ಪುರಭವನ ಖಾಸಗಿ ಮದುವೆ ಹಾಲ್ ನಂತೆ ಅಲ್ಲ!
ಮಂಗಳೂರಿನಲ್ಲಿ ಹವಾ ನಿಯಂತ್ರಿತ ಪುರಭವನ ಇದೆ. ಅದರಲ್ಲಿ ಮದುವೆಯಿಂದ ಹಿಡಿದು, ಯಕ್ಷಗಾನ, ನಾಟಕ, ಸಂಘ ಸಂಸ್ಥೆಗಳ ಕಾರ್ಯಕ್ರಮ ಎಲ್ಲವೂ ನಡೆಯುತ್ತದೆ. ಎಸಿ ಬೇಕಾದರೆ ಇಷ್ಟು ರೇಟ್, ಎಸಿ ಬೇಡವಾದರೆ ಇಷ್ಟು ರೇಟ್ ಇರುತ್ತದೆ. ಮದುವೆ ಸಮಾರಂಭಕ್ಕೆ ಎಸಿ ತೆಗೆದುಕೊಳ್ಳಲೇಬೇಕು ಎನ್ನುವ ಒತ್ತಡ ಮಂಗಳೂರು ಮಹಾನಗರ ಪಾಲಿಕೆಯವರು ಹಾಕುತ್ತಾರೆ ಎಂದು ಮದುವೆ ಪಾರ್ಟಿಯವರು ಹೇಳುತ್ತಾರೆ. ಅದು ಬೇರೆ ವಿಷಯ. ನಾನೀಗ ಮಾತನಾಡಲು ಹೊರಟಿರುವುದು ಆ ಸಂಗತಿ ಇಲ್ಲ.
ನೀವು ಪುರಭವನವನ್ನು ಬಾಡಿಗೆಗೆ ತೆಗೆದುಕೊಳ್ಳಬೇಕೆಂದು ಬುಕ್ ಮಾಡುತ್ತೀರಿ. ಆಗ ಬಾಡಿಗೆಯನ್ನು ಕಟ್ಟಬೇಕಾಗುತ್ತದೆ. ಅದರೊಂದಿಗೆ ಸೆಕ್ಯೂರಿಟಿ ಎಂದು ಒಂದಿಷ್ಟು ಹಣವನ್ನು ಎಕ್ಸಟ್ರಾ ತೆಗೆದುಕೊಳ್ಳಲಾಗುತ್ತದೆ. ಅದು ಯಾಕೆಂದರೆ ನಿಮ್ಮ ಕಾರ್ಯಕ್ರಮ ಮುಗಿದ ನಂತರ ಪುರಭವನದ ಮ್ಯಾನೇಜರ್ ಸಭಾಂಗಣವನ್ನು ಪರಿಶೀಲಿಸಿ ನೀವು ಕಾರ್ಯಕ್ರಮ ನಡೆಸುವಾಗ ಪುರಭವನದ ಯಾವುದಾದರೂ ವಸ್ತುವಿಗೆ ಹಾನಿಯಾಗಿದಲ್ಲಿ ಆ ಮೊತ್ತವನ್ನು ಸೆಕ್ಯೂರಿಟಿ ಅಮೌಂಟಿನಿಂದ ಕಳೆಯಲು ಮಾಡಿರುವ ಕ್ರಮ. ಅದಕ್ಕಾಗಿ ಹೆಚ್ಚುವರಿ ಹಣವನ್ನು ತೆಗೆದುಕೊಳ್ಳಲಾಗುತ್ತದೆ. ಇದು ಇಲ್ಲಿ ಎಂದಲ್ಲ, ಎಲ್ಲಾ ಹಾಲ್ ಗಳಲ್ಲಿಯೂ ಇದೇ ರೀತಿಯ ಪ್ರಕ್ರಿಯೆ ಇರುತ್ತದೆ.
ಪುರಭವನ ಸರಕಾರದ ಅಧೀನದಲ್ಲಿ ಬರುವುದರಿಂದ ಇಲ್ಲಿ ಎಲ್ಲಾ ಸರಕಾರಿ ವ್ಯವಸ್ಥೆಯಂತೆ ಕೆಲಸ ಕಾರ್ಯಗಳು ಆಮೆಗತಿಯಲ್ಲಿಯೇ ನಡೆಯುತ್ತದೆ. ಬೇರೆ ಖಾಸಗಿ ಹಾಲ್ ಗಳಾದರೆ ನೀವು ಕೊಟ್ಟ ಸೆಕ್ಯೂರಿಟಿ ಮೊತ್ತ ನಿಮಗೆ ಕಾರ್ಯಕ್ರಮ ಮುಗಿದ ಮರುದಿನವೇ ಸಿಗಬಹುದು. ಆದರೆ ಪುರಭವನದಲ್ಲಿ ಹೇಗೆಂದರೆ ನಿಮ್ಮ ಕಾರ್ಯಕ್ರಮ ಮುಗಿದ ನಂತರ ಅದನ್ನು ಪರಿಶೀಲಿಸಿದ ವ್ಯವಸ್ಥಾಪಕರು ಒಂದು ವರದಿ ತಯಾರಿಸುತ್ತಾರೆ. ಆ ವರದಿಯನ್ನು ಅವರು ಮಂಗಳೂರು ಮಹಾನಗರ ಪಾಲಿಕೆಯ ರೆವೆನ್ಯೂ ವಿಭಾಗಕ್ಕೆ ಕಳುಹಿಸಿಕೊಡುತ್ತಾರೆ. ಅಲ್ಲಿಂದ ಅದು ಓಕೆಯಾದ ನಂತರ ಅದು ಅಕೌಂಟ್ಸ್ ವಿಭಾಗಕ್ಕೆ ಹೋಗುತ್ತದೆ. ಅದರ ನಂತರ ನಿಮ್ಮ ಹಣ ನಿಮ್ಮ ಕೈ ಸೇರುವ ಸಾಧ್ಯತೆ ಪ್ರಾರಂಭವಾಗುವುದು.
ಈಗ ಎದ್ದಿರುವ ಹೊಸ ವಿವಾದ ಎನೆಂದರೆ ಪುರಭವನದಲ್ಲಿ ಕಾರ್ಯಕ್ರಮ ಮುಗಿದು ಅನೇಕ ದಿನಗಳಾದರೂ ತಮ್ಮ ಸೆಕ್ಯೂರಿಟಿ ಮೊತ್ತವನ್ನು ಪಾಲಿಕೆ ಹಿಂದಕ್ಕೆ ಕೊಟ್ಟಿಲ್ಲ ಎಂದು ಕೆಲವರು ಅಪಸ್ವರ ತೆಗೆದಿದ್ದಾರೆ. ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಮೇಯರ್ ಭರವಸೆ ನೀಡಿದ್ದಾರೆ. ಇಲ್ಲಿ ಆಗಿರುವ ವಿಷಯ ಏನೆಂದರೆ ಕಾರ್ಯಕ್ರಮ ಮುಗಿದ ನಂತರ ಪುರಭವನ ನೋಡಿಕೊಳ್ಳುವವರು ತಮ್ಮ ಕಡೆಯಿಂದ ತಕ್ಷಣ ರಿಪೋರ್ಟ್ ಕೊಟ್ಟಿರುವುದಿಲ್ಲ. ಅವರು ಇವತ್ತು ಮಾಡೋಣ, ನಾಳೆ ಮಾಡೋಣ ಎಂದು ದಿನ ದೂಡುತ್ತಾ ಇರಬಹುದು. ಆಗ ಅವರಿಂದ ಹೇಗೆ ಬೇಗ ವರದಿ ತಯಾರಿಸಬೇಕೆನ್ನುವುದು ಆಯಾ ಕಾರ್ಯಕ್ರಮದ ಸಂಯೋಜಕರ “ಬುದ್ಧಿವಂತಿಕೆ” ಮೇಲೆ ಹೋಗುತ್ತದೆ. ಹಳಬರಾದರೆ ಅವರಿಗೆ ಗೊತ್ತಿರುತ್ತದೆ. ಅದೇ ಹೊಸಬರಾದರೆ ಗೊತ್ತಿರುವುದಿಲ್ಲ. ನಿಮಗೆ ಹೇಗೆ ವರದಿ ಬೇಗ ತಯಾರಿಸಬೇಕೆಂದು ಗೊತ್ತಿಲ್ಲದಿದ್ದರೆ ಅಲ್ಲಿ ವರದಿ ನಿಧಾನವಾಗುತ್ತದೆ. ವರದಿ ಮುಂದೊಂದು ದಿನ ತಯಾರಾದರೂ ಅಲ್ಲಿಂದ ಅದು ಪಾಲಿಕೆಯ ಕಟ್ಟಡಕ್ಕೆ ತೆವಳಿಕೊಂಡು ಹೋಗಿ ಮುಟ್ಟುವಷ್ಟರಲ್ಲಿ ಎಷ್ಟು ದಿನ ತಗಲುತ್ತದೆ ಎನ್ನುವುದು ಕೂಡ ನಿಮ್ಮ “ಇಂಟರೆಸ್ಟ್” ಮೇಲೆ ಹೋಗುತ್ತದೆ. ಬಳಿಕ ರೆವೆನ್ಯೂ ವಿಭಾಗ ಅಲ್ಲಿಂದ ಅಕೌಂಟ್ಸ್ ವಿಭಾಗ. ಹಾಗೆ ಹಣ ನಿಮ್ಮ ಕೈ ಸೇರುವಾಗ ತಿಂಗಳುಗಟ್ಟಲೆ ಆಗುವುದು.
ಯಾರೋ ಮೇಯರ್ ಅವರಿಗೆ ದೂರು ಕೊಟ್ಟಿರುವುದರಿಂದ ಕೊಟ್ಟವರ ಕೆಲಸ ಬೇಗ ಆಗಬಹುದು. ಅದರ ಬದಲಿಗೆ ಮೆಯರ್ ಕವಿತಾ ಸನಿಲ್ ಅವರು ಒಂದು ನಿಯಮ ಮಾಡಿ ಕಾರ್ಯಕ್ರಮ ಆದ ಇಂತಿಂಷ್ಟು ದಿನದೊಳಗೆ ಸೆಕ್ಯೂರಿಟಿ ಎಂದು ತೆಗೆದುಕೊಂಡ ಹಣವನ್ನು ಕಾರ್ಯಕ್ರಮ ಸಂಯೋಜಕರಿಗೆ ಹಿಂತಿರುಗಿಸಬೇಕು ಎಂದು ಸೂಚನೆ ಕೊಡಬೇಕು. ಇಲ್ಲದಿದ್ದರೆ ಪ್ರತಿ ಬಾರಿ ಹೀಗೆ ದೂರು ಕೊಟ್ಟವರ ಹಣ ಬೇಗ ಸಿಗಬಹುದು. ಉಳಿದವರು ಒಂದೋ ಕಾಯಬೇಕು ಅಥವಾ ಕೈ ಬಿಸಿ ಮಾಡಬೇಕು. ತಮ್ಮ ಆಪ್ತ ಗುತ್ತಿಗೆದಾರರ ಬಿಲ್ ಬೇಗ ಪಾಸ್ ಮಾಡಲು ಒದ್ದಾಡುವ ಪಾಲಿಕೆ ಈ ವಿಷಯದಲ್ಲಿಯೂ ಆಸಕ್ತಿ ತೋರಿಸಲಿ ಎನ್ನುವುದು ನನ್ನ ನಿರೀಕ್ಷೆ!
Leave A Reply