ಮಂಗಳೂರು ಸ್ವಚ್ಚ ಮಾಡಲು ಮುಂಬೈ ಪ್ರವಾಸ ಬೇಕಾ ಸದಸ್ಯರೇ!
ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ ಸಮಿತಿ ಸದಸ್ಯರು ಅಧ್ಯಯನ ಪ್ರವಾಸ ಮಾಡಲು ನಿರ್ಧರಿಸಿದ್ದಾರೆ. ಪುಣೆ ಮತ್ತು ಮುಂಬೈಗೆ ಹೋಗಿ ಅಲ್ಲಿ ಸ್ವಚ್ಚತೆ ಬಗ್ಗೆ ತಿಳಿದುಕೊಂಡು ಬರಲು ಹೊರಟಿದ್ದಾರೆ. ಈ ಅಧ್ಯಯನ ಪ್ರವಾಸಕ್ಕಾಗಿ 2017-18 ನೇ ಸಾಲಿನಲ್ಲಿ 15 ಲಕ್ಷ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ. ಅಲ್ಲಿಗೆ ಸದಸ್ಯರ, ಅಧಿಕಾರಿಗಳ ಪ್ರವಾಸ ತುಂಬಾ ಭರ್ಜರಿಯಾಗಿ ನಡೆಯಲಿದೆ. ಅಷ್ಟಕ್ಕೂ ಇವರು ಹೋಗುವುದು ಸ್ವಚ್ಚತೆ ಪರಿಶೀಲಿಸಲು ಎನ್ನುವುದೇ ಒಂದು ಹಾಸ್ಯಸ್ಪದ ವಿಷಯ.
ಮೊದಲಿಗೆ ಇವರು ಮುಂಬೈ ಅಥವಾ ಪುಣೆಗೆ ಹೋಗುವ ಅಗತ್ಯ ಏನಿದೆ ಎನ್ನುವುದರ ಕುರಿತು ನೋಡೋಣ. ಈಗ ನಮ್ಮ ಮಂಗಳೂರಿನಲ್ಲಿ ಇವರು ಯಾರಿಗೆ ತ್ಯಾಜ್ಯ ವಿಲೇವಾರಿಯ ಗುತ್ತಿಗೆ ಕೊಟ್ಟಿದ್ದಾರೋ ಈ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ಕಂಪೆನಿ ಮೊದಲು ಕೆಲಸ ಮಾಡುತ್ತಿದ್ದದ್ದೇ ಮುಂಬೈನಲ್ಲಿ. ಅಲ್ಲಿ ಇವರು ಒಳ್ಳೆಯದಾಗಿ ಕೆಲಸ ಮಾಡಿದ್ರು ಎಂದು ಅವರನ್ನು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸ್ವಚ್ಚತೆಯ ಗುತ್ತಿಗೆ ಕೊಡಲಾಗಿತ್ತು. ಹಾಗಿರುವಾಗ ಮತ್ತೆ ಅದೇ ಮುಂಬೈಗೆ ಹೋಗಿ ಸ್ವಚ್ಚತೆಯ ಬಗ್ಗೆ ಪರಿಶೀಲನೆ ಮಾಡಿ ಬರುವ ಅಗತ್ಯ ಏನಿದೆ?
ಒಂದೋ ಆಂಟೋನಿಯವರು ಇಲ್ಲಿ ಸರಿಯಾಗಿ ರಸ್ತೆ ಗುಡಿಸಲ್ಲ, ಒಂದು ಮೀಟರ್ ಅಗಲದ ಚರಂಡಿ ಕ್ಲೀನ್ ಮಾಡಲ್ಲ, ಬೊಂಡ, ಕಲ್ಲು, ಇಟ್ಟಿಗೆ ಕೂಡ ಹೊತ್ತುಕೊಂಡು ತಮ್ಮ ತ್ಯಾಜ್ಯದ ಭಾರ ಹೆಚ್ಚಿಸಿ ಹಣ ಹೆಚ್ಚು ವಸೂಲು ಮಾಡುತ್ತಿದ್ದಾರೋ ಹಾಗೆ ಮುಂಬೈಯಲ್ಲಿಯೂ ಕೂಡ ಮಾಡುತ್ತಿದ್ದಾರಾ ಎಂದು ನೋಡಲು ಹೋಗುತ್ತಿರುವುದಾ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇಲ್ಲದಿದ್ದರೆ ಮುಂಬೈನಲ್ಲಿ ಸ್ವಚ್ಚತೆಯ ಗುತ್ತಿಗೆ ಯಾರಿಗಾದರೂ ಬೇರೆಯವರಿಗೆ ಕೊಟ್ಟಿದ್ದರೆ ಅವರನ್ನೇ ಇಲ್ಲಿ ತರೋಣ, ಆಂಟೋನಿ ವೇಸ್ಟ್ ಸಾಕು ಎನ್ನುವ ಐಡಿಯಾಗೆ ಪಾಲಿಕೆ ಬಂದಿದೆಯಾ ಎನ್ನುವುದು ಕೂಡ ಮುಖ್ಯ. ಒಂದು ವೇಳೆ ಹೌದಾದರೆ ಇಷ್ಟು ವರ್ಷ ಆಂಟೋನಿ ವೇಸ್ಟ್ ನ ಭಾರ ನಾವು ಹೊತ್ತುಕೊಂಡು ಕೋಟಿಗಟ್ಟಲೆ ಹಣ ಅವರಿಗೆ ಸುರಿದದ್ದು ವೇಸ್ಟ್ ಎಂದು ಅನಿಸುವುದಿಲ್ಲವೇ?
ಈ ಸದಸ್ಯರು, ಅಧಿಕಾರಿಗಳು ಸ್ವಚ್ಚತೆಯ ಅಧ್ಯಯನ ಪ್ರವಾಸಕ್ಕೆ ಹೊರಡುವ ಮೊದಲು ಒಂದು ಕಿರು ಪರೀಕ್ಷೆಯನ್ನು ಬರೆಯಬೇಕು. ಅದರಲ್ಲಿ ಇವರಿಗೆ ಮಂಗಳೂರಿನಲ್ಲಿ ಆಗುತ್ತಿರುವ ಸ್ವಚ್ಚತೆಯ ಬಗ್ಗೆ ಎಷ್ಟು ಗೊತ್ತಿದೆ ಎನ್ನುವುದು ಜನರಿಗೆ ತಿಳಿಯಬೇಕು. ಮೊದಲ ಪ್ರಶ್ನೆ: ಮಂಗಳೂರಿನಲ್ಲಿ ಯಾವ ರಸ್ತೆಯನ್ನು ಆಂಟೋನಿ ವೇಸ್ಟ್ ನವರು ನಿತ್ಯ ಗುಡಿಸಬೇಕಾದ ಒಪ್ಪಂದ ಇದೆ? ಯಾವ ರಸ್ತೆಯನ್ನು ಎರಡು ದಿನಗಳಿಗೊಮ್ಮೆ ಗುಡಿಸುವ ಅಗತ್ಯ ಇದೆ? ಯಾವ ರಸ್ತೆಯನ್ನು ಮೂರು ದಿನಗಳಿಗೊಮ್ಮೆ ಗುಡಿಸುವ ಅಗತ್ಯ ಇದೆ? ಮೂರಕ್ಕೂ ಉತ್ತರ ಸರಿ ಬರೆದ ಸದಸ್ಯ, ಅಧಿಕಾರಿಗೆ ಫುಲ್ ಮಾರ್ಕ್. ಸಮಿತಿಯಲ್ಲಿ ಇರುವ ಹೆಚ್ಚಿನವರಿಗ ಇದು ಗೊತ್ತಿರುವುದೇ ಇಲ್ಲ.
ಎರಡನೇ ಪ್ರಶ್ನೆ: ರಸ್ತೆ ಗುಡಿಸಲು ಆಂಟೋನಿ ವೇಸ್ಟ್ ನವರು ಎಷ್ಟು ಜನರನ್ನು ನೇಮಿಸಿದ್ದಾರೆ? ಸರಿ ಹೇಳಬೇಕು ಎಂದರೆ ಎಷ್ಟು ಜನರನ್ನು ಕ್ರಮಬದ್ಧವಾಗಿ ನೇಮಿಸಬೇಕಿತ್ತೊ ಅದರ 25% ಜನರನ್ನು ಕೂಡ ಆ ಸಂಸ್ಥೆ ನೇಮಿಸಿಲ್ಲ. ಅದು ಟೂರ್ ಗೆ ಹೊರಟವರಿಗೆ ಗೊತ್ತಾ? ಆಂಟೋನಿ ವೇಸ್ಟ್ ನವರು ಅಗತ್ಯದಷ್ಟು ಜನರು ನೇಮಿಸಿಲ್ಲ ಎನ್ನುವುದಕ್ಕೆ ಉದಾಹರಣೆ ಬೇಕಾದಷ್ಟು ಸಿಗುತ್ತದೆ. ಮಂಗಳೂರು ನಗರಕ್ಕೆ ಬರುವ ಏರ್ ಪೋರ್ಟ್ ರೋಡಿನಲ್ಲಿ ಬೊಂದೇಲ್ ಜಂಕ್ಷನ್ ನಿಂದ ಹಿಡಿದು ಬಿಜೈ ಜಂಕ್ಷನ್ ತನಕ ರಸ್ತೆ ವಿಭಾಜಕ ಅತ್ತ ಇತ್ತ ಮರಳು, ಮಣ್ಣು ಯಾವಾಗಲೂ ನಿಂತಿರುತ್ತದೆ. ಫುಟ್ ಪಾತ್ ಕೆಳಗೆ ಯಾವಾಗಲೂ ಕಸ ಇರುತ್ತದೆ. ಈ ಬಗ್ಗೆ ದೂರು ಕೊಟ್ಟು 15 ದಿನಗಳಾದರೂ ಯಾರೂ ತೆಗೆಯುವವರು ಇರುವುದಿಲ್ಲ. ಕೂಡಲೇ ಕ್ಲೀನ್ ಮಾಡಿ ಎಂದು ಹೇಳುವ ನೈತಿಕತೆ ಯಾವ ಸದಸ್ಯ/ಸ್ಯೆ ಅಥವಾ ಅಧಿಕಾರಿ ಇಟ್ಟುಕೊಂಡಿಲ್ಲ. ಯಾಕೆಂದರೆ ಆಂಟೋನಿಯವರು ರಸ್ತೆಗಳನ್ನು ಚೆನ್ನಾಗಿ ಇಟ್ಟುಕೊಳ್ಳದಿದ್ದರೂ ಸದಸ್ಯರನ್ನು, ಅಧಿಕಾರಿಗಳನ್ನು ಚೆನ್ನಾಗಿ ಇಟ್ಟುಕೊಂಡಿದ್ದಾರೆ. ಪ್ರತಿಯೊಬ್ಬ ಸದಸ್ಯ/ಸ್ಯೆ ತನ್ನ ವಾರ್ಡಿನ ರಸ್ತೆ, ವಿಭಾಜಕ, ಫುಟ್ ಪಾತ್, ಚರಂಡಿಗಳನ್ನು ಕನಿಷ್ಟ ದಿನಕ್ಕೆ ಒಂದು ಸಲವಾದರೂ ಆಚೀಚೆ ಹೋಗುವಾಗ ನೋಡುತ್ತಾನಲ್ಲ. ತ್ಯಾಜ್ಯ ಅವನ ಕಣ್ಣಿಗೆ ಬೀಳುತ್ತದೆಯಲ್ಲ, ಅದನ್ನು ಸ್ವಚ್ಚ ಮಾಡಲು ಅವನು ಆಂಟೋನಿ ವೇಸ್ಟ್ ನವರಿಗೆ ಫೋನ್ ಮಾಡಿ ಹೇಳಿದರೂ ಸಾಕು. ನಮ್ಮ ನಗರ ಸೂಪರ್ ಆಗುತ್ತದೆ. ಸೂಪರ್ ಅಲ್ಲದಿದ್ದರೂ ಕನಿಷ್ಟ ಒಂದು ಒಂದೂವರೆ ಕೋಟಿ ಆಂಟೋನಿಗೆ ತಿಂಗಳಿಗೆ ಕೊಟ್ಟದ್ದಕ್ಕೆ ಸಾರ್ಥಕವಾಗುತ್ತದೆ. ಒಂದು ಫೋನ್ ಮಾಡಿ ಗುತ್ತಿಗೆದಾರರಿಗೆ ಜೋರು ಮಾಡಲಾಗದವರು ಮುಂಬೈ, ಪುಣೆಗೆ ಹೋಗಿ ಅಧ್ಯಯನ ಮಾಡಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಬಂದರೆ ಮಂಗಳೂರು ಕ್ಲೀನ್ ಆಗುತ್ತಾ? ಯಾಕೋ ಪಾಲಿಕೆ ಗಮ್ಮತ್ ಮಾಡಲು ನೆವನ ಹುಡುಕುತ್ತಿದೆ, ಜನರ ತೆರಿಗೆಯ ಹಣದಲ್ಲಿ!
Leave A Reply