆ ನ್ಯಾಯಮೂರ್ತಿಗಳನ್ನು ಈ ವಿಚಾರಣೆಗೆ ನೇಮಿಸಲಿದೆ. ಯಾಕೆಂದರೆ ಮೊದಲನೇಯದಾಗಿ ಆಗಬೇಕಾಗಿರುವುದು ಆಕೆಯ ಸುರಕ್ಷತೆ. ನಾಳೆ ಪ್ರಕರಣ ದೇಶದ ಮೂಲೆ ಮೂಲೆಗಳಲ್ಲಿ ಇದೆ ಎಂದು ಶರ್ಮಾ ಅಲ್ಲಲ್ಲಿ ಹೋಗುತ್ತಾ ಇದ್ದರೆ ಅವರ ಮೇಲೆ ಹೆಚ್ಚು ಕಡಿಮೆಯಾದರೆ ಆಗ ಯಾರು ಗತಿ? ಹಿಂದೂ ನಾಯಕ ಕಮಲೇಶ್ ತಿವಾರಿಗೆ ಆದದ್ದು ಏನು?
Leave A Reply