ಮಂಗಳೂರು, ಭಟ್ಕಳದಲ್ಲಿದ್ದಾರೆ ಪಾಕಿಗಳು.. ಆದರೆ ಅವರನ್ನು ಕಳುಹಿಸಲು ಸಾಧ್ಯವಿಲ್ಲ!

ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರಗಾಮಿಗಳ ಕೃತ್ಯಕ್ಕೆ ಪ್ರತಿಕಾರವಾಗಿ ಭಾರತ ಸರಕಾರವು ಪಾಕ್ ಪ್ರಜೆಗಳ ವೀಸಾ ರದ್ದುಗೊಳಿಸುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಪಾಕಿಸ್ತಾನದ ಪ್ರಜೆಗಳನ್ನು ಪೊಲೀಸ್ ಇಲಾಖೆ ಗುರುತಿಸಿದೆ.
ಈ ಮೂವರು ಮಹಿಳೆಯರಾಗಿದ್ದು, ಮಂಗಳೂರು ನಗರದ ವಿವಿಧೆಡೆ ವಾಸವಾಗಿದ್ದಾರೆ. 13 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದ ಯುವಕರನ್ನು ವಿವಾಹವಾಗಿ ಇಲ್ಲೇ ಪತಿಯ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಇವರೆಲ್ಲರೂ ದೀರ್ಘಾವಧಿಯ ವೀಸಾ ಯೋಜನೆಯಡಿ ವಾಸವಾಗಿದ್ದಾರೆ. ಕೇಂದ್ರ ಸರಕಾರದ ಸುತ್ತೋಲೆಯ ಪ್ರಕಾರ ದೀರ್ಘಾವಧಿಯ ವೀಸಾ ಹೊಂದಿರುವವರು ತಮ್ಮ ದೇಶಕ್ಕೆ ಹಿಂತಿರುಗುವುದರಿಂದ ವಿನಾಯ್ತಿ ಪಡೆದಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ವಿದೇಶಾಂಗ ಇಲಾಖೆಯ ಸುತ್ತೋಲೆಯಂತೆ ಯಾವ ಪಾಕಿಸ್ತಾನಿಯ ಬಳಿ ಭಾರತದ ದೀರ್ಘಾವಧಿಯ ವೀಸಾ ಇರುತ್ತದೆಯೋ ಅದು ಸಿಂಧುವಾಗಿರುತ್ತದೆ. ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿಯವರು ಸುದ್ದಿಗೋಷ್ಟಿ ನಡೆಸಿ ಪಾಕಿಸ್ತಾನಿಗಳು ಭಾರತದಲ್ಲಿದ್ದರೆ ಅವರ ವೀಸಾ ರದ್ದುಗೊಳ್ಳುವುದರಿಂದ ತಕ್ಷಣ ಪಾಕಿಸ್ತಾನಕ್ಕೆ ಹಿಂತಿರುಗಬೇಕು ಎಂದು ಸೂಚಿಸಿದ್ದರು. ಅದರ ಬೆನ್ನಲ್ಲೇ ದೀರ್ಘಾವಧಿಯ ವೀಸಾ ಹೊಂದಿರುವವರಿಗೂ ಗೊಂದಲ ಎರ್ಪಟ್ಟಿತ್ತು. ಆದರೆ ಈಗ ಸ್ಪಷ್ಟನೆ ಸಿಕ್ಕಿದ್ದು, ಪ್ರವಾಸಿ ವೀಸಾದಲ್ಲಿರುವವರು ಮಾತ್ರ 48 ಗಂಟೆಯೊಳಗೆ ಹಾಗೂ ವೈದ್ಯಕೀಯ ಚಿಕಿತ್ಸೆಗೆ ಒಳಪಟ್ಟಿರುವವರು 29 ಎಪ್ರಿಲ್ ಒಳಗೆ ಹಿಂತಿರುಗಬೇಕು ಎಂದು ತಿಳಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಪಾಕಿಸ್ತಾನದ ಪ್ರಜೆಗಳು ನೆಲೆಸಿದ್ದಾರೆ. ಭಟ್ಕಳದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನವಾಯತ್ ಮುಸ್ಲಿಮರು ಇರುವುದರಿಂದ ಅವರಲ್ಲಿ ಅನೇಕರು ಪಾಕಿಸ್ತಾನದ ಯುವತಿಯರು ಮದುವೆಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಪಾಕಿಸ್ತಾನಿ ಪ್ರಜೆಗಳು ಇದ್ದರೆ ಅದರಲ್ಲಿ 14 ಜನ ಭಟ್ಕಳದಲ್ಲಿ ಮತ್ತು ಒಬ್ಬರು ಕಾರವಾರದಲ್ಲಿದ್ದಾರೆ. ಭಟ್ಕಳದಲ್ಲಿರುವ ಪಾಕಿಸ್ತಾನಿಗಳ ಪೈಕಿ 14 ಮಹಿಳೆಯರಾಗಿದ್ದಾರೆ. ಈ ಎಲ್ಲಾ ಹೆಂಗಸರು ಭಟ್ಕಳದಲ್ಲಿರುವ ಮುಸ್ಲಿಂ ಸಂಬಂಧಿಗಳನ್ನು ಮದುವೆಯಾಗಿ ಇಲ್ಲಿಯೇ ನೆಲೆಸಿದ್ದಾರೆ. ಈ ವೀಸಾಗಳು ಪ್ರತಿ ಎರಡು ವರ್ಷಗಳಿಗೊಮ್ಮೆ ರಿನಿವಲ್ ಆಗುತ್ತಾ ಇರುತ್ತವೆ. ಇವರೆಲ್ಲರೂ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಭಾರತೀಯರನ್ನು ಮದುವೆಯಾಗಿ ಇಲ್ಲಿಯೇ ನೆಲೆಸಿದರೆ ಅಂತವರಿಗೆ ದೀರ್ಘಾವಧಿಯ ವೀಸಾ ನೀಡುವ ಪದ್ಧತಿ ಜಾರಿಯಲ್ಲಿದೆ. ಕರ್ನಾಟಕದಲ್ಲಿ ಅಂದಾಜು 88 ಪಾಕಿಸ್ತಾನಿಗಳು ಇದ್ದರೆ 84 ಜನ ದೀರ್ಘಾವಧಿ ವೀಸಾ ಹೊಂದಿದ್ದಾರೆ.
Leave A Reply