ತುಳುವಿಗೆ ಮಾರಿ, ಕನ್ನಡಕ್ಕೆ ಪರೋಪಕಾರಿ ಆದ್ರಾ ಸುನೀಲ್!!
ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಈ ಬಾರಿ ಅಧಿಕಾರಕ್ಕೆ ಬಂದಾಗ ಸುನೀಲ್ ಕುಮಾರ್ ಅವರಿಗೆ ತಾವು ಹೇಗಾದರೂ ಸಚಿವರಾಗಬೇಕು ಎನ್ನುವ ಹಪಾಹಪಿ ಎಷ್ಟಿತ್ತು ಎಂದರೆ ಯಡ್ಯೂರಪ್ಪ ಇವರನ್ನು ಮಿನಿಸ್ಟರ್ ಮಾಡಲಿಲ್ಲ ಎಂದು ತಣ್ಣಗೆ ಬಂಡಾಯ ಏಳುವ ಸೂಚನೆ ಕೂಡ ಕೊಟ್ಟಿದ್ದರು. ಹಾಗಂತ ಪಕ್ಷಾಂತರ ಮಾಡಿ ಕಾಂಗ್ರೆಸ್ಸಿಗೆ ಹೋಗುತ್ತಾರೆ ಎಂದಲ್ಲ. ಅದು ಸಾಧ್ಯವೂ ಇಲ್ಲ. ಆದರೆ ಒಂದು ಮುನಿಸು ತೋರಿಸುವುದು ನಡೆಯುತ್ತಾ ಇತ್ತು. ನಂತರ ಬಸ್ಸು ಬೊಮ್ಮಾಯಿ ಸರಕಾರ ಬಂದಾಗ ಸುನೀಲ್ ಅವರಿಗೆ “ದೊಡ್ಡ” ಮನಸ್ಸು ಮಾಡಿ ಇಂಧನ ಸಚಿವರನ್ನಾಗಿ ಮಾಡಲಾಯಿತು. ಅದರೊಂದಿಗೆ ಇರಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಕೂಡ ಕೊಡಲಾಯಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುನೀಲ್ ಗೆ ಒಂದು ವರ್ಚಸ್ಸು ಖಂಡಿತ ಇದೆ. ಭಜರಂಗದಳದ ನಾಯಕರಾಗಿದ್ದಾಗ ಖಡಕ್ ಭಾಷಣಗಳಿಂದ ಯುವಕರಿಗೆ ಉಭಯ ಜಿಲ್ಲೆಗಳಲ್ಲಿ ಒಂದು ಟ್ರೆಂಡ್ ಸೆಟ್ಟರ್ ಆಗಿಯೂ ಸುನೀಲ್ ತಮ್ಮ ಛಾಪು ಮೂಡಿಸಿದ್ದಾರೆ. ಅಂತಹ ಸುನೀಲ್ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗುವುದಕ್ಕೂ ಮತ್ತು ತುಳುವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಟ್ರೆಂಡ್ ಶುರುವಾಗುವುದಕ್ಕೂ ಸರಿಯಾಯಿತು. ಸುನೀಲ್ ಈ ಇಲಾಖೆಯ ಸಚಿವರಾದರೆ ತುಳುವನ್ನು ಅಧಿಕೃತ ಭಾಷೆ ಮಾಡುವುದು ಸುಲಭ ಎಂದು ತುಳುವರು ಭ್ರಮಿಸಿಬಿಟ್ಟರು. ಯಾಕೆಂದರೆ ಘಟ್ಟದ ಮೇಲಿನ ಯಾವುದೋ ಸಚಿವರು ಈ ಇಲಾಖೆಗೆ ಬಂದರೆ ಅವರಿಗೆ ತುಳುವಿನ ಮೇಲೆ ಅಷ್ಟು ಅಭಿಮಾನ ಇರುವುದಿಲ್ಲ. ಅದೇ ನಮ್ಮವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರೆ ಅದರ ಅಧೀನದಲ್ಲಿ ಬರುವ ತುಳುವಿಗೆ ಅಧಿಕೃತ ಸ್ಥಾನಮಾನ ಕೊಡುವುದು ಸುಲಭ ಎಂದು ಇಲ್ಲಿನ ತುಳು ಹೋರಾಟಗಾರರು, ತುಳು ಪ್ರೇಮಿಗಳು ಸಂಭ್ರಮಿಸಿಬಿಟ್ಟರು. ಆದರೆ ಈ ಸಂಭ್ರಮ ಅನೇಕ ದಿನ ಉಳಿಯಲೇ ಇಲ್ಲ. ಈಗ ಸುನೀಲ್ ಯಾಕಾದರೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾರೆ ಎಂದು ಇಲ್ಲಿನ ಜನ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಸುನೀಲ್ ಕೊಟ್ಟಿರುವಂತಹ ಒಂದು ಹೇಳಿಕೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಬೇರೆ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ಕೊಡಲು ಆಗುವುದಿಲ್ಲ ಎಂದು ಅವರು ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ ಇತ್ತೀಚೆಗೆ ಹೇಳಿದ್ದಾರೆ. ಅದರ ಹಿಂದಿನ ದಿನವೇ ಮಂಗಳೂರಿನಲ್ಲಿ ತುಳು ಸಾಹಿತ್ಯ ಅಕಾಡೆಮಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ತುಳುವನ್ನು ಅದು ಮಾಡುತ್ತೇನೆ, ಇದು ಮಾಡುತ್ತೇನೆ ಎಂದು ಕೊಚ್ಚಿಕೊಂಡಿದ್ದಾರೆ. ಸುನೀಲ್ ರ ಈ ಬಣ್ಣ ಬದಲಾಯಿಸುವ ರೀತಿ ನೋಡಿ ಈಗ ಗೊಂದಲಕ್ಕೆ ಬೀಳುವ ಸಮಯ ತುಳುವರದ್ದು.
ವಿಷಯ ಇಷ್ಟೇ. ದ.ಕ ಜಿಲ್ಲೆಯಲ್ಲಿ ತುಳುವಿನ ಬಗ್ಗೆ ಎಷ್ಟೇ ಪ್ರೇಮ, ಅಭಿಮಾನ ಇದ್ದರೂ ಅದು ಮತವಾಗಿ ಇಲ್ಲಿಯ ತನಕ ಪರಿವರ್ತನೆ ಆಗಿಲ್ಲ. ತುಳು ವೋಟ್ ಬ್ಯಾಂಕ್ ಅಲ್ಲ. ಅದೇ ಒಂದು ಸಮಾಜದ ಗುರುವಿಗೆ ಅವಮಾನ ಮಾಡಿದ ವಿಷಯ ಚರ್ಚೆಗೆ ಬಂದಾಗ ಎಲ್ಲಾ ಪಕ್ಷದವರು ಒಂದುಗೂಡುತ್ತಾರೆ. ಆಡಳಿತ ಪಕ್ಷದವರು ಬೀದಿಗೆ ಇಳಿದು ಜನರನ್ನು ಸಮಾಧಾನಪಡಿಸಲು ಏನು ಕಾರ್ಯಕ್ರಮ ಮಾಡಬೇಕೋ ಅದನ್ನು ಮಾಡುತ್ತಾರೆ. ಯಾಕೆಂದರೆ ಅದರ ಹಿಂದೆ ವೋಟ್ ಬ್ಯಾಂಕ್ ಅಡಗಿರುತ್ತದೆ. ಆದರೆ ತುಳು ಇನ್ನೂ ವೋಟ್ ಬ್ಯಾಂಕ್ ಆಗದೇ ಇರುವುದು ಮತ್ತು ಅದಕ್ಕೆ ಸ್ಥಾನಮಾನ ಸಿಗಲಿಲ್ಲ ಎಂದು ಕೋಪಿಸಿಕೊಳ್ಳುವಷ್ಟು ಮತ್ತು ಆ ಕೋಪ ಇನ್ನೊಂದು ಪಕ್ಷಕ್ಕೆ ವೋಟ್ ಹಾಕಿಸುವಂತೆ ಮಾಡುವುದು ಮತ್ತು ಇದರಿಂದ ಆಡಳಿತ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಶಾಸಕರು ಸೋಲುವಂತೆ ಆಗುವಷ್ಟು ಈ ವಿಷಯ ಪ್ರಭಾವ ಬೀರುವುದಿಲ್ಲ. ಅದು ಸುನೀಲ್ ಅವರಿಗೂ ಗೊತ್ತಿದೆ. ಅದಕ್ಕೆ ಅವರು ಆಂಗ್ಲ ಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ ವಾಸ್ತವವನ್ನೇ ಹೇಳಿದ್ದಾರೆ. ಯಾಕೆಂದರೆ ಅಧಿಕೃತ ಭಾಷೆಯ ಸ್ಥಾನಮಾನ ಕೊಡಿಸಲು ರಾಜ್ಯ ಸಚಿವ ಸಂಪುಟದಲ್ಲಿ ಅದು ಪಾಸಾಗಬೇಕು. ಒಂದು ವೇಳೆ ಇಲ್ಲಿ ಅದು ಪಾಸಾದರೆ ನಂತರ ಎಂಟನೇ ಪರಿಚ್ಚೇದಕ್ಕೆ ಸೇರಿಸಲು ಕಳುಹಿಸಿಕೊಡಲಾಗುತ್ತದೆ. ಆಗ ಚೆಂಡು ಮೋದಿ ಅಂಗಳಕ್ಕೆ ಹೋಗುತ್ತದೆ. ಅಲ್ಲಿ ಆಗದಿದ್ದರೆ ಕೋಪ ಕೇಂದ್ರ ಸರಕಾರದ ಮೇಲೆ ತಿರುಗುತ್ತದೆ. ಅದರ ಬದಲು ಅಲ್ಲಿ ಹೇಗೂ ಆಗುವುದಿಲ್ಲ ಎಂದು ಗೊತ್ತಿರುವುದರಿಂದ ಇಲ್ಲಿಯೇ ಅದನ್ನು ಅಧಿಕೃತ ಮಾಡದಿದ್ದರೆ ಮುಗಿಯಿತ್ತಲ್ಲ. ಇದರಿಂದ ಸುನೀಲ್ ತಾವು ಸ್ವಭಾಷಾ ಲಾಬಿ ಮಾಡಲಿಲ್ಲ ಎನ್ನುವ ಹೆಗ್ಗಳಿಕೆಯನ್ನು ಕೂಡ ಉಳಿಸಬಹುದು. ಅದರೊಂದಿಗೆ ಮುಂದಿನ ದಿನಗಳಲ್ಲಿ ಅಪ್ಪಿ ತಪ್ಪಿ ಸಿಎಂ ಆಗುವ ಚಾನ್ಸ್ ಬಂದರೆ ಇವರು ಕನ್ನಡಿಗ ಸಿಎಂ ಎಂದು ರಾಜ್ಯದ 224 ಕ್ಷೇತ್ರಗಳ ನಾಗರಿಕರು ಕೂಡ ಒಪ್ಪಬೇಕಲ್ಲ. ತುಳು ಲಾಬಿ ತನಗೆ ಆಗ ದುಬಾರಿ ಬೀಳುತ್ತದೆ ಎಂದು ಅಂದುಕೊಂಡ ಸುನೀಲ್ ತಮ್ಮ ರಾಜಕೀಯ ಭವಿಷ್ಯವನ್ನು ಗಮನದಲ್ಲಿಷ್ಟುಕೊಂಡು ತುಳುವಿಗೆ ಅಧಿಕೃತ ಸ್ಥಾನಮಾನ ಕೊಡುವ ಕೆಲಸಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ. ಇದನ್ನೇ ರಾಜಕೀಯ ಎನ್ನುವುದು. ಅಂತಿಮವಾಗಿ ರಾಜಕೀಯದಲ್ಲಿ ನಮ್ಮವರು, ಪರರು ಎಂದು ಇರುವುದಿಲ್ಲ. ಏನು ಮಾಡಿದರೆ ತಮಗೆ ಲಾಭ ಇದೆ ಎಂದು ಲೆಕ್ಕಹಾಕಿಯೇ ಪ್ರತಿಯೊಬ್ಬ ರಾಜಕಾರಣಿ ಮುಂದಿನ ಹೆಜ್ಜೆ ಇಡುತ್ತಾರೆ. ಅದಕ್ಕೆ ಸುನೀಲ್ ಕೂಡ ಹೊರತಲ್ಲ. ತುಳುವಿಗೆ ಮಾರಿ, ಕನ್ನಡಕ್ಕೆ ಪರೋಪಕಾರಿ ಆದ ಸುನೀಲ್ ಮುಂದೆ ಸಿಎಂ ಆಗಿ ತುಳುವಿಗೆ ಅಧಿಕೃತ ಸ್ಥಾನ ಕೊಡಲಿ ಎಂದು ಆಶಿಸೋಣವೇ. ಯಾಕೆಂದರೆ ನಾವು ತುಳುವರು ಮತ್ತು ಸಜ್ಜನರು!!
Leave A Reply