ಕರ್ನಾಟಕದ 40000 ಹೆಣ್ಣುಮಕ್ಕಳು 3 ವರ್ಷದಲ್ಲಿ ನಾಪತ್ತೆ!
ಹೆಣ್ಣುಮಕ್ಕಳ ಕಳ್ಳ ಸಾಗಾಣಿಕ ಜಾಲ, ಐಸಿಸ್ ನಂತಹ ಉಗ್ರ ಚಟುವಟಿಕೆಗಳಿಗೆ ಬಳಕೆ, ಲವ್ ಜಿಹಾದ್ ಮೂಲಕ ಬೇರೆ ದೇಶಕ್ಕೆ ಕಿಡ್ನಾಪ್ ಸಹಿತ ವಿವಿಧ ಕಾರಣಗಳಿಂದ ಯುವತಿಯರು ನಾಪತ್ತೆಯಾಗಿರುವ ವಿಷಯವನ್ನು ನಾವು ಕೇಳಿದ್ದೇವೆ, ಮಾಧ್ಯಮಗಳ ಮೂಲಕ ಅರಿತಿದ್ದೇವೆ. ಆದರೆ ಈ ಸಂಖ್ಯೆ ಬಹಳ ದೊಡ್ಡದಾಗಿರಲಿಕ್ಕಿಲ್ಲ ಎನ್ನುವ ಸಮಾಧಾನ ಎಲ್ಲರಲ್ಲಿತ್ತು. ಆದರೆ ಕಳೆದ ವಾರ ಸಂಸತ್ತಿನಲ್ಲಿ ಈ ಬಗ್ಗೆ ಅಂಕಿ -ಅಂಶಗಳನ್ನು ಮಂಡಿಸಿರುವ ಕೇಂದ್ರ ಗೃಹ ಸಚಿವಾಲಯ 2019-21 ರವರೆಗೆ ದೇಶದಲ್ಲಿ ಅಪ್ರಾಪ್ತ ವಯಸ್ಸಿನ ಅಂದರೆ 18 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ 2,51,430 ಹಾಗೂ 18 ವರ್ಷ ಮೇಲ್ಪಟ್ಟ 10,61,638 ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದೆ.
ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ 2019 ರಲ್ಲಿ 18 ವರ್ಷಕ್ಕಿಂತ ಕೆಳಗಿನ 703 ಬಾಲಕಿಯರು ಹಾಗೂ 18 ವರ್ಷ ಮೇಲ್ಪಟ್ಟ 12247 ಮಹಿಳೆಯರು ನಾಪತ್ತೆಯಾಗಿದ್ದಾರೆ. 2020 ರಲ್ಲಿ 834 ಬಾಲಕಿಯರು ಹಾಗೂ 11950 ಮಹಿಳೆಯರು, 2021 ರಲ್ಲಿ 1237 ಬಾಲಕಿಯರು ಹಾಗೂ 12964 ಮಹಿಳೆಯರು ನಾಪತ್ತೆಯಾಗಿದ್ದಾರೆ. ಈ ಪ್ರಕಾರ ಸುಮಾರು 40000 ಹೆಣ್ಣುಮಕ್ಕಳು ಕರ್ನಾಟಕ ಒಂದೇ ರಾಜ್ಯದಿಂದ ನಾಪತ್ತೆಯಾಗಿದ್ದಾರೆ. ಇದು ಅಧಿಕೃತ ಅಂಕಿಸಂಖ್ಯೆಯಾಗಿದ್ದು, ಪ್ರಕರಣ ದಾಖಲಾಗದ ಇದಕ್ಕಿಂತ ಎಷ್ಟೋ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಕರ್ನಾಟಕದ ಗ್ರಾಮೀಣ ಪ್ರದೇಶದಿಂದಲೂ ನಾಪತ್ತೆಯಾಗಿರುವುದನ್ನು ಅಲ್ಲಗಳೆಯುವಂತಿಲ್ಲ.
ಈ ಹೆಣ್ಣುಮಕ್ಕಳು ಎಲ್ಲಿ ಹೋದರು, ಇವರು ಏನಾಗುತ್ತಾರೆ, ಯಾಕೆ ನಿಗೂಢವಾಗಿ ನಾಪತ್ತೆಯಾಗುತ್ತಾರೆ ಎನ್ನುವುದರ ಬಗ್ಗೆ ವಿಚಾರಣೆ ನಡೆದಿದೆಯಾ, ನಡೆದರೆ ಕೇಸ್ ಪತ್ತೆಯಾಗಿಲ್ಲ ಎಂದು ಬಿ ರಿಪೋರ್ಟ್ ಬರೆದು ಮುಚ್ಚಲಾಗಿದೆಯಾ ಎನ್ನುವುದನ್ನು ಕೂಡ ನೋಡಬೇಕಾಗುತ್ತದೆ. ಭಾರತದಲ್ಲಿ ಈ ಮೂರು ವರುಷಗಳಲ್ಲಿ ಮಧ್ಯಪ್ರದೇಶ ರಾಜ್ಯದಲ್ಲಿ ಅತೀ ಹೆಚ್ಚು ಹೆಣ್ಣುಮಕ್ಕಳು ನಾಪತ್ತೆಯಾಗಿರುವ ದಾಖಲೆ ನಿರ್ಮಾಣವಾಗಿದ್ದರೆ, ಮುಂದಿನ ಸ್ಥಾನ ಪಶ್ಚಿಮ ಬಂಗಾಳದ್ದು ಆಗಿದೆ. ಮಧ್ಯಪ್ರದೇಶದಲ್ಲಿ ಮೂರು ವರ್ಷಗಳಲ್ಲಿ ಸುಮಾರು 2 ಲಕ್ಷದಷ್ಟು ಯುವತಿಯರು ನಾಪತ್ತೆಯಾಗಿರುವುದು ನಿಜಕ್ಕೂ ಕಳವಳಕಾರಿ ಸಂಗತಿ.
Leave A Reply