ಕೋಮು ಸೂಕ್ಷ್ಮ ನಗರ ಎನ್ನುವುದಕ್ಕೆ ಸಾಕ್ಷ್ಯ ಇದೆಯಾ?
ಮಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಅವರು ಸುದ್ದಿಗೋಷ್ಟಿಯಲ್ಲಿ Anty Communal Wing ಎನ್ನುವ ತಂಡವನ್ನು ಕಟ್ಟುವಂತೆ ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ಸೂಚನೆ ನೀಡಿದ್ದರು. ಆ ಮೂಲಕ ಶಾಂತಿ, ಸಾಮರಸ್ಯ ಸ್ಥಾಪಿಸುವಂತೆ ಹೇಳಿದ್ದರು. ಅದರಂತೆ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಹೊಸ ತಂಡವನ್ನು ರಚಿಸಲಾಗಿದೆ. ಕೋಮು ದ್ವೇಷದ ಪ್ರಕರಣಗಳನ್ನು ಹತ್ತಿಕ್ಕುವ ಸಲುವಾಗಿ ಹೊಸ ಟೀಮ್ ಒಂದನ್ನು ರಚಿಸಲಾಗಿರುವುದು ರಾಜ್ಯದಲ್ಲಿ ಇದೇ ಮೊದಲು. ಈ ಮೂಲಕ ಮಂಗಳೂರಿನಿಂದ ಹೊರಗೆ ನಿಂತು ನೋಡುವವರಿಗೆ ಈ ಊರು ಕೋಮು ಸೂಕ್ಷ್ಮ ಪ್ರದೇಶದಂತೆ ಮೇಲ್ನೋಟಕ್ಕೆ ಕಾಣುತ್ತಿರುವುದು ಸ್ಪಷ್ಟ. ರೈಲು, ವಿಮಾನ, ರಸ್ತೆ ಮೂರು ಸಾರಿಗೆಗಳನ್ನು ಹೊಂದಿರುವ ರಾಜ್ಯದ ಏಕೈಕ ನಗರ ಮಂಗಳೂರಿಗೆ ಈ ಕೋಮು ಸೂಕ್ಷ್ಮ ಎಂಬ ಹಣೆಪಟ್ಟಿಯೇ ದೊಡ್ಡ ಸವಾಲು. ಈಗ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಕಳಂಕ ಗಟ್ಟಿ ಮಾಡಲು ಹೊರಟಿದ್ದಾರೋ ಅಥವಾ ಅಳಿಸಿಹಾಕಲು ಹೊರಟಿದ್ದಾರೋ ಎನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕು. ಸದ್ಯ ಗೃಹ ಸಚಿವರ ನಿರ್ದೇಶನದಂತೆ ರಚಿಸಲಾಗಿರುವ ವಿಂಗ್ ಇದಕ್ಕೆ ಇನ್ಸಪೆಕ್ಟರ್ ಶರೀಫ್ ಎಂಬುವವರನ್ನು ಮುಖ್ಯಸ್ಥರಾಗಿ ನೇಮಿಸಿ ನೇತೃತ್ವ ನೀಡಲಾಗಿದೆ. ಇದರಿಂದ ಹೋಗುವ ಸಂದೇಶ ಏನು?
ಕೋಮು ಸೂಕ್ಷ್ಮ ನಗರ ಎನ್ನುವುದಕ್ಕೆ ಸಾಕ್ಷ್ಯ ಇದೆಯಾ?
ಮೊದಲನೇಯದಾಗಿ ಈ ವಿಂಗ್ ರಚಿಸುವ ಮೂಲಕ ಮಂಗಳೂರು ವರ್ಷವಿಡೀ ಕೋಮು ಸೂಕ್ಷ್ಮ ಪ್ರದೇಶವಾಗಿರುತ್ತದೆ ಎನ್ನುವ ಸಂದೇಶವನ್ನು ರಾಜ್ಯ ಮತ್ತು ದೇಶಕ್ಕೂ ಕೊಟ್ಟಂತೆ ಆಗಿರುತ್ತದೆ. ಯಾವತ್ತೋ ಒಮ್ಮೆ ವಿಷಯಾಧಾರಿತವಾಗಿ ಏನಾದರೂ ಪ್ರಕರಣಗಳು ನಡೆದರೆ ಅದಕ್ಕೆ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಕೋಮುಸೂಕ್ಷ್ಮತೆಯ ಲೇಬಲ್ ಅಂಟಿಸುವುದು ಸರಿಯಲ್ಲ. ಇನ್ನು ಕೋಮು ಸೂಕ್ಷ್ಮ ಎಂಬ ಹಣೆಪಟ್ಟಿಯಿಂದಾಗಿ ಈ ನಗರಕ್ಕೆ ಈಗಾಗಲೇ ದೊಡ್ಡ ಪೆಟ್ಟು ಬಿದ್ದಿದೆ. ವ್ಯಾಪಾರ, ವಾಣಿಜ್ಯಕ್ಕೆ ಪೂರಕವಾಗಿ ದೊಡ್ಡ ದೊಡ್ಡ ಕಂಪೆನಿಗಳು ಇಲ್ಲಿ ಮಂಗಳೂರಿಗೆ ಬರುವುದಿಲ್ಲ. ಇಲ್ಲಿ ನೈಟ್ ಲೈಫ್ ಎನ್ನುವುದು ಇಲ್ಲವೇ ಇಲ್ಲ ಎನ್ನುವ ಕಾರಣಕ್ಕೆ ಇಲ್ಲಿ ಒಂದೆರಡು ಕಂಪೆನಿಗಳು ಬಂದರೂ ಐಟಿ, ಬಿಟಿ ಉದ್ಯೋಗಿಗಳು ಬರಲು ಹಿಂಜರಿಯುತ್ತಾರೆ. ಆದ್ದರಿಂದ ಮಂಗಳೂರನ್ನು ಕೋಮು ಸೂಕ್ಷ್ಮ ಎಂದು ಪದೇ ಪದೇ ಮಾಧ್ಯಮಗಳು, ರಾಜಕಾರಣಿಗಳು ಉಲ್ಲೇಖಿಸಿದರೆ ಅದರಿಂದ ಮಂಗಳೂರಿಗೆ ಹಾನಿ ಸಂಭವಿಸುವುದು ಮುಂದುವರೆಯುತ್ತಿದೆ. ಅಷ್ಟಕ್ಕೂ ಮಂಗಳೂರು ಕೋಮು ಸೂಕ್ಷ್ಮ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ. ಬೇಕಾದರೆ ಅದಕ್ಕೆ ಇತ್ತೀಚಿನ ಉದಾಹರಣೆ ನೋಡೋಣ. ಸುಳ್ಯದಲ್ಲಿ ಸತ್ತ ಮಸೂದ್ ಪ್ರಕರಣಕ್ಕೂ ಯಾವುದೇ ಕೋಮುವಿಗೂ ಸಂಬಂಧವಿಲ್ಲ. ಅದು ಜಗಳವೊಂದರ ಮುಂದುವರೆದ ಭಾಗವಾಗಿ ನಡೆದ ಹತ್ಯೆ. ಅದರ ನಂತರ ಪ್ರವೀಣ್ ನೆಟ್ಟಾರು, ಫಾಜಿಲ್ ಹತ್ಯೆಗಳು ಅದಕ್ಕೆ ಪ್ರತೀಕಾರವಾಗಿ ನಡೆದಿರಬಹುದಾದರೂ ಅದರಿಂದ ಮಂಗಳೂರು ಕೋಮು ಸೂಕ್ಷ್ಮ ಆಗಿಲ್ಲ. ಅಕ್ರಮ ದನ ಸಾಗಾಟ, ಹಿಂದೂ, ಮುಸ್ಲಿಂ ಯುವಕ, ಯುವತಿಯರ ವಿಷಯದಲ್ಲಿ ಯಾವತ್ತೋ ಒಮ್ಮೆ ಎಲ್ಲಿಯಾದರೂ ನಡೆದ ಮಾತಿನ ಚಕಮಕಿಯಿಂದ ಮಂಗಳೂರು ಕೋಮು ಸೂಕ್ಷ್ಮ ಎಂದು ಹೇಳಲು ಆಗುವುದಿಲ್ಲ. ಇಂತಹ ಕೃತ್ಯಗಳು ರಾಜ್ಯದ ಯಾವುದೇ ಭಾಗದಲ್ಲಿ ಯಾವತ್ತಾದರೂ ಒಮ್ಮೆ ನಡೆದಿರಬಹುದು. ಹಾಗಂತ ಅದನ್ನು ಕೋಮು ಸೂಕ್ಷ್ಮ ಎಂದು ಹೇಳಲು ಸಾಧ್ಯಾನಾ??
ಪೊಲೀಸ್ ಸಿಬ್ಬಂದಿಗಳ ಕೊರತೆ ಇದೆ!
ಇನ್ನು ಇದಕ್ಕೆ ರಚಿಸಲಾಗಿರುವ ತಂಡವನ್ನೇ ಗಮನಿಸಿ. ಅವರು ಕೂಡ ಯಾವುದೋ ಒಂದು ವಿಭಾಗದಲ್ಲಿದ್ದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳೇ ಆಗಿರುತ್ತಾರೆ. ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ, ಅಷ್ಟೇ. ಈಗಾಗಲೇ ಮಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿಗಳ ಕೊರತೆ ಇದೆ. ಈಗ ಇರುವ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸರಿಯಾದ ರಜೆ ಸಿಗದೇ ಅವರು ಹೈರಾಣಾಗಿದ್ದಾರೆ. ಹೀಗಿರುವಾಗ ಇನ್ನೊಂದು ವಿಂಗ್ ಮಾಡಿ ಒಂದರಲ್ಲಿ ಬೇರೆ ವಿಭಾಗದಲ್ಲಿದ್ದ ಸಿಬ್ಬಂದಿಗಳನ್ನು ಇನ್ನೊಂದಕ್ಕೆ ನೇಮಿಸಿ ಅವರು ಮೊದಲಿದ್ದ ಕಡೆಗಳಲ್ಲಿ ಮತ್ತೆ ಸಿಬ್ಬಂದಿಗಳ ಕೊರತೆ ಹೆಚ್ಚಿಸುವುದು ಬೇಕಿತ್ತಾ? ಇದರಿಂದ ಅನಗತ್ಯ ಗೋಜಲುಗಳ ನಿರ್ಮಾಣವಾಗಿದೆ ಬಿಟ್ಟರೆ ಆಗಿರುವ ಪ್ರಯೋಜನವಾದರೂ ಏನು?
ಇನ್ನು ಮಂಗಳೂರಿನಲ್ಲಿ ಕೋಮು ಸೌಹಾರ್ದತೆ ಉಳಿಸಲು ಇಲ್ಲಿ ಈಗ ಇರುವ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಸಮರ್ಪಕರಾಗಿಲ್ಲ ಎನ್ನುವ ಸಂಶಯ ರಾಜ್ಯ ಸರಕಾರಕ್ಕೆ ಇದೆಯಾ ಎನ್ನುವ ಅಭಿಪ್ರಾಯ ಮೂಡುತ್ತದೆ. ಒಂದು ನಗರ ಎಂದ ಮೇಲೆ ಅಲ್ಲಿ ಕಳ್ಳತನ, ಲೈಂಗಿಕ ದೌರ್ಜನ್ಯ, ಗಲಾಟೆ ಹೀಗೆ ಬೇರೆ ಬೇರೆ ಅಪರಾಧಿಕ ಚಟುವಟಿಕೆಗಳು ನಡೆಯುತ್ತಾ ಇರುತ್ತೆ ಎನ್ನುವ ಕಾರಣಕ್ಕೆ ಒಂದೊಂದಕ್ಕೂ ಒಂದೊಂದು ವಿಂಗ್ ರಚಿಸುತ್ತಾ ಕೂತರೆ ಆಗುತ್ತಾ? ಹಿಂದೆ ಮಂಗಳೂರಿನಲ್ಲಿ ರೌಡಿಗಳ ಹಾವಳಿ ಜಾಸ್ತಿಯಾದಾಗ ಅವರನ್ನು ನಿಯಂತ್ರಿಸಲು ಏಂಟಿ ರೌಡಿ ಸ್ಕಾಡ್ ರಚಿಸಲಾಗಿತ್ತು. ಅದರಲ್ಲಿ ಜಯಂತ್ ಶೆಟ್ಟಿಯವರಂತಹ ಸಮರ್ಥ ಅಧಿಕಾರಿಗಳಿದ್ದರು. ಅದರಿಂದ ರೌಡಿಗಳ ಅಟ್ಟಹಾಸ ಕಡಿಮೆಯಾಗಿ ಬಹುತೇಕ ಅವಸಾನದ ಅಂಚಿಗೆ ಹೋಗಿತ್ತು. ಆವತ್ತು ಆ ವಿಂಗ್ ಬಹಳ ಉಪಯೋಗವಾಗಿ ಪರಿಣಮಿಸಿತು. ಅದೇ ರೀತಿಯ ಕೆಲಸ ಈ ಏಂಟಿ ಕಮ್ಯೂನಲ್ ವಿಂಗ್ ಮಾಡುತ್ತಾ ಎನ್ನುವುದು ಈಗ ಇರುವ ಪ್ರಶ್ನೆ. ಒಟ್ಟಿನಲ್ಲಿ ಹೊಸ ವಿಂಗ್ ಒಂದು ರಚನೆಯಾಗಿದೆ. ಇದರಿಂದ ಮಂಗಳೂರು ಕೋಮು ಸೂಕ್ಷ್ಮ ಎನ್ನುವ ಪದ ಅಳಿಸಿ ಹೋಗಲಿ ಹಾಗೂ ನಗರ ಸಾಕಷ್ಟು ಬೆಳೆಯಲಿ ಎನ್ನುವುದೇ ಹಾರೈಕೆ.
Leave A Reply