ಪುನೀತ್ ಕೆರೆಹಳ್ಳಿ ತಂಡಕ್ಕೆ ಒಂದು ಮೆಚ್ಚುಗೆ ಇರಲಿ!
ಒಂದು ಸರಕಾರಿ ಸ್ಥಳ ತ್ಯಾಜ್ಯದ ರಾಶಿಯಿಂದ ತುಂಬಿ ತುಳುಕುತ್ತಿರುವಾಗ ಅದನ್ನು ಸ್ವಚ್ಚ ಮಾಡಲು ಸ್ಥಳಿಯಾಡಳಿತ ಸಂಸ್ಥೆ ಮುಂದೆ ಬರುವುದಿಲ್ಲ. ಅದೇ ಆ ಸ್ಥಳವನ್ನು ಸ್ಥಳೀಯ ನಾಗರಿಕರು ಸ್ವಚ್ಚ ಮಾಡಿ ಅಲ್ಲೊಂದು ದೈವಿಕವಾದ ವಾತಾವರಣ ನಿರ್ಮಿಸಿ, ನೋಡಿದ ಕೂಡಲೇ ಖುಷಿಯಾಗುವ ಪರಿಸರವನ್ನು ಸೃಷ್ಟಿಸಿದರೆ ಆಗ ಸ್ಥಳೀಯಾಡಳಿತ ಸಂಸ್ಥೆಯವರು ಧಾವಿಸಿ ಬಂದು ಏನು ಮಾಡುತ್ತೀದ್ದಿರಿ, ನಿಮಗೆ ಇದಕ್ಕೆ ಅನುಮತಿ ನೀಡಿದವರು ಯಾರು? ಯಾರನ್ನು ಕೇಳಿ ಕ್ಲೀನ್ ಮಾಡಿದ್ರಿ? ಎಂದು ನೋಟಿಸು ಬಿಡುತ್ತಾರೆ. ಪ್ರತಿ ಸಲ ಅತ್ತಲಿಂದ ಹಾದು ಹೋಗುವಾಗ ಮೂಗು ಮುಚ್ಚಿ ಹೋಗುತ್ತಿದ್ದ ಪೊಲೀಸ್ ಅಧಿಕಾರಿಗಳು ಕೂಡ ಆ ಪ್ರದೇಶ ಕ್ಲೀನ್ ಆಗಿ ಅಲ್ಲೊಂದು ಸಣ್ಣ ನಾಗನಗುಡಿ ನಿರ್ಮಾಣವಾದರೆ ಸಾಕು, ಅದಕ್ಕೆ ಸ್ಥಳೀಯಾಡಳಿತದಿಂದ ಪರ್ಮಿಶನ್ ಸಿಕ್ಕಿದೆಯಾ ಎಂದು ಕೇಳಲು ಶುರು ಮಾಡುತ್ತಾರೆ. ಒಟ್ಟಿನಲ್ಲಿ ಸ್ವಚ್ಚವಾಗುವ ಮೊದಲು ಗಲೀಜು ಪ್ರದೇಶ ಯಾರಿಗೂ ಬೇಡಾ. ಅದೇ ಸ್ವಚ್ಚವಾಗಿ, ನೋಡಲು ಆಕರ್ಷಕವಾಗಿ ಕಂಡಕೂಡಲೇ ಎಲ್ಲರಿಗೂ ಅಲ್ಲಿ ಕಾನೂನು ನೆನಪಾಗುತ್ತದೆ. ನಿಯಮಗಳು ಜ್ಞಾಪಕಕ್ಕೆ ಬರುತ್ತದೆ. ಇಂತಹ ಒಂದು ಪರಿಸ್ಥಿತಿ ಈಗ ಬೆಂಗಳೂರಿನ ಮೆಜೆಸ್ಟಿಕ್ ಬಳಿ ಇರುವ ಬಿಬಿಎಂಪಿ ಗ್ರೌಂಡಿನ ಪಕ್ಕದ ಖಾಲಿ ಜಾಗಕ್ಕೆ ಬಂದಿದೆ. ಅಲ್ಲೊಂದು ಪುರಾತನ ನಾಗನಕಟ್ಟೆ ಇತ್ತು. ಆದರೆ ಪ್ರದೇಶ ಸಂಪೂರ್ಣವಾಗಿ ಪಾಳು ಬಿದ್ದಂತೆ ಇತ್ತು. ಯಾವ ಅಧಿಕಾರಿ ಕೂಡ ಆ ಬಗ್ಗೆ ತಲೆ ಹಾಕಿ ಮಲಗುತ್ತಿರಲಿಲ್ಲ. ಆದರೆ ಪುನೀತ್ ಕೆರೆಹಳ್ಳಿ ಹಾಗೂ ಸಂಗಡಿಗರಿಗೆ ಆ ನಾಗರಕಟ್ಟೆಯನ್ನು ಸ್ವಚ್ಚ ಮಾಡಿ ಅದಕ್ಕೆ ಪೂಜೆ ಸಲ್ಲಿಸಬೇಕು ಎನ್ನುವ ಮನಸ್ಸು ಬಂತು. ಅವರೆಲ್ಲರೂ ಸೇರಿ ಆ ಕಾರ್ಯಕ್ಕೆ ಮುಂದಾದರು. ನೋಡು ನೋಡುತ್ತಿದ್ದಂತೆ ಸುಂದರ, ನೋಡುವಾಗಲೇ ಕೈ ಮುಗಿಯಬೇಕು ಎನ್ನುವಂತೆ ತೋರುತ್ತಿದ್ದ ನಾಗರಕಟ್ಟೆ ನಿರ್ಮಾಣವಾಯಿತು. ನಾಗರಕಟ್ಟೆ ನಿರ್ಮಾಣ ಮಾಡಿ ಹಾಗೆ ಬಿಟ್ಟರೆ ಆಗುತ್ತಾ? ಅದಕ್ಕೆ ಪೂಜೆ, ಆಗಾಗ ಅಲ್ಲೊಂದು ಕಾರ್ಯಕ್ರಮ ನಡೆಯುವುದು ಬೇಡವೇ? ಪುನೀತ್ ಕೆರೆಹಳ್ಳಿ ಆ ಏರಿಯಾದ ಜನರಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಕಳುಹಿಸಿ ಪ್ರತಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ಅಲ್ಲಿ ಸೇರೋಣ ಎಂದಿದ್ದರು. ಅಷ್ಟೇ, ಪೊಲೀಸ್ ಅಧಿಕಾರಿಗಳು ಎಚ್ಚರಗೊಂಡರು. ಪುನೀತ್ ಕೆರೆಹಳ್ಳಿಗೆ ನೋಟಿಸು ನೀಡಿದರು. ಹೀಗೆ ಮಾಡಲು ನಿಮಗೆ ಅನುಮತಿ ಬಿಬಿಎಂಪಿ ನೀಡಿದೆಯಾ? ಪೂಜೆ ಮಾಡಲು ಯಾರಿಂದ ಪರ್ಮಿಶನ್ ಪಡೆದುಕೊಂಡಿದ್ದೀರಿ? ಇದು ಆಗಿರುವ ಕಥೆ.
ಪುನೀತ್ ಕೆರೆಹಳ್ಳಿ ತಂಡಕ್ಕೆ ಒಂದು ಮೆಚ್ಚುಗೆ ಇರಲಿ!
ಒಮ್ಮೆ ಯಾವುದಾದರೂ ವಿಡಿಯೋ, ಫೋಟೋದಲ್ಲಿ ನೀವು ಈಗ ರೂಪಾಂತರಗೊಂಡಿರುವ ಆ ಏರಿಯಾವನ್ನು ನೋಡಬೇಕು. ಅಲ್ಲೊಮ್ಮೆ ಕೈ ಮುಗಿಯೋಣ ಎಂದೆನಿಸುತ್ತದೆ. ಹಿಂದೆ ಹೇಗಿದ್ದ ಸ್ಥಳ ಈಗ ಹೇಗೆ ಆಗಿದೆಯಲ್ಲ ಎಂದು ಆಶ್ಚರ್ಯವಾಗುತ್ತದೆ. ಆದರೆ ಪೊಲೀಸ್ ಅಧಿಕಾರಿಗಳಿಗೆ ಅದೆಲ್ಲಾ ಬಿದ್ದು ಹೋಗಿಲ್ಲ. ಅವರಿಗೆ ಮೇಲಿನಿಂದ ಒತ್ತಡ ಇರುತ್ತದೆ. ಯಾಕೆಂದರೆ ಈಗ ರಾಜ್ಯದಲ್ಲಿ ಇರುವುದು ಕಾಂಗ್ರೆಸ್ ಸರಕಾರ. ಅಲ್ಲಿ ಜೀರ್ಣೋದ್ಧಾರಗೊಂಡಿರುವುದು ನಾಗರಕಟ್ಟೆ. ಜನರಿಗೆ ಅಲ್ಲಿ ಬಂದು ಪೂಜೆ ಮಾಡಲು ಕರೆಕೊಟ್ಟಿರುವುದು ಪ್ರಖಂಡ ಹಿಂದೂ ಕಾರ್ಯಕರ್ತ. ಪುನೀತ್ ಮೇಲೆ ಅನೇಕ ಕೇಸುಗಳಿವೆ. ಆರೋಪಗಳಿವೆ. ಆ ವ್ಯಕ್ತಿಗೆ ಅಸಂಖ್ಯಾತ ಅಭಿಮಾನಿಗಳು ಮತ್ತು ಅಷ್ಟೇ ಪ್ರಮಾಣದಲ್ಲಿ ಮುಖ ಕಂಡರಾಗದವರೂ ಇದ್ದಾರೆ. ತನ್ನ ಮುಖ್ಯ ಗುರಿ ಹಿಂದೂ ರಾಷ್ಟ್ರ ಎನ್ನುವುದು ಪುನೀತ್ ಕೆರೆಹಳ್ಳಿಯ ಮಾತು, ಕೃತಿಗಳಿಂದಲೇ ಜಗಜ್ಜಾಹೀರಾಗಿದೆ. ಇಂತವರು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಕಾಂಗ್ರೆಸ್ ಸರಕಾರ ಅದನ್ನು ಸಹಿಸುವುದುಂಟೆ. ಆದ್ದರಿಂದ ಪೊಲೀಸ್ ಅಧಿಕಾರಿಗಳು ಪುನೀತ್ ಅವರಿಗೆ ನೋಟಿಸು ನೀಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಅನುಮತಿ ಪಡೆದಿದ್ದೀರಾ? ಇದ್ದರೆ ಅನುಮತಿ ಪತ್ರದ ಪ್ರತಿ ಕೇಳಿದ್ದಾರೆ.
ಹಿಂದೂಗಳಿಗೆ ಒಂದು ಕಾನೂನು, ಬೇರೆಯವರಿಗೆ!
ಇಲ್ಲಿ ಎರಡು ವಿಷಯಗಳ ಬಗ್ಗೆ ನಾವು ನೋಡಬೇಕು. ಒಂದನೇಯದಾಗಿ ಸರಕಾರಿ ಜಾಗದಲ್ಲಿ ಯಾವುದಾದರೂ ನಿರ್ಮಾಣ ಮಾಡಿ ಕಾರ್ಯಕ್ರಮ ಹಮ್ಮಿಕೊಂಡರೆ ಅದಕ್ಕೆ ಸ್ಥಳೀಯಾಡಳಿತದ ಅನುಮತಿ ಪಡೆಯಬೇಕು. ಉದಾಹರಣೆಗೆ ಮಂಗಳೂರಿನ ನೆಹರೂ (?) ಮೈದಾನ ಅಥವಾ ಕೇಂದ್ರ ಮೈದಾನದಲ್ಲಿ ಏನಾದರೂ ಕಾರ್ಯಕ್ರಮ ಹಮ್ಮಿಕೊಳ್ಳುವುದಾದರೆ ಅದಕ್ಕೆ ಪಾಲಿಕೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಈ ಮೊದಲೇ ನಿರ್ಮಾಣವಾಗಿರುವ ಯಾವುದಾದರೂ ದೇವಾಲಯದಲ್ಲಿ ಏನಾದರೂ ಕಾರ್ಯಕ್ರಮವನ್ನು ಅಲ್ಲಿನ ಆಡಳಿತ ಮಂಡಳಿಯವರು ನಡೆಸುವುದಾದರೆ ಆಗ ಸ್ಥಳೀಯ ಠಾಣೆಗೆ ಒಂದು ಪತ್ರ ನೀಡಿ ಬಂದೋಬಸ್ತಿಗೆ ವಿನಂತಿ ಮಾಡಿದರೆ ಸಾಕು. ಅದಕ್ಕೆ ಪಾಲಿಕೆಯ ಅನುಮತಿ ಬೇಕಾಗುವುದಿಲ್ಲ. ಈಗ ಪುನೀತ್ ಕೆರೆಹಳ್ಳಿ ಮತ್ತು ತಂಡ ಜೀರ್ಣೋದ್ಧಾರ ಮಾಡಿರುವ ನಾಗರಕಟ್ಟೆಯಲ್ಲಿ ಪೂಜೆ ಮಾಡಲು ಯಾರ ಅನುಮತಿ ಬೇಕು. ಅದಕ್ಕೆ ಬಿಬಿಎಂಪಿ ಯಾಕೆ ಅನುಮತಿ ನೀಡಬೇಕು ಎನ್ನುವುದು ಪ್ರಶ್ನೆ. ಅದೇನು ತಾತ್ಕಾಲಿಕ ನಿರ್ಮಾಣವಲ್ಲ. ಬಿಬಿಎಂಪಿ ಜಾಗದಲ್ಲಿ ಒಂದು ವೇಳೆ ಗಣಪನ ಹಬ್ಬದ ಸಂದರ್ಭದಲ್ಲಿ ಪೆಂಡಾಲ ಹಾಕಿ ಗಣೇಶೋತ್ಸವ ಮಾಡುವುದಿದ್ದರೆ ಆಗ ಅನುಮತಿಯನ್ನು ಪಡೆಯಬೇಕು. ಆದರೆ ಮೊದಲೇ ಇರುವ ದೇವಾಲಯಗಳ ವಿಷಯದಲ್ಲಿ ಇದು ಅನ್ವಯವಾಗುವುದಿಲ್ಲ. ಇನ್ನು ಪುನೀತ್ ಕೆರೆಹಳ್ಳಿ ವಿಷಯದಲ್ಲಿ ಅವರಿಗೆ ಇಷ್ಟೆಲ್ಲಾ ಒಳ್ಳೆಯದ್ದನ್ನು ಮಾಡಿದ್ದಿ ಎಂದು ಬಿಬಿಎಂಪಿಯವರು ಅನುಮತಿ ಪತ್ರ ನೀಡುವ ಸಾಧ್ಯತೆ ಇಲ್ಲವೇ ಇಲ್ಲ. ಯಾಕೆಂದರೆ ಈಗ ಸರಕಾರ ಪುನೀತ್ ಅವರು ಮಾಡುವ ಕೆಲಸಕ್ಕೆ ಕೈ ತಟ್ಟಿ ಪ್ರೋತ್ಸಾಹಿಸುವ ಚಾನ್ಸ್ ಇಲ್ಲವೇ ಇಲ್ಲ.
ಇನ್ನು ಪುನೀತ್ ಕೆರೆಹಳ್ಳಿಯವರಿಗೆ ಪೊಲೀಸ್ ಇಲಾಖೆಯಿಂದ ನೋಟಿಸು ಬಂದಿರುವುದಕ್ಕೆ ವಿಧಾನ ಮಂಡಲದಲ್ಲಿಯೂ ಚರ್ಚೆ ನಡೆದಿದೆ. ಅದರೊಂದಿಗೆ ಸ್ಥಳೀಯ ನಾಗರಿಕರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ರೈಲ್ವೆ ಫ್ಲಾಟ್ ಫಾರಂ, ಫುಟ್ ಪಾತ್ ಸಹಿತ ಎಲ್ಲೆಂದರಲ್ಲಿ ಕೆಲವರು ನಮಾಜ್ ಮಾಡುತ್ತಿರುತ್ತಾರೆ. ಅದಕ್ಕೆ ಯಾರಿಂದ ಪರ್ಮಿಶನ್ ಪಡೆದುಕೊಂಡಿರುತ್ತಾರೆ. ಅದೇ ಹಿಂದೂಗಳು ಒಂದು ಪೂಜೆ ಮಾಡಲು ಬಿಬಿಎಂಪಿ ಅನುಮತಿ ಕೇಳಬೇಕಾ ಎನ್ನುವ ಆಕ್ರೋಶ ಎಲ್ಲೆಡೆ ಇದೆ. ಕಲ್ಲು ಸಕ್ಕರೆ ಚೀಪುವ ಬದಲು ಅಗೆಯಲು ಹೋದರೆ ಹಲ್ಲುಗಳಿಗೆ ಪೆಟ್ಟಾಗುವ ಸಾಧ್ಯತೆ ಜಾಸ್ತಿ!
Leave A Reply