ಬಯಲು ಶೌಚ ಮುಕ್ತ ನಗರ ಪ್ರಶಸ್ತಿ ಪಡೆದುಕೊಳ್ಳುವಾಗ ಮೇಯರ್ ಅವರಿಗೆ ಮೀನಿನ ದಕ್ಕೆ ನೆನಪಾಗಲಿಲ್ಲವಾ!
ರಾಜ್ಯ ಸರಕಾರದ ಚುನಾವಣೆಗೆ ಆರೇಳು ತಿಂಗಳಿವೆ. ನಮ್ಮ ಮಂಗಳೂರು ಮಹಾನಗರ ಪಾಲಿಕೆಗೆ ಯಾವುದೆಲ್ಲ ಆವಾರ್ಡ್ ಸಿಗುತ್ತೊ ಎಂದು ಒಂದು ಪಟ್ಟಿ ಮಾಡಿ. ನಂತರ ಅದನ್ನು ಪಡೆದುಕೊಳ್ಳಲು ಏನು ವರದಿ ಕೊಡಬೇಕು ಎಂದು ಬರೆಯೋಣ, ನಂತರ ಅಲ್ಲಿ ಯಾವುದಾದರೂ ಕಾರ್ಯಕ್ರಮದಲ್ಲಿ ಹೋಗಿ ರಾಜ್ಯ ಸರಕಾರದ ಯಾವುದಾದರೂ ಒಬ್ಬರು ಸಚಿವರ ಕೈಯಿಂದ ತೆಗೆದುಕೊಂಡು ಬರೋಣ. ನಂತರ ಅದನ್ನು ಇಲ್ಲಿ ಪತ್ರಿಕೆಯವರಿಗೆ, ಟಿವಿಯವರಿಗೆ ಹೇಳಿ ನಾನು ಪ್ರಚಾರ ಮಾಡಿಸ್ತೇನೆ. ಒಳ್ಳೆಯ ಪ್ರಚಾರ ಪಡೆದುಕೊಂಡ ನಂತರ ಅದನ್ನು ಚುನಾವಣೆಯಲ್ಲಿ ಬಳಸಿಕೊಳ್ಳೋಣ ಎಂದು ಸನ್ಮಾನ್ಯ ಮೇಯರ್ ಕವಿತಾ ಸನಿಲ್ ಹಾಗೂ ಪಾಲಿಕೆಯ ಕಮೀಷನರ್ ಮೊಹಮ್ಮದ್ ನಝಿರ್ ಕುಳಿತುಕೊಂಡು ಪ್ಲಾನ್ ಮಾಡಿದಂತೆ ಕಾಣುತ್ತದೆ. ಇಲ್ಲದಿದ್ದರೆ ಬಯಲು ಶೌಚ ಮುಕ್ತ ನಗರ ಎನ್ನುವ ಪ್ರಶಸ್ತಿಯನ್ನು ಇವರಿಬ್ಬರು ತೆಗೆದುಕೊಂಡು ಬರಲು ಸಾಧ್ಯವಿರಲಿಲ್ಲ.
ಮೇಯರ್ ಕಾಂಗ್ರೆಸ್ಸು, ರಾಜ್ಯದಲ್ಲಿ ಆಡಳಿತ ಕಾಂಗ್ರೆಸ್, ಕೊನೆಗೆ ಕಮೀಷನರ್ ಕೂಡ ಕಾಂಗ್ರೆಸ್ ( ಕಾಂಗ್ರೆಸ್ ನ ಮಾಜಿ ಸಚಿವರ ಅಳಿಯ) ಆಗಿರುವುದರಿಂದ ಕಾಂಗ್ರೆಸ್ಸಿನ ಇಮೇಜ್ ಅನ್ನು ಹೀಗಾದರೂ ವೃದ್ಧಿಸಬೇಕು ಎಂದು ಎಲ್ಲರೂ ನಿರ್ಧರಿಸಿಬಿಟ್ಟಿದ್ದಾರೆ. ಸರಿ, ಈಗ ನಾನು ಇವರಿಗೆ ಅವಾರ್ಡು ಬಂದಿದೆಯೆಂದು ಹೊಟ್ಟೆಕಿಚ್ಚಿನಿಂದ ಹೀಗೆ ಬರೆಯುತ್ತಿದ್ದೇನೆ ಎಂದು ಇವರು ಹೇಳಬಹುದು. ಅದು ನನಗೆ ಗೊತ್ತಿದೆ. ಇವರಿಗೆ ಬಯಲು ಶೌಚ ಮುಕ್ತ ಆವಾರ್ಡು ಬೇಕಾದರೆ ಸಿಗಲಿ, ದೇಶದ ಅತ್ಯುತ್ತಮ ಪಾಲಿಕೆ ಎಂದು ಬಂಗಾರದ ಸಿಂಹಾಸನ ಬೇಕಾದರೂ ಕೊಡಲಿ, ನನಗೆ ಬೇಜಾರಿಲ್ಲ. ಕೊಡುವವರಿಗೆನು ನಮ್ಮದೇ ಪಕ್ಷದ ಸರಕಾರ ಮಂಗಳೂರು ಪಾಲಿಕೆಯಲ್ಲಿ ಇದೆ. ಕೋಡೋಣ ಎಂದು ಅವರು ಅಂದುಕೊಂಡು ಕೊಟ್ಟು ಬಿಟ್ಟಿರುತ್ತಾರೆ. ಆದರೆ ಪಡೆದುಕೊಳ್ಳುವಾಗ ಒಂದಿಷ್ಟು ನಾಚಿಕೆ, ಮುಜುಗರ ಆದರೂ ಇವರಿಗೆ ಆಗಬೇಕಲ್ಲ. ನಮಗೇಕೆ ನಾಚಿಕರ, ಮುಜುಗರ ಎಂದು ಇವರು ಕೇಳಬಹುದು. ಇಲ್ಲದಿದ್ದರೆ ರಾಜ್ಯ ಸರಕಾರವೇ ರಚಿಸಿರುವ ಸತ್ಯಶೋಧನಾ ಸಮಿತಿ ಕೊಟ್ಟಿರುವ ವರದಿಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೌಚಾಲಯ ಇಲ್ಲದ 5000 ಮನೆಗಳಿವೆ ಎಂದು ಹೇಳಲಾಗಿದೆ. ಅದರಲ್ಲಿ ಸಂಶಯವೇ ಇಲ್ಲ. ಅದು ನಿಜ ಕೂಡ. ಎಲ್ಲಿಯ ತನಕ ಅಂದರೆ ಮಂಗಳೂರಿನ ಮೀನಿನ ದಕ್ಕೆ ಇದೆಯಲ್ಲ, ಅಲ್ಲಿ ಕೊನೆಯಲ್ಲಿ ಎಷ್ಟೋ ಮಂದಿ ಬೆಳಿಗ್ಗೆ ಶೌಚ ಮುಗಿಸುವುದು ಪ್ರಕೃತಿ ನಿರ್ಮಿಸಿರುವ ನದಿ ದಂಡೆಯ ಪಕ್ಕದಲ್ಲಿ. ತಣ್ಣಗೆ ಗಾಳಿ ಹಿಂದಿನಿಂದ ಹೊಡೆಯುತ್ತಿದ್ದರೆ ಶೌಚ ಮಾಡುವ ಖುಷಿ ಬೇರೆ ಎಂದು ಅಲ್ಲಿನವರು ಅಂದುಕೊಳ್ಳಬಹುದು ಆದರೆ ಆವಾರ್ಡ್ ಕೊಡುವವರಿಗೆ ಪಾಪ ಮಂಗಳೂರಿನ ದಕ್ಕೆಯ ಕೊನೆಯಲ್ಲಿ ಏನು ಆಗುತ್ತದೆ ಎಂದು ಹೇಗೆ ಗೊತ್ತಾಗಬೇಕು.
ಸಾಮಾನ್ಯವಾಗಿ ಆವಾರ್ಡು ಹೇಗೆ ಕೊಡಲಾಗುತ್ತದೆ ಎಂದು ಹೆಚ್ಚಿನವರಿಗೆ ಗೊತ್ತೆ ಇದೆ. ಆದರೂ ಚಿಕ್ಕದಾಗಿ ಹೇಳ್ತೇನೆ. ಕೆಲವು ಆವಾರ್ಡುಗಳು ಪಡೆದುಕೊಂಡವರ ಆರ್ಥಿಕ ಮತ್ತು ಅವರಿಗೆ ಎಷ್ಟು ಕಾಂಟ್ರಾಕ್ಟ್ ಇದೆ ಅದರ ಮೇಲೆ ಅವಲಂಬಿತವಾಗಿದೆ. ಇನ್ನು ಕೆಲವು ಆವಾರ್ಡುಗಳು ಕೊಡು ಕೊಳ್ಳುವಿಕೆಯ ಆಧಾರದಲ್ಲಿ ಇರುತ್ತದೆ. ರಾಜ್ಯ ಸರಕಾರ ಈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಎಂದು ಕೊಡುತ್ತದೆ. ಇನ್ನು ಜಿಲ್ಲಾ ಮಟ್ಟದಲ್ಲಿ ಕೂಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಎಂದು ಕೊಡಲಾಗುತ್ತದೆ. ಈ ಆವಾರ್ಡುಗಳನ್ನು ಸ್ವಲ್ಪ ಗಮನವಿಟ್ಟು ನೋಡಿ. ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ ಎಂದು ಒಂದು ಆವಾರ್ಡು ಕೊಡುತ್ತಾರೆ ಎಂದು ಇಟ್ಟುಕೊಳ್ಳೋಣ. ಕೊಡುವುದಾದರೂ ಯಾರಿಗೆ? ಯಾವುದೋ ಶಾಲಾ, ಕಾಲೇಜುಗಳನ್ನು ನಡೆಸುವವರಿಗೆ. ಅವರು ತಮ್ಮ ಕಾಲೇಜಿನ ಆಫೀಸಿನ ಕುರ್ಚಿಯಲ್ಲಿ ಕುಳಿತು ಮಕ್ಕಳ ಪೋಷಕರಿಂದ ವಸೂಲಿ ಮಾಡುವ ಡೋನೇಶನ್, ಫೀಸ್ ಎಣಿಸಿದ್ದೇ ಅವರ ಸಾಧನೆ. ಅವರಿಗೆ ಅಪ್ರತಿಮ ಸಾಧನೆ ಎಂದು ಪ್ರಶಸ್ತಿ ಕೊಡುತ್ತಾರೆ. ಏನು, ವೇಗವಾಗಿ ಹಣ ಎಣಿಸುತ್ತಿದ್ದರು ಎಂದು ಒಂದು ಪ್ರಶಸ್ತಿಯಾ? ಚೆಕ್ ನಲ್ಲಿ ಹಣ ಕೊಡಬೇಡಿ ಎಂದು ಕೇಳಿದ್ದೇ ಸಾಧನೆಯಾ? ಒಂದರ ಮೇಲೆ ಇನ್ನೊಂದು ಬಿಲ್ಡಿಂಗ್ ಕಟ್ಟಿದ್ದೇ ಸಾಧನೆಯಾ? ಪತ್ರಿಕೆಗಳಲ್ಲಿ ಲಕ್ಷಾಂತರ ರೂಪಾಯಿ ಜಾಹೀರಾತು ಕೊಟ್ಟು ನಂತರ ತಮ್ಮ ಎಲ್ಲಾ ಸಣ್ಣಪುಟ್ಟ ಕಾರ್ಯಕ್ರಮಗಳು ಪ್ರಸಿದ್ಧ ಪತ್ರಿಕೆಗಳಲ್ಲಿ ಬರುವಂತೆ ವರದಿಗಾರರನ್ನು ಇಟ್ಟುಕೊಂಡಿರುವುದು ಸಾಧನೆಯಾ? ಅಲ್ಲಲ್ಲಿ ಫ್ಲೆಕ್ಸ್ ಹಾಕಿಸಿ ತಮ್ಮ ಕಾಲೇಜಿನ ಹೆಸರು ಎಲ್ಲ ಕಡೆ ಹರಡಿಸಿದ್ದು ಬಿಟ್ಟರೆ ಇವರು ಕಲಿಸಿದ ಮಕ್ಕಳು ಮತ್ತೆ ಹಣ ಮಾಡಲು ದೊಡ್ಡ ದೊಡ್ಡ ಕಂಪೆನಿಗಳಿಗೆ ಸೇರಿ, ವಿದೇಶಕ್ಕೆ ಹೋಗಿ ದೇಶವನ್ನು ಮರೆತದ್ದು ಬಿಟ್ಟರೆ ಕೊನೆಗೆ ಈ ಶಿಕ್ಷಣ ತಜ್ಞ(!)ರ ಸಂಸ್ಥೆಯಿಂದ ಒಬ್ಬನೇ ಒಬ್ಬ ಯುವಕನೋ, ಯುವತಿಯೋ ದೇಶಕ್ಕಾಗಿ ಒಂದು ಕ್ಷಣ ಚಿಂತಿಸುವುದೂ ಇಲ್ಲ. ಅಂತಹ ಶಿಕ್ಷಣ ಸಂಸ್ಥೆ ನಡೆಸುವವರಿಗೆ ಪ್ರಶಸ್ತಿ.
ಇನ್ನು ವೈದ್ಯಕೀಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ ಎಂದು ಆ ಕ್ಯಾಟಗರಿಯ ಪ್ರಶಸ್ತಿ. ಪ್ರಶಸ್ತಿ ಪಡೆದುಕೊಂಡವರ ಹಿನ್ನಲೆ ನೋಡಿದವರಿಗೆ ಅವರ ಅಪಾಯಿಂಟ್ ಮೆಂಟ್ ಪಡೆದುಕೊಳ್ಳಬೇಕಾದರೆ ಪಾಪದವರು ಕಿಡ್ನಿ ಅಡವು ಇಡಬೇಕು! ಶ್ರೀಮಂತರನ್ನು ಬಿಟ್ಟು ಬಡವರನ್ನು ಎಡಕೈಯಲ್ಲಿ ಮುಟ್ಟಿದರೂ ಡೆಂಟಾಲ್ ಹಾಕಿ ಸ್ನಾನ ಮಾಡಬೇಕೊ ಎಂದು ಅಂದುಕೊಳ್ಳುವವರಿಗೆ ವೈದ್ಯ ಪ್ರಶಸ್ತಿ. ಕೆಲವರು ಫ್ರೀ ಇದ್ದಾಗ ಕೆಲವರಿಗೆ ಮೆಡಿಕಲ್ ರೆಪ್ ಫ್ರೀ ಕೊಟ್ಟಿರುವ ಔಷಧ ಕೊಟ್ಟು ನಂತರ ಅದನ್ನೇ ಅರ್ಹತೆ ಎಂದು ಪ್ರಶಸ್ತಿ ಪಡೆದುಕೊಳ್ಳುತ್ತಾರೆ.
ಆದ್ದರಿಂದ ನಮ್ಮಲ್ಲಿ ನೂರಕ್ಕೆ ತೊಂಭತ್ತು ಪ್ರಶಸ್ತಿಗಳು ತಮ್ಮ ಮೌಲ್ಯವನ್ನು ಕಡಿದುಕೊಂಡಿವೆ. ಕೊಡುವವರು ಅದರ “ಮೌಲ್ಯ”ವನ್ನು ಹೆಚ್ಚಿಸಿಕೊಂಡಿದ್ದಾರೆ. ಕೊಡುವವರ ಕಿಸೆಯಲ್ಲಿ “ಮೌಲ್ಯ” ಹೆಚ್ಚಾಗಿದೆ!
Leave A Reply