ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!

ಮಂಗಳೂರು ನಗರದ ಮಧ್ಯಭಾಗದಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಿರುವ ಜಾಮರ್ ನಿಂದ ಸಮಸ್ಯೆಗಳು ಆರಂಭವಾಗಿ ತಿಂಗಳುಗಳೇ ಕಳೆದು ಹೋಗಿದೆ. ಕೈದಿಗಳು ಮೊಬೈಲ್ ಬಳಸಿ ಫೋನಿನಲ್ಲಿ ಹೊರಗಿನ ವ್ಯಕ್ತಿಗಳೊಂದಿಗೆ ಸಂವಹನ ನಡೆಸಬಾರದು ಎನ್ನುವ ಕಾರಣಕ್ಕೆ ಜಾಮರ್ ಅಳವಡಿಸಿರುವುದು ಹೌದಾದರೂ ಸಮಸ್ಯೆ ಜೈಲಿನ ಸುತ್ತಮುತ್ತಲೂ ಇರುವ ವಸತಿ ಸಮುಚ್ಚಯಗಳಲ್ಲಿ, ವಾಣಿಜ್ಯ ಕಟ್ಟಡಗಳಲ್ಲಿರುವ ನಾಗರಿಕರಿಗೆ ಬಿಸಿ ತಟ್ಟಿ ಅವರು ಪಡುತ್ತಿರುವ ಪಾಡು ಕಡಿಮೆ ಏನಲ್ಲ. ಈಗ ಈ ಜಾಮರ್ ಕಾಟ ಜೈಲಿನ ಸನಿಹದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೂ ತಾಗಿದೆ.
ಭಾನುವಾರ ನೀಟ್ ಪರೀಕ್ಷೆ ನಡೆದಿದ್ದ ಕೆನರಾ ಕಾಲೇಜು ಮತ್ತು ಬೆಸೆಂಟ್ ಕಾಲೇಜಿನ ಪರೀಕ್ಷಾರ್ಥಿಗಳಿಗೆ ಈ ಜಾಮರ್ ನಿಂದ ಸಾಕಷ್ಟು ಕಿರಿಕಿರಿ ಆಗಿದೆ. ಜಾಮರ್ ಪಕ್ಕದ ಜೈಲಿನಲ್ಲಿ ಕಾರ್ಯಾಚರಿಸುವಾಗ ಅದರ ಸನಿಹದಲ್ಲಿಯೇ ಇರುವ ಪರೀಕ್ಷಾಕೇಂದ್ರಗಳಲ್ಲಿ ಬಯೋಮೆಟ್ರಿಕ್ ಕಾರ್ಯ ನಿರ್ವಹಿಸುವುದಕ್ಕೆ ಅಡಚಣೆ ಉಂಟಾಗಿತ್ತು. ಹೀಗಾಗಿ ವಿದ್ಯಾರ್ಥಿಗಳು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ಬಯೋಮೆಟ್ರಿಕ್ ಗಾಗಿ ಕಾದು ನಿಂತ ಬಳಿಕ ಪರೀಕ್ಷಾ ಕೇಂದ್ರ ಪ್ರವೇಶಿಸಬೇಕಾಯಿತು. ಈ ಪರೀಕ್ಷೆ ವಿದ್ಯಾರ್ಥಿಯ ಜೀವನದಲ್ಲಿ ಬಹಳ ಪ್ರಮುಖವಾಗಿರುವ ಕಾಲಘಟ್ಟ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಯ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಇದು ಪರಿಣಾಮ ಬಿದ್ದರೆ ಅದರಿಂದ ವಿದ್ಯಾರ್ಥಿ ಸಮುದಾಯಕ್ಕೂ ನಷ್ಟ.
ಈಗಾಗಲೇ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಮಂಗಳೂರು ನಗರ ದಕ್ಷಿಣ ಭಾರತೀಯ ಜನತಾ ಪಾರ್ಟಿಯ ಮುಖಂಡರು, ಕಾರ್ಯಕರ್ತರು ಸಮಾನ ಮನಸ್ಕ ನಾಗರಿಕರೊಂದಿಗೆ ಜಾಮರ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅಲ್ಲಿನ ವ್ಯಾಪಾರಿ ವರ್ಗದವರು ತಮ್ಮ ಅಸಹಾಯಕತೆಯನ್ನು ಈಗಾಗಲೇ ತೋರಿಸಿದ್ದಾರೆ. ಗೃಹಸಚಿವರಿಗೆ, ಉಸ್ತುವಾರಿ ಸಚಿವರಿಗೆ ಮನವಿಪತ್ರ ನೀಡಲಾಗಿದೆ. ಏನೇ ಆದರೂ ಜಾಮರ್ ಮಾತ್ರ ಇನ್ನು ಸಮಸ್ಯೆಗಳನ್ನು ತಂದೊಡ್ಡುತ್ತಿದೆ.
ಜೈಲಿನ ಕೈದಿಗಳಿಗೆ ಫೋನ್ ಸಿಗುವುದರಿಂದ ಜಾಮರ್ ಅಳವಡಿಸಬೇಕಾಗಿದೆ. ಅದೇ ಅವರಿಗೆ ಫೋನ್ ಸಿಗದಂತೆ ಮಾಡಿದರೆ ಜೈಮರ್ ಅಗತ್ಯವಿಲ್ಲ. ಅದರೊಂದಿಗೆ ಸ್ಥಳೀಯ ನಾಗರಿಕರಿಗೂ ತೊಂದರೆ ಇಲ್ಲದೇ ತಮ್ಮ ವ್ಯಾಪಾರ, ವ್ಯವಹಾರ ನಡೆಸಬಹುದು. ಜೈಲಿನ ಸಮೀಪದಲ್ಲಿ ಖ್ಯಾತ ವೈದ್ಯರು, ಇಂಜಿನಿಯರ್ಸ್, ವಕೀಲರು ವಸತಿ, ಕಚೇರಿ ಹೊಂದಿದ್ದು ಅವರಿಗೂ ಇದರಿಂದ ಸಾಕಷ್ಟು ತೊಂದರೆ ಆಗುತ್ತಿದೆ.
ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ದಕ್ಷಿಣ ಕನ್ನಡ ಜಿಲ್ಲೆಯ 21 ಕೇಂದ್ರಗಳಲ್ಲಿ ಭಾನುವಾರ ನಡೆಯಿತು. 9,065 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡು ಈ ಪರೀಕ್ಷೆಯನ್ನು ಬರೆದಿದ್ದಾರೆ.
Leave A Reply