ಮೋದಿ ಯಾಕೆ ಪ್ರೆಸ್ ಮೀಟ್ ಮಾಡಲ್ಲ? ಇಲ್ಲಿದೆ ಉತ್ತರ!
ಪ್ರಧಾನಿಯಾಗಿ ಹತ್ತು ವರುಷ ಕಳೆದ ನಂತರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಅನೇಕ ಪ್ರಮುಖ ಮೀಡಿಯಾ ಸಂಸ್ಥೆಗಳಿಗೆ ಮುಕ್ತವಾಗಿ ಸಂದರ್ಶನ ನೀಡಿದ್ದಾರೆ. ಅದರೆ ಇಡೀ ಒಂದು ದಶಕದಲ್ಲಿ ಮೋದಿಯವರು ಒಂದೇ ಒಂದು ಸುದ್ದಿಗೋಷ್ಟಿಯನ್ನು ಕರೆಯದಿರುವುದು ಮಾತ್ರ ಆಶ್ಚರ್ಯ. ಮೋದಿಯವರು ಯಾಕೆ ಸುದ್ದಿಗೋಷ್ಟಿ ಕರೆದು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂಬ ಜಿಜ್ಞಾಸೆ ಎಲ್ಲರಲ್ಲಿಯೂ ಇತ್ತು. ಕಾಂಗ್ರೆಸ್ಸಿಗರು ಇದೇ ವಿಷಯವನ್ನು ಹಿಡಿದುಕೊಂಡು ಮೋದಿಯವರನ್ನು ಆಗಾಗ್ಗೆ ಟೀಕೆ ಮಾಡುತ್ತಾ ಮೋದಿಯವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲಾಗದೇ ಸುದ್ದಿಗೋಷ್ಟಿ ಕರೆಯಲು ಹಿಂದೇಟು ಹಾಕುತ್ತಾರೆ ಎಂದು ಹೇಳುತ್ತಾ ಬರುತ್ತಿದ್ದರು.
ಇತ್ತೀಚೆಗೆ ಆಜ್ ತಕ್ ವಾಹಿನಿಯ ಸಂಪಾದಕ/ನಿರೂಪಕರ ತಂಡಕ್ಕೆ ಮೋದಿಯವರು ವಿಶೇಷ ಸಂದರ್ಶನ ನೀಡಿದ ಸಂದರ್ಭದಲ್ಲಿ ನಿರೂಪಕ ರಾಹುಲ್ ಕನ್ವಲ್ ಈ ಪ್ರಶ್ನೆಯನ್ನು ಕೇಳಿದ್ದಾರೆ. ತಾವು ಯಾಕೆ ಸುದ್ದಿಗೋಷ್ಟಿ ಕರೆಯುವುದಿಲ್ಲ ಎನ್ನುವುದನ್ನು ಮೋದಿಯವರು ತಮ್ಮ ಅನುಭವದ ಆಧಾರದ ಮೇಲೆ ವಿವರಿಸಿದ್ದಾರೆ. ಅದರ ಸಾರಾಂಶ ಇಲ್ಲಿದೆ.
“ಹಿಂದೆ ಕೆಲವರು ಮಾಧ್ಯಮಗಳ ಮುಂದೆ ಹೋಗಿ ಪ್ರಚಾರಕ್ಕಾಗಿ ಏಕಪಕ್ಷೀಯ ಸುದ್ದಿಗಳನ್ನು ತಮಗೆ ಬೇಕಾದ ಹಾಗೆ ಹೇಳುತ್ತಿದ್ದರು. ಅದು ಸರಿಯಲ್ಲ. ನಾನು ನನ್ನ ಜನರ ಮನೆಬಾಗಿಲಿಗೆ ಹೋಗಿ ವಾಸ್ತವ ಅರಿಯುತ್ತಾ ಬಂದಿದ್ದೇನೆ. ಪ್ರಸ್ತುತ ಕಾಲಘಟ್ಟದಲ್ಲಿ ನಿಮ್ಮ ವಿಷಯಗಳನ್ನು ಜನರ ಮುಂದೆ ಪ್ರಸ್ತಾಪಿಸಲು ಅನೇಕ ಮಾಧ್ಯಮಗಳಿವೆ. ಇನ್ನು ಸಂಸತ್ತಿನಲ್ಲಿ ನನ್ನ ಹುದ್ದೆಗೆ ಜವಾಬ್ದಾರಿಯುತನಾಗಿದ್ದೇನೆ. ನಾನು ಏನಿದ್ದರೂ ಅಲ್ಲಿಂದಲೇ ಜನರಿಗೆ ಉತ್ತರಿಸುತ್ತೇನೆ. ಅದು ಶ್ರೇಷ್ಟ ಮತ್ತು ಸಮರ್ಪಕ ದಾರಿಯಾಗಿದೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಒಂದಿಷ್ಟು ಹಳ್ಳಿಗರು ನನ್ನ ಬಳಿ ಬಂದು ನಾವೀಗ ದಿನದ 24 ಗಂಟೆಯೂ ವಿದ್ಯುತ್ ಸಿಗುವಂತಹ ವ್ಯವಸ್ಥೆಯಾಗಿದೆ. ಧನ್ಯವಾದಗಳು ಎಂದರು. ಅದಕ್ಕೆ ನಾನು ಈ ವಿಷಯ ಮೀಡಿಯಾದಲ್ಲಿ ಬಂದೇ ಇಲ್ಲ ಎಂದೆ. ಅದಕ್ಕೆ ಅವರು ಇಂತಹ ವಿಷಯಗಳನ್ನು ಮೀಡಿಯಾದವರು ಎಲ್ಲಿ ಹಾಕುತ್ತಾರೆ ಎಂದರು. ಕೆಲವು ವಿಷಯಗಳು ಮೀಡಿಯಾದಲ್ಲಿ ಬರುವುದಿಲ್ಲ. ಹಾಗಂತ ನಾವು ಉತ್ತಮ ಕೆಲಸಗಳನ್ನು ಮಾಡುವುದು ನಿಲ್ಲಿಸಬಾರದು. ಆ ಹಳ್ಳಿಗಳಿಗೆ ಈಗಲೂ ವಿದ್ಯುತ್ ಇದೆ. ” ಎಂದು ಮೋದಿಯವರು ಸಂದರ್ಶನದಲ್ಲಿ ಹೇಳಿದರು.
ಒಟ್ಟಿನಲ್ಲಿ ಮುಖ್ಯವಾಹಿನಿಗಳ ಮಾಧ್ಯಮಗಳನ್ನು ದೂರ ಇಟ್ಟು ಮೋದಿಯವರು ಪ್ರಧಾನಿಯಾಗಿ ಈಗಾಗಲೇ 10 ವರ್ಷ ಕಳೆದಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಕೆಲವು ಪ್ರಮುಖ ಮಾಧ್ಯಮ ಸಂಸ್ಥೆಗಳಿಗೆ ಸಂದರ್ಶನ ನೀಡಿದ್ದಾರೆ. ಇತ್ತೀಚಿಗಷ್ಟೇ ಗುಜರಾತ್ ನ ಗಾಂಧಿ ನಗರದಲ್ಲಿ ಮತ ಚಲಾಯಿಸಿ ಹೊರಗೆ ಬಂದ ಬಳಿಕ ಮಾಧ್ಯಮಗಳೆದುರು ಒಂದಿಷ್ಟು ಮಾತನಾಡಿದ್ದರು. ಆಗ ಅಮಿತ್ ಶಾ ಕೂಡ ಅವರ ಪಕ್ಕ ನಿಂತಿದ್ದರು.
ಮೋದಿಯವರು ಪ್ರೆಸ್ ಮೀಟ್ ಮಾಡಲಿ, ಬಿಡಲಿ ಅವರು ಯಾವತ್ತೂ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಕೆಲವು ರಾಜಕಾರಣಿಗಳು ಚಲಾವಣೆಯಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಸುದ್ದಿಗೋಷ್ಟಿ ಮಾಡುತ್ತಾರೆ. ಸುದ್ದಿಗೋಷ್ಟಿ ಮಾಡದೇ ಇದ್ದರೆ ತಾವು ಎಲ್ಲಿಯಾದರೂ ಅಪ್ರಸ್ತುತರಾಗುತ್ತೇವಾ ಎನ್ನುವ ಕಾರಣಕ್ಕೆ ಕೆಲವರು ಏನಾದರೂ ವಿಷಯ ಹಿಡಿದುಕೊಂಡು ಸುದ್ದಿಗೋಷ್ಟಿ ಮಾಡುತ್ತಾರೆ. ಆದರೆ ಮೋದಿ ಹಾಗಲ್ಲ. ಸುದ್ದಿಗೋಷ್ಟಿಯಿಂದ ದೂರ ಇದ್ದುಕೊಂಡೇ ಸುದ್ದಿಯಲ್ಲಿ ಇರುತ್ತಾರೆ.
Leave A Reply