ಸ್ಮಾರ್ಟ್ ಕದ್ರಿ ಪಾರ್ಕ್ ಹೊರಗಿನ ಅಂಗಡಿಗಳು ಯಾರಿಗಂತೆ?
ಮಂಗಳೂರಿನ ಕದ್ರಿ ಪಾರ್ಕ್ ಸ್ಮಾರ್ಟ್ ಸಿಟಿ ಅನುದಾನದಿಂದ ಹೊಸ ಲುಕ್ ಪಡೆದುಕೊಂಡಿದೆ. ಈಗ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಅಲ್ಲಿ ಏನೇನು ಮಾಡಬಹುದು ಎನ್ನುವುದನ್ನು ನೋಡಬೇಕಾಗಿರುವ ಅಗತ್ಯ ಇದೆ. ಮೊದಲನೇಯದಾಗಿ ಪಾರ್ಕ್ ರಸ್ತೆಯಲ್ಲಿ ಹೊಸ ಮಳಿಗೆಗಳ ನಿರ್ಮಾಣವಾಗಿದೆ. ಅಲ್ಲಿ ಈಗ ಬಿಡ್ ನಡೆಸಿ ಯಾರಿಗೆ ಮಳಿಗೆಗಳು ಸಿಗಬೇಕೋ ಅವರಿಗೆನೆ ಕೊಡಬೇಕಾಗಿದೆ. ಆದರೆ ನಿನ್ನೆ ಇದಕ್ಕೆ ಸಂಬಂಧಿಸಿದ ಸಭೆಯಲ್ಲಿ ಒಬ್ಬರು ಹಿಂದೆ ಆ ಏರಿಯಾದಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಕೊಡಬೇಕು ಎಂದು ವಾದಿಸಿದ್ದರು. ಹಾಗೆ ಮಾಡಲು ನಿಯಮಗಳ ಪ್ರಕಾರ ಅವಕಾಶವಿಲ್ಲ. ಯಾಕೆಂದರೆ ಮೊದಲನೇಯದಾಗಿ ಒಬ್ಬ ವ್ಯಕ್ತಿ ಮತ್ತು ಸರಕಾರದ ಮಳಿಗೆಗಳ ನಡುವೆ ಗರಿಷ್ಟ ಹನ್ನೆರಡು ವರ್ಷಗಳ ತನಕ ಒಪ್ಪಂದ ಇರುತ್ತದೆ. ಅದರ ನಂತರ ಆ ಮಳಿಗೆಯನ್ನು ಕಾನೂನು ಪ್ರಕಾರ ಏಲಂ ಮಾಡಲೇಬೇಕು. ಆಗ ಯಾರು ಹೆಚ್ಚು ಬಿಡ್ ಮಾಡುತ್ತಾರೋ ಅವರಿಗೆ ಅದು ಹೋಗುತ್ತದೆ. ಹಿಂದಿನ ಬಾಡಿಗೆದಾರ ಕೂಡ ಬಿಡ್ ನಲ್ಲಿ ಭಾಗವಹಿಸಬಹುದು. ಆದರೆ ಯಾವುದೇ ಕಾರಣಕ್ಕೂ ಹಿಂದಿನ ಬಾಡಿಗೆದಾರನೇ ಮುಂದುವರೆಯಬೇಕು ಎನ್ನುವ ನಿಯಮ ಇಲ್ಲ. ಒಂದು ವೇಳೆ ಹನ್ನೆರಡು ವರ್ಷಗಳ ಅವಧಿಯಲ್ಲಿ ನಡುವೆ ಎಲ್ಲಿಯಾದರೂ ಆ ಮಳಿಗೆಯ ನವೀಕರಣಕ್ಕಾಗಿ ಕೆಡವಿದರೆ ಆಗ ಬೇಕಾದರೆ ಹಾಲಿ ಬಾಡಿಗೆದಾರನಿಗೆ ಬಾಕಿ ಇರುವ ಅವಧಿಗೆ ಕೊಟ್ಟು ಅವನೊಂದಿಗೆ ಏನಾದರೂ ಬಾಡಿಗೆಯಲ್ಲಿ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ. ಅದು ಓಕೆ. ಆದರೆ ಕದ್ರಿ ಪಾರ್ಕಿನ ಹೊರಗೆ ವ್ಯಾಪಾರ ಮಾಡುತ್ತಿದ್ದವರಿಗೂ ಪಾಲಿಕೆಗೂ ಯಾವುದೇ ಒಪ್ಪಂದವಿಲ್ಲ. ಅದು ಅನಧಿಕೃತ ಅಂಗಡಿಗಳು. ಒಂದು ಮಾನವೀಯ ನೆಲೆಯಲ್ಲಿ ಯಾರು ಬೇಕಾದರೂ ವ್ಯಾಪಾರ ಮಾಡುವ ಅವಕಾಶ ಇತ್ತೇ ಹೊರತು ಬೇರೆ ಒಪ್ಪಂದಗಳು ಆಗಿರಲಿಲ್ಲ. ಆದ್ದರಿಂದ ಅವರು ಸೇರಿ ಯಾರು ಬೇಕಾದರೂ ಬಿಡ್ ನಲ್ಲಿ ಭಾಗವಹಿಸಬಹುದೇ ವಿನ: ಇಂತವರಿಗೆನೆ ಕೊಡಬೇಕು ಎಂದು ಯಾರೂ ಒತ್ತಾಯ ಮಾಡಲು ಸಾಧ್ಯವಿಲ್ಲ. ಇನ್ನು ಸ್ಮಾರ್ಟ್ ಸಿಟಿ ಹೇಗೆ ಈ ಪಾರ್ಕಿನ ಯೋಜನೆಯನ್ನು ರೂಪಿಸಿದೆ ಎಂದರೆ ಹೊರಗೆ ನಿರ್ಮಾಣವಾದ ಅಂಗಡಿಗಳಲ್ಲಿ ವೈವಿಧ್ಯತೆ ಕಾಪಾಡುವ ವ್ಯವಸ್ಥೆ ಮಾಡಲಾಗಿದೆ. ಒಂದೇ ರೀತಿಯ ಚರುಂಬುರಿ ಅಂಗಡಿಗಳೇ ಹತ್ತು ಇದ್ದರೆ ಅಲ್ಲಿ ಬರುವ ಜನರಿಗೆ ವಿಭಿನ್ನತೆ ಸಿಗುವುದಿಲ್ಲ. ಆದ್ದರಿಂದ ಒಂದು ಜ್ಯೂಸ್ ಅಂಗಡಿ ಇದ್ದರೆ, ಮತ್ತೊಂದು ಚಾರ್ಟ್ಸ್, ಮತ್ತೊಂದು ಉತ್ತರ ಭಾರತದ ಖಾದ್ಯ ಹೀಗೆ ಬೇರೆ ಬೇರೆ ಐಟಂ ಇದ್ದರೆ ವ್ಯಾಪಾರಿಗಳಿಗೂ ಲಾಭ ಮತ್ತು ಗ್ರಾಹಕರಿಗೂ ಅನುಕೂಲವಾಗುತ್ತದೆ. ಈ ಪರಿಕಲ್ಪನೆ ಉತ್ತಮವಾಗಿರುತ್ತದೆ. ಬಿಡ್ ಸಂದರ್ಭದಲ್ಲಿಯೂ ಇದನ್ನು ಅನುಷ್ಟಾನಗೊಳಿಸಿದರೆ ಉತ್ತಮ.
ಇನ್ನು ಎಲ್ಲಾ ಮಳಿಗೆಗಳಿಗೆ ಪ್ರತ್ಯೇಕ ವಿದ್ಯುತ್ ಮೀಟರ್ ಅಳವಡಿಸಿದರೆ ಅದರಿಂದ ಪಾಲಿಕೆಗೂ ನಷ್ಟವಾಗುವುದನ್ನು ತಪ್ಪಿಸಬಹುದು. ಉದಾಹರಣೆಗೆ ಇಲ್ಲಿಯ ತನಕ ಹೇಗೆ ನಡೆದುಕೊಂಡು ಬರುತ್ತಿತ್ತು ಎಂದರೆ ಮೇನ್ ಮೀಟರ್ ಒಂದೇ ಇರುತ್ತಿತ್ತು. ಎಲ್ಲಾ ಅಂಗಡಿಯವರಿಗೆ ಸಬ್ ಮೀಟರ್ ಅಳವಡಿಸಲಾಗಿತ್ತು. ಇದರಿಂದ ಕೆಲವು ಅಂಗಡಿಗಳು ಕರೆಂಟ್ ಬಿಲ್ ಕಟ್ಟದಿದ್ದರೆ ಅವರಿಗೆ ವಿದ್ಯುತ್ ಯಾವುದೇ ಅಡ್ಡಿಯಿಲ್ಲದೆ ಪೂರೈಕೆಯಾಗುತ್ತಿತ್ತು. ಯಾಕೆಂದರೆ ಮೇನ್ ಮೀಟರ್ ಕರೆಂಟ್ ಬಿಲ್ ಪಾಲಿಕೆ ಕಟ್ಟುತ್ತಿತ್ತು. ಇನ್ನು ಹೊಸ ಮಳಿಗೆಗಳಿಗೆ ಹಾಗೆ ಮಾಡದೇ ಪ್ರತಿ ಅಂಗಡಿಗಳಿಗೆ ಪ್ರತ್ಯೇಕ ಮೇನ್ ಮೀಟರ್ ಅಥವಾ ಡಿಜಿಟಲ್ ಮೀಟರ್ ನಲ್ಲಿ ಅವರಿಗೆ ಎಷ್ಟು ವಿದ್ಯುತ್ ಬೇಕೋ ಅಷ್ಟನ್ನು ಪ್ರಿಪೇಡ್ ನಲ್ಲಿ ಹಣ ಕಟ್ಟಿ ಅದಕ್ಕೆ ಅನುಗುಣವಾಗಿ ಬಳಕೆ ಮಾಡುವುದು ಉತ್ತಮ. ಕಟ್ಟಿದ ಹಣದಷ್ಟು ವಿದ್ಯುತ್ ಮುಗಿಯಲು ಬರುವಾಗ ಮತ್ತೆ ಹಣ ಕಟ್ಟಿ ಮುಂದುವರೆಯಬಹುದು. ಈಗ ನಾವು ಮೊಬೈಲ್ ಕರೆನ್ಸಿ ರೀ ಚಾರ್ಜ್ ಮಾಡುತ್ತೇವಲ್ಲ, ಹಾಗೆ. ಇನ್ನು ಕದ್ರಿ ಉದ್ಯಾನವನದಲ್ಲಿ ಒಂದು ಸಂಗೀತ ಕಾರಂಜಿ ಇದೆ. ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕಾದ ಅವಶ್ಯಕತೆ ಇದೆ. ಕೆಲವು ದಿನ ಅದು ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತಾ ಇತ್ತು. ನಂತರ ಅದಕ್ಕೆ ಕೆಟ್ಟ ದೃಷ್ಟಿ ಬಿತ್ತು. ನಂತರ ಅದನ್ನು ಹೇಳುವವರು, ಕೇಳುವವರು ಇಲ್ಲದೆ ಅದು ಸೊರಗಿತು. ಇನ್ನು ಉದ್ಯಾನವನವನ್ನು ಜನರು ನೋಡುವಂತೆ ಉಳಿಸಬೇಕಾಗಿರುವುದು ತೋಟಗಾರಿಕಾ ಇಲಾಖೆ. ಆದರೆ ಒಂದಿಷ್ಟು ದಿನ ನೋಡಿಕೊಂಡು ನಂತರ ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಆಗ ಸ್ಮಾರ್ಟ್ ಸಿಟಿ ಬೋರ್ಡ್ ಮಾತ್ರ ಉಳಿಯುತ್ತದೆ. ಒಳಗೆ ವೇಸ್ಟ್ ಸಿಟಿಯಾಗಿರುತ್ತದೆ.
ಇನ್ನು ಉದ್ಯಾನವನದಲ್ಲಿ ಜಿಮ್, ಉಯ್ಯಾಲೆ ಎಲ್ಲವೂ ಇದೆ. ಆದರೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿದ್ದ ಕಾರಣ ಅದು ಈಗ ಅವನತಿಯ ಹಾದಿಯಲ್ಲಿದೆ. ಯಾಕೆಂದರೆ ಇವರು ಯಾವ ಗುಣಮಟ್ಟದ ಪರಿಕರಗಳನ್ನು ಆರ್ಡರ್ ಮಾಡುತ್ತಾರೋ ಅದೇ ಬಂದಿದೆ ಎಂದು ಕೂಡ ಪರಿಶೀಲಿಸಬೇಕು. ಯಾಕೆಂದರೆ ಇಲ್ಲಿ ಅವು ಬಹಳ ಕಾಲ ಬಾಳಿಕೆ ಬರದಿದ್ದರೆ ಅದರಿಂದ ಹಾಳಾಗುವುದು ಯಾರ ಹೆಸರು. ಎಲ್ಲವನ್ನು ಜಿಲ್ಲಾಧಿಕಾರಿ ಒಬ್ಬರೇ ನೋಡಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಇದೆಲ್ಲವನ್ನು ಗಮನಿಸಲು ಆಸಕ್ತಿ ಉಳ್ಳ ನಾಗರಿಕರನ್ನು ಸೇರಿ ಅಧಿಕಾರಿಗಳನ್ನು ಒಳಗೊಂಡು ಒಂದು ಉಸ್ತುವಾರಿ ಸಮಿತಿಯ ರಚನೆಯಾಗಬೇಕು. ಇದೆಲ್ಲವೂ ಆದರೆ ಕದ್ರಿ ಉದ್ಯಾನವನ ಬಹಳ ಕಾಲ ಇದೇ ಸೌಂದರ್ಯದಲ್ಲಿ ಉಳಿಯಬಹುದು. ಇನ್ನು ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಹೆದ್ದಾರಿ ಹಾಗೂ ಪಾರ್ಕ್ ನಡುವೆ ಇರುವುದು ಪಾಲಿಕೆಯ ಜಾಗ. ಅಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬಹುದು. ಒಟ್ಟಿನಲ್ಲಿ ಮಂಗಳೂರಿಗೆ ಹೊರಗಿನಿಂದ ನಮ್ಮ ಬಂಧು, ಮಿತ್ರರು ಬಂದರೆ ತೋರಿಸಲು ಒಂದು ಸುಂದರ ಪಾರ್ಕ್ ಇದೆ ಎನ್ನುವ ಆತ್ಮವಿಶ್ವಾಸ ಮೊದಲು ನಮ್ಮಲ್ಲಿ ಬರಬೇಕು!
Leave A Reply