ಫುಟ್ ಪಾತ್ ಯಾಕೆ ಅಗಲವಾಗುತ್ತದೆ ಎನ್ನುವುದೇ ಕೌನ್ ಬನೇಗಾ ಕರೋಡಪತಿ ಪ್ರಶ್ನೆ!!
ಮಂಗಳೂರಿನಲ್ಲಿ ಫುಟ್ ಪಾತ್ ಗಳು ಮಂಚದ ಸೈಜ್ ನಿಂದ ವರಾಂಡದ ಸೈಜಿಗೆ ದೊಡ್ಡದಾಗುತ್ತಿರುವುದು ಯಾಕೆ ಎನ್ನುವ ಪ್ರಶ್ನೆಗೆ ಸ್ಮಾರ್ಟ್ ಸಿಟಿಯ ಅಧಿಕಾರಿಗಳಾಗಲಿ, ಬುದ್ಧಿವಂತರೆನಿಸಿಕೊಂಡಿರುವ ಜನಪ್ರತಿನಿಧಿಗಳಾಗಲಿ, ಪಾಲಿಕೆಯ ಅಧಿಕಾರಿಗಳಾಗಲಿ ಉತ್ತರಿಸಿದರೆ ಅವರನ್ನು ದೆಹಲಿಯಲ್ಲಿ ವಿಶೇಷ ಕಾರ್ಯಕ್ರಮ ಮಾಡಿ ಸನ್ಮಾನ ಮಾಡಬೇಕು. ಒಂದು ವೇಳೆ ಸೋನಿ ಟಿವಿಯವರಿಗೆ ಈ ವಿಷಯ ಗೊತ್ತಾದರೆ ಅವರು ಈ ಪ್ರಶ್ನೆಯನ್ನು ಕೌನ್ ಬನೇಗಾ ಕರೋಡ್ ಪತಿಯಲ್ಲಿ ಒಂದು ಕೋಟಿ ರೂಪಾಯಿ ಬಹುಮಾನಕ್ಕಾಗಿ ಕೇಳಬಹುದು. ಇದಕ್ಕೆ ನಾಲ್ಕು ಆಯ್ಕೆಗಳನ್ನು ಕೂಡ ಕೊಡಬಹುದು. ಮೊದಲ ಆಯ್ಕೆ- ಫುಟ್ ಪಾತ್ ಅಗಲ ಮಾಡುವುದು ಆ ಫುಟ್ ಪಾತ್ ನಲ್ಲಿರುವ ಅಂಗಡಿಯವರಿಗೆ ತಮ್ಮ ಸಾಮಾನುಗಳನ್ನು ಇಡಲು ಅನುಕೂಲ ಮಾಡಿಕೊಡಲು. ಎರಡನೇ ಆಪ್ಶನ್ – ಬೀದಿಬದಿ ವ್ಯಾಪಾರಿಗಳಿಗೆ ಸಾಕಷ್ಟು ಸ್ಥಳಾವಕಾಶ ಮಾಡಿಕೊಡಲು. ಮೂರನೇ ಆಪ್ಶನ್ – ಕೋಟ್ಯಾಂತರ ರೂಪಾಯಿ ಅನುದಾನ ಬರುತ್ತಿರುವುದರಿಂದ ಅದನ್ನು ಏನಾರೂ ಮಾಡಿ ಖರ್ಚು ಮಾಡಬೇಕೆಂಬ ಒತ್ತಡ ಇದೆ. ನಾಲ್ಕನೇ ಮತ್ತು ಕೊನೆಯ ಆಪ್ಶನ್ _ ಈ ಮೂರು ಉತ್ತರಗಳು ಅಲ್ಲ.
ಅಮಿತಾಬ್ ಬಚ್ಚನ್ ಇಷ್ಟನ್ನು ಹಿಂದಿಯಲ್ಲಿ ಹೇಳಿದ ಮೇಲೆ ಯಾರಿಗಾದರೂ ಫೋನ್ ಮಾಡಲು ಬಯಸುವಿರಾ ಎನ್ನುವ ಆಯ್ಕೆಯನ್ನು ಕೂಡ ಕೊಟ್ಟರೆ ಸ್ಪರ್ಧಿ ಏನು ಮಾಡಬೇಕು? ಅವರು ಒಂದೋ ಸ್ಮಾರ್ಟ್ ಸಿಟಿ ಎಂಡಿಯವರಿಗೆ ಕಾಲ್ ಮಾಡಬಹುದು. ಇಲ್ಲದಿದ್ದರೆ ಪಾಲಿಕೆಯ ವ್ಯಾಪ್ತಿಯ ಯಾವುದಾದರೂ ಜನಪ್ರತಿನಿಧಿಗೆ ಕಾಲ್ ಮಾಡಬಹುದು. ಇಲ್ಲದಿದ್ದರೆ ಪಾಲಿಕೆಯ ಕಮೀಷನರ್ ಅವರಿಗೆ ಕಾಲ್ ಮಾಡಬಹುದು. ಆದರೆ ಮೂವತ್ತು ಸೆಕೆಂಡ್ ಅವಧಿ ಬಿಡಿ, ಮೂರು ಗಂಟೆ ಕೊಟ್ಟರೂ ಯಾರಿಗೂ ಈ ಉತ್ತರ ಕೊಡಲು ಆಗುವುದಿಲ್ಲ. ಯಾಕೆಂದರೆ ಇದು ಕೇವಲ ಸಾಮಾನ್ಯ ಪ್ರಶ್ನೆ ಅಲ್ಲ. ಇದು ಯಕ್ಷ ಪ್ರಶ್ನೆ. ಆದ್ದರಿಂದ ಯಕ್ಷ ಪ್ರಶ್ನೆಗಳಿಗೆ ಉತ್ತರ ಕೊಡುವುದು ಸಾಧ್ಯವಿಲ್ಲ. ಅಲ್ಲಿಗೆ ಇದಕ್ಕೆ ಉತ್ತರ ಕೊಡಲು ಸಾಧ್ಯವಾಗದೇ ಕೌನ್ ಬನೇಗಾ ಕರೋಡಪತಿಯ ಸ್ಪರ್ಧಿ ಸೋಲುತ್ತಾರೆ. ಹಾಗಾದರೆ ಇದರ ಹಿಂದಿನ ಕಾರಣಗಳೇನು?
ಮೊದಲನೇಯದಾಗಿ ನಿಮಗೆ ಲಕ್ಷಾಂತರ ರೂಪಾಯಿ ಟಿಡಿಆರ್ ಕೊಟ್ಟು ನಿಮ್ಮಿಂದ ಭೂಮಿ ಖರೀದಿಸುವ ಸ್ಥಳೀಯಾಡಳಿತ ಅಲ್ಲಿ ಅಗಲವಾದ ಫುಟ್ ಪಾತ್ ಮಾಡುವುದರಿಂದ ಏನು ಸಾಧಿಸುತ್ತದೆ. ಯಾಕೆಂದರೆ ಜನರಿಗೆ ಟಿಡಿಆರ್ ಕೊಟ್ಟು ಜಾಗವನ್ನು ಪಡೆದುಕೊಳ್ಳುವುದು ನಾವು ರಸ್ತೆ ಅಗಲ ಮಾಡುತ್ತೇವೆ ಎನ್ನುವ ಕಾರಣಕ್ಕೆ. ಆದರೆ ಮಂಗಳೂರಿನಲ್ಲಿ ಒಂದು
ರಸ್ತೆಯಲ್ಲಿ ಭೂಸ್ವಾಧೀನ ಆಗುತ್ತದೆ ಎಂದಾದರೆ ಅದರ ಅರ್ಥ ರಸ್ತೆ ಅಗಲವಾಗುತ್ತದೆ ಎಂದಲ್ಲ. ರಸ್ತೆ ಕಿರಿದಾಗುತ್ತದೆ ಎನ್ನುವುದು ಗ್ಯಾರಂಟಿ ವಿಷಯ. ನಿಮಗೆ ಆಶ್ಚರ್ಯ ಎನಿಸಬಹುದು. ಯಾಕೆ ಹೀಗೆ? ಯಾಕೆಂದರೆ ಇವರು ಫುಟ್ ಪಾತ್ ಮೊಣಕೈಯಿಂದ ಮಾರಿನಷ್ಟು ಅಗಲ ಮಾಡುವುದರಿಂದ ಸಹಜವಾಗಿ ರಸ್ತೆ ಚಿಕ್ಕದಾಗುತ್ತದೆ. ಅದರ ಜೊತೆ ಜನರಿಗಾದರೂ ನಡೆಯಲು ಅನುಕೂವಾಗುತ್ತಾ? ಅದು ಕೂಡ ಇಲ್ಲ. ಯಾಕೆಂದರೆ ಫುಟ್ ಪಾತ್ ತುಂಬಾ ಅಂಗಡಿಯವರ ಸಾಮಾನು. ಜನ ಮೊದಲೇ ಕಿರಿದಾಗಿರುವ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕು. ಅದರಿಂದ ವಾಹನಗಳಿಗೂ, ಪಾದಚಾರಿಗಳಿಗೂ ಕಷ್ಟ. ಇಂತಹ ಪರಿಸ್ಥಿತಿ ಮಂಗಳೂರಿನ ವ್ಯಾಪಾರಿ ಕೇಂದ್ರವಾಗಿರುವ ಬಂದರು ಪ್ರದೇಶದ ಮೈದಾನ ಒಂದನೇ ಕ್ರಾಸ್, ಮೂರನೇ ಕ್ರಾಸ್, ನಾಲ್ಕನೇ ಕ್ರಾಸ್, ಲೇಡಿಗೋಶನ್ ಹಿಂದಿನ ರಸ್ತೆ ಹೀಗೆ ಅನೇಕ ರಸ್ತೆಗಳಿಗೆ ಅನ್ವಯಿಸುತ್ತದೆ. ಇಲ್ಲಿ ಫುಟ್ ಪಾತ್ ಗಳಿಗೆ ಟೈಲ್ಸ್ ಕೂಡ ಹಾಕಿಸಲಾಗುತ್ತಿದೆ. ಅಲ್ಲಿ ಕೂಡ ಫುಟ್ ಪಾತ್ ಮೇಲೆ ಅಂಗಡಿಯವರದ್ದೇ ಸಾಮ್ರಾಜ್ಯ. ಅದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಷಯ ಹರಿದಾಡುತ್ತಿದ್ದ ಹಾಗೆ ಪಾಲಿಕೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಆ ಏರಿಯಾಕ್ಕೆ ಬಂದು ” ಅಣ್ಣೇರೆ, ಉಲಾಯಿ ದಿಲೆ” ಎಂದು ವಿನಂತಿಸುವ ಲೆವೆಲ್ಲಿಗೆ ಹೋಗುತ್ತಾರೆ. ಇದಕ್ಕಿಂತ ಬೇರೆ ನಾಟಕ ಬೇಕೆ? ಯಾಕೆಂದರೆ ಅಧಿಕಾರಿಗಳು ಅತ್ತ ಹೋದಂತೆ ಇತ್ತ ಕಡೆ ಅದೇ ಅಂಗಡಿಯೊಳಗಿನಿಂದ ವಸ್ತುಗಳು ಹೊರಗೆ ಬರುತ್ತವೆ.
ಪಾಲಿಕೆಯವರು ಫುಟ್ ಪಾತ್ ಮೇಲೆ ಅನಧಿಕೃತವಾಗಿ ತಮ್ಮ ಅಂಗಡಿಗಳ ಸಾಮಾನು ಸರಂಜಾಮುಗಳನ್ನು ಹರಡಿ ಕುಳಿತುಕೊಳ್ಳುವವರ ವಿರುದ್ಧ ಯಾವುದೇ ನೋಟಿಸು ಕೊಡದೇ ಕ್ರಮ ತೆಗೆದುಕೊಳ್ಳಬಹುದು. ಆ ಅಧಿಕಾರ ಅವರಿಗೆ ಇದೆ. ರೇಡ್ ಮಾಡಿ ಆ ವಸ್ತುಗಳನ್ನು ಎತ್ತಾಕಿಕೊಂಡು ಹೋಗಬಹುದು. ಈ ಅಧಿಕಾರವನ್ನು ಬಳಸುವುದು ಬಿಟ್ಟು ವಿನಂತಿ ಮಾಡುವ ಲೆವೆಲ್ಲಿಗೆ ಇಳಿಯುವುದು ಇದೆಯಲ್ಲ, ಅದಕ್ಕಿಂತ ನಾಚಿಕೆ ಬೇರೆ ಇಲ್ಲ. ಒಂದು ವೇಳೆ ಯಾವುದೇ ರಾಜಕೀಯ ಪಕ್ಷ ಹಸ್ತಕ್ಷೇಪ ಮಾಡದೇ ಹೋದರೆ ಈ ಅಧಿಕಾರವನ್ನು ಬಳಸಿ ತಮ್ಮ ಸಾಮರ್ತ್ಯ ತೋರಿಸಬಹುದು. ಆ ವಸ್ತುಗಳನ್ನು ಏಲಂ ಮಾಡಿ ತಮ್ಮ ರೇಡಿಗೆ ತಗುಲಿದ ಖರ್ಚನ್ನು ವಸೂಲಿ ಮಾಡಬಹುದು. ಅಂಗಡಿಯವರ ವಿರುದ್ಧ ಕೇಸು ಮಾಡಬಹುದು. ಬೀದಿಬದಿ ವ್ಯಾಪಾರಿಗಳ ಮೇಲೆ ಕೇಸು ಮಾಡುವುದರಿಂದ ಪ್ರಯೋಜನವಿಲ್ಲ. ಅಂಗಡಿಯವರ ವಿರುದ್ಧ ಏನೂ ದಾಕ್ಷಿಣ್ಯವಿಲ್ಲದೇ ಕೇಸ್ ಮಾಡಬಹುದು. ಈಗ ಪಾಲಿಕೆಗೆ ಹೊಸ ಕಮೀಷನರ್ ಬಂದಿದ್ದಾರೆ. ಅವರು ಏನೆಲ್ಲಾ ಮಾಡಲು ಸಾಧ್ಯವಿದೆ ಎಂದು ಇದರ ಹಿಂದಿನ ಜಾಗೃತ ಅಂಕಣದಲ್ಲಿ ಬರೆದಿದ್ದೇನೆ. ಅವರು ಈ ಫುಟ್ ಪಾತ್ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸಮಸ್ಯೆಯನ್ನು ಪರಿಹರಿಸಿ ಮಂಗಳೂರಿನಲ್ಲಿ ಇಂತಹ ಕಮೀಷನರ್ ಒಬ್ಬರು ಇದ್ದರು ಎಂದು ತೋರಿಸಿಕೊಡುವ ಅವಕಾಶ ಇದೆ. ಮಾಡುತ್ತಾರಾ ಎನ್ನುವುದೇ ಈಗಿನ ಪ್ರಶ್ನೆ!
Leave A Reply