ಕಾಂಗ್ರೆಸ್ಸಿಗೆ ಹೋದ್ರೆ ಸಿಎಂ ಮಾಡ್ತಾರಾ ಶೆಟ್ಟರ್!!
ರಾಜಕೀಯ ಮುಸ್ಸಂಜೆಯಲ್ಲಿ ಯಾರಾದರೂ ಯಾಕೆ ಹೀಗೆ ಮಾಡುತ್ತಾರೆ? ಜಗ್ಗು ಶೆಟ್ಟರ್ ಮತ್ತು ಎಸ್ ಎಂ ಕೃಷ್ಣ ಯಾಕೆ ಹೀಗೆ ಮಾಡಬೇಕಾಯಿತು? ಇಬ್ಬರಿಗೂ ಬದಲಾದ ಹೈಕಮಾಂಡ್ ಮನಸ್ಥಿತಿ ಗೊತ್ತೆ ಆಗಲಿಲ್ಲವೇ? ಅವರು ಹಾಗೆ ತಾವು ಜೀವನುದ್ದಕ್ಕೂ ನಂಬಿಕೊಂಡು ಬಂದ ತತ್ವ, ಸಿದ್ಧಾಂತವನ್ನು ಏಕಾಏಕಿ ಬದಲಿಸಿ ಬೇರೆ ಪಾಳಯದಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ ಎಂದರೆ ಅದರ ಹಿಂದೆ ಇದ್ದದ್ದು ರಾಜಕೀಯ ವಾಂಛೆನಾ ಅಥವಾ ಅವಮಾನಕ್ಕೆ ಉತ್ತರನಾ? ಅವರೇ ನಿರ್ಧರಿಸಬೇಕು. ಒಬ್ಬ ವ್ಯಕ್ತಿ ಅದರಲ್ಲಿಯೂ ಮುಖ್ಯವಾಹಿನಿಯ ರಾಜಕಾರಣಿ ಒಮ್ಮಿಂದೊಮ್ಮೆಲೆ ಹೀಗೆ ಲಾಂಗ್ ಜಂಪ್ ಹಾಕುವುದನ್ನು ಏನೆಂದು ಕರೆಯುವುದು? ಯಾರೋ ಮಾಜಿ ಶಾಸಕ, ಜಿಲ್ಲಾಧ್ಯಕ್ಷ ಏಕಾಏಕಿ ತದ್ವಿರುದ್ಧ ಪಾರ್ಟಿಗೆ ಹಾರಿದಾಗಲೇ ವಿಷಯ ಚರ್ಚೆಗೆ ಬರುತ್ತದೆ. ಹಾಗಿರುವಾಗ ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಮುಂದಿನ ಬಾರಿ ಸ್ಪರ್ಧೆಗೆ ಅವಕಾಶ ಕೊಡಲಿಲ್ಲ ಎಂದು ಹೀಗೆ ಮಾಡುವುದು ರಾಜಕೀಯದ ಆಷಾಡಭೂತಿತನ ಎನ್ನುವುದಾ? ನೈತಿಕ ದಿವಾಳಿತನ ಎನ್ನುವುದಾ? ಶೆಟ್ಟರ್ ಮತ್ತು ಕೃಷ್ಣ ಹೀಗೆ ಮಾಡಿರುವುದರ ಹಿಂದೆ ಇದ್ದ ಕಾರಣಗಳು ಬೇರೆ ಬೇರೆಯಾದರೂ ಮೂಲದಲ್ಲಿ ಇದ್ದದ್ದು ಹೈಕಮಾಂಡ್ ಮೇಲಿನ ಕೋಪ.
ಹೈಕಮಾಂಡ್ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎನ್ನುವುದು ಮಾತ್ರ. ಒಬ್ಬ ಸರಕಾರಿ ಉದ್ಯೋಗಿ ತಾನು 58 ಆಗುತ್ತಿದ್ದಂತೆ ನಿವೃತ್ತಿಗೆ ಮಾನಸಿಕವಾಗಿ ತಯಾರಾಗಿಬಿಡುತ್ತಾನೆ. ಅದರ ನಂತರ ಅವನು ಅಥವಾ ಅವಳು ನನಗೆ ಇನ್ನೊಂದು ಹತ್ತು ವರ್ಷ ಅವಕಾಶ ನೀಡಿ ಎಂದು ಗಲಾಟೆ ಮಾಡುವುದಿಲ್ಲ. ಅಲ್ಲಿ ಇಲ್ಲಿ ಒಂದಿಬ್ಬರನ್ನು ನಿವೃತ್ತಿಯ ನಂತರವೂ ಎರವಲು ಸೇವೆಯ ಮೇಲೆ ಪಡೆದುಕೊಳ್ಳುವ ಪ್ರಯತ್ನ ಆಗಿದೆ ಬಿಟ್ಟರೆ ಅದು ಸಾರ್ವಕಾಲಿಕ ನಿಯಮವಾಗಿಲ್ಲ. ಆದರೆ ಚುನಾವಣೆಯಲ್ಲಿ ಒಮ್ಮೆ ಶಾಸಕನಾದವರು ತಾನು ಎದ್ದು ನಿಂತು ನಡೆಯಲು ಕಷ್ಟವಾಗುವಂತಿದ್ದರೂ ಸ್ಪರ್ಧೆಗೆ ಇಳಿಯುವ ಉತ್ಸಾಹ ತೋರುವುದೇ ರಾಜಕೀಯ ಕ್ಷೇತ್ರದ ಪರಮ ಸತ್ಯ ಮತ್ತು ಪರಮ ಅಸಹ್ಯವೂ ಹೌದು. ಹಾಗಂತ ಶೆಟ್ಟರ್ ತಾನು ಆರೋಗ್ಯವಾಗಿದ್ದೇನೆ. ಕಳಂಕ ಇಲ್ಲ. ಇನ್ನೊಂದು ಅವಕಾಶ ನಿರಾಕರಿಸಲು ಕಾರಣವೇ ಇಲ್ಲ ಎಂದು ಹೇಳಿಕೊಂಡು ಬರುತ್ತಿರುವುದರಿಂದ ಜನರ ಸಿಂಪಥಿಯನ್ನು ಸೆಳೆಯಲು ಪ್ರಯತ್ನವೇ ಬಿಟ್ಟರೆ ಬೇರೆ ಏನೂ ಇಲ್ಲ. ಅವರಿಗೆ ಈಗ ಅರ್ಜೆಂಟಾಗಿ ಇನ್ನೊಂದು ಸಲ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ಅದಕ್ಕೆ ಯಡ್ಡಿ ಅಷ್ಟು ಸುಲಭವಾಗಿ ಬಿಡುವ ಸಾಧ್ಯತೆ ಇಲ್ಲ. ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ಶೆಟ್ಟರ್ ಮತ್ತೆ ಮಂತ್ರಿಯಾಗಬೇಕೆ ವಿನ: ಅವರಿಗೆ ಸಿಎಂ ಮಾಡಲು ಯಾರೂ ಮುಂದೆ ಬರುವುದಿಲ್ಲ. ಅವರಿಗೆ ಒಂದು ಸಲ ಸಿಎಂ ಸ್ಥಾನ ಕೊಡಲಾಗಿದೆ. ಆದರೆ ಇಡೀ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ವರ್ಚಸ್ಸು ಅವರಿಗೆ ಇಲ್ಲ. ಅದು ಇರುವುದು ಕೇವಲ ಯಡ್ಡಿಗೆ ಮಾತ್ರ. ಯಡ್ಡಿ ಈಗ ನಿಂತಿರುವುದು ಬೊಮ್ಮಾಯಿ ಬೆನ್ನಿಗೆ. ಯಾಕೆ ಅವರಿಗೂ ಶೆಟ್ಟರ್ ಅವರಿಗೂ ಆಗಲ್ವಾ? ಇಲ್ಲ.
ಯಾವಾಗ ಯಡ್ಡಿ ಭಾರತೀಯ ಜನತಾ ಪಾರ್ಟಿಯಿಂದ ನೊಂದು ಹೊರಗೆ ಹೋಗಿ ಕೆಜೆಪಿ ಕಟ್ಟಿದಾಗ ಇದೇ ಶೆಟ್ಟರ್ ಬಹಿರಂಗ ವೇದಿಕೆಯಲ್ಲಿ ಯಡ್ಡಿಯನ್ನು ಟೀಕಿಸಿದ್ದರು. ಹಂಗಿಸಿದ್ದರು. ಅದನ್ನು ಯಡ್ಡಿ ಮರೆತಿಲ್ಲ. ಇನ್ನು ಶೆಟ್ಟರ್ ಕಳೆದ ಬಾರಿ ಬೊಮ್ಮಾಯಿ ಸರಕಾರದಲ್ಲಿ ಮಂತ್ರಿಯಾಗಲು ನಿರಾಕರಿಸಿ ಸರಕಾರದಿಂದ ಹೊರಗೆ ಉಳಿದಿದ್ದರು. ಮಾಡುವುದಿದ್ದರೆ ಸಿಎಂ ಮಾಡಿ, ಮಂತ್ರಿ ಸ್ಥಾನ ಬೇಕಾಗಿಲ್ಲ ಎನ್ನುವ ಅವರ ಸ್ಪಷ್ಟ ಸಂದೇಶ ಇತ್ತು. ಇವತ್ತಿನ ಬಿಜೆಪಿಯಲ್ಲಿ ನಡೆಯುವುದಿಲ್ಲ ಎಂದರೆ ಹಟ ಮಾತ್ರ. ನೀವು ಇದೇ ಬೇಕು ಎಂದು ಹಟ ಮಾಡುತ್ತಿದ್ದರೆ ನಿಮ್ಮನ್ನು ಪಕ್ಕಕ್ಕೆ ಸರಿಸಿ ಮುಂದಕ್ಕೆ ಹೋಗುವ ಕ್ರಮ ಶುರುವಾಗಿ ಆರೇಳು ವರ್ಷಗಳಾಗಿವೆ. ಚೆಂದ ಮಾಡಿ ಒಮ್ಮೆ ಹೇಳಲಾಗುತ್ತದೆ. ಹೇಳಿದ್ದು ಕೇಳದಿದ್ದರೆ ಅವರನ್ನು ಪಕ್ಕಕ್ಕೆ ಸರಿಸಿ ಮುಂದಕ್ಕೆ ಹೋಗಲಾಗುತ್ತದೆ. ಅದು ಈಶುಗೆ ಗೊತ್ತಿತ್ತು. ಆದರೆ ತಾನು ಈಶುವಿಗಿಂತ ಜಾತಿಯಲ್ಲಿ ಬಲಿಷ್ಟ ಎಂದು ಶೆಟ್ಟರ್ ತೋರಿಸಲು ಹೊರಟರು. ಆದರೆ ಹೀಗೆ ಬ್ಲ್ಯಾಕ್ ಮೇಲ್ ಮಾಡುತ್ತಾ ಇರುವವರನ್ನು ತಲೆ ಮೇಲೆ ಕುಳ್ಳಿರಿಸುತ್ತಾ ಹೋದರೆ ಪಕ್ಷ ನಮ್ಮ ನಿಯಂತ್ರಣಕ್ಕೆ ಬರುವುದಿಲ್ಲ. ನಂತರ ಎಲ್ಲರೂ ಹೆದರಿಸುತ್ತಾ ಹೋಗುತ್ತಾರೆ. ನಂತರ ಪಕ್ಷ ಯಾವುದೇ ಸಿದ್ಧಾಂತದಲ್ಲಿ ಉಳಿಯದಿದ್ದರೆ ಮೊದಲಿನಿಂದ ರಿಪೇರಿ ಮಾಡಬೇಕಾಗುತ್ತದೆ. ಅದರ ಬದಲು ಯಾವ ಭಾಗಕ್ಕೆ ಅನಾರೋಗ್ಯ ಬಂದಿದ್ದೆಯೋ ಅದಕ್ಕೆ ಇಂಜೆಕ್ಷನ್ ಕೊಟ್ಟರೆ ಮುಗಿಯಿತು ಎನ್ನುವ ನಿರ್ಧಾರಕ್ಕೆ ಮೋದಿ, ಶಾ ಬಂದಿದ್ದಾರೆ.
ಆದರೆ ಶೆಟ್ಟರ್ ಇಂತಹ ಮುನ್ಸೂಚನೆಯನ್ನು ಮೊದಲೇ ಅರಿತಿದ್ದರು. 2023 ರ ಚುನಾವಣೆಗೆ ಯಡ್ಡಿ, ಈಶು, ಶೆಟ್ಟರ್ ಅವರಿಗೆ ಟಿಕೆಟ್ ಸಿಗುವುದು ಅಸಾಧ್ಯ ಎನ್ನುವ ಸಂದೇಶ ಬಿಜೆಪಿಯಲ್ಲಿ ಹರಿದಾಡುತ್ತಿತ್ತು. ಈ ಮೂವರಲ್ಲಿ ಇಬ್ಬರು ಲಿಂಗಾಯಿತರು ಒಬ್ಬರು ಕುರುಬರು. ಯಡ್ಡಿಯನ್ನು ಪಕ್ಕಕ್ಕೆ ಸರಿಸುವ ಲಕ್ಷಣ ತೋರಿಸಿದ ಬಿಜೆಪಿಯನ್ನು ಮೊದಲು ಚಿವುಟಿದ್ದೇ ಕಾಂಗ್ರೆಸ್. ಅದರಿಂದ ಎಚ್ಚೆತ್ತುಕೊಂಡ ಬಿಜೆಪಿ ಹೈಕಮಾಂಡ್ ಸಂಸದೀಯ ಮಂಡಳಿಯಲ್ಲಿ ಕುಳ್ಳಿರಿಸಿ ಪರಮೋಚ್ಚ ಗೌರವ ನೀಡಿದ ಪೋಸ್ ನೀಡಿತು. ಈಶು ತಡಮಾಡದೇ ನಿವೃತ್ತಿ ತೆಗೆದುಕೊಂಡರು. ಉಳಿದದ್ದು ಶೆಟ್ಟರ್. ಸಮಾಜಕ್ಕೆ ಸರ್ವಸ್ವ ತನಗೆ ಸ್ವಲ್ಪ ಎನ್ನುವ ಮಾತನ್ನು ಸಂಘ ಶೆಟ್ಟರ್ ಅವರಿಗೆ ಕಲಿಸಿಕೊಡುವಲ್ಲಿ ಮರೆತ್ತಿತ್ತಾ ಅಥವಾ ನಲ್ವತ್ತು ದಶಕದ ರಾಜಕೀಯ ಜೀವನದಲ್ಲಿ ಶೆಟ್ಟರ್ ಅವರಿಗೆ ಸಂಘ ಕಲಿಸಿಕೊಟ್ಟಿರುವುದಕ್ಕಿಂತ ರಾಜಕೀಯ ವಾಂಛೆ ಹೆಚ್ಚಾಯಿತಾ? ಮೇ 13 ರ ಇಳಿಸಂಜೆ ಉತ್ತರ ಕೊಡಲಿದೆ!
Leave A Reply