ಸ್ಕೂಟರ್ ಓಡಿಸಿದ ಬಾಲಕನ ಪೋಷಕರಿಗೆ ಮೂಡಿಗೆರೆ ನ್ಯಾಯಾಲಯ 25 ಸಾವಿರ ರೂ ದಂಡ!

ಪ್ರಾಪ್ತ ವಯಸ್ಸಿಗೆ ಬರದ ಮಕ್ಕಳಿಗೆ ರಸ್ತೆಯಲ್ಲಿ ವಾಹನ ಚಲಾಯಿಸಲು ಪೋಷಕರು ನೀಡಬಾರದು ಎನ್ನುವ ಜಾಗೃತಿಯನ್ನು ಎಷ್ಟೇ ಮೂಡಿಸಿದರೂ ಹಲವು ಬಾರಿ ಏನಾಗುವುದಿಲ್ಲ ಎನ್ನುವ ಭಂಡ ಧೈರ್ಯದಿಂದ ಹೆತ್ತವರು ಮಕ್ಕಳ ಕೈಯಲ್ಲಿ ವಾಹನ ನೀಡುತ್ತಾರೆ. ಇಲ್ಲೇ ಹತ್ತಿರ ಸಾಮಾನು ತರಲು ಕಳಿಸಿದ್ವಿ, ಹತ್ತಿರದಲ್ಲಿ ಸಂಬಂಧಿಕರನ್ನು ಡ್ರಾಪ್ ಮಾಡಲು ತೆಗೆದುಕೊಂಡು ಹೋಗಿದ್ದ ಹೀಗೆ ಹತ್ತಾರು ಕಾರಣಗಳನ್ನು ಪೋಷಕರು ನೀಡುತ್ತಾರೆ.
ಏನಾದರೂ ಹೆಚ್ಚು ಕಡಿಮೆ ಆಗದಿದ್ರೆ ಆಗ ಯಾರೂ ಮಾತನಾಡುವುದಿಲ್ಲ. ಅದೇ ಏನಾದರೂ ಅಪಘಾತವಾಗಿ ಅಪ್ರಾಪ್ತನ ಜೀವಕ್ಕೆ ತೊಂದರೆಯಾದರೆ ಆಗ ರಸ್ತೆಯಲ್ಲಿ ವಾಹನ ಚಾಲನೆ ಮಾಡುತ್ತಿದ್ದ ಬೇರೆಯವರ ಮೇಲೆ ದೂರು ಹಾಕುತ್ತಾರೆ. ಇದರಿಂದ ಎಲ್ಲರಿಗೂ ತೊಂದರೆ ಕಟ್ಟಿಟ್ಟ ಬುತ್ತಿ. ಆದ್ದರಿಂದ ಟ್ರಾಫಿಕ್ ಪೊಲೀಸರು ಆದಷ್ಟು ಅಪ್ತಾಪ್ತ ವಯಸ್ಸಿನ ಬಾಲಕರು ಸ್ಕೂಟರ್ ಅಥವಾ ಕಾರು ಚಲಾಯಿಸಿಕೊಂಡು ಹೋಗುವಾಗ ಸೂಕ್ತ ಕ್ರಮ ಕೈಗೊಂಡರೆ ಆಗ ಇಂತಹ ಯಾವುದೇ ದುರ್ಘಟನೆಯನ್ನು ತಪ್ಪಿಸಬಹುದು.
ಆದರೆ ಅನೇಕ ಸಂದರ್ಭದಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿ ಹೋಗುವಾಗ ಪೊಲೀಸರ ಕೈಯಲ್ಲಿ ಸಿಕ್ಕಿಬೀಳುವುದಿಲ್ಲವಾದ್ದರಿಂದ ಹೆಚ್ಚೆಚ್ಚು ಅಪ್ರಾಪ್ತರು ವಾಹನ ಚಲಾಯಿಸುತ್ತಾ ಇರುತ್ತಾರೆ. ಭಾರತದಲ್ಲಿ ಹದಿನೆಂಟು ವಯಸ್ಸು ದಾಟಿದ ನಂತರ ವಾಹನ ಚಲಾವಣೆಯ ಡ್ರೈವಿಂಗ್ ಲೈಸೆನ್ಸ್ ಹೊಂದಿದವರಿಗೆ ಮಾತ್ರ ವಾಹನ ಚಲಾಯಿಸಲು ಅವಕಾಶ ಸಿಗುತ್ತದೆ.
ಒಂದು ವೇಳೆ ಅಪ್ರಾಪ್ತರು ವಾಹನ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಅಂತಹ ಮಕ್ಕಳ ಪೋಷಕರಿಗೆ 25000 ರೂಪಾಯಿ ದಂಡ ವಿಧಿಸಬಹುದಾಗಿದೆ. ಇನ್ನು ನ್ಯಾಯಾಲಯ ಮೂರು ವರ್ಷಗಳ ತನಕ ಕಾರಾಗೃಹ ಶಿಕ್ಷೆಯನ್ನು ಕೂಡ ವಿಧಿಸಬಹುದಾಗಿದೆ. ಅದರೊಂದಿಗೆ ಅಂತಹ ವಾಹನಗಳ ನೊಂದಾವಣೆ ಕೂಡ ರದ್ದಾಗುತ್ತದೆ. ಅದರೊಂದಿಗೆ ಅಂತಹ ಬಾಲಕ ಅಥವಾ ಬಾಲಕಿ 25 ವರ್ಷ ವಯಸ್ಸಿನ ತನಕ ಡ್ರೈವಿಂಗ್ ಲೈಸೆನ್ಸ್ ಪಡೆಯುವುದರಿಂದ ವಂಚಿತರಾಗಬೇಕಾಗುತ್ತದೆ.
ಮೂಡಿಗೆರೆ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಇಂತಹ ಒಂದು ಪ್ರಕರಣದಲ್ಲಿ ಪೋಷಕರಿಗೆ 25000 ರೂಪಾಯಿ ದಂಡ ವಿಧಿಸಿ ಹೀಗೆ ಮಕ್ಕಳ ಕೈಗೆ ವಾಹನ ನೀಡುವ ಪೋಷಕರಿಗೆ ಎಚ್ಚರಿಕೆಯ ಗಂಟ ರವಾನಿಸಿದೆ.
ಮೂಡಿಗೆರೆ ಪಟ್ಟಣದ ಬಾಪು ನಗರದಲ್ಲಿ ಏಪ್ರಿಲ್ 4 ರಂದು ಬಾಲಕ ಸ್ಕೂಟರ್ ಚಾಲನೆ ಮಾಡುತ್ತಿದ್ದಾಗ ಪೊಲೀಸರು ತಡೆದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದರು. ಸ್ಕೂಟರ್ ಚಾಲನೆ ಮಾಡಲು ಅವಕಾಶ ನೀಡಿದ ಬಾಲಕನ ತಂದೆ ಮೊಹಮ್ಮದ್ ಸಿರಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ದಂಡ ವಿಧಿಸಿ ಆದೇಶಿಸಿದೆ.
Leave A Reply