ಶಿವಶಕ್ತಿ ಇದು ಕೇವಲ ಹೆಸರಲ್ಲ ಸಮಸ್ತ ಸೃಷ್ಟಿಯ ಸಂಕೇತ
ವಿಜ್ಞಾನಿಗಳು ತಮ್ಮ ಸಾಧನೆಯ ಹಂತದಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ನಮ್ಮ ಸಾಧನೆಗೆ ವೇದಗಳೇ ಮೂಲ ಕಾರಣ ಎಂದು ಧೈರ್ಯವಾಗಿ ಹೇಳುತ್ತಿದ್ದಾರೆ. ದೇಶದಲ್ಲಿ ಸಾಧಿಸಿದ ಸಾಧನೆಗೆ ಸಂಸ್ಕೃತದ ಹೆಸರುಗಳನ್ನು ಇರಿಸಿಕೊಳ್ಳುತ್ತಿದ್ದಾರೆ. ಮೋದಿಯವರಾಗಲಿ ಉಳಿದ ನಾಯಕರಾಗಲಿ ಈ ದೇಶದ ಮೌಲ್ಯವನ್ನಾಗಿ ಹೊರದೇಶದ ಪ್ರಧಾನಿಗಳಿಗೆ ಭಗವದ್ಗೀತೆ, ದಶದಾನ ಇತ್ಯಾದಿ ಸಾಂಪ್ರದಾಯಕ ಉಡುಗೊರೆಗಳನ್ನು ಕೊಡುತ್ತಿದ್ದಾರೆ. ಇದು ದೇಶದ ಸಂಸ್ಕೃತಿಯನ್ನು ಬಿಂಬಿಸುವ ಇತ್ತೀಚೆಗಿನ ಕೆಲವು ವಿಚಾರಗಳಷ್ಟೇ.ಇನ್ನೂ ಇಂತಹ ಅದೆಷ್ಟೋ ಹಳೆಯ ವಿಚಾರಗಳಿವೆ.
ಪಾಶ್ಚಾತ್ಯ ಸಂಸ್ಕೃತಿಗೆ ಬಲಿಯಾಗುತ್ತಿರುವ ಕಾಲದಲ್ಲಿ ಇದೆಲ್ಲ ಬದಲಾವಣೆಯನ್ನು ಕಲ್ಪಿಸಿ ಕೊಳ್ಳುವುದೇ ಸಾಧ್ಯವಿಲ್ಲವಿತ್ತು.ಆದರೆ ಈಗ ಕಣ್ಣಾರೆ ಕಾಣುತ್ತಿದ್ದೇವೆ. ಈ ವಾತಾವರಣವನ್ನು ನೋಡುವಾಗ, ಈ ವಿಚಾರವನ್ನು ಕೇಳುವಾಗ ನಮಗೆ ಒಮ್ಮೆ ಸಂಶಯ ಬರುವ ರೀತಿಯ ವಾತಾವರಣದ ನಡುವೆ ನಾವಿದ್ದೇವೆ..
ತಾಯಿ ಭಾರತಿ ತುಂಬು ಗರ್ಭಿಣಿ. ಪುನರಾವರ್ತನೆ ಹಾಗೂ ಪುನಶ್ಚೇತನ ಎನ್ನುವುದು ಈ ನೆಲದ ಗುಣ. ತ್ಯಾಗ ಈ ಗುಣದ ಪ್ರತೀಕ.ಈಗ ಕಾಲ ಮತ್ತೊಮ್ಮೆ ತನ್ನನ್ನು ಅರಳಿಸಿಕೊಂಡಿದೆ. ಚಂದ್ರನ ಅಂಗಳದಲ್ಲಿ ಕಾಲಿಟ್ಟ ಭಾರತದ ಭವ್ಯತೆ ಈಗ ಶಿವ ಶಕ್ತಿಯಾಗಿ ಕಾಣಿಸಿಕೊಂಡಿದೆ. ಇನ್ನು ಇಡೀ ಪ್ರಪಂಚ ಗುರುತಿಸುವುದು ಈ ಹೆಸರಿನಲ್ಲಿಯೇ. ಸಾಧಿಸಿದ ಸಾಧನಗಳೆಲ್ಲವನ್ನು ತಮ್ಮ ಹೆಸರಿಗೆ, ತಮ್ಮ ಪರಂಪರೆಗೆ ಅಥವಾ ಈ ದೇಶದ ಸಂಸ್ಕೃತಿಗೆ ಸಂಬಂಧವಿಲ್ಲದ ಹೆಸರಿನಿಂದ ಕರೆಯಿಸಿಕೊಳ್ಳುವ ಒಂದು ಕಾಲವಿತ್ತು. ಆದರೆ ಈ ಹತ್ತು ವರ್ಷದಲ್ಲಿ ಮೋದಿ ಈ ಎಲ್ಲಾ ಧೋರಣೆಗೆ ಬೆಂಕಿ ಇಟ್ಟಿದ್ದಾರೆ. ಈ ದೇಶ ಈ ಸಂಸ್ಕೃತಿ ಮಾತ್ರ ಶಾಶ್ವತ, ಮತ್ತೆಲ್ಲವೂ ಅಶಾಶ್ವತ ಎನ್ನುವುದು ಮೋದಿಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ಮೋದಿಯವರ ಎಲ್ಲಾ ಹೆಜ್ಜೆಯೂ ನವ ನಿರ್ಮಾಣದ ಹೆಜ್ಜೆಯಾಗುತ್ತಿದೆ. ಹಾಗೆಯೇ ಶಿವಶಕ್ತಿ ಎಂಬ ಹೆಸರು ಕೂಡ.
ನಮ್ಮ ಸೃಷ್ಟಿಯನ್ನು ನಾವು ಮೊತ್ತ ಮೊದಲು ಗುರುತಿಸಿಕೊಳ್ಳುವುದು ಶಿವ ಹಾಗೂ ಶಕ್ತಿಯ ಸಂಯೋಗದಿಂದ. ನಮ್ಮ ಎಲ್ಲಾ ತತ್ವಗಳ ಕೇಂದ್ರ ಬಿಂದು ಪ್ರಕೃತಿ ಹಾಗೂ ಪುರುಷ ತತ್ವವಾಗಿದೆ. ಮನೆಯ ಪೂಜೆಯಿಂದ ಹಿಡಿದು ರಾಮಮಂದಿರದಂತಹ ಭವ್ಯ ದೇಗುಲದ ನಿರ್ಮಾಣದ ತನಕವೂ, ಹತ್ತಿರದ ಗಿಡದ ಹುಟ್ಟಿನಿಂದ ಹಿಡಿದು ಪ್ರಪಂಚ ಸೃಷ್ಟಿಯ ತನಕವೂ ಕೂಡ ಶಿವ ಶಕ್ತಿ ಎನ್ನುವ ತತ್ವ ಕೇಂದ್ರೀತವಾಗಿಯೇ ನಡೆಯುವುದು. ಆದ್ದರಿಂದಲೇ ಶಂಕರಾಚಾರ್ಯರ ಸೌಂದರ್ಯ ಲಹರಿ ತೆರೆದುಕೊಳ್ಳುವುದು ಈ ಶಿವ ಶಕ್ತ್ಯಾಯುಕ್ತದಿಂದಲೇ. ಇದು ಸೃಷ್ಟಿಯ ಹಳೆಯ ಹೆಸರು. ಆದರೆ ಈಗ ಇದು ಹೊಸ ಸೃಷ್ಟಿಯ ಸಂಕೇತ.
ಮೋದಿ ವಿಜ್ಞಾನಿಗಳ ಕುರಿತು ಆಡಿದ ಮಾತು ಅದ್ಭುತವಾಗಿತ್ತು. ಈ ದೇಶದ ಸಂಸ್ಕೃತವನ್ನು ಸಂಸ್ಕೃತಿಯನ್ನು ಎತ್ತಿ ಹಿಡಿದು ಅದ್ಭುತವಾಗಿ ಎಂದಿನಂತೆ ಮಾತಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ಏನು ದೊಡ್ಡ ಘನಂದಾರಿ ಉಪಕಾರ ಮಾಡದಿದ್ದರೂ ಕೂಡ ಕರ್ನಾಟಕದ ರಾಜಕೀಯ ಪಕ್ಷವನ್ನು ಹಾಡಿ ಹೊಗಳಿದ್ದಾರೆ. ಎಲ್ಲಿಯೂ ಕೂಡ ರಾಜಕೀಯದ ವಾಸನೆ ಇಲ್ಲ. ಮಾತೆತ್ತಿದರೆ ನಮ್ಮ ಪಕ್ಷ, ನಮ್ಮ ಸಾಧನೆ ಎಂದು ಬೀಗುವ ನಾಯಕರ ನಡುವೆ ಮೋದಿ ಮತ್ತಷ್ಟು ವಿಶೇಷವಾಗಿ ನಿಲ್ಲುತ್ತಾರೆ. ಇಲ್ಲೆಲ್ಲಿಯೂ ತನ್ನನ್ನು ಹಾಗೂ ತನ್ನ ಪಕ್ಷವನ್ನು ಹೊಗಳಿಕೊಳ್ಳಲಿಲ್ಲ. ಕೇವಲ ವಿಜ್ಞಾನಿಗಳ ಸಾಧನೆಯನ್ನು ಭಾರತದ ಹಿರಿತನವನ್ನು ಮುಕ್ತವಾಗಿ ಹಾಡಿ ಹೊಗಳಿದ್ದಾರೆ. ಹಾಗೆಯೇ ರಾಷ್ಟ್ರದ ವಿಚಾರದಲ್ಲಿ ಎಲ್ಲಿಯೂ ಕೂಡ ಉದಾಸೀನತೆಯನ್ನು ತೋರಿಸುವುದಿಲ್ಲ ಎನ್ನುವುದಕ್ಕೆ ಅವರ ಬರುವಿಕೆಯೇ ದೊಡ್ಡ ಸಾಕ್ಷಿ.ಇವರ ಈ ವ್ಯಕ್ತಿತ್ವಕ್ಕೆ ಬೇಕಾದಷ್ಟು ಉದಾಹರಣೆಗಳುಂಟು.
ರಾಷ್ಟ್ರದ ಎಲ್ಲಾ ನಾಯಕರು ಮೋದಿಯನ್ನು ಇದಕ್ಕಾಗಿಯೆ ಹೊಗಳುವುದು. ದೇಶದ ವಿಚಾರದಲ್ಲಿ ಅಥವಾ ತತ್ವದ ವಿಚಾರದಲ್ಲಿ ಎಲ್ಲಿಯೂ ಆತ್ಮ ವಂಚನೆ ಮಾಡದೆ ನೇರ ಹಾಗೂ ದಿಟ್ಟ ವರ್ತನೆಯ ಮಹಾನಾಯಕ. ಇಸ್ರೋ ವಿಜ್ಞಾನಿಗಳ ಅಭಿನಂದನೆಯಂತೂ ಕೂಡ ಎದ್ದು ತೋರುತ್ತದೆ. ಮೋದಿಯನ್ನು ಕಂಡವರಿಗೆ ಅವರನ್ನು ಹೊಗಳದೆ ಇರಲು ಸಾಧ್ಯವೇ ಇಲ್ಲ. ವೈಯಕ್ತಿಕ ದ್ವೇಷವನ್ನು ಉದ್ದೇಶವಾಗಿಸಿಕೊಂಡು ದೂರ ಬೇಕಷ್ಟೇ ವಿನಃ ಸಾಮಾಜಿಕ ದೃಷ್ಟಿ ಇಟ್ಟುಕೊಂಡವ ಖಂಡಿತ ಮೋದಿಯನ್ನು ದೂರಲು ಸಾಧ್ಯವಿಲ್ಲ.
ನವ ನಿರ್ಮಾಣದ ಈ ಹೊತ್ತಿನಲ್ಲಿ ನಾವುಗಳು ಮತ್ತಷ್ಟು ಎಚ್ಚರವಿರಬೇಕು. ಕಾಲ ಹತ್ತಿರ ಬರುತ್ತಿದೆ. ಮೋದಿಯನ್ನು ಹೇಗಾದರೂ ಕೆಳಗಿಳಿಸಬೇಕು. ಭಾರತದ ಪ್ರಾಚೀನ ಸಂಸ್ಕೃತಿಯನ್ನು ಮಣ್ಣಲ್ಲಿ ಮಣ್ಣಾಗಿಸಬೇಕು ಎಂದು ವಿರೋಧಿಗಳ ಪಾಳಯ ಇಂಡಿಯಾದ ಹೆಸರಿನಲ್ಲಿಯೇ ಎದ್ದು ನಿಂತಿರುವುದು ಗೊತ್ತೇ ಇದೆ. ಸ್ವಲ್ಪ ಯಾಮಾರಿದರು ಈ ಹತ್ತು ವರ್ಷಗಳ ತಪಸ್ಸು ನೀರಿನಲ್ಲಿ ಹೋಮ ಮಾಡಿದ ಹಾಗೆ ಆಗುತ್ತದೆ. ನಮ್ಮ ನಡುವೆ ಕೂಡ ನಮಗೆ ಗೊತ್ತಾಗದ ಹಾಗೆ ಮೋದಿಯ ವಿರುದ್ಧದ ಪಿತೂರಿಗಳು ನಡೆಯುತ್ತಿದೆ. ಕೆಲವು ಕಡೆ “ಈ ನ್ಯಾಯ ತೀರ್ಮಾನವಾಗದೆ ಲೋಕಸಭೆ ಚುನಾವಣೆ ನಡೆಯಗೊಡಬಾರದು” ಎಂದು ಸ್ವಹಿತಾಶಕ್ತಿಯ ಹೋರಾಟಗಳಲ್ಲಿ ಕೇಳಿ ಬರುತ್ತಿದೆ. ಎಲ್ಲವನ್ನು ನುಂಗಿಕೊಂಡು ನಾವು ಮತ್ತಷ್ಟು ಜಾಗೃತರಾದರೆ ಮಾತ್ರ ಈ ಸಾಧನೆಗಳು ಸಾರ್ಥಕವಾಗುತ್ತದೆ.
ಶಿವನು ಶಕ್ತಿಯೊಂದಿಗೆ ಕೂಡಿದರೆ ಮಾತ್ರ ಪೂರ್ಣತೆಯನ್ನು ಪಡೆಯಬಲ್ಲ. ಹೊಸತೊಂದು ಸೃಷ್ಟಿಸಬೇಕಾದರೆ ಪುರುಷನಿಗೆ ಪ್ರಕೃತಿ ಬೇಕೇ ಬೇಕು. ದೇಶ ಶಿವ ಸಂಕೇತವಾದರೆ ಬೆಳವಣಿಗೆ ಶಕ್ತಿಯ ಸಂಕೇತ. ದೇಶ ಪ್ರಕೃತಿಯಾಗಿ ಶಕ್ತಿಯ ಸಂಕೇತವಾದರೆ, ಮೋದಿ ಪುರುಷನಾಗಿ ಶಿವನ ಸಂಕೇತ. ಮೋದಿ ಇಲ್ಲಿ ಶಿವ ಸಂಕೇತನಾದರೆ ನಾವು ಶಕ್ತಿಯ ಸಂಕೇತರಾದರೆ ಮಾತ್ರ ದೇಶ ಪೂರ್ಣತೆಯನ್ನು ಪಡೆಯಬಲ್ಲದು.
Leave A Reply