“ಎಮರ್ಜೆನ್ಸಿ” ಗಾಂಧಿ ಕುಟುಂಬ ನೋಡುತ್ತಾ ಎಂದು ಕೇಳಿದ್ದಕ್ಕೆ ಕಂಗನಾಳ ಉತ್ತರ?!
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ, ನಟಿ ಕಂಗನಾ ರಾಣಾವತ್ ಅವರು ತಮ್ಮ ಮೊದಲ ನಿರ್ದೇಶನದ ಹೊಸ ಚಿತ್ರ ಎಮರ್ಜೆನ್ಸಿಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಹಂತದಲ್ಲಿ ವಿವಿಧ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಚಿತ್ರದ ಪ್ರೊಮೊಶನ್ ನಡೆಸುತ್ತಿದ್ದಾರೆ. ಪತ್ರಕರ್ತರಿಗೂ ಆಗಾಗ ಮುಖಾಮುಖಿಯಾಗುತ್ತಿದ್ದಾರೆ.
ಈ ಕುರಿತು ಅವರಿಗೆ ಸುದ್ದಿಗೋಷ್ಟಿಯಲ್ಲಿ ವರದಿಗಾರರೊಬ್ಬರು ಪ್ರಶ್ನೆ ಕೇಳಿದಾಗ ರಾಣಾವತ್ ಉತ್ತರ ನೇರವಾಗಿತ್ತು. ನೀವು ಗಾಂಧಿ ಕುಟುಂಬಕ್ಕೆ ಈ ಸಿನೆಮಾ ತೋರಿಸುತ್ತೀರಾ ಎಂದು ಕೇಳಿದ್ದಕ್ಕೆ ನಾನು ಸದನದಲ್ಲಿ ಪ್ರಿಯಾಂಕಾ ಸಿಕ್ಕಿದ್ದಾಗ ಅವರಿಗೆ ನೀವು ಈ ಸಿನೆಮಾವನ್ನು ನೋಡಲೇಬೇಕು ಎಂದು ಹೇಳಿದ್ದೆ. ಅದಕ್ಕೆ ಪ್ರಿಯಾಂಕಾ ” ಓಕೆ, ಮೇ ಬಿ” ಎಂದು ಉತ್ತರ ನೀಡಿದರು ಎಂದು ಕಂಗನಾ ಹೇಳಿದ್ದಾರೆ. ಸಿನೆಮಾದಲ್ಲಿ ತಮ್ಮ ನಟನೆ ಮತ್ತು ಇಂದಿರಾ ಗಾಂಧಿಯವರ ಶೈಲಿಯ ಹೇರ್ ಸ್ಟೈಲ್ ನೋಡಿ ಪ್ರಿಯಾಂಕಾ ಅವರು ಖುಷಿಗೊಂಡಿದ್ದಾರೆ ಎಂದು ಕಂಗನಾ ಹೇಳಿದ್ದಾರೆ. ಒಂದು ವೇಳೆ ಗಾಂಧಿ ಕುಟುಂಬ ಒಂದು ಚೂರಾದರೂ ಎಮರ್ಜೆನ್ಸಿ ಬಗ್ಗೆ ವಾಸ್ತವಾಂಶ ಅರಿಯಲು ಇಷ್ಟಪಟ್ಟರೆ ಈ ಸಿನೆಮಾ ನೋಡಬಹುದು ಎಂದು ಕಂಗನಾ ಹೇಳಿದ್ದಾರೆ.
ಇನ್ನು ಇಂತಹ ಸಿನೆಮಾ ಮಾಡುವಾಗ ತುಂಬಾ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಬೇಕಾಗಿತ್ತು ಎಂದು ಹೇಳಿದ ಕಂಗನಾ ಈ ಹಿಂದೆ ಕಿಸ್ಸಾ ಕುರ್ಚಿ ಕಾ ಸಿನೆಮಾ ಮಾಡಿದ ನಿರ್ದೇಶಕರಿಗೆ ಯಾವೆಲ್ಲಾ ರೀತಿಯ ಮಾನಸಿಕ ಕಿರುಕುಳ ನೀಡಲಾಗಿತ್ತು ಎಂದರೆ ಕೊನೆಗೆ ಅದನ್ನು ತಡೆಯಲಾರದೇ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ಕಂಗನಾ ಹೇಳಿದರು. ಆದರೆ ಈಗ ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇದೆ. ಆದ್ದರಿಂದ ಇಂತಹ ಸಿನೆಮಾ ಮಾಡುವ ಧೈರ್ಯ ಬಂದಿದೆ. ಇಲ್ಲದಿದ್ದರೆ ಇಲ್ಲಿಯ ತನಕ ಯಾರಿಗೂ ನೇರವಾಗಿ ಇಂದಿರಾ ಗಾಂಧಿಯವರ ಮೇಲೆ ಸಿನೆಮಾ ಮಾಡಲು ಧೈರ್ಯವೇ ಇರಲಿಲ್ಲ. ನಾವು ಈ ಸಿನೆಮಾ ಬೇರೆ ಬೇರೆ ಕ್ಷೇತ್ರದ ತಜ್ಞರಿಗೆ ತೋರಿಸಿದ್ದೇವೆ. ಅವರು ನೋಡಿದ ನಂತರ ಸೆನ್ಸಾರ್ ಬೋರ್ಡ್ ನಲ್ಲಿಯೂ ಇದಕ್ಕೆ ಕೆಲವು ಸಲಹೆಗಳು ಬಂದವು. ನಂತರವೇ ಈ ಸಿನೆಮಾವನ್ನು ಜಗತ್ತಿಗೆ ತೋರಿಸಲು ನಾವು ಮುಂದೆ ಬಂದಿದ್ದೇವೆ ಎಂದು ಕಂಗನಾ ಹೇಳಿದರು.
ಈ ಬಗ್ಗೆ ಮಾತನಾಡಿದ ಖ್ಯಾತ ನಟ ಅನುಪಮ್ ಖೇರ್ ಮಾತನಾಡಿ ” ದೇಶದಲ್ಲಿ ಎಮರ್ಜೆನ್ಸಿ ಹೇರುವಾಗ ನಾವು ಡ್ರಾಮಾ ಸ್ಕೂಲ್ ನಲ್ಲಿದ್ದೇವು. ಈ ಸಿನೆಮಾದ ಬಗ್ಗೆ ಕಂಗನಾ ಸಾಕಷ್ಟು ತಯಾರಿ ನಡೆಸಿದ್ದಾರೆ. ಅದಕ್ಕಾಗಿ ಅವರ ಪರಿಶ್ರಮವನ್ನು ಮೆಚ್ಚಬೇಕಾಗಿದೆ” ಎಂದು ಹೇಳಿದ್ದಾರೆ.
Leave A Reply