ಪರಿಹಾರ ಕೊಡುವಾಗ ಒಂದು ರಾಜಧರ್ಮ, ಇನ್ನೊಂದು ಸಿದ್ಧಾಂತ ಧರ್ಮ!
ಮಸೂದ್ ಮತ್ತು ಪ್ರವೀಣ್ ಹತ್ಯೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಎರಡೂ ಹತ್ಯೆಗಳಿಗೆ ಕಾರಣಗಳು ಬೇರೆ ಬೇರೆ ಇದೆ. ಆದರೆ ಎರಡನ್ನು ಕೂಡ ಮಾನವೀಯತೆಯ ದೃಷ್ಟಿಯಲ್ಲಿಯೇ ನೋಡುವುದಾದರೆ ಎರಡೂ ಕುಟುಂಬಗಳಿಗೆ ಪರಿಹಾರ ನೀಡಬೇಕು ಎನ್ನುವುದು ಕಾಂಗ್ರೆಸ್ಸಿಗರ ಹೇಳಿಕೆಗಳು. ಮಸೂದ್ ಒಂದು ಗಲಾಟೆಯಲ್ಲಿ ಮೃತಪಟ್ಟಿದ್ದರೆ, ಪ್ರವೀಣ್ ಆ ಹತ್ಯೆಯ ದ್ವೇಷಕ್ಕೆ ಬಲಿಯಾದ ಯುವಕ. ಮಸೂದ್ ಹತ್ಯೆ ಹೊರ ಪ್ರಪಂಚಕ್ಕೆ ಗೊತ್ತಾಗಬೇಕಾದರೆ ಪ್ರವೀಣ್ ಹತ್ಯೆಯಾಗಬೇಕಾಯಿತು ಎನ್ನುವುದನ್ನು ಕೂಡ ಇಲ್ಲಿ ನಾವು ಗಮನಿಸಬೇಕು. ಕಾಂಗ್ರೆಸ್ ಸರಕಾರ ಇದ್ದಾಗ ಹಿಂದೂ ಕಾರ್ಯಕರ್ತ ಹತ್ಯೆಗೆ ಬಲಿಯಾದರೆ ಭಾರತೀಯ ಜನತಾ ಪಾರ್ಟಿಯ ಮುಖಂಡರು ಮೃತರ ಮನೆಗಳಿಗೆ ಎಷ್ಟು ವೇಗವಾಗಿ ಬರುತ್ತಿದ್ದರೋ ಅಷ್ಟು ವೇಗವಾಗಿ ಈ ಬಾರಿ ಬರಲಿಲ್ಲ. ಆದ್ದರಿಂದ ಬೆಳ್ಳಾರೆಯಲ್ಲಿ ಏನೆಲ್ಲಾ ಆಯಿತು ಎನ್ನುವುದನ್ನು ಇಡೀ ರಾಜ್ಯ ನೋಡಿದೆ. ಮುಖ್ಯಮಂತ್ರಿಗಳು ಎದ್ದು, ಬಿದ್ದು ಬೆಳ್ಳಾರೆಗೆ ಓಡಿಬರಬೇಕಾಯಿತು. ಬಂದವರೇ 25 ಲಕ್ಷ ಸರಕಾರದಿಂದ 25 ಲಕ್ಷ ಪಕ್ಷದ ವತಿಯಿಂದ ಚೆಕ್ ಕೊಟ್ಟರು. ಆದರೆ ಮಸೂದ್ ಮನೆಗೆ ಹೋಗದೇ ಬೆಂಗಳೂರಿಗೆ ವಾಪಾಸಾದರು. ಇದು ಕಾಂಗ್ರೆಸ್ಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಯಾವುದೇ ಸರಕಾರ ಬಂದಾಗ ಇಂತಹ ಸಂದರ್ಭಗಳಲ್ಲಿ ಸಿಎಂ ಮುಂದೆ ಎರಡು ರೀತಿಯ ಆಯ್ಕೆಗಳಿರುತ್ತವೆ. ಒಂದು ರಾಜಧರ್ಮ ಮತ್ತೊಂದು ಸಿದ್ಧಾಂತ ಧರ್ಮ. ಯಾವುದೇ ಸಿಎಂಗೆ ಇದರಲ್ಲಿ ರಾಜಧರ್ಮವನ್ನೇ ಪಾಲಿಸಬೇಕು ಎಂದು ಹೇಳುವುದು ಯಾರು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಯಾಕೆಂದರೆ ರಾಜಧರ್ಮ ಯಾವುದೇ ಲಿಖಿತ ನಿಯಮ ಏನಲ್ಲ. ಗುಜರಾತ್ ನಲ್ಲಿ ಕೂಡ ಕೋಮುಗಲಭೆಯಾದಾಗ ಅದನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದ ಆಗಿನ ಮುಖ್ಯಮಂತ್ರಿ ಮೋದಿ ಅವರಿಗೆ ರಾಜಧರ್ಮ ಪಾಲಿಸಿ ಎಂದು ಸ್ವತ: ವಾಜಪೇಯಿ ಕರೆ ಕೊಟ್ಟಿದ್ದರು. ಅದೇ ರೀತಿಯಲ್ಲಿ ಮಂಗಳೂರಿನಲ್ಲಿ ಸಿಎಎ ಪ್ರತಿಭಟನೆಯನ್ನು ಮುಸ್ಲಿಂ ಸಂಘಟನೆಗಳು ಮಾಡಿ ಅದು ಗಲಾಟೆ, ಗಲಭೆಯಾಗಿ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಅದನ್ನು ನಿಯಂತ್ರಿಸಲು ಪೊಲೀಸರು ಗೋಲಿಬಾರ್ ಮಾಡಿದ್ದರಲ್ಲ, ಆಗ ಇಬ್ಬರು ಮೃತರಾಗಿದ್ದರು. ಅವರಿಗೆ ಪರಿಹಾರದ ಚೆಕ್ ಹಿಡಿದು ಆಗ ಮುಖ್ಯಮಂತ್ರಿಯಾಗಿದ್ದ ಯಡ್ಡಿ ಬಂದಿದ್ರು. ಆದರೆ ಕೊಡಲು ಕಾರ್ಯಕರ್ತರೇ ಬಿಡಲಿಲ್ಲ. ಕೊನೆಗೆ ಯಡ್ಡಿ ಅದನ್ನು ಕೊಡಲು ಹೋಗಲು ಸ್ಥಳೀಯ ಬಿಜೆಪಿ ಮುಖಂಡರ ವಿರೋಧ ಇದ್ದ ಕಾರಣ ಯಡ್ಡಿ ಅದನ್ನು ಕೈಬಿಟ್ಟರು. ಯಡ್ಡಿ ಒಂದು ವೇಳೆ ಕೊಟ್ಟಿದ್ದರೆ ಏನಾಗುತ್ತಿತ್ತು. ಪಕ್ಷದ ಸಿದ್ಧಾಂತಕ್ಕೆ ವಿರೋಧವಾಗಿ ಹೋದ ಹಾಗೆ ಆಗುತ್ತಿತ್ತು. ಆದರೆ ರಾಜಧರ್ಮ ಪಾಲಿಸಿದಂತೆ ಆಗುತ್ತಿತ್ತು.
ಇಂತಹ ಸನ್ನಿವೇಶವನ್ನು ಪ್ರತಿ ಸಿಎಂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಅನುಭವಿಸಿದ್ದಾರೆ. ಈಗ ಸಿದ್ದು ವಿಷಯ ತೆಗೆದುಕೊಳ್ಳಿ. ಅವರು ಸಿಎಂ ಆಗಿದ್ದ ಕಾಲದಲ್ಲಿ 25 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರು ಮತಾಂಧರ ಮಚ್ಚಿನೇಟಿಗೆ ಬಲಿಯಾದರಲ್ಲ, ಆಗ ಎಷ್ಟು ಮನೆಗಳಿಗೆ ಅವರು ಹೋಗಿದ್ದಾರೆ. ಈಗ ಉದ್ದುದ್ದ ಭಾಷಣ ಬಿಗಿಯುತ್ತಿರುವ ಖಾದರ್ ಕೂಡ ಮೂಡಬಿದ್ರೆಯ ಪ್ರಶಾಂತ್ ಪೂಜಾರಿಯವರ ಮನೆಗೆ ಹೋಗುವುದಿಲ್ಲವೇ ಎಂದು ಆವತ್ತು ಮಾಧ್ಯಮದವರು ಪ್ರಶ್ನಿಸಿದಾಗ ನಾವು ಸಚಿವರೆಂದರೆ ಸತ್ತವರ ಮನೆಗೆ ಹೋಗಿ ಕುಳಿತುಕೊಳ್ಳುವುದಲ್ಲ ಎಂದು ಹೇಳಿದ್ದಾರೆ. ಅಭಯ ಎನ್ನುವ ಮೂಡಬಿದ್ರೆ ಶಾಸಕರು ಕಮ್ ಸಚಿವರೂ ಆಗಿದ್ದವರು ಅಲ್ಲಿ ಹೋಗಲು ಭಯವಾಗುತ್ತದೆ ಎಂದು ಹೇಳಿದ್ದರು. ಆಗ ರಾಜ್ಯದಲ್ಲಿ ಇದ್ದದ್ದು ಕಾಂಗ್ರೆಸ್ ಸರಕಾರ ಮತ್ತು ಅಭಯರು ಅದರ ಅಂಗ. ಆದರೆ ಅದೇ ಕಾಂಗ್ರೆಸ್ ಸರಕಾರ ಅಕ್ರಮ ಗೋಸಾಗಾಟ ಮಾಡಿ ಓಡುತ್ತಿದ್ದ ಒಬ್ಬ ಗೋಕಳ್ಳನನ್ನು ಎಂಟಿ ನಕ್ಸಲ್ ಸ್ಕಾಡ್ ನವರು ಶೂಟೌಟ್ ಮಾಡಿದರು ಎನ್ನುವ ಕಾರಣಕ್ಕೆ ಸರಕಾರದಿಂದ ಹತ್ತು ಲಕ್ಷ ಕೂಡ ನೀಡಿದ್ದರು. ಆದ್ದರಿಂದ ಇವತ್ತು ಬಿಜೆಪಿಗೆ ರಾಜಧರ್ಮ ಕಲಿಸುವ ಕಾಂಗ್ರೆಸ್ಸಿಗರು ತಮ್ಮ ಸರಕಾರ ಇದ್ದಾಗ ಮಾಡಿದ್ದನ್ನು ಸ್ವಲ್ಪ ನೆನಪಿಸಿಕೊಂಡರೆ ಸಾಕು.
ಹಾಗೆ ನೋಡಿದರೆ ಸೆಂಟ್ರಲ್ ಮುಸ್ಲಿಂ ಕಮಿಟಿಯವರು ಮಸೂದ್, ಫಾಜಿಲ್ ಕುಟುಂಬಕ್ಕೆ ತಲಾ 30 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಹಿಂದೂ ಸಂಘಟನೆಗಳು, ಜನಪ್ರತಿನಿಧಿಗಳು ಪ್ರವೀಣ್ ಕುಟುಂಬದವರಿಗೆ ಆರ್ಥಿಕ ಸಹಾಯ ನೀಡಿದ್ದಾರೆ. ಅವರವರು ತಮ್ಮ ಸಿದ್ಧಾಂತದ ಆಧಾರದ ಮೇಲೆ ಸಹಾಯಹಸ್ತ ಚಾಚಿದ್ದಾರೆ. ಆದರೆ ಪರಿಹಾರಧನದ ವಿಷಯ ಹಿಡಿದುಕೊಂಡು ಯಾರೂ ಕೂಡ ರಾಜಕೀಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಮಂಗಳೂರಿಗೆ ಬಂದು ಮಸೂದ್, ಪ್ರವೀಣ್ ಅವರಿಗೆ ಐದೈದು ಲಕ್ಷ ರೂಪಾಯಿ ಕೊಟ್ಟು ಹೋಗಿರಬಹುದು. ಆದರೆ ಅವರು ಇಲ್ಲಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರಣ ಏನಾಗುತ್ತದೆ ಎಂದರೆ ಇದರಿಂದ ಇನ್ನಷ್ಟು ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತದೆ ಬಿಟ್ಟರೆ ಬೇರೆ ಏನೂ ಆಗುವುದಿಲ್ಲ. ಒಟ್ಟಿನಲ್ಲಿ ಜಿಲ್ಲೆಗೆ ಸಾಂತ್ವಾನ ಹೇಳಲು ಬರುವ ನಾಯಕರು ಆದಷ್ಟು ಇದರಲ್ಲಿ ರಾಜಕೀಯ ಮಾಡದೇ ಒಳ್ಳೆಯ ಮನಸ್ಸಿನಿಂದಲೇ ಸ್ವಾಂತನ ಹೇಳಿ ಹೋದರೆ ಉತ್ತಮ. ಇಲ್ಲಿ ರಾಜಕೀಯ ಆರಂಭವಾದರೆ ಅದರಿಂದ ಜಿಲ್ಲೆಯ ಅಭಿವೃದ್ಧಿಗೆ ಅದು ದಕ್ಕೆ ತರುತ್ತದೆ. ಈ ನಡುವೆ ಜಿಲ್ಲಾಧಿಕಾರಿಗಳು ಒಂದು ವಾರ ಸಂಜೆ 6 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆಯ ತನಕ ನಿತ್ಯ ಅಂಗಡಿ, ಮುಗ್ಗಟ್ಟು ಬಂದ್ ಮಾಡಲು ಜಿಲ್ಲೆಯಲ್ಲಿ ಆದೇಶ ಹೊರಡಿಸಿದ್ದರು. ಅದರಿಂದ ಆದ ಲಾಭ, ನಷ್ಟ ಏನು? ಆ ಬಗ್ಗೆ ನಾಳಿನ ಸಂಚಿಕೆಯಲ್ಲಿ ಚರ್ಚಿಸೋಣ!
Leave A Reply