ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲು ಆಗುವುದಿಲ್ಲ ಎಂದು ಸಿದ್ದು ಹೇಳಿದರೆ ಏನಾಗುತ್ತದೆ. ತಮಿಳುನಾಡು ಸುಪ್ರಿಂಕೋರ್ಟಿಗೆ ಹೋಗುತ್ತದೆ. ಸುಪ್ರಿಂಕೋರ್ಟ್ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯನ್ನು ಪಾಲಿಸಿ ಎಂದು ಕರ್ನಾಟಕಕ್ಕೆ ಖಡಕ್ ಸೂಚನೆ ಕೊಡುತ್ತದೆ. ಆಗ ಅನಿವಾರ್ಯವಾಗಿ ನೀರು ಬಿಡಬೇಕಾಗುತ್ತದೆ ಎನ್ನುವುದು ಹಾಲಿ ರಾಜ್ಯ ಸರಕಾರದ ಅಳಲು. ಈಗ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶಿಸಿ ಇದನ್ನು ಪರಿಹರಿಸಬೇಕು ಎನ್ನುವುದು ರಾಜ್ಯ ಕಾಂಗ್ರೆಸ್ ಮುಖಂಡರ ವಾದ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಲು ಆಗುತ್ತದೆ. ತಮ್ಮದೇ ದೇಶದ ಎರಡು ರಾಜ್ಯಗಳ ಸಮಸ್ಯೆಯನ್ನು ಪರಿಹರಿಸಲು ಆಗಲ್ವಾ ಎನ್ನುವುದು ಕೆಲವರ ಕುಚೋದ್ಯ.
ಇಲ್ಲಿ ಕೆಲವು ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಬೇಕು. ರಾಜ್ಯಗಳ ನಡುವೆ ನೀರಿನ ಸಮಸ್ಯೆ ಉದ್ಭವಿಸುವಾಗ ಅದನ್ನು ರಾಜಕೀಯದ ಲವಲೇಶವೂ ತಾಗದೇ ಬಗೆಹರಿಸಬೇಕೆಂಬ ಉದ್ದೇಶದಿಂದ 1990 ರಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ರಚನೆ ಮಾಡಲಾಯಿತು. ಅಲ್ಲಿ ಅಧಿಕಾರಿಗಳು ಎಸಿ ರೂಮಿನಲ್ಲಿ ಕುಳಿತು ತಮಗೆ ಸಿಕ್ಕಿದ ಡಾಕ್ಯುಮೆಂಟ್ ಆಧರಿಸಿ ಸೂಚನೆಯನ್ನು ಕೊಡುತ್ತಾರೆ. ಇನ್ನು ಕರ್ನಾಟಕದಲ್ಲಿ ಮಳೆ ಕಡಿಮೆ. ಈ ಬಾರಿ ಬಿಡುವ ಅಗತ್ಯ ಇಲ್ಲ ಎನ್ನುವ ಮಾತನ್ನು ಅಧಿಕಾರಿಗಳು ಯಾವತ್ತೂ ಹೇಳುವ ಚಾನ್ಸ್ ಇಲ್ಲ. ಅಲ್ಲೇನಿದ್ದರೂ ಎಷ್ಟು ಟಿಎಂಸಿ ನೀರು ಎಷ್ಟು ದಿನ ಬಿಡಬೇಕು ಎನ್ನುವ ನಿರ್ಧಾರ ಮಾತ್ರ ಆಗುತ್ತದೆ. ವಾಸ್ತವ ಮತ್ತು ಅನಿವಾರ್ಯತೆ ವಿಷಯವೇ ಇಲ್ಲ. ಈಗ ಆಗಿರುವುದು ಅದೇ. 15 ದಿನ ಡೈಲಿ 3000 ಟಿಎಂಸಿ ನೀರನ್ನು ಬಿಟ್ಟರೆ ಕೆಆರ್ ಎಸ್ ಡ್ಯಾಂ ನಲ್ಲಿ ಏನು ಉಳಿಯುತ್ತದೆ ಎನ್ನುವ ವಿಷಯವೇ ಮುಖ್ಯವಾಗಿರುವುದು. ಆದರೆ ಅಧಿಕಾರಿಗಳ ಎದುರು ಯಾವ ದಾಖಲೆ ಇದೆಯೋ, ಯಾರಿಗೆ ಗೊತ್ತು.
ತಮಿಳುನಾಡಿನ ಯಾವ ಸಿಎಂ ಕೂಡ ಹೀಗೆನೆ!
ಇನ್ನು ತಮಿಳುನಾಡಿನಲ್ಲಿ ಇರುವುದು ಸ್ಟಾಲಿನ್ ಅವರ ಡಿಎಂಕೆ ಸರಕಾರ. ಅವರು ಎಷ್ಟು ಆಗುತ್ತೋ ಅಷ್ಟು ನೀರು ಸಿಗಲಿ ಎನ್ನುವ ಕಾರಣಕ್ಕೆ ಹೆಚ್ಚೆಚ್ಚು ಟಿಎಂಸಿ ಬೇಡಿಕೆ ಇಡುತ್ತಾರೆ. ಅವರದ್ದೇನಿದ್ದರೂ ಬೇಡುವ ಕೆಲಸ. ಎಷ್ಟು ಬೇಡಿದರೆ ಏನು? ಕೊಡುವವನು ಯೋಚಿಸಬೇಕಷ್ಟೇ. ಹಾಗಂತ ಅವರು 3000 ಟಿಎಂಸಿ ನಿತ್ಯ ಕೇಳಿದರೆ ಇರಲಿ ಪಾಪ, ಎರಡೂವರೆ ಸಾವಿರ ಟಿಎಂಸಿಯಾದರೂ ಕೊಡೋಣ ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳಲು ಸಾಧ್ಯವಿಲ್ಲ. ಹಾಗೆ ಹೇಳಲು ಕೂಡ ಆಗುವುದಿಲ್ಲ. ಆದರೆ ಅವರ ದಾಖಲೆಗಳಲ್ಲಿ ನಮ್ಮ ಡ್ಯಾಂನಲ್ಲಿ ಈಗ ಇಷ್ಟು ನೀರಿದೆ. ಇಷ್ಟು ದಿನ ಇಷ್ಟಿಷ್ಟು ಕೊಟ್ಟರೆ ಏನೂ ತೊಂದರೆ ಇಲ್ಲ ಎನ್ನುವ ಅಭಿಪ್ರಾಯ ಬಂದಿದ್ದರೆ ಮುಗಿಯಿತು. ಆದರೆ ವಿಷಯ ಇರುವುದು ಮಳೆಗಾಲ ಮುಗಿಯುತ್ತಾ ಬಂದಿದೆ. ಹಿಂಗಾರು ಮಳೆಯನ್ನು ಕರ್ನಾಟಕ ನಂಬುವಂತಿಲ್ಲ. ಹಾಗಾದರೆ ಮುಂದಿನ ಬೇಸಿಗೆ ತನಕ ಕಾವೇರಿಯನ್ನೇ ನಂಬಿದವರು ಬದುಕುವುದು ಬೇಡವೇ?
ಇಲ್ಲಿ ಯಾರೂ ರಾಜಕೀಯ ಮಾಡಲು ಆಗುವುದಿಲ್ಲ. ಹೆಚ್ಚೆಂದರೆ ಹೇಳಿಕೆಯನ್ನು ಕೊಟ್ಟು ಪರಸ್ಪರರ ಮೇಲೆ ಆರೋಪ- ಪ್ರತ್ಯಾರೋಪ ಹಾಕಬಹುದು ಅಷ್ಟೇ. ಯಾಕೆಂದರೆ ಟಿಎಂಸಿ ಅಂದರೆ ಬಿಡಬೇಕಾದ ನೀರಿನ ಪ್ರಮಾಣವನ್ನು ನಿರ್ಧರಿಸುವವರು ಅಧಿಕಾರಿಗಳು. ಅವರಿಗೆ ಇದೆಲ್ಲಾ ಬಿದ್ದೇ ಹೋಗಿರುವುದಿಲ್ಲ. ಅವರ ಎದುರು ಎರಡೂ ರಾಜ್ಯಗಳ ಕಾನೂನು ತಜ್ಞರು ವಾದ ಮಂಡಿಸುತ್ತಾರೆ. ಕೊನೆಗೆ ಅದನ್ನು ಆಲಿಸಿ ಒಂದು ನಿರ್ಧಾರಕ್ಕೆ ಪ್ರಾಧಿಕಾರ ಬರುತ್ತೆ. ಹಾಗಾದರೆ ಪ್ರಧಾನಿ ಮಧ್ಯ ಪ್ರವೇಶಿಸಿ ತಮಗೆ ಬೇಕಾದ ಸೂಚನೆಯನ್ನು ಕೊಡಬಹುದಾ? ಇಲ್ಲ, ಯಾವುದೇ ಚುನಾಯಿತ ಜನಪ್ರತಿನಿಧಿಗಳು ಇದರಲ್ಲಿ ಮಧ್ಯಪ್ರವೇಶಿಸಿ ಸೂಚನೆ ಕೊಡಲು ಆಗುವುದಿಲ್ಲ. ಪ್ರಾಧಿಕಾರದ ತೀರ್ಮಾನ ಯಾವುದಾದರೂ ಒಂದು ರಾಜ್ಯಕ್ಕೆ ಒಪ್ಪಿಗೆ ಇಲ್ಲದೇ ಹೋದರೆ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಬಹುದು. ಅಲ್ಲಿಯೂ ಸೂಕ್ತ ಆದೇಶ ಬರದೇ ಇದ್ದರೆ ಸುಪ್ರೀಂಕೋರ್ಟಿಗೆ ಹೋಗಬಹುದು. ಸಾಮಾನ್ಯವಾಗಿ ಹೀಗೆ ಸುಪ್ರೀಂಕೋರ್ಟಿನಲ್ಲಿ ಅಪೀಲು ಬಂದಾಗ ಅದು ಪ್ರಾಧಿಕಾರದ ಸೂಚನೆಯನ್ನು ಪಾಲಿಸಿ ಎಂದೇ ಹೇಳುವುದು ವಾಡಿಕೆ.
ಹಾಗಂತ ಪ್ರಾಧಿಕಾರದ ಸೂಚನೆಯನ್ನು ಪಾಲಿಸದಿದ್ದರೆ ಏನಾಗುತ್ತದೆ. ಏನೂ ಆಗುವುದಿಲ್ಲ. ಆದರೆ ಪ್ರಾಧಿಕಾರದ ಸೂಚನೆಯನ್ನು ಪಾಲಿಸಿ ಎಂದು ಸುಪ್ರೀಂಕೋರ್ಟ್ ಹೇಳಿದರೆ ಏನಾಗುತ್ತೆ. ಆಗ ಪಾಲಿಸಬೇಕು. ಯಾಕೆಂದರೆ ಪ್ರಾಧಿಕಾರ ಆದೇಶ ನೀಡಲು ಆಗುವುದಿಲ್ಲ. ಅದು ಕೇವಲ ಸೂಚನೆ ನೀಡಬಹುದು. ಸೂಚನೆಯನ್ನು ಒಪ್ಪಲೇಬೇಕಿಲ್ಲ. ಆದರೆ ಸುಪ್ರೀಂಕೋರ್ಟ್ ನೀಡುವುದು ಆದೇಶ ಅಥವಾ ತೀರ್ಪು. ಅದನ್ನು ಪಾಲಿಸಬೇಕು.
ಪಿಎಂ ಮಧ್ಯಸ್ಥಿಕೆಯಿಂದ ಲಾಭ?
ಇನ್ನು ಕಾಂಗ್ರೆಸ್ಸಿಗರ ಒತ್ತಾಯದಂತೆ ಪ್ರಧಾನಿ ಮಧ್ಯಪ್ರವೇಶಿಸಿದರು ಎಂದೇ ಇಟ್ಟುಕೊಳ್ಳೋಣ. ಅವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕುಳ್ಳಿರಿಸಿ ಮಾತನಾಡಬೇಕಾಗುತ್ತದೆ. ಅವರು ಹೇಳಿದ್ದನ್ನು ಸ್ಟಾಲಿನ್ ಒಪ್ಪಲಿಲ್ಲ ಎಂದೇ ಇಟ್ಟುಕೊಳ್ಳಿ. ಏನಾಗುತ್ತದೆ. ಸ್ಟಾಲಿನ್ ಅವರನ್ನು ಜೋರು ಮಾಡಿ ನೀರು ಬೇಡಾ ಎಂದು ಹೇಳಿ ಎಂದು ಒಪ್ಪಿಸಲು ಆಗುವುದಿಲ್ಲ. ಇನ್ನು ಸ್ಟಾಲಿನ್ ಕೂಡ ಪಿಎಂ ಹೇಳಿದ್ದನ್ನು ಒಪ್ಪಿ ತಮ್ಮ ರಾಜ್ಯಕ್ಕೆ ಹೋದರೆ ಮುಂದಿನ ಚುನಾವಣೆಯಲ್ಲಿ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾದಿತು. ಆ ಭಯ ಕೂಡ ಸ್ಟಾಲಿನ್ ಅವರಿಗೂ ಇದ್ದೇ ಇರುತ್ತದೆ. ಯಾಕೆಂದರೆ ಜಯಲಲಿತಾ ಅವರಿಂದ ಕರುಣಾನಿಧಿಯವರೆಗೂ ಈ ನೀರಿನ ವಿಷಯದಲ್ಲಿ ಯಾವತ್ತೂ ಮೊಂಡು ಹಟ ಬಿಡಲೇ ಇಲ್ಲ. ಯಾಕೆಂದರೆ ಅವರಿಗೆ ಅಲ್ಲಿನ ಮತದಾರರಿಗೂ ಮುಖ ತೋರಿಸಬೇಕಲ್ಲ. !
Leave A Reply