ಉದ್ಯೋಗದಿಂದ ಅಮಾನತುಗೊಂಡಿರುವ ವ್ಯಕ್ತಿಗೆ ಮುಖ್ಯಮಂತ್ರಿ ಪದಕ!
ಕಳುವು ಹಾಗೂ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಂಬಂಧಿಕರ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಆರೋಪ ಇದ್ದ ಪೊಲೀಸ್ ಹೆಡ್ ಕಾನ್ಸಸ್ಟೇಬಲ್ ಒಬ್ಬರಿಗೆ ರಾಜ್ಯದ ಕಾಂಗ್ರೆಸ್ ಸರಕಾರ ಮುಖ್ಯಮಂತ್ರಿ ಪದಕ ಘೋಷಿಸಿದ್ದು ಬಹಳ ಆಶ್ಚರ್ಯಕರ ಸಂಗತಿಯಾಗಿದೆ. ಇದರಿಂದ ಸಿಎಂ ಪದಕಕ್ಕೆ ಇರುವ ಗೌರವವೂ ಕಡಿಮೆಯಾದಂತೆ ಆಗಿದೆ.
ಮುಖ್ಯಮಂತ್ರಿ ಪದಕಕ್ಕೆ ನಿಜಕ್ಕೂ ತುಂಬಾ ಗೌರವ ಇದೆ. ಇದರಿಂದ ಪುರಸ್ಕೃತರಾಗಬೇಕು ಎನ್ನುವುದು ಪೊಲೀಸ್ ಇಲಾಖೆಗೆ ಸೇರಿದ ಪ್ರತಿಯೊಬ್ಬರ ಕನಸು. ಇದಕ್ಕಾಗಿ ಅನೇಕರು ಉತ್ತಮ ದಾರಿಯಲ್ಲಿ ಶ್ರಮಪಟ್ಟು ಸೇವೆ ಸಲ್ಲಿಸಿ ಅದಕ್ಕೆ ಅರ್ಹರಾಗಿರುತ್ತಾರೆ. ಇನ್ನು ಕೆಲವರು ಶಿಫಾರಸ್ಸು ಸಹಿತ ವಿವಿಧ ಮಾರ್ಗಗಳಿಂದ ಪ್ರಭಾವ ಬೀರಿ ಪಡೆಯುವುದು ನಡೆಯುತ್ತದೆ. ಆದರೆ ನೇರವಾಗಿ ಆರೋಪಕ್ಕೆ ಗುರಿಯಾದವರಿಗೆ, ಸಾರ್ವಜನಿಕವಾಗಿ ಕೆಟ್ಟ ಹೆಸರು ತಂದುಕೊಂಡವರಿಗೆ ಇಂತಹ ಪ್ರಶಸ್ತಿಗಳು ಸಿಗುವುದು ಕಡಿಮೆ.
ಆದರೆ 2024 ರಲ್ಲಿ ಅಮಾನತುಗೊಂಡಿದ್ದ ಪೊಲೀಸ್ ಹೆಡ್ ಕಾನ್ಸಸ್ಟೇಬಲ್ ಒಬ್ಬರಿಗೆ 2023 ರಲ್ಲಿ ಕರ್ತವ್ಯ ನಿರ್ವಹಣೆ ಆಧರಿಸಿ ಸಿಎಂ ಪದಕ ಘೋಷಣೆಯಾಗಿದೆ. ಅವರ ಹೆಸರು ಸಲೀಂ ಪಾಷಾ. ರಾಜ್ಯದ 126 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ 2023 ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡಲಾಗಿದೆ. ಆದರೆ ಇದರಲ್ಲಿ ಅಮಾನತುಗೊಂಡಿರುವ ಮೈಸೂರು ಸಿಸಿಬಿ ಘಟಕದ ಹೆಡ್ ಕಾನ್ಸಸ್ಟೇಬಲ್ ಸಲೀಂ ಪಾಷಾಗೆ ಸಿಎಂ ಪದಕ ನೀಡಿದ್ದೇ ಈಗ ವಿವಾದದ ಕೇಂದ್ರಬಿಂದು.
ಒಂದು ತಿಂಗಳ ಹಿಂದೆ ಅಮಾನತು ಆಗಿದ್ದ ಸಲೀಂ ಪಾಷಾ, ಅಪರಾಧ ಪ್ರಕರಣದಲ್ಲಿ ಆರೋಪಿಗಳ ಜೊತೆ ಸಂಪರ್ಕ, ಸಾರ್ವಜನಿಕರ ಆಸ್ತಿ ಕಳುವಿಗೆ ಪರೋಕ್ಷ ಸಹಾಯದ ಜೊತೆ ದಾಖಲೆಗಳ ಸೋರಿಕೆ ಮಾಡಿರುವ ಶಂಕೆಯ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿತ್ತು.
ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳುವು ಹಾಗೂ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಂಬಂಧಿಕರ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು ಎಂದು ಮೊಬೈಲ್ ಕಾಲ್ ಡಿಟೈಲ್ಸ್ ಸಂಗ್ರಹ ವೇಳೆ ಆರೋಪ ಸಾಬೀತಾಗಿತ್ತು. ಆರೋಪ ಸಾಬೀತಾದ ಹಿನ್ನಲೆಯಲ್ಲಿ ಕಳೆದ ತಿಂಗಳಷ್ಟೇ ಅಮಾನತುಗೊಳಿಸಲಾಗಿತ್ತು.
Leave A Reply