ಬೆಂಗಳೂರಿನಲ್ಲಿ ಬುಲ್ಡೋಜರ್ ನಿಂತರೆ ಸರಕಾರ ಸೋತ ಹಾಗೆ!!
ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಈಗ ಸರಿಯಾಗಿ ಅನ್ವಯವಾಗುತ್ತಿದೆ. ಕೆರೆಗಳೇ ಜೀವಾಳವಾಗಿದ್ದ ಸಾವಿರಕ್ಕೂ ಹೆಚ್ಚು ಕೆರೆಗಳು ಇದ್ದ ರಾಜ್ಯದ ಏಕೈಕ ಪ್ರದೇಶ ಬೆಂಗಳೂರಿನಲ್ಲಿದ್ದ ಅಷ್ಟೂ ಕೆರೆಗಳು ಮುಚ್ಚಿಹೋಗಿ ಬೆರಳೆಣಿಕೆ ಕೆರೆಗಳು ಮಾತ್ರ ಉಳಿದಾಗ ಸಂದೇಶ ಸ್ಪಷ್ಟವಾಗಿತ್ತು. ಆದರೆ ಕೆರೆಗಳ ಒತ್ತುವರಿ ಹೇಗೆ ಆಗಿತ್ತು ಎಂದರೆ ಬೆಂಗಳೂರಿನ ನೆಲ ಉಸಿರುಗಟ್ಟಿ ಹೋಗುವ ಪರಸ್ಥಿತಿ ನಿರ್ಮಾಣವಾಗಿತ್ತು. ಇವತ್ತಲ್ಲ ನಾಳೆ ಭೂಮಿ ಬಿರಿದುಹೋಗಲಿದೆ ಎಂದು ಆಗಲೇ ಬೆಂಗಳೂರಿಗರು ಅರ್ಥ ಮಾಡಿಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ತಾವು ಪ್ರಚಂಡ ಬುದ್ಧಿವಂತರು ಎಂದು ಅಂದುಕೊಂಡ ಐಟಿಬಿಟಿ ಮಂದಿ ಸಿಕ್ಕಸಿಕ್ಕ ಕಡೆ ತಮ್ಮ ಅಂಗಡಿಗಳನ್ನು ತೆರೆದು ಕುಳಿತುಕೊಂಡ ಪರಿಣಾಮ ಬೆಂಗಳೂರು ಕಿಷ್ಕಿಂದೆ ಆಗಿಹೋಗಿತ್ತು. ನೀವು ಸರಿಯಾಗಿ ಗಮನಿಸಿದರೆ ನಿಮಗೆ ಬೆಂಗಳೂರಿನ ರಸ್ತೆಗಳ ಇಕ್ಕೆಲಗಳಲ್ಲಿ ಮಳೆಯ ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ಚರಂಡಿ ಬಹುತೇಕ ಕಡೆ ಇಲ್ಲ ಎನ್ನುವಂತದ್ದು ಗೊತ್ತಾಗುತ್ತದೆ. ಯಾಕೆಂದರೆ ಬೆಂಗಳೂರಿನಲ್ಲಿ ಕರಾವಳಿಯಲ್ಲಿ ಬೀಳುವಷ್ಟು ಮಳೆ ಬರುವುದಿಲ್ಲ. ಬೆಂಗಳೂರು ತಣ್ಣನೆಯ ಎಸಿ ಕೋಣೆಯ ವಾತಾವರಣವನ್ನು ಹೊಂದಿರುವ ಜಿಲ್ಲೆ ಎಂದು ಪರಿಗಣಿತವಾಗಿದ್ದರೂ ಅಲ್ಲಿ ಮಳೆ ಅಷ್ಟೊಂದು ಬರುವುದಿಲ್ಲ. ಹಾಗಂತ ಬೆಂಗಳೂರು ದೇಶದ ಮೆಟ್ರೋ ಸಿಟಿಗಳಲ್ಲಿ ಒಂದು. ಇಲ್ಲಿ ದೇಶ, ವಿದೇಶದ ಎಷ್ಟೋ ಜನರು ತಮ್ಮ ಆಸ್ತಿಪಾಸ್ತಿ ಖರೀದಿಸಿ ಆರಾಮವಾಗಿ ವಾಸ ಮಾಡುತ್ತಿದ್ದಾರೆ. ಆದ್ದರಿಂದ ರಿಯಲ್ ಎಸ್ಟೇಟ್ ಎನ್ನುವುದು ಇಲ್ಲಿ ಹಲವಾರು ಕೋಟ್ಯಾಧಿಪತಿಗಳ ಉಗಮಕ್ಕೆ ಕಾರಣವಾಗಿದೆ. ಬಿಲ್ಡರ್ ಮಾಫಿಯಾ ಬೆಂಗಳೂರಿನ ರಾಜಕಾರಣಿಗಳ ಶಿಫಾರಸ್ಸು ಮತ್ತು ಅಧಿಕಾರಿಗಳ ಕೃಪೆಯಿಂದ ಇಡೀ ಬೆಂಗಳೂರನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದೆ. ಈ ಬಿಲ್ಡರ್ ಗಳು ಮೊದಲಿಗೆ ಏನು ಮಾಡುತ್ತಾರೆ ಎಂದರೆ ಯಾವುದೇ ಕಟ್ಟಡ ನಿರ್ಮಾಣವಾಗುವಾಗ ಇಂತಿಷ್ಟು ಸೆಟ್ ಬ್ಯಾಕ್ ಬಿಡಬೇಕು ಎನ್ನುವ ನಿಯಮ ಇದೆಯಲ್ಲ, ಆ ಜಾಗವನ್ನು ಉಳಿಸುವುದಕ್ಕಾಗಿ ಕೆರೆ ಅಥವಾ ರಾಜಕಾಲುವೆಗೆ ಮಣ್ಣು ಹಾಕಿ ತುಂಬಿಸಿಬಿಡುತ್ತಾರೆ. ಆ ಬಳಿಕ ತಮ್ಮ ಜಮೀನಿನ ಪೂರ್ತಿಭಾಗದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಾರೆ. ಒತ್ತುವರಿ ಮಾಡಿಕೊಂಡ ಜಾಗದಲ್ಲಿ ಕಾರ್ ಪಾರ್ಕಿಂಗ್, ಉದ್ಯಾನವನ, ಪ್ರವೇಶದ್ವಾರ, ಕಂಪೌಂಡ್ ವಾಲ್ ಸಹಿತ ತಮ್ಮ ಬಿಡಾರ ಹರಡಿಸಿ ಕುಳಿತುಕೊಂಡಿರುತ್ತಾರೆ. ಒಂದು ಜಾಗದ ಪೂರ್ವ ಮತ್ತು ಪಶ್ಚಿಮದವರು ಹೀಗೆ ಮಾಡಿರುವುದರಿಂದ ರಾಜಕಾಲುವೆ ಹೋಗಿ ಬಡಕಲು ಕಾಲುವೆ ಲೆವೆಲ್ಲಿಗೆ ಬಂದಿರುತ್ತದೆ. ಇಲ್ಲಿಯ ತನಕ ಮಳೆ ಈ ಬಾರಿ ಬಂದಷ್ಟು ಬಂದಿರಲೇ ಇಲ್ಲ. ಅದರಿಂದ ಈ ಒತ್ತುವರಿಯ ವಿಷಯ ಗೊತ್ತೆ ಆಗಲಿಲ್ಲ. ಆದರೆ ಯಾವತ್ತಾದರೂ ಒಂದು ದಿನ ಹೀಗೆ ಆಗಬಹುದು ಎನ್ನುವ ಸುಳಿವು ಸಣ್ಣಮಟ್ಟದಲ್ಲಿ ಪ್ರತಿ ಬಾರಿಯ ಮಳೆಗಾಲದಲ್ಲಿ ಗೊತ್ತಾಗುತ್ತಿತ್ತು. ಯಾಕೆಂದರೆ ಯಾವುದೇ ಒಬ್ಬ ಬಿಬಿಎಂಪಿ ಅಧಿಕಾರಿಗೆ ತಮ್ಮ ವ್ಯಾಪ್ತಿಯಲ್ಲಿ ಕಣ್ಣಳತೆಯಿಂದಲೇ ಎಲ್ಲೆಲ್ಲಿ ರಾಜಕಾಲುವೆ ಅಥವಾ ಕೆರೆ ಒತ್ತುವರಿ ಆಗಿದೆ ಎನ್ನುವ ಅಂದಾಜು ಇರುತ್ತದೆ. ಕೆಲವು ಪ್ರಾಮಾಣಿಕ ಅಧಿಕಾರಿಗಳು ಅದನ್ನು ತೆರವು ಮಾಡಲು ಹೋಗಿರುತ್ತಾರೆ. ಆದರೆ ಮೇಲಿನಿಂದ ಒತ್ತಡಗಳು ಬಂದ ಸಮಯದಲ್ಲಿ ಅವರು ತಮ್ಮ ಯೋಜನೆಯನ್ನು ಕೈಬಿಡಬೇಕಾಗುತ್ತದೆ. ಆದರೆ ಈ ಬಾರಿ ಬೆಂಗಳೂರಿನ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಹೋಗಿರುವುದರಿಂದ ಸಿಎಂ ಬಸವರಾಜ್ ಬೊಮ್ಮಾಯಿ ಯಾವುದಕ್ಕೂ ಬಗ್ಗದೆ ಇರುವ ನಿರ್ಧಾರ ಮಾಡಿರುವುದು ಶ್ಲಾಘನೀಯ. ಯಾಕೆಂದರೆ ಈಗ ಅವರೆಲ್ಲಿಯಾದರೂ ಹೊಂದಾಣಿಕೆ ಮಾಡಿಕೊಂಡರೆ ಅದರ ಪಶ್ಚಾತ್ತಾಪವನ್ನು ಅವರು ಬದುಕಿರುವ ತನಕ ಅನುಭವಿಸಬೇಕಾಗುತ್ತದೆ.
ಈಗಾಗಲೇ 640 ಭಾಗಶ: ಕಟ್ಟಡಗಳನ್ನು ಕೆಡವುಹ ಲಿಸ್ಟ್ ತಯಾರಾಗಿದೆ. ಇಲ್ಲಿಯ ತನಕ 30 ಕಟ್ಟಡಗಳಿಗೆ ಗತಿ ಕಾಣಿಸಲಾಗಿದೆ. ಅಧಿಕಾರಿಗಳು ಲಿಸ್ಟ್ ಮಾಡಿರುವ ಅಷ್ಟೂ ಕಟ್ಟಡಗಳಲ್ಲಿ ಅಕ್ರಮವಾಗಿರುವ ಭಾಗಗಳನ್ನು ಕೆಡವಿದರೆ ಬೆಂಗಳೂರು ಸರಿ ಹೋಗುತ್ತಾ ಎನ್ನುವ ಪ್ರಶ್ನೆಯನ್ನು ಕಟ್ಟಡದ ಭಾಗಗಳನ್ನು ಕಳೆದುಕೊಳ್ಳುತ್ತಿರುವ ಕೆಲವು ನಾಗರಿಕರು ಕೇಳುತ್ತಿದ್ದಾರೆ. ಸರಿಯಾಗುತ್ತೆ ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಬಹುತೇಕ ಕಟ್ಟಡಗಳು ಐಟಿಬಿಟಿ ಕಂಪೆನಿಗಳದ್ದು ಇದೆ. ಅದರ ಧಣಿಗಳ ಸುಸಜ್ಜಿತ ಬಂಗ್ಲೆಗಳು ಇವೆ. ಈ ಮಳೆ ಏನೆಂದರೆ ಯಾರನ್ನು ಬಿಟ್ಟಿಲ್ಲ. ಶ್ರೀಮಂತರನ್ನು ಬಿಟ್ಟಿಲ್ಲ, ಮಧ್ಯಮ ವರ್ಗದವರನ್ನು ಕೂಡ ಬಿಟ್ಟಿಲ್ಲ. ಎಲ್ಲರೂ ಅನುಭವಿಸಿದ್ದಾರೆ. ಆದ್ದರಿಂದ ಯಾರು ಅನಧಿಕೃತವಾಗಿ ಕಟ್ಟಿದ್ದಾರೋ ಅವರು ತ್ಯಾಗ ಮಾಡಲೇಬೇಕು. ಬೆಂಗಳೂರಿನ ಹಿತದೃಷ್ಟಿಯಲ್ಲಿ ಇದು ಅಗತ್ಯ. ಇಷ್ಟು ವರ್ಷ ನೀವು ರಾಜಕಾಲುವೆಯ ಮೇಲೆ ಕಟ್ಟಡ ಕಟ್ಟಿ ಕೋಟ್ಯಾಂತರ ರೂಪಾಯಿ ಲಾಭ ಮಾಡಿಕೊಂಡಿದ್ದಿರಿ. ಈಗ ಅದರ ದಂಡ ವಸೂಲಿ ಮಾಡುವ ಸಮಯ. ದಂಡದ ರಸೀದಿ ಕೊಟ್ಟಿರುವುದು ವರುಣದೇವ. ಕಟ್ಟಿಸಿಕೊಳ್ಳಲು ತಯಾರಾಗಿರುವುದು ಬಿಬಿಎಂಪಿ. ಆರಂಭದಲ್ಲಿ ಉತ್ಸಾಹ ಇದ್ದೇ ಇರುತ್ತದೆ. ಅದೇನೋ ಗಾದೆ ಇದೆಯಲ್ಲ. ಹಾಗೆ. ಆ ಗಾದೆ ಹೇಳಿದರೆ ಮತ್ತೆ ಆ ಸಮುದಾಯಕ್ಕೆ ಬೇಸರವಾಗಬಹುದೇನೋ. ಆದರೆ ಟೆಕ್ನಿಕಲ್ ಆಗಿ ನೋಡಿದರೆ ಮೊದಲ ಬಿಲ್ಡಿಂಗ್ ನಿಂದ ಕೊನೆಯ 646 ನೇ ಕಟ್ಟಡಕ್ಕೆ ಬುಲ್ಡೋಜರ್ ತಗಲಿಸುವ ತನಕ ರಾಜ್ಯ ಸರಕಾರ ವಿರಮಿಸಬಾರದು. ನಮಗೆ ನೋಟಿಸು ಕೊಡಿ, ಮತ್ತೆ ನೋಡೋಣ ಎಂದು ಹೇಳಿದವರಿದ್ದಾರೆ. ನೋಟಿಸು ಕೊಡುವ ಅಗತ್ಯವೇ ಇಲ್ಲ ಎಂದು ಸುಪ್ರೀಕೋರ್ಟ್ ಹೇಳಿದೆ. ಆದರೂ ಮಾನವೀಯತೆಯ ದೃಷ್ಟಿಯಲ್ಲಿ ನೋಡಿ ಬಿಬಿಎಂಪಿ ಮೂರ್ನಾಕು ದಿನಗಳ ಅವಕಾಶವನ್ನು ನಾಗರಿಕರಿಗೆ ನೀಡಿದೆ. ಅದರ ನಂತರ ಬುಲ್ಡೋಜರ್ ರೆಸ್ಟ್ ತೆಗೆದುಕೊಳ್ಳಲೇಬಾರದು. ಮಧ್ಯದಲ್ಲಿ ನಿಲ್ಲಿಸಿದರೆ ಸರಕಾರವೇ ಸೋತ ಹಾಗೆ. ಮಂಗಳೂರಿನ ಮೇಯರ್ ಆಗಿದ್ದ ದಿವಾಕರ ಪಾಂಡೇಶ್ವರ್ ಅವರು ಜೆಪ್ಪಿನಮೊಗರುವಿನಲ್ಲಿ ಪ್ರತಿಷ್ಟಿತ ಶಾಲೆಯೊಂದರ ಆಡಳಿತ ಮಂಡಳಿ ಮತ್ತು ಅದರ ಪಕ್ಕದವರು ರಾಜಕಾಲುವೆಯ ಜಾಗವನ್ನು ಅತಿಕ್ರಮಣ ಮಾಡಿದ್ದನ್ನು ಯಾವ ಒತ್ತಡಕ್ಕೂ ಮಣಿಯದೇ ಕೆಡವಿದ್ದರು. ಆದರೆ ಅದರ ನಂತರದ ಮೇಯರ್ ಏನು ಮಾಡಿದ್ದಾರೆ. ಬೆಂಗಳೂರಿನಲ್ಲಿಯೂ ಈ ಆರಂಭ ಶೂರತ್ವ ಮಾತ್ರ ಇರಲಿದೆಯೋ, ಕಾಲ ಉತ್ತರಲಿದೆ!
Leave A Reply