ಅಪ್ಪ, ಅಮ್ಮನ ಸಮ್ಮುಖದಲ್ಲಿ ರಿಜಿಸ್ಟ್ರೇಶನ್ ಮದುವೆ ಆಗಲಿ!
ಗುಜರಾತ್ ಸರಕಾರ ಪಾಟೀದಾರ್ ಸಮುದಾಯದ ವಿಚಿತ್ರ ಬೇಡಿಕೆಯೊಂದನ್ನು ಈಡೇರಿಸುವ ನಿಟ್ಟಿನಲ್ಲಿ ಕ್ಯಾಬಿನೆಟ್ ತೀರ್ಮಾನವನ್ನು ಕೈಗೊಂಡಿದೆ. ಅದೇನೆಂದರೆ ಪ್ರೀತಿ, ಪ್ರೇಮದ ಮದುವೆಗಳು ರಿಜಿಸ್ಟ್ರೇಶನ್ ಆಫೀಸಿನಲ್ಲಿ ದಾಖಲಾತಿ ಹೊಂದುವ ಸಮಯದಲ್ಲಿ ವರ ಮತ್ತು ವಧುವಿನ ಪೋಷಕರು ಇರಬೇಕು. ಇಲ್ಲದೇ ಹೋದರೆ ಅಂತಹ ಮದುವೆಗಳನ್ನು ರಿಜಿಸ್ಟ್ರೇಶನ್ ಮಾಡಲು ಅಧಿಕಾರಿಗಳು ಒಪ್ಪಬಾರದು.
ಮೇಲ್ನೋಟಕ್ಕೆ ಬಹಳ ಚಿಕ್ಕ ವಿಷಯ ಅನಿಸಬಹುದು. ಯಾವುದೇ ಮದುವೆ ಕಾನೂನು ಪ್ರಕಾರ ರಿಜಿಸ್ಟ್ರೇಶನ್ ಆಗುವಾಗ ತಂದೆ, ತಾಯಿ ಇರುತ್ತಾರಲ್ಲ ಎಂದು ನೀವು ಕೇಳಬಹುದು. ಆದರೆ ಇತ್ತೀಚಿನ ದಶಕಗಳಿಂದ ವಿಶೇಷವಾಗಿ ಪ್ರೇಮ ವಿವಾಹದ ಸಂದರ್ಭದಲ್ಲಿ ಯುವಕ, ಯುವತಿಯರು ಅಪ್ಪ, ಅಮ್ಮನಿಗೆ ತಿಳಿಸದೇ ಮದುವೆಯಾಗಲು ತಯಾರಾಗಿಬಿಡುತ್ತಿದ್ದಾರೆ. ಕೇಳಿದರೆ ನಾವು ಸರಕಾರದ ಕಾನೂನಿನಂತೆ ಪ್ರಾಪ್ತ ವಯಸ್ಸನ್ನು ಹೊಂದಿದ್ದೇವೆ. ನಾವು ಅಪ್ರಾಪ್ತರಲ್ಲ, ನಮ್ಮ ಒಳ್ಳೆಯದು, ಕೆಟ್ಟದ್ದನ್ನು ನಿರ್ಧರಿಸಲು ನಾವು ಶಕ್ತರಾಗಿದ್ದೇವೆ. ನಮಗೆ ಅಂಕುಶ ಹಾಕಲು ಅಮ್ಮ, ಅಪ್ಪನಿಗೂ ಅವಕಾಶವಿಲ್ಲ ಎಂದು ಎಷ್ಟೋ ಹೆಣ್ಣುಮಕ್ಕಳು ಹದಿನೆಂಟು ತುಂಬಿದಂತೆ ನಿರ್ಧರಿಸಿಬಿಡುತ್ತಾರೆ. ಅದರಲ್ಲಿಯೂ ಅವರು ಯಾರದಾದರೂ ಪ್ರೇಮದ ಬಲೆಗೆ ಬಿದ್ದಿದ್ದಾರೆ ಎಂದರೆ “ನಾನು ಯಾರನ್ನು ಬೇಕಾದರೂ ಲವ್ ಮಾಡುತ್ತೇನೆ, ಕೇಳಲು ನೀನ್ಯಾರು?” ಎಂದು ಪೋಷಕರ ಮುಖಕ್ಕೆ ಹೊಡೆದ ಹಾಗೆ ಹೇಳಿಬಿಡುತ್ತಾರೆ. ನನ್ನನ್ನು ಹುಟ್ಟಿಸು ಎಂದು ನಿನಗೆ ಕೇಳಿದ್ನಾ ಎಂದು ಕಣ್ಣಿನಲ್ಲಿ ಒಂದು ಹನಿ ರಕ್ತವೂ ಇಲ್ಲದಂತೆ ಹೇಳುವ ಹೆಣ್ಣು ಮಕ್ಕಳು ಕೂಡ ಇದ್ದಾರೆ. ಇದೆಲ್ಲವೂ ಅವರಿಗೆ ಪ್ರೇಮದ ಪರದೆ ಎಂಬ ಭ್ರಮೆ ಹೀಗೆ ಹೇಳಿಸುತ್ತದೆ. ಕೊನೆಗೆ ಒಂದು ದಿನ “ನನ್ನ ಅಪ್ಪ, ಅಮ್ಮ ನಮ್ಮನ್ನು ಒಂದು ಮಾಡಲು ಒಪ್ಪಲಿಕ್ಕಿಲ್ಲ. ನಾವು ಓಡಿ ಹೋಗಿ ಮದುವೆ ಮಾಡೋಣ” ಎಂದು ಯುವತಿ ಧೈರ್ಯ ಕೊಡುತ್ತಲೇ ಇಬ್ಬರೂ ತಮ್ಮ ದಾರಿ ನೋಡಿಕೊಳ್ಳುತ್ತಾರೆ. ಯಾವುದಾದರೂ ಊರಿನಲ್ಲಿ ರಿಜಿಸ್ಟ್ರೇಶನ್ ಮದುವೆ ಆಗಿ ತಮ್ಮ ಪಾಡಿಗೆ ತಾವು ಇದ್ದುಬಿಡುತ್ತಾರೆ. ಆ ಹುಡುಗಿಗೆ ಮತ್ತೆ ತನ್ನ ಹೆತ್ತವರು ನೆನಪಾಗುವುದು ಹುಡುಗ ಒಂದು ವೇಳೆ ಕೈ ಕೊಟ್ಟರೆ ಮಾತ್ರ. ಆದರೆ ಅವಳ ನೆನಪಿನಲ್ಲಿ ಅವಳ ಪೋಷಕರು ಇಡೀ ಜೀವನವನ್ನು ಕೊರಗಿ ಕೊರಗುತ್ತಾ ಸಾಯಬೇಕಾಗುತ್ತದೆ.
ಅಮ್ಮ, ಅಪ್ಪನ ಕಷ್ಟ ಗೊತ್ತಾಗುವುದಿಲ್ವಾ?
ತಂದೆ ಎನಿಸಿಕೊಂಡವನು ಹೊರಗೆ ಅಳಲಾಗದೇ, ಒಳಗೆ ಬಚ್ಚಿಡಲಾರದೇ ಮೂಕವೇದನೆಯನ್ನು ಅನುಭವಿಸುವುದು ಇದೆಯಲ್ಲ, ಅಂತಹ ಕರ್ಮ ಯಾವ ಗಂಡು ಪ್ರಾಣಿಗೂ ಬರಬಾರದು. ತಾಯಿಯಾದವಳು ಒಮ್ಮೆಲ್ಲೆ ಅತ್ತು ಹೃದಯ ಖಾಲಿ ಮಾಡಿ ನಂತರ ನೆನಪು ಉಮ್ಮಳಿಸಿ ಬಂದಾಗ ಕಣ್ಣುಗಳನ್ನು ಬರಿದು ಮಾಡುವುದು ಜೀವನ ಪೂರ್ತಿ ನಡೆಯುತ್ತಲೇ ಇರುತ್ತದೆ. ಒಂಭತ್ತು ತಿಂಗಳು ಹೊತ್ತು, ಜಗತ್ತಿನಲ್ಲಿ ಅತ್ಯಂತ ಹೆಚ್ಚು ನೋವಿನ ವಿಷಯವೇನಾದರೂ ಇದೆ ಎಂದರೆ ಅದು ಹೆರಿಗೆ ಎಂದು ಹೇಳಲಾಗುತ್ತದೆ. ಅಂತಹ ನೋವು ಸಹಿಸುತ್ತಾ, ಒಂದು ಜೀವವನ್ನು ಭೂಮಿಗೆ ತರುವ ಪ್ರಕ್ರಿಯೆ ನಡೆಯುತ್ತದೆಯಲ್ಲ, ಅದು ಹೆಣ್ಣಾದವಳಿಗೆ ಅದರಲ್ಲಿಯೂ ತಾಯಿಯಾದವಳಿಗೆ ಮಾತ್ರ ಗೊತ್ತು. ನಂತರ ಆ ಮಗುವನ್ನು ಬೆಳೆಸುವ ಕಾಯಕ ಅಷ್ಟು ಸುಲಭವಲ್ಲ. ತಾವು ಉಣ್ಣದಿದ್ದರೂ ಮಕ್ಕಳಿಗೆ ರುಚಿರುಚಿಯಾದ ತಿಂಡಿ, ತಿನಿಸು ಕೊಡಿಸಿ, ಎಲ್ಲಿಂದಲಾದರೂ ಹಣ ತಂದು ಓದಿಸಿ, ಕೊನೆಗೆ ತಾನು ಹರಿದ ಬಟ್ಟೆಗೆ ಹೊಲಿಗೆ ಹಾಕಿದರೂ ಮಕ್ಕಳಿಗೆ ಹೊಸ ಬಟ್ಟೆಗಳನ್ನು ಕೊಡಿಸಿ ಬೆಳೆಸಿದ ಪೋಷಕರು ಕೊನೆಗೆ ಅವಳ ಮದುವೆಯನ್ನು ಕಣ್ತುಂಬಿಕೊಳ್ಳುವ ಭಾಗ್ಯವೂ ಅವರಿಗೆ ಸಿಗದಿದ್ದರೆ ಹೇಗೆ?
ಎಲ್ಲಾ ರಾಜ್ಯಗಳು ಜಾರಿಗೆ ತರಲಿ!
ಅವರಿಗೆ ಅಂತಹ ಭಾಗ್ಯದಿಂದ ವಂಚಿತರನ್ನಾಗಿಸಲು ಇನ್ನು ಸಾಧ್ಯವಿಲ್ಲ ಎಂದು ಗುಜರಾತ್ ಸರಕಾರ ನಿರ್ಧರಿಸಿದೆ. ಅದಕ್ಕಾಗಿ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈಗ ವಿಷಯ ಏನೆಂದರೆ ದೇಶದ ಎಲ್ಲಾ ರಾಜ್ಯಗಳು ಕೂಡ ಈ ಕಾನೂನನ್ನು ಜಾರಿಗೆ ತರಬೇಕು. ಯಾಕೆಂದರೆ ರಾಜ್ಯ ಯಾವುದಾದರೇನು, ತಂದೆ, ತಾಯಿಗಳ ಭಾವನೆ ಸೇಮ್. ಎಲ್ಲಾ ತಂದೆ, ತಾಯಿಗಳು ಕೂಡ ತಮ್ಮ ಮಕ್ಕಳನ್ನು ಮುದ್ದಿನಿಂದಲೇ ಸಾಕಿರುತ್ತಾರೆ. ಎದೆಯೆತ್ತರಕ್ಕೆ ಬೆಳೆದ ನಂತರ ಅವರು ಹೇಳದೇ, ಕೇಳದೇ ಓಡಿ ಹೋಗಿ ಮದುವೆಯಾದರೆ ಇವರ ಫಿಲಿಂಗ್ ಇದಕ್ಕೆ ಬೆಲೆ ಇಲ್ವಾ? ಹೇಗೆ ಆಸ್ತಿಯನ್ನು ತಂದೆಯೊಬ್ಬನ ನಿಧನದ ನಂತರ ಮಗಳಿಗೆ ಪಿತ್ರಾರ್ಜಿತವಾಗಿ ನೀಡುವ ಸಂದರ್ಭದಲ್ಲಿ ಆಕೆ ಉತ್ತರಾಧಿಕಾರಿ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕೋ ಹಾಗೇ ಇದು ಕೂಡ ತಂದೆ, ತಾಯಿಗೂ ಮಕ್ಕಳ ಮದುವೆ ಎಲ್ಲಿಯೇ ನಡೆಯಲಿ, ಯಾವ ರಾಜ್ಯದಲ್ಲಿ ಬೇಕಾದರೆ ನಡೆಯಲಿ, ಅಲ್ಲಿ ಅಪ್ಪ, ಅಮ್ಮನ ಹಾಜರಾತಿ ಇರಲೇಬೇಕು ಎಂದರೆ ಎಷ್ಟು ಒಳ್ಳೆಯದಲ್ವಾ? ಅವರ ಒಪ್ಪಿಗೆಯಿಂದ ಮದುವೆಯಾದರೆ ಎಷ್ಟು ಉತ್ತಮವಲ್ಲ? ಯಾಕೋ ಗುಜರಾತ್ ಸರಕಾರದ ನಿಲುವುಗಳು ಪ್ರತಿ ಬಾರಿ ಬೇರೆ ರಾಜ್ಯಗಳಿಗೆ ಮಾದರಿಯಾಗುತ್ತಾ ಇರುತ್ತದೆ!
Leave A Reply