ದಕ್ಷಿಣದತ್ತ ಬರುವ ಮೂಲಕ ರಾಮನ ದಿಗ್ವಿಜಯವಾಗಲಿ!
ದಕ್ಷಿಣ ಭಾರತದ ಯಾವೊಂದು ರಾಜ್ಯದಲ್ಲಿಯೂ ಈಗ ಬಿಜೆಪಿ ಇಲ್ಲ. ಬಿಜೆಪಿಯೇ ಬೇಕು ಎಂದೇನಿಲ್ಲ. ಇಲ್ಲಿಯವರಿಗೆ ಬೇರೆ ಯಾವುದೇ ಪಕ್ಷವಾದರೂ ಆದೀತು. ಆದರೆ ರಾಷ್ಟ್ರೀಯತೆಗೆ, ಈ ದೇಶದ ಸಂಸ್ಕೃತಿಗೆ ಬೆಲೆ ಕೊಡುವ ವಿಚಾರವನ್ನು ಬೇರೆ ಪಕ್ಷದಲ್ಲಿ ನಿರೀಕ್ಷಿಸುವುದು ಕಷ್ಟ. ಇಂತಹವರು ಈಗ ಬಿಜೆಪಿಯಲ್ಲೂ ಕೂಡ ಬೆರಳೆಣಿಕೆಯಲ್ಲಿದ್ದಾರೆ. ಇಂತಹ ಮನಸ್ಥಿತಿಯವರಿಗೆ ಆ ಪಕ್ಷದಲ್ಲಿ ಮಾತ್ರ ಬೆಲೆಯಿರುವುದು. ಉಳಿದ ಪಕ್ಷದಲ್ಲಿ ಇಂತಹ ಮನಸ್ಥಿತಿಯವರಿಗೆ ಬೆಲೆ ಇಲ್ಲ ಎನ್ನುವುದಕ್ಕೆ ಅಯೋಧ್ಯೆಯ ಮಂದಿರವನ್ನು ವಿರೋಧಿಸುವುದರಿಂದಲೇ ಕಂಡುಕೊಳ್ಳಬಹುದು. ಆದ್ದರಿಂದಲೆ ಬಿಜೆಪಿಯ ಅಗತ್ಯ. ಇದಕ್ಕಿಂತಲೂ ಈ ದೇಶ ಭಾಷಾವಾರು ರಾಜ್ಯಗಳಾಗಿ ವಿಂಗಡಣೆಯಾಗಿದೆ. ರಾಜ್ಯಕ್ಕೆ ಸಂಬಂಧಪಟ್ಟ ಸ್ಥಳೀಯ ಪಕ್ಷಗಳು ಬೇಕಾದಷ್ಟಿದೆ. ಒಂದು ರೀತಿಯಲ್ಲಿ ಇದು ಕೂಡ ರಾಷ್ಟ್ರೀಯತೆಗೆ ಪ್ರತಿಬಂಧಕವೇ ಆಗಿದೆ. ಇಂತಹ ಪಕ್ಷಗಳಿಂದ ಒಂದೇ ಒಂದು ರಾಜ್ಯ ಉದ್ದಾರವಾದ ಲಕ್ಷಣ ಕಾಣುವುದಿಲ್ಲ. ಎಲ್ಲರೂ ಕೂಡ ಅವರವರೇ ತಿಂದುಂಡು ಕೂತದ್ದು.
ಇದನನ್ನೆಲ್ಲಾ ತಿಳಿದುಕೊಂಡೇ ಅಣ್ಣಾಮಲೈಯಂತಹ ವಿದ್ಯಾವಂತರು ಕೂಡ ಬಿಜೆಪಿಗೆ ಸೇರ್ಪಡೆಗೊಂಡದ್ದು. ಈಗಾಗಲೇ ರಾಜ್ಯ ಬಿಜೆಪಿ, ತಮಗೆ ಇರುವ ಅವಕಾಶವನ್ನು ಜಾತಿವಾದ ಪರಂಪರೆಗೆ ಬಲಿಕೊಟ್ಟು ಕರ್ನಾಟಕವನ್ನು ಕಳೆದುಕೊಂಡಿದೆ. ಇದ್ದ ಒಂದು ರಾಜ್ಯವನ್ನು ಕಳೆದುಕೊಳ್ಳುವ ಮೂಲಕ ದಕ್ಷಿಣ ಭಾರತದಿಂದ ಬಿಜೆಪಿಯನ್ನು ಓಡಿಸಿದ ಕೀರ್ತಿ ರಾಜ್ಯ ಬಿಜೆಪಿ ನಾಯಕರಿಗೆ ಸಲ್ಲಬೇಕು. ಅಲ್ಲದೆ ಸಮರ್ಥ ನಾಯಕತ್ವದ ವಿಹೀನತೆಯು ಕೂಡ ಇಲ್ಲಿ ಎದ್ದು ಕಾಣುತ್ತಿದೆ. ಹಲ್ಲಿದ್ದವರಿಗೆ ಕಡಲೆ ಇಲ್ಲ ಕಡಲೇ ಇರುವವರಿಗೆ ಹಲ್ಲಿಲ್ಲ ಎನ್ನುವ ಪರಿಸ್ಥಿತಿ ಇಲ್ಲಿಯದ್ದು.
ಕರ್ನಾಟಕದಲ್ಲಿದ್ದು ತನ್ನ ಹುಟ್ಟೂರಿಗೆ ತೆರಳಿ ಅಲ್ಲಿ ಹೊಸ ಶಕೆಯನ್ನು ಪ್ರಾರಂಭಿಸುತ್ತಿರುವ ಅಣ್ಣಾಮಲೈ ದಕ್ಷಿಣ ಭಾರತದ ಬಿಜೆಪಿಗೆ ಹೊಸ ಆಶಾಕಿರಣವಾಗಿದ್ದಾರೆ. ಒಂದು ವೇಳೆ ಅಧಿಕಾರ ಹಾಗೂ ಹಣದ ಆಸೆಗಾಗಿ ರಾಜಕೀಯಕ್ಕೆ ಇಳಿದಿದ್ದರೆ ಅವರಿಗೆ ಕರ್ನಾಟಕವೇ ಸೂಕ್ತವಾಗಿರುತ್ತಿತ್ತು. ಆದರೆ ಅದ್ಯಾವುದನ್ನು ಅಪೇಕ್ಷೆ ಪಡದೆ ಕೇವಲ ರಾಷ್ಟ್ರೀಯ ವಿಚಾರವನ್ನು ಉದ್ದೇಶವಾಗಿಟ್ಟುಕೊಂಡು ರಾಜಕೀಯಕ್ಕಿಳಿದ ಆ ವ್ಯಕ್ತಿ ತಮಿಳುನಾಡಿನಲ್ಲಿ ಹೊಸ ಚರಿತ್ರೆಯನ್ನು ಬರೆಯಲಿದ್ದಾರೆ. ರಾಮಮಂದಿರಕ್ಕಾಗಿ ಅದೆಷ್ಟೋ ಜನರು ತಮ್ಮನ್ನು ಸಮರ್ಪಿಸಿಕೊಂಡು ಹೆಸರೇ ಇಲ್ಲದಂತಾಗಿದ್ದಾರೆ. ಅವರ ಆ ಪ್ರಯತ್ನದಲ್ಲಿ ರಾಮ ಮಂದಿರ ಏಳುತ್ತಿರುವುದಂತೂ ಸತ್ಯ. ಹಾಗೆಯೇ ಇವತ್ತು ಇವರ ಪರಿಶ್ರಮ ಮುಂದೊಂದು ದಿನ ಹೊಸ ಇತಿಹಾಸವಾಗಿ ದಕ್ಷಿಣ ಭಾರತದಲ್ಲಿ ನಿಲ್ಲಲಿದೆ.
ಅಂದು ಪಟ್ಟಾಭಿಷೇಕಗೊಳ್ಳಬೇಕಿದ್ದ ರಾಮ ಅದನ್ನು ತಿರಸ್ಕರಿಸಿ ವನವಾಸಕ್ಕೆ ದಕ್ಷಿಣ ಭಾರತದತ್ತ ಬಂದ. ಇಲ್ಲಿದ್ದ ದುಷ್ಟ ರಾಕ್ಷಸರನ್ನೆಲ್ಲ ಸಂಹರಿಸಿ ಪುನಃ ಅಲ್ಲಿಗೆ ತೆರಳಿ ಅಯೋಧ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ಇಡೀ ದೇಶವನ್ನಾಳಿದ್ದಾನೆ. ಈಗ ಪುನಃ ರಾಮ ಪಟ್ಟಾಭಿಷೇಕಗೊಳ್ಳುತ್ತಿದ್ದಾನೆ. ಖರ ದೂಷಣರನ್ನು ಕೊಲ್ಲುವಾಗ ರಾಮ ತನ್ನ ಸಾವಿರ ರೂಪಗಳನ್ನು ತೋರಿಸಿ ಸಂಹರಿಸಿದ್ದಾನೆ. ಹಾಗೆಯೇ ಅಯೋಧ್ಯೆಯಲ್ಲಿ ಈಗ ರಾಮ ಮಂದಿರವನ್ನು ತಾನು ನಿರ್ಮಿಸಿಕೊಳ್ಳುವಲ್ಲಿಯೂ ಕೂಡ ಅಲ್ಲಿರುವ ರಾಜ್ಯಗಳಲ್ಲಿ, ಅಧಿಕಾರಿ ವರ್ಗಗಳಲ್ಲಿ ನಾವು ಆ ರೂಪಗಳನ್ನು ಕಾಣಬಹುದು. ಅಡ್ವಾಣಿಯಾಗಲಿ, ಮೋದಿಯಾಗಲಿ, ಯೋಗಿಯಾಗಲಿ ಇನ್ನಿತರ ಯಾರೇ ಆಗಲಿ ರಾಮನ ಒಂದಂಶ ಸಾನಿಧ್ಯವಿಲ್ಲದಿದ್ದರೆ ಇದನ್ನು ಸಾಧಿಸಿಕೊಳ್ಳಲು ಸಾಧ್ಯವಿಲ್ಲವಿತ್ತು.
ಇನ್ನು ರಾಮದಲ್ಲಿ ನಾವು ಪ್ರಾರ್ಥಿಸಬೇಕು. ಕೇವಲ ವಿದ್ಯಾಭ್ಯಾಸದಿಂದ ಸಂಸ್ಕೃತಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದಕ್ಕೆ ನಮ್ಮ ದಕ್ಷಿಣ ಭಾರತ ಸಾಕ್ಷಿ. ಇಷ್ಟೆಲ್ಲ ವಿದ್ಯಾವಂತರಿದ್ದರೂ ಕೂಡ ಇಲ್ಲಿ ರಾಷ್ಟ್ರೀಯತೆ ಹಾಗು ಸಂಸ್ಕೃತಿ ಯಾವುದೇ ಬೆಲೆ ಇಲ್ಲದೆ ನರಳುತ್ತಿದೆ. ಆದ್ದರಿಂದ ಪಟ್ಟಾಭಿಷೇಕಗೊಂಡ ನಂತರ ದಕ್ಷಿಣ ಭಾರತದತ್ತ ದಂಡೆತ್ತಿ ಬರಬೇಕು. ತನ್ನ ರೂಪಗಳನ್ನು ಇಲ್ಲಿ ತೋರಿಸಬೇಕು. ಈಗಾಗಲೇ ಅಣ್ಣಾಮಲೈ ಅಂತಹ ಹಲವಾರು ಸಮರ್ಥರು ಬೆರಳೆಣಿಕೆಯಲ್ಲಿ ಇಲ್ಲಿದ್ದಾರೆ. ಅವರಿಗೆ ಅವಕಾಶ ಸಿಗುವ ಹಾಗೆ ಆಗಬೇಕು. ಅಷ್ಟೇ ಅಲ್ಲದೆ ಹೊಸ ಮುಖಗಳ ಸೃಷ್ಟಿಯಾಗಬೇಕು. ಇಲ್ಲಿರುವ ರಾಷ್ಟ್ರ ವಿರೋಧಿ ಮನಸ್ಥಿತಿಯವರು ಹೇಳ ಹೆಸರಿಲ್ಲದವರಾಗಬೇಕು.
ಇದನ್ನು ಕೇವಲ ರಾಮ ಮಾತ್ರ ಮಾಡಬಲ್ಲ. ಉತ್ತರದಲ್ಲಿ ಮಾಡಿ ತೋರಿಸಿ ಆಗಿದೆ. ದಕ್ಷಿಣದವರು ಕೂಡ ಇದಕ್ಕೆ ತಯಾರಾಗಬೇಕು. ಸಾಕೇತದ ಧರ್ಮ ಛತ್ರದ ಅಡಿಯಲ್ಲಿ ನಮ್ಮ ರಾಜ್ಯಗಳು ಕೂಡ ಆದಷ್ಟು ಬೇಗ ಸೇರಲಿ ಎಂದು ನಾವೆಲ್ಲ ಬೇಡಿಕೊಳ್ಳೋಣ. ಋಷಿಗಳ ಬೇಡಿಕೆಗೆ ದಕ್ಷಿಣದತ್ತ ಬಂದ ರಾಮ ಇವತ್ತು ಋಷಿಗಳಾಗಿಯಲ್ಲದಿದ್ದರೂ ಮನುಷ್ಯರಾಗಿ ಬೇಡಿದರೆ ಸಾಕು ಬರದೆ ಇರುವನೇ. ಆದಷ್ಟು ಬೇಗ ತನ್ನ ಶಕ್ತಿಯ ರೂಪಗಳನ್ನು ದಕ್ಷಿಣದತ್ತ ಬರುವ ಮೂಲಕ ರಾಮನ ದಿಗ್ವಿಜಯವಾಗಲಿ..
Leave A Reply