ನಕ್ಸಲರನ್ನು ಬೆಂಬಲಿಸಿ ಮಾತನಾಡುವ ಪರಿಸ್ಥಿತಿ ಬಂತಲ್ಲ ಇವರಿಗೆ!
ಛತ್ತೀಸಗಢದಲ್ಲಿ ಇತ್ತೀಚೆಗೆ 29 ನಕ್ಸಲರು ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್ ಕೌಂಟರಿನಲ್ಲಿ ಸಾವನ್ನಪ್ಪಿದ ಸುದ್ದಿಯನ್ನು ನೀವು ಈಗಾಗಲೇ ಓದಿರುತ್ತಿರಿ ಅಥವಾ ಕೇಳಿರುತ್ತೀರಿ. ಆ ನಕ್ಸಲರು ಸತ್ತ ಬಳಿಕ ಅವರಿಂದ ವಶಪಡಿಸಿಕೊಂಡ ಅನೇಕ ಆಯುಧಗಳು, ಗ್ರೆನೇಡ್ ಗಳು, ಕಚ್ಚಾಬಾಂಬ್ ಗಳನ್ನು ಭದ್ರತಾ ಪಡೆಗಳು ಮಾಧ್ಯಮದ ಮುಂದೆ ಇಟ್ಟು ಜನರಿಗೆ ತೋರಿಸಿದ್ದಾರೆ. ಮತದಾನದ ದಿನ ಛತ್ತೀಸಗಢದಲ್ಲಿ ದೊಡ್ಡ ವಿಧ್ವಂಸಕ ಕೃತ್ಯ ನಡೆಯುವ ಎಲ್ಲಾ ಸಾಧ್ಯತೆಯನ್ನು ಈ ಮೂಲಕ ಛತ್ತೀಸಗಢ ರಾಜ್ಯದ ಪೊಲೀಸರು ಹಾಗೂ ಗಡಿಭದ್ರತಾ ಪಡೆ, ಯೋಧರು ಒಟ್ಟು ಸೇರಿ ಮುಗಿಸಿಬಿಟ್ಟಿದ್ದಾರೆ.
ಇತ್ತೀಚಿನ ಎರಡು ವಾರಗಳಲ್ಲಿ ಸುಮಾರು 45 ನಕ್ಸಲರ ಮಾರಣ ಹೋಮ ನಡೆದಿದೆ. ಈ ಮೂಲಕ ಛತ್ತೀಸಗಢ ಮತ್ತೆ ಶಾಂತಿಯ ಹಳಿಗೆ ಬರುತ್ತಿದೆ. ಇದನ್ನು ನೋಡಿ ಛತ್ತೀಸಗಢ ಸರಕಾರದ ಬೆನ್ನು ತಟ್ಟುವುದು ಬಿಡಿ, ಕನಿಷ್ಟ ಸುಮ್ಮನಾದರೂ ಕುಳಿತುಕೊಳ್ಳಬಹುದಾಗಿದ್ದ ಕಾಂಗ್ರೆಸ್ ಮುಖಂಡರು ನಕ್ಸಲರನ್ನು ನಕಲಿ ಎನ್ ಕೌಂಟರ್ ಮೂಲಕ ಹತ್ಯೆ ಮಾಡಲಾಗಿದೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನೇಟಾ ಒಂದು ಹೆಜ್ಜೆ ಮುಂದೆ ಹೋಗಿ ನಕ್ಸಲರನ್ನು ಹುತಾತ್ಮರು ಎಂದು ಕರೆದಿದ್ದಾರೆ. ಈ ಬಗ್ಗೆ ತನಿಖೆಯಾಗಲೇಬೇಕೆಂದು ಆಗ್ರಹಿಸಿದ್ದಾರೆ. ಇದು ಕಾಂಗ್ರೆಸ್ ಯಾವ ಮಟ್ಟಕ್ಕೆ ನೈತಿಕತೆಯ ಅಧ:ಪತನಕ್ಕೆ ಇಳಿದಿದೆ ಎನ್ನುವುದನ್ನು ತೋರಿಸುತ್ತದೆ.
ನಕ್ಸಲರು ನಮ್ಮ ದೇಶದ ವೀರ ಯೋಧರನ್ನು ಮುರಾಮೋಸದಿಂದ ಕೊಂದಾಗ ಈ ಕಾಂಗ್ರೆಸ್ಸಿಗರಿಗೆ ಆ ಬಗ್ಗೆ ಏನೂ ಅನಿಸುವುದಿಲ್ಲ. ನಕ್ಸಲರು ಊರಿನಲ್ಲಿರುವ ನಾಗರಿಕರಿಗೆ ಉಪಟಳ ಕೊಟ್ಟಾಗ ಕಾಂಗ್ರೆಸ್ಸಿಗರಿಗೆ ಏನೂ ತೊಂದರೆ ಇಲ್ಲ. ನಕ್ಸಲರು ದೇಶದ ಅಭದ್ರತೆಗೆ ದಕ್ಕೆ ತಂದಾಗ ಈ ಕಾಂಗ್ರೆಸ್ಸಿಗರಿಗೆ ಅದೊಂದು ದೊಡ್ಡ ವಿಷಯ ಅಂದು ಅನಿಸುವುದಿಲ್ಲ. ಆದರೆ ಅದೇ ನಕ್ಸಲರು ಎನ್ ಕೌಂಟರಿನಲ್ಲಿ ಸತ್ತರೆ ಆಗ ಕಣ್ಣೀರು ಉಕ್ಕಿ ಹರಿಯುತ್ತದೆ. ಹುತಾತ್ಮ ಎನ್ನುವ ಶಬ್ದ ಬಾಯಿಗೆ ಬರುತ್ತದೆ. ಇಂತವರೇ ಅಂದು ಪಾಕಿಸ್ತಾನದಲ್ಲಿ ಭಾರತದಿಂದ ಸರ್ಜಿಕಲ್ ಸ್ಟ್ರೈಕ್ ನಡೆದಾಗ ದಾಖಲೆ ಕೇಳಿದ್ದು.
ಕಾಂಗ್ರೆಸ್ಸಿನ ಮಾಜಿ ಸಿಎಂ ಭೂಪೇಶ್ ಭಘೇಲ್ ಅವರಿಗೆ ಕಳೆದ ವರ್ಷ ತಮ್ಮ ಪಕ್ಷ ಸೋತಿರುವುದನ್ನು ಇನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರಿಗೆ ನಕ್ಸಲರ ಈ ಸಾವು ತಮ್ಮವರನ್ನೇ ಕಳೆದುಕೊಂಡಷ್ಟು ಬೇಸರ ಆಗಿರಲಿಕ್ಕೂ ಸಾಕು. ಹೀಗೆ ನಕ್ಸಲರ ಪರ ವಕಾಲತ್ತು ಮಾಡುವುದರಿಂದ ಕಾಂಗ್ರೆಸ್ ಇಮೇಜ್ ಇನ್ನಷ್ಟು ಹಳ್ಳ ಹಿಡಿಯಲಿರುವುದು ಸತ್ಯ!!
Leave A Reply