ಕಾಂಗ್ರೆಸ್ ತನಿಖೆ ಮಾಡಿಸಲಿ!
ಚುನಾವಣೆ ಎಂದರೆ ಏನೇನೋ ಆರೋಪ ಮಾಡಿ ಅವರು ಭ್ರಷ್ಟರು, ಕೆಟ್ಟವರು, ನೀಚರು ಎಂದು ಸಾಬೀತುಪಡಿಸಿ ಮತದಾರ ತಮ್ಮ ಕಡೆ ಮತ ಚಲಾಯಿಸುವಂತೆ ಮಾಡುವ ಪ್ರಕ್ರಿಯೆ ಎಂದು ಸಾಬೀತಾಗಿ ಯಾವುದೋ ಕಾಲವಾಗಿದೆ. ಆದರೆ ಕೆಲವೊಮ್ಮೆ ಪಕ್ಷಗಳು ವಿಪರೀತ ಎನಿಸುವಷ್ಟು ಕೆಸರೆರೆಚಾಟ ಮಾಡಿದಾಗ ಅದು ಅಸಹ್ಯದ ಪರಮಾವಧಿ ಎನಿಸುತ್ತದೆ. ಇನ್ನು ಸುಳ್ಳು ಹೇಳಿಕೊಂಡು ಅದನ್ನೇ ಪದೇ ಪದೇ ಪುನರಾವರ್ತನೆ ಮಾಡಿಕೊಂಡು ಜನರಲ್ಲಿ ಒಂದು ಸುಳ್ಳನ್ನು ಸಾವಿರ ಸಲ ಹೇಳಿ ಸತ್ಯ ಮಾಡುವ ಕೆಲಸವನ್ನು ಎಲ್ಲಾ ಪಕ್ಷಗಳು ಮಾಡುತ್ತವೆ. ವಿಪಕ್ಷಗಳಿಗೆ ಸುಳ್ಳು ಆರೋಪಗಳನ್ನು ಮಾಡುವುದು ಸುಲಭ. ಯಾಕೆಂದರೆ ಅವರು ಕಲ್ಲು ಬಿಸಾಡುವ ಸ್ಥಾನದಲ್ಲಿ ಇರುತ್ತಾರೆ. ಅದೇ ವಿಪಕ್ಷಗಳು ಬಿಸಾಡಿದ ಕಲ್ಲುಗಳಿಂದ ತನ್ನ ಮನೆಗೆ ಯಾವುದೇ ಡ್ಯಾಮೇಜ್ ಆಗಬಾರದು ಎನ್ನುವ ಮನಸ್ಥಿತಿಯಲ್ಲಿ ಆಡಳಿತ ಪಕ್ಷ ಇರುತ್ತದೆ. ಆದರೆ ಮೊನ್ನೆ ಮೇನಲ್ಲಿ ರಾಜ್ಯ ವಿಧಾನಭೆಗೆ ನಡೆದ ಚುನಾವಣೆಯ ಪ್ರಚಾರದಲ್ಲಿ ಕಾಂಗ್ರೆಸ್ ಬಹಳ ಪ್ಲಾನ್ ಆಗಿ ನಡೆಸಿದ 40% ಅಭಿಯಾನ, ಪೇ ಸಿಎಂ ಆರೋಪಗಳು ಬೊಮ್ಮಾಯಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. ಬೊಮ್ಮಾಯಿ ಅವರನ್ನು ನಡುನೀರಿನಲ್ಲಿ ಕೈಬಿಟ್ಟಂತೆ ಆಗಿದ್ದವು. ಈ ಬಗ್ಗೆ ಸಾಕ್ಷ್ಯ ಕೊಟ್ಟು ಮಾತನಾಡಿ ಎಂದು ಬಿಜೆಪಿ ನಾಯಕರು ಎಷ್ಟು ಕೇಳಿದರೂ ಕಾಂಗ್ರೆಸ್ ಈ ವಿಷಯವನ್ನು ಒಂದು ವರ್ಷದಿಂದ ಗಾಳಿಯಲ್ಲಿ ತೇಲಿಸಿಕೊಂಡು ಬಂದಿತ್ತೆ ವಿನ: ಈ ಬಗ್ಗೆ ಏನೂ ಸಾಕ್ಷ್ಯ ಕೊಟ್ಟಿರಲಿಲ್ಲ. ಮಾಧ್ಯಮದವರು ಕೇಳಿದ್ರೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹೇಳಿಲ್ವಾ? ಅವರು ಪ್ರಧಾನಿಗೆ ಪತ್ರ ಕೊಟ್ಟಿಲ್ವಾ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದರೆ ವಿನ: ತಮ್ಮ ಬಳಿ ಇದಕ್ಕೆ ಏನೂ ಪ್ರೂಫ್ ಇಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದರು.
ಕೆಂಪಣ್ಣ ಗುರಾಣಿ, ಕಾಂಗ್ರೆಸ್ ಯುದ್ಧ!
ಗುತ್ತಿಗೆದಾರರ ಸಂಘದ ಅಧ್ಯಕ್ಷರನ್ನು ಎದುರಿಗೆ ಗುರಾಣಿಯನ್ನಾಗಿ ಮಾಡಿ ಅದರ ಹಿಂದೆ ಅವಿತುಕೊಂಡು ಕಾಂಗ್ರೆಸ್ ಮುಖಂಡರು ಯುದ್ಧ ಸಾರಿದಂತೆ ಆಗಿತ್ತು. ಸಾಕ್ಷಿ ಕೊಡಲು ಆಗದೇ ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ಪೊಲೀಸ್ ಸ್ಟೇಶನ್ನಿನಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿತೆ ವಿನ: ಕಾಂಗ್ರೆಸ್ಸಿಗರು ಸಮಾವೇಶದಲ್ಲಿ ಮೈಕ್ ಮುಂದೆ ಬಿಜೆಪಿಯದ್ದು 40% ಸರಕಾರ ಎಂದೇ ಬೊಬ್ಬೆ ಹೊಡೆಯುತ್ತಿದ್ದರು. ಯಾರ ಬುಟ್ಟಿಯಲ್ಲಿಯೂ ಹಾವಿರಲಿಲ್ಲ. ಆದರೂ ಎಲ್ಲರೂ ಪುಂಗಿಯೂದುತ್ತಿದ್ದರು. ಕೊನೆಗೂ ಪೇ ಸಿಎಂ ಅಭಿಯಾನವನ್ನು ಮುಂದುವರೆಸಿಕೊಂಡು ಹೋದರೆ ವಿನ: ಅದಕ್ಕೆ ಒಂದೇ ಒಂದು ಎಳೆಯ ಸಾಕ್ಷ್ಯವನ್ನು ಕೂಡ ಕಾಂಗ್ರೆಸ್ ನೀಡಿರಲಿಲ್ಲ. ದಾಖಲೆ ಕೊಡಿ ಎಂದು ಬಿಜೆಪಿಯವರು ಕೇಳುತ್ತಿದ್ದರು. ಕಾಂಗ್ರೆಸ್ ಮುಖ ತಿರುಗಿಸಿ ಗೋಡೆಗಳಿಗೆ ಪೇ ಸಿಎಂ ಪೋಸ್ಟರ್ ಅಂಟಿಸುವುದರಲ್ಲಿ ಬಿಝಿಯಾಗಿದ್ದರು. ಅಂತಿಮವಾಗಿ ಗಾಳಿಯಲ್ಲಿ ಹಾರಿಸಿದ ಗುಂಡು ಕಾಂಗ್ರೆಸ್ಸಿನ ಅದೃಷ್ಟದಿಂದ ಗುರಿ ಮುಟ್ಟಿದೆ.
ಈಗ ಭಾರತೀಯ ಜನತಾ ಪಾರ್ಟಿಯ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಈ ವಿಷಯ ಮಾರ್ದನಿಸಿದೆ. ಈ 40% ಕಮೀಷನ್ ವಿಷಯದಿಂದ ಪಕ್ಷಕ್ಕೆ ದೊಡ್ಡ ಸೋಲಾಗಿದೆ ಎಂಬ ವಿಷಯ ಎಲ್ಲಾ ಮುಖಂಡರ ಮನಸ್ಸಿನಲ್ಲಿದೆ. ಈಗ ಇದನ್ನು ಗಂಭೀರವಾಗಿ ಸ್ವೀಕರಿಸಿರುವ ಬಿಜೆಪಿ ಸಿದ್ದು, ಡಿಕೆಶಿ ಹಾಗೂ ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದೆ. ಯಾಕೆಂದರೆ ಮೇ 5 ರಂದು ಚುನಾವಣೆಗೆ ಬೆರಳೆಣಿಕೆಯ ದಿನಗಳು ಇರುವಾಗ ಕಾಂಗ್ರೆಸ್ ಮಾಧ್ಯಮಗಳಿಗೆ ನೀಡಿದ ಜಾಹೀರಾತಿನಲ್ಲಿ ಬಿಜೆಪಿ ಸರಕಾರವನ್ನು ನಲ್ವತ್ತು ಪರ್ಸೆಂಟ್ ಸರಕಾರ ಎಂದು ಹೇಳಿದ್ದು ಮಾತ್ರವಲ್ಲ, ಮೂರುವರೆ ವರ್ಷದಲ್ಲಿ 1.50 ಲಕ್ಷ ಕೋಟಿ ರೂಪಾಯಿ ಹಣವನ್ನು ಬಿಜೆಪಿ ಸರಕಾರ ದೋಚಿದೆ ಎಂದು ಜಾಹೀರಾತು ನೀಡಿತ್ತು. ಇದಕ್ಕೆ ಯಾವ ಸಾಕ್ಷ್ಯವೂ ಇವರ ಕಿಸೆಯಲ್ಲಿ ಇಲ್ಲ. ಆದರೆ ಜಾಹೀರಾತು ಕೊಡಲು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕು ಎನ್ನುವ ಮಾನಸಿಕತೆಯನ್ನು ಕಾಂಗ್ರೆಸ್ ಮುಖಂಡರು ಹೊಂದಿದ್ದರು.
ಕಾಂಗ್ರೆಸ್ ತನಿಖೆ ಮಾಡಿಸಲಿ!
ಆಗ ಬಿಜೆಪಿ ಇದರ ವಿರುದ್ಧ ಸಮರ್ಪಕವಾದ ಅಸ್ತ್ರವನ್ನು ಒಗ್ಗಟ್ಟಿನಿಂದ ಬಳಸಿದ್ದರೆ ಏನಾದರೂ ಪ್ರಯೋಜನವಾಗುತ್ತಿತ್ತೋ ಏನೋ. ಆದರೂ ಬಿಜೆಪಿ ತಡವಾಗಿಯಾದರೂ ಎದ್ದಿದೆ. ಕೇಶವ ಪ್ರಸಾದ್ ಎನ್ನುವವರು ದೂರು ನೀಡಿದ್ದಾರೆ. ದೂರಿನ ಜೊತೆಗೆ ಕಾಂಗ್ರೆಸ್ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನ ದಾಖಲೆಗಳನ್ನು ಕೂಡ ಸಲ್ಲಿಸಿದ್ದಾರೆ. ಈ ಕುರಿತು ಪರಿಶೀಲಿಸಿದ ಬೆಂಗಳೂರಿನ ಸ್ಥಳೀಯ ನ್ಯಾಯಾಲಯ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ರಾಹುಲ್ ಗಾಂಧಿಗೆ ಸಮನ್ಸ್ ನೀಡಿದೆ. ಇದರಲ್ಲಿ ಸರಿಯಾದ ವಿಚಾರಣೆ ನಡೆದರೆ 40% ಆರೋಪ ಅಪ್ಪಟ ಸುಳ್ಳು ಎಂದು ಸಾಬೀತಾಗುತ್ತದೆ. ಯಾಕೆಂದರೆ 40% ಕಮೀಷನ್ ಬಿಜೆಪಿ ಸರಕಾರಕ್ಕೆ ಕೊಟ್ಟರೆ ಇನ್ನೊಂದಿಷ್ಟು ಶೇಕಡಾ ಅಧಿಕಾರಿಗಳಿಗೆ ಕೊಡಬೇಕಾಗುತ್ತದೆ. ಇನ್ನು ಒಂದಿಷ್ಟು ಶೇಕಡಾ ರಾಯಲ್ಟಿಯಾಗಿ ಕಟ್ಟಬೇಕಾಗುತ್ತದೆ. ಹಾಗಾದರೆ ಉಳಿಯುವುದು ಎನು? ಕಳಪೆ ಕಾಮಗಾರಿ. ಹಾಗಾದರೆ ಈ ಕಳಪೆ ಕಾಮಗಾರಿ ಮತ್ತು 40% ವಿರುದ್ಧ ಕಾಂಗ್ರೆಸ್ ಸೂಕ್ತ ತನಿಖಾ ಸಂಸ್ಥೆಯಿಂದ ತನಿಖೆ ಮಾಡಲಿ. ತನಿಖೆ ಮಾಡಲು ಸಾಕ್ಷ್ಯ ಯಾರ ಬಳಿ ಇದೆ. ಈಗ ಕಾಂಗ್ರೆಸ್ಸಿಗೂ ಈ ವಿಷಯದ ಅಗತ್ಯ ಇಲ್ಲ. ದಡ ಸೇರಿದ ಮೇಲೆ ಅಂಬಿಗನ ಹಂಗೇಕೆ ಎನ್ನುವಂತೆ ಗೆದ್ದ ಮೇಲೆ 40% ಹಂಗೇಕೆ ಅಲ್ವಾ ಕಾಂಗ್ರೆಸ್ಸಿಗರೇ? ಅದರೊಂದಿಗೆ ಪಿಎಸ್ ಐ ಹಗರಣ, ಬಿಟ್ ಕಾಯಿನ್ ಕಥೆಗಳು ಕೂಡ ಧೂಳು ಹಿಡಿಯಲಿವೆ. ಯಾಕೆಂದರೆ ಅಧಿಕಾರದ ಗದ್ದುಗೆ ಎಲ್ಲವನ್ನು ಮರೆಸುತ್ತದೆ!
Leave A Reply