ಮಂಗಳೂರು ವೈಜ್ಞಾನಿಕವಾಗಿ ಬೆಳೆಯಲು ನಮ್ಮ ಪಾಲಿಕೆ ಸದಸ್ಯರಿಗೆ ಮನಸ್ಸಿಲ್ಲ!!
ನಮ್ಮ ದೇಶವನ್ನು ಪ್ರೀತಿಸುವ ಪ್ರತಿಯೊಬ್ಬ ಭಾರತದ ನಿವಾಸಿಗೂ 72 ನೇ ವರ್ಷದ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ನೀವು ಪ್ರತಿ ವರ್ಷ ಒಂದು ಸಂಗತಿಯನ್ನು ಗಮನಿಸುತ್ತಾ ಇರಬಹುದು. ಅದೇನೆಂದರೆ ನಮ್ಮ ಮಂಗಳೂರು ಸಿಕ್ಕಾಪಟ್ಟೆ ಬೆಳೆಯುತ್ತಿದೆ. ಆದರೆ ಪ್ರತಿ ವರ್ಷ ಅವೈಜ್ಞಾನಿಕವಾಗಿ ನಗರ ತನ್ನ ಬಾಹುಗಳನ್ನು ಹರಡುತ್ತಿದೆ. ಮಂಗಳೂರಿನಲ್ಲಿ ಪ್ರತಿ ವರ್ಷ ಅಕ್ರಮವಾಗಿ ಕಟ್ಟಡಗಳು ಏದ್ದೇಳುತ್ತಿದೆ. ಇಷ್ಟು ಧೈರ್ಯವಾಗಿ ಹೇಗೆ ಬಿಲ್ಡರ್ ಗಳು ಕಟ್ಟಡಗಳನ್ನು ಅಕ್ರಮವಾಗಿ ಕಟ್ಟುತ್ತಿದ್ದಾರೆ ಎಂದು ನೀವು ಕೇಳಬಹುದು. ಇವರಿಗೆ ಹೇಳುವವರು ಕೇಳುವವರು ಯಾರೂ ಇಲ್ವಾ ಎಂದು ನಿಮಗೆ ಅನಿಸಬಹುದು. ಬಿಲ್ಡರ್ ಗಳ ಭಂಡ ಧೈರ್ಯಕ್ಕೆ ಕಾರಣ ನಮ್ಮ ಸರಕಾರದ ನಿಯಮಗಳು.
ನಿಯಮವನ್ನು ದುರುಪಯೋಗ ಮಾಡಲಾಗುತ್ತದೆ….
ಕರ್ನಾಟಕ ಮುನ್ಸಿಪಲ್ ಕಾರ್ಪೋರೇಶನ್ ಆಕ್ಟ್ 1976, ರೂಲ್ 112-Cಪ್ರಕಾರ ಲೈಸೆನ್ಸ್ ಇಲ್ಲದೆ ಮನೆ ಕಟ್ಟಿದರೂ ಕೂಡ ಡೋರ್ ನಂಬ್ರ ಸಿಗುತ್ತದೆ. ಇದರ ದುರ್ಲಾಭವನ್ನು ಬಿಲ್ಡರ್ ಗಳು ಹೇರಳವಾಗಿ ಉಪಯೋಗಿಸುತ್ತಿದ್ದಾರೆ. ಲೈಸೆನ್ಸ್ ಎಷ್ಟು ಮನೆಗಳಿಗೆ ಪಡೆದುಕೊಂಡಿದ್ದರೋ ಅದಕ್ಕಿಂತ ಹೆಚ್ಚು ಮನೆಗಳನ್ನು ಕಟ್ಟುತ್ತಾರೆ. ಕಂಪ್ಲಿಶನ್ ಸರ್ಟಿಫಿಕೇಟ್ ಇಲ್ಲದೆ ಡೋರ್ ನಂಬ್ರಗಳನ್ನು ಪಡೆದುಕೊಳ್ಳುತ್ತಾರೆ. ಕೆಲವರು ಏನು ಮಾಡುತ್ತಾರೆ ಎಂದರೆ ನಿಯಮ ಪ್ರಕಾರ ಎಷ್ಟು ಮನೆಗಳನ್ನು ಕಟ್ಟಲು ಅನುಮತಿ ಪಡೆದುಕೊಂಡಿರುತ್ತಾರೋ ಅಷ್ಟೇ ಕಟ್ಟಿದರೆ ರೋಡಿಗೆ ಜಾಗ ಬಿಟ್ಟುಕೊಡುವುದರಿಂದ ಹಿಡಿದು ಸೆಟ್ ಬ್ಯಾಕ್ ಗೆ ಜಾಗ ಮೀಸಲಾಗಿ ಇಡುವ ತನಕ ತುಂಬಾ ಕಿರಿಕಿರಿ ಇದೆ ಎಂದು ಹೇಳಿ ವಸತಿ ಸಮುಚ್ಚಯದಲ್ಲಿರುವ ಎಷ್ಟು ಮನೆಗಳನ್ನು ಕಟ್ಟಬೇಕು ಎಂದು ಪ್ಲಾನ್ ಮಾಡಿದ್ದಾರೋ ಅಷ್ಟು ಮನೆಗಳಿಗೆ ಲೈಸೆನ್ಸ್ ಪಡೆದುಕೊಳ್ಳಲು ಹೋಗುವುದಿಲ್ಲ. ಇದರಿಂದ ಏನಾಗುತ್ತದೆ ಎಂದರೆ ಎಲ್ಲರೂ ಹೀಗೆ ಮಾಡುವುದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಹಿಡಿದು ಪಾರ್ಕಿಂಗ್ ಸಮಸ್ಯೆಗಳ ತನಕ ಎಲ್ಲವೂ ಬೃಹದಾಕಾರವಾಗಿ ಬೆಳೆಯುತ್ತದೆ. ಇದನ್ನು ನಿಲ್ಲಿಸಲು ಇತ್ತೀಚೆಗೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಬಹಳ ಒಳ್ಳೆಯ ಪರಿಹಾರವನ್ನು ಕಂಡುಹಿಡಿದಿದ್ದರು.
ಆಯುಕ್ತರ ನಡೆ ಮೆಚ್ಚುವಂತದ್ದು..
ಪಾಲಿಕೆ ಆಯುಕ್ತರು ಏನು ಮಾಡಿದ್ದರು ಎಂದರೆ “ಲೈಸೆನ್ಸ್ ಇಲ್ಲದೆ ಕಟ್ಟಿದ ಮನೆಗಳಿಗೆ ಡೋರ್ ನಂಬ್ರ ಕೊಡದೇ ಇರುವುದು”. ಇದೊಂದು ಉತ್ತಮ ನಡೆ. ಇದರಿಂದ ಲೈಸೆನ್ಸ್ ಇಲ್ಲದೆ ಮನೆಕಟ್ಟುವುದು, ಲೆಸೆನ್ಸ್ ಗಿಂತ ಹೆಚ್ಚು ಮನೆ ಕಟ್ಟುವುದು ಎಲ್ಲವೂ ನಿಲ್ಲುತ್ತದೆ. ಆದರೆ ಪಾಲಿಕೆಯ ಆಯುಕ್ತರ ಈ ನಡೆ ನಮ್ಮ ಪಾಲಿಕೆಯ ಸದಸ್ಯರ ಹೊಟ್ಟೆಗೆ ಕಲ್ಲು ಹಾಕಿದಂತೆ ಆಗಿದೆ. ಪಾಲಿಕೆಯ ಪರಿಷತ್ ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಎನ್ನದೇ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಇದನ್ನು ಖಂಡಾತುಂಡವಾಗಿ ವಿರೋಧಿಸಿದ್ದಾರೆ. ಆಯುಕ್ತರ ಒಳ್ಳೆಯ ನಡೆಯನ್ನು ವಿರೋಧಿಸುವವರು ಇದಕ್ಕೆ ಕೊಡುವ ಕಾರಣವೇನೆಂದರೆ ” ಹೀಗೆ ಮಾಡುವುದರಿಂದ ಬಡವನಿಗೆ ಮನೆ ಕಟ್ಟಲು ಕಷ್ಟವಾಗುತ್ತದೆ. ಅದಕ್ಕಾಗಿ ಇದನ್ನು ಜಾರಿಗೆ ತರಬಾರದು” ಪಾಲಿಕೆ ಸದಸ್ಯರು ಏನು ಹೇಳುವುದೇಂದರೆ ಒಂದು ಸಾವಿರ ಚದರ ಅಡಿಯ ತನಕ ಕಟ್ಟಿರುವ ಮನೆಗಳಿಗೆ ಲೈಸೆನ್ಸ್ ಇಲ್ಲವೆಂದು ಡೋರ್ ನಂಬ್ರ ಕೊಡದೇ ಇರಬಾರದು ಎಂದು ಹೇಳುತ್ತಾರೆ. ಈಗ ಇರುವ ಪ್ರಶ್ನೆ ಏನೆಂದರೆ ಬಡವನೊಬ್ಬ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಸಾವಿರ ಚದರ ಅಡಿಯ ಮನೆ ಕಟ್ಟಲು ಸಾಧ್ಯವೇ? ಒಂದು ವೇಳೆ ಕಟ್ಟಿದರೆ ಅವನನ್ನು ಬಡವ ಎನ್ನಲು ಆಗುತ್ತದಾ? ಬಿಲ್ಡರ್ ಗಳ ಪರ ಪಾಲಿಕೆ ಒಳಗೆ ಇರುವ ಬ್ರೋಕರ್ ಗಳಂತೆ ಮನಪಾ ಸದಸ್ಯರು ವರ್ತಿಸಲೇಬಾರದು. ನಗರದ ಸಮಸ್ಯೆಯನ್ನು ಪರಿಹರಿಸಲು ಯೋಚಿಸಬೇಕೆ ವಿನ: ಬಿಲ್ಡರ್ ಗಳು ಕೊಡುವ “ಪ್ರೀತಿ”ಗೆ ಮನಸೋತು ನಗರದ ಪಾರ್ಕಿಂಗ್, ಟ್ರಾಫಿಕ್ ಸಮಸ್ಯೆ ಜಾಸ್ತಿಯಾಗುವಂತೆ ಮಾಡಬಾರದು. ಒಂದು ಸಾವಿರ ಚದರ ಅಡಿ ಎಂದು ಇವರು ಮಾಪನ ಹಿಡಿಯುವಾಗಲೇ ಇವರು ಬಡವರ ಪರ ಅಲ್ಲ, ಬಿಲ್ಡರ್ ಪರ ಎನ್ನುವುದು ಗ್ಯಾರಂಟಿಯಾಗುತ್ತದೆ. ನಾನು ಪಾಲಿಕೆ ಕಮೀಷನರ್, ಮೇಯರ್ ಬಳಿ ಕೇಳುವುದೆನೆಂದರೆ ಯಾವ ಒತ್ತಡಕ್ಕೂ ತಾವು ಬಲಿಯಾಗದೇ ಧೈರ್ಯವಾಗಿ ನಿಯಮವನ್ನು ಜಾರಿಗೆ ತನ್ನಿ. ಒಂದು ವೇಳೆ ನೀವು ಒತ್ತಡಕ್ಕೆ ಮಣಿದರೆ ನೀವು ಕೂಡ ಬಿಲ್ಡರ್ ಪರ ಎಂದು ಗ್ಯಾರಂಟಿಯಾಗುತ್ತದೆ!
Leave A Reply