ಹೇಗಿದ್ದ ಕಾಶ್ಮೀರ, ಹೇಗಾಗುತ್ತಿದೆ ಗೊತ್ತಾ?
ಶ್ರೀನಗರ: ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಮೇಲೆ ಕಾಶ್ಮೀರದ ಚಹರೆಯೇ ಬದಲಾಗುತ್ತಿದೆ. ಪಾಕಿಸ್ತಾನಿ ಉಗ್ರರ ಉಪಟಳ ಕಡಿಮೆಯಾಗಿದೆ. ಕದನ ವಿರಾಮ ಉಲ್ಲಂಘನೆಯೂ ಕುಸಿದಿದೆ. ಆದಾಗ್ಯೂ ಕಾಶ್ಮೀರದಲ್ಲಿರುವ ಪಾಕ್ ಕೃಪಾಪೋಷಿತ ಉಗ್ರರನ್ನು ಹುಡುಕಿ ಹುಡುಕಿ ಹತ್ಯೆ ಮಾಡಲಾಗುತ್ತಿದೆ. ಪ್ರತ್ಯೇಕತಾವಾದಿಗಳಿಗೂ ಎನ್ ಐಎ ಉರುಳು ಬಿಗಿಯಾಗಿದೆ.
ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಸರಕಾರ, ಕಾಶ್ಮೀರದಲ್ಲಿ ಕಲ್ಲು ತೂರಾಟದ ಆರೋಪದಲ್ಲಿ ಬಂಧಿತರಾಗಿರುವ ಹಾಗೂ ಶಂಕಿತರನ್ನು ಗುರುತಿಸಿ, ಅವರಿಗೆ ಶಿಕ್ಷಣ, ಉದ್ಯೋಗ ತರಬೇತಿ ನೀಡಲು ಮುಂದಾಗಿದೆ.
ಇತ್ತೀಚೆಗೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಕಾಶ್ಮೀರಕ್ಕೆ ಭೇಟಿ ನೀಡಿದ ವೇಳೆ ನೀಡಿದ ನಿರ್ದೇಶನದಂತೆ ಈ ಬದಲಾವಣೆ ಕಾರ್ಯಕ್ಕೆ ರಾಜ್ಯದ ಪೊಲೀಸರು ಅಣಿಯಾಗುತ್ತಿದ್ದಾರೆ.
ಅದರಲ್ಲೂ ವಿಶೇಷವಾಗಿ ದಕ್ಷಿಣ ಕಾಶ್ಮೀರದಲ್ಲಿ ಈ ಕಾರ್ಯ ಕೈಗೊಳ್ಳುತ್ತಿದ್ದು, ಶಂಕಿತ ಉಗ್ರರು, ಕಲ್ಲು ತೂರಾಟದ ಹಿನ್ನೆಲೆಯುಳ್ಳವರು, ಕೈದಿಗಳ ಮನವೊಲಿಸಿ ಅವರಿಗೆ ಶಿಕ್ಷಣ ನೀಡಲು, ಉದ್ಯೋಗ ತರಬೇತಿ ನೀಡಲು, ರಾಷ್ಟ್ರವಿರೋಧಿ ಚಟುವಟಿಕೆಗಳಿಂದ ದೂರವಿರುವಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಕಾರಾಗೃಹ ಪೊಲೀಸ್ ಮಹಾ ನಿರ್ದೇಶಕ ಎಸ್.ಕೆ. ಮಿಶ್ರಾ ತಿಳಿಸಿದ್ದಾರೆ.
ಇವರಲ್ಲೇ 18 ವರ್ಷದವರಿಗಿಂತ ಕೆಳಗಿನ ಬಾಲಾಪರಾಧಿಗಳನ್ನು ಪ್ರತ್ಯೇಕಗೊಳಿಸಿ, ಅವರಿಗೆ ಶಿಕ್ಷಣ ನೀಡಲು ಶಿಕ್ಷಕರನ್ನು ನೇಮಿಸುವ ಹಾಗೂ ಅವರಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದಕ್ಕಾಗಿ 200 ಕೈದಿಗಳು ವಾಸಿಸುವ ಸೌಲಭ್ಯವಿರುವ “ಗೃಹ’ವೊಂದನ್ನು ನಿರ್ಮಿಸಲಾಗಿದ್ದು, ಆಟವಾಡಲು ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣದ ವ್ಯವಸ್ಥೆಯನ್ನೂ ಮಾಡಲಾಗಿದೆ. ಅವರನ್ನು ನಾಗರಿಕರನ್ನಾಗಿಸುವುದೇ ನಮ್ಮ ಗುರಿಯಾಗಿದೆ ಎಂದಿದ್ದಾರೆ.
ಒಟ್ಟಿನಲ್ಲಿ ಉಗ್ರರ ಬೀಡಾಗಿದ್ದ, ಗಲಭೆಯ ನಾಡಾಗಿದ್ದ, ಅಶಾಂತಿಯ ತಾಣವಾಗಿದ್ದ ಜಮ್ಮು-ಕಾಶ್ಮೀರದಲ್ಲಿ ಸಹಜ ಸ್ಥಿತಿಯ ಮೊಗ್ಗುಗಳು ಟಿಸಿಲೊಡೆಯುತ್ತಿರುವುದು ಸಂತಸದ ಸಂಗತಿ. ಅದು ಹೂವಾಗಿ ಅರಳಲಿ ಎಂಬುದು ನಮ್ಮ ಆಶಯ.
Leave A Reply