2022 ರಲ್ಲಿ ಪ್ರತಿ 3 ನಿಮಿಷಕ್ಕೆ ಒಬ್ಬ ಅಪಘಾತದಲ್ಲಿ ಸಾವು!
ಭಾರತದಲ್ಲಿ ಇಲ್ಲಿಯ ತನಕ ನಡೆದ ಅಪಘಾತಗಳ ಪ್ರಮಾಣವನ್ನು ವಿಶ್ಲೇಷಿಸುವಾಗ 2022 ರಲ್ಲಿ ಅತೀ ಹೆಚ್ಚು ಅಪಘಾತಗಳು ನಡೆದಿವೆ ಎನ್ನುವುದು ಅಂಕಿಅಂಶಗಳಿಂದ ಸಾಬೀತಾಗಿದೆ. 2022 ರಲ್ಲಿ ಒಂದೇ ವರ್ಷದಲ್ಲಿ 1.68 ಲಕ್ಷಕ್ಕಿಂತಲೂ ಹೆಚ್ಚು ಅಪಘಾತಗಳು ನಡೆದಿರುವುದು ದಾಖಲಾಗಿದೆ. ಈ ಅಪಘಾತಗಳಲ್ಲಿ ಮರಣ ಹೊಂದಿದವರ ಸರಾಸರಿಯನ್ನು ನೋಡಿದಾಗ ನಿತ್ಯ 462 ಜನ ಪ್ರಾಣ ತೆತ್ತಿದ್ದಾರೆ. ಇದು ಅಂದಾಜು ಮೂರು ನಿಮಿಷಗಳಿಗೆ ಒಬ್ಬರು ಮರಣ ಹೊಂದಿರುವುದಾಗಿ ಅರ್ಥ ಮಾಡಿಕೊಳ್ಳಬಹುದು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಲ್ಲಾ ರಾಜ್ಯಗಳಿಂದ ಈ ಕುರಿತು ಅಂಕಿಅಂಶಗಳನ್ನು ತರಿಸಿ ವರದಿ ಸಿದ್ಧಪಡಿಸಿಕೊಂಡಿದೆ. ಅಪಘಾತಗಳು, ಸಾವು, ನೋವುಗಳ ಸಂಖ್ಯೆ 2022 ರಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದ್ದು ಬಹಳ ಕಳವಳಕಾರಿ ವಿಷಯ. 2021 ಕ್ಕೆ ಹೋಲಿಸುವಾಗ 2022 ರಲ್ಲಿ 9% ದಷ್ಟು ಹೆಚ್ಚಿನ ಅಪಘಾತಗಳು ನಡೆದಿವೆ. ಇನ್ನು ಕೊರೊನಾ ಪೂರ್ವಕ್ಕೆ ಹೋಲಿಸಿದಾಗ 2019 ರಿಂದ 2022 ರಲ್ಲಿ ಈ ಪ್ರಮಾಣ 11.5% ಹೆಚ್ಚಾಗಿರುವುದು ಕೂಡ ಯೋಚಿಸಬೇಕಾದ ಸಂಗತಿ. ಇಲ್ಲಿಯ ತನಕ ಪ್ರತಿ ವರ್ಷ ನಡೆದ ಅಪಘಾತಗಳನ್ನು ಗಮನಿಸಿದಾಗ 2022 ರಲ್ಲಿ ಹೆಚ್ಚಾಗಿ ನಡೆದ ಅಪಘಾತಗಳು ಚಿಂತನೆಗೆ ಈಡು ಮಾಡಿವೆ. ಪ್ರತಿ ಮೂರು ನಿಮಿಷಗಳಿಗೊಮ್ಮೆ ಒಬ್ಬರು ಸಾಯುವುದೆಂದರೆ ದೇಶಕ್ಕೆ ದೊಡ್ಡ ನಷ್ಟವೂ ಹೌದು. ಈಗಾಗಲೇ ಭಾರತದಲ್ಲಿ ರಸ್ತೆಗಳು ಅಗಲೀಕರಣವಾಗಿದ್ದರೂ ಅಪಘಾತಗಳು ನಡೆಯುತ್ತಿರುವುದು ಏಕೆ ಎಂದು ಚಿಂತಿಸಬೇಕಾದ ಸಂಗತಿ.
ಇನ್ನು ಹಿಂದಿನ ವರ್ಷಗಳಿಗೆ ಹೋಲಿಸಿದಾಗ 2022 ರಲ್ಲಿ 4.43 ಲಕ್ಷ ಜನರು ಗಾಯಾಳಾಗಿದ್ದಾರೆ. ಇದು 2021 ರ 3.84 ಲಕ್ಷ ಗಾಯಾಳುಗಳ ಸಂಖ್ಯೆಗೆ ಹೋಲಿಸಿದಾಗ 15% ಜಾಸ್ತಿ ಎನ್ನುವುದನ್ನು ಕೂಡ ನಾವು ಗಮನಿಸಬೇಕು. ಒಟ್ಟಿನಲ್ಲಿ ಈ ಅಪಘಾತಗಳ ಸಂಖ್ಯೆ, ಸಾವಿನ ಪ್ರಮಾಣಗಳನ್ನು ಗಣನೀಯ ಇಳಿಸಲು ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಅದರೊಂದಿಗೆ ಇದರ ಹಿಂದಿನ ಕಾರಣಗಳ ಬಗ್ಗೆ ನಾವು ಕೂಲಂಕುಶವಾಗಿ ಚರ್ಚಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ.
Leave A Reply