ನಿಮ್ಮ ಯಾವ ಸಾಧನೆಗೆ ಬಿಜೆಪಿ ನಿಮ್ಮನ್ನು ಸಿಎಂ ಮಾಡಬೇಕು?
ಅನುಪಮಾ ಶೆಣೈ.
ಈ ಹೆಸರು ನೀವು ಕೇಳಿರುತ್ತೀರಿ. ಸ್ವಲ್ಪ ನೆನಪು ಮಾಸಿದ್ದರೂ ಹೆಸರು ಕೇಳಿದ ತಕ್ಷಣ ನಿಮಗೆ ನೆನಪಾಗುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಡಿವೈಎಸ್ಪಿಯಾಗಿದ್ದ ಅನುಪಮಾ ಶೆಣೈ ಈಗೊಂದು ವರ್ಷದ ಹಿಂದೆ ಭಾರೀ ಸುದ್ದಿ ಮಾಡಿದ್ದರು. ರಾಜ್ಯದ ಸಚಿವರೊಬ್ಬರ ವಿರುದ್ಧ ಸಿಡಿದೇಳುವ ಮೂಲಕ ರೆಬೆಲ್ ಸ್ಟಾರ್ ಆಗ ಹೊರಟಿದ್ದರು. ಆರಂಭದಲ್ಲಿ ಜನ, ಮಾಧ್ಯಮದವರು ಅವರನ್ನು ನಂಬಿದ್ದರು. ಆದರೆ ಯಾವಾಗ ಅವರ ಹೋರಾಟಗಳು ಕೇವಲ ಬಡಾಯಿ ಎಂಬುದರ ಅರಿವಾಯಿತೊ ಆಗ ಎಲ್ಲರೂ ಅವರ ಹೋರಾಟ ಮತ್ತು ಹಾರಾಟದ ಉದ್ದೇಶವನ್ನೇ ಅನುಮಾನಿಸಲಾರಂಭಿಸಿದರು.
ಅಣ್ಣ ಬ್ರೇಕ್ ನ ನಂತರ ಸ್ವಲ್ಪ ಈಗ ಮತ್ತೆ ಅವರು ಸುದ್ದಿಯಲ್ಲಿದ್ದಾರೆ. ಈಗ ಸುದ್ದಿಯಲ್ಲಿರುವುದು ಮಾತ್ರ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಇರಾದೆ ವ್ಯಕ್ತಪಡಿಸುವ ಮೂಲಕ. ಅದೂ ಯಾರಬದಲಿಗೆ? ಬಿ.ಎಸ್. ಯಡಿಯೂರಪ್ಪ ಅವರ ಬದಲಿಗೆ!
ಮಂಗಳೂರಿನ ಸ್ಥಳೀಯ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ‘ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ ನಾನು ಬಿಜೆಪಿ ಸೇರುತ್ತೇನೆ’ ಎಂದಿದ್ದಾರೆ.
ಭ್ರಮೆಗೂ ಒಂದು ಮಿತಿಯಿರಬೇಕು!
ರಾಜ್ಯದ ಸಚಿವರ ವಿರುದ್ಧ ಮಾತನಾಡಿದಾಗ ಹಾಗೂ ಅದರ ನಂತರದ ಬೆಳವಣಿಗೆಗಳನ್ನು ಗಮನಿಸಿದ ಸಾಕಷ್ಟು ಜನ ಅನುಪಮಾ ಶೆಣೈ ರಾಜಕೀಯಕ್ಕೆ ಬರುತ್ತಾರೆ ಅಥವಾ ಬರುವ ಉದ್ದೇಶ ಹೊಂದಿದ್ದಾರೆ ಎಂದು ಅನುಮಾನಿಸಿದ್ದರು. ಆದರೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೇ ಆಗಿಬಿಡುತ್ತಾರೆ ಎಂಬುದನ್ನು ಮಾತ್ರ ಕನಸಿನಲ್ಲೂ ಊಹಿಸಿರಲಿಲ್ಲ. ಈಗ ಅವರ ಮಾತು ಕೇಳಿ ಮುಸಿಮುಸಿ ನಗುತ್ತಿದ್ದಾರೆ.
ಇಷ್ಟಕ್ಕೂ ಅನುಪಮಾ ಶೆಣೈ ಯಾವ ಸಾಧನೆ ಮಾಡಿದ್ದಾರೆಂದು ಬಿಜೆಪಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಬೇಕು?
ಅನುಪಮಾ ಶೆಣೈ ಡಿವೈಎಸ್ಪಿಯಾಗಿದ್ದ ಪ್ರದೇಶದಲ್ಲಿ ಅತ್ಯುತ್ತಮ ಹೆಸರಂತೂ ಗಳಿಸಿಲ್ಲ. ಹಾಗಂತ ಹೆಸರು ಕೆಡಿಸಿಕಿಂಡಿದ್ದಾರೆ ಅಥವಾ ಭ್ರಷ್ಟ ಅಧಿಕಾರಿಯಾಗಿದ್ದರು ಎಂದಲ್ಲ. ಆದರೆ ತುಂಬ ಜನಾನುರಾಗಿ ಅಧಿಕಾರಿಯಂತೂ ಆಗಿರಲಿಲ್ಲ. ಅವರು ಕೆಲಸ ಮಾಡಿದ ಪ್ರದೇಶದಲ್ಲೇ ಅವರು ಚುನಾವಣೆಗೆ ಸ್ಪರ್ಧಿಸಿದರೂ ಗೆಲ್ಲುವುದು ಅನುಮಾನ. ಸಾಕಷ್ಟು ಪೊಲೀಸ್ ಅಧಿಕಾರಿಗಳು ಅವರು ಕರ್ತವ್ಯ ನಿರ್ವಹಿಸಿದ ಪ್ರದೇಶದಲ್ಲೇ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಉದಾಹರಣೆಗಳಿವೆ. ಬಿ.ಸಿ. ಪಾಟೀಲ್, ಪಿ. ರಾಜೀವ್ ಶಾಸಕರಾಗಿದ್ದು ಹಾಗೆಯೇ. ಹಾಗಂತ ಪೊಲೀಸ್ ಅಧಿಕಾರಿಗಳಾಗಿದ್ದು ಚುನಾವಣೆಗೆ ಸ್ಪರ್ಧಿಸಿದವರೆಲ್ಲ ಗೆದ್ದಿದ್ದಾರೆ ಎಂದು ಭಾವಿಸಬೇಡಿ. ಪೊಲೀಸ್ ಇಲಾಖೆ ಎಡಿಜಿಪಿಯಾಗಿದ್ದ ಸುಭಾಷ್ ಭರಣಿ, ಡಿಜಿಯಾಗಿದ್ದ ಶಂಕರ ಬಿದರಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಾರೆ. ಗೆದ್ದವರಿಂದಲೇ ಅನುಪಮಾ ಶೆಣೈ ಸ್ಫೂರ್ತಿ ಪಡೆದಿರಬಹುದು.
ಆದರೆ ಅವರ್ಯಾರೊ ಗೆದ್ದಿದ್ದಾರೆ ಎಂದು ಇವರು ಚುನಾವಣೆಗೆ ಸ್ಪರ್ಧಿಸ ಹೊರಡುವುದು ಮೂರ್ಖತನವಾದೀತು.
ರಾಜ್ಯದ ಕಾರ್ಮಿಕ ಸಚಿವ ಪರಮೇಶ್ವರ ನಾಯಕ್ ವಿರುದ್ಧ ಅನುಪಮಾ ಶೆಣೈ ಅವರು ಅಕ್ರಮ ಮರಳುಗಾರಿಕೆಗೆ ಸಹಕರಿಸಿದ ಆರೋಪ ಮಾಡಿದ್ದರು. ಅಕ್ರಮ ಮರಳುಗಾರಿಕೆ ತಡೆದಾಗ, ಅವರನ್ನು ಬಿಡುವಂತೆ ಸಚಿವರು ಮೊಬೈಲ್ಗೆ ಕರೆ ಮಾಡಿದಾಗ, ಅದನ್ನು ಅನುಪಮಾ ಶೆಣೈ ಧಿಕ್ಕರಿಸಿದರು ಎಂಬುದು ಆರಂಭದ ಸುದ್ದಿ. ಅದಕ್ಕೆ ತನ್ನ ಬಳಿ ಕಾಲ್ ರೆಕಾರ್ಡ್ ಇದೆಯೆಂದು ಹೇಳಿದರು. ಆದರೆ ಕೊನೆಯ ತನಕವೂ ಜನರೆಲ್ಲ ನಂಬಬಹುದಾದ ಯಾವ ಸಾಕ್ಷ್ಯವೂ ಬಹಿರಂಗವಾಗಲಿಲ್ಲ.
ಸಾಕ್ಷ್ಯಗಳನ್ನು ಕೊಟ್ಟಿದ್ದರೆ ಸಚಿವರು ರಾಜೀನಾಮೆ ಕೊಡುತ್ತಿದ್ದರು ಎಂಬ ನಿರೀಕ್ಷೆ ಖಂಡಿತ ಇರಲಿಲ್ಲ. ಯಾಕೆಂದರೆ ಈ ಸರ್ಕಾರ ಈ ರೀತಿ ಸಮಸ್ಯೆಗೆ ಸಿಲುಕಿದ ಅಚಿವರನ್ನು ಬಚಾವ್ ಮಾಡುವುದರಲ್ಲಿ ಎತ್ತಿದ ಕೈ ಎಂಬುದು ಗೊತ್ತೇ ಇದೆ.
ಅದರ ನಂತರ ಭೂಗತರಾದ ಅನುಪಮಾ ಶೆಣೈ, ತಮ್ಮ ಹೋರಾಟವನ್ನು ಸಾಮಾಜಿಕ ತಾಣವಾದ ಫೇಸ್ಬುಕ್ ಗೆ ಸ್ಥಳಾಂತರಿಸಿದರು. ಗುಪ್ತ ಸ್ಥಳದಿಂದಲೇ ಫೇಸ್ಬುಕ್ ನಲ್ಲಿ ಭಾರೀ ಸ್ಫೋಟಕ ಪೋಸ್ಟ್ ಗಳು ಬರಲಾರಂಭಿಸಿದವು. ಸಿಡಿ, ವೀಡಿಯೊ ಬಿಡುಗಡೆಯ ಮಾತೆಲ್ಲ ಕೇಳಿಬಂತು. ಆದರೆ ಗುಪ್ತ ಸ್ಥಳದಿಂದ ಹೊರಬಂದ ಅನುಪಮಾ, ನನ್ನ ಫೇಸ್ಬುಕ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಹೇಳುವ ಮೂಲಕ ತಾವಿಟ್ಟಿದ್ದ ಬಾಂಬ್ ಗೆ ತಾವೇ ನೀರಿನ ಪೈಪ್ ಹಿಡಿದರು!
ಆಗಲೇ ಅನುಪಮಾ ಶೆಣೈ ಒಂದು ಬಾಂಬ್ ಅಲ್ಲ ಪಟಾಕಿ ಎಂಬುದು ಸಾಬೀತಾಗಿತ್ತು. ಆದರೆ ಅಷ್ಟಕ್ಕೇ ಸುಮ್ಮನಾಗದ ಅವರು, ಡಿವೈಎಸ್ಪಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮತ್ತೊಮ್ಮೆ ಸ್ಫೋಟಕ ಸುದ್ದಿ ಮಾಡಿದರು. ಆಗಲೇ ಅವರು ಪಕ್ಷ ಸೇರುತ್ತಾರೆಂಬ ಸುದ್ದಿಯೂ ದಟ್ಟವಾಗಿತ್ತು. ಅದಾದ ಕೆಲವೇ ದಿನದಲ್ಲಿ ಮುಖ್ಯಮಂತ್ರಿಯ ಮೇಲೆಯೇ ಆರೋಪ ಮಾಡಿದರು. ಆಗ ರಾಜಕೀಯ ಸೇರುವುದು ಖಚಿತ ಅನ್ನಿಸಿತ್ತು. ಆದರೆ ಸ್ವಲ್ಪ ದಿನದಲ್ಲೇ ಅವರು ರಾಜೀನಾಮೆ ಮರಳಿ ಪಡೆಯುವ ಮಾತನಾಡಿದರು. ನಂತರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕ್ಷಮೆಯಾಚಿಸಿದರು. ಆದರೆ ಸರ್ಕಾರ ರಾಜೀನಾಮೆಯನ್ನು ಅಂಗೀಕರಿಸಿಯೇಬಿಟ್ಟಿತು.
ಅದಾದ ನಂತರವೂ ಒಂದೆರಡು ಸಾರಿ ಸುದ್ದಿಯಲ್ಲಿರಲು ಅವರು ಪ್ರಯತ್ನಿಸಿದರು. ಆದರೆ ಅಷ್ಟರಲ್ಲಾಗಲೇ ಅವರು ಜನರ, ಮಾಧ್ಯಮದವರ ವಿಶ್ವಾಸ ಕಳೆದುಕೊಂಡಾಗಿತ್ತು.
ಬಿಜೆಪಿಯವರು ಈಗ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡುವುದು ಬಿಡಿ, ಶಾಸಕ ಸ್ಥಾನಕ್ಕೆ ಟಿಕೆಟ್ಟಾದರೂ ಯಾಕೆ ನೀಡಬೇಕು? ಜನರಿಗೆ ಸುಳ್ಳು ಹೇಳಿ ಹೀರೊ ಆಗಲು ಪ್ರಯತ್ನಿಸಿದರು ಎಂದೋ? ಕಾಂಗ್ರೆಸ್ ಸಚಿವರ ಹಾಗೂ ಮುಖ್ಯಮಂತ್ರಿ ವಿರುದ್ಹು ಹುಸಿ ಆರೋಪ ಮಾಡಿದರೆಂದೆ? ಅಷ್ಟಕ್ಕೆಲ್ಲ ಟಿಕೆಟ್ ನೀಡಲಾಗುತ್ತದೆಯೇ? ಒಂದು ವೇಳೆ ಬಿಜೆಪಿ ಅಥವಾ ಇನ್ನಾವುದೇ ರಾಜಕೀಯ ಪಕ್ಷ ಟಿಕೆಟ್ ನೀಡಿತು ಎಂದೇ ಅಂದುಕೊಳ್ಳೋಣ. ಮತ ಹಾಕುವವರು ಯಾರು? ಮುಖ್ಯಮಂತ್ರಿಯಾಗುವ ಮೊದಲು ಶಾಸಕಿಯಾಗಿ ಆಯ್ಕೆಯಾಗಬೇಕಲ್ಲವೇ?
ಸುಮ್ಮನೆ ಒಂದೆರಡು ಆರೋಪಗಳನ್ನು ಮಾಡಿಬಿಟ್ಟರೆ, ರಾಜ್ಯಾದ್ಯಂತ ಸುದ್ದಿಯಾಗಿಬಿಟ್ಟರೆ, ಸಚಿವರಿಗೇ ಸೆಡ್ಡು ಹೊಡೆದ ಧೀರ ಮಹಿಳೆ ಅನ್ನಿಸಿಕೊಂಡುಬಿಟ್ಟರೆ, ರಾಜೀನಾಮೆ ನೀಡಿ ಹೀರೊ ಆಗಲು, ಅನುಕಂಪ ಗಿಟ್ಟಿಸಲು ಪ್ರಯತ್ನಿಸಿದರೆ ಜನ ಮತ ನೀಡಿಬಿಡುತ್ತಾರಾ? ಅನುಪಮಾಳ ಅಷ್ಟೆಲ್ಲ ಕೆಲಸದಿಂದ ಜನರಿಗೇನು ಉಪಯೋಗವಾಗಿದೆ? ಒಂದೇ ಒಂದು ಅಕ್ರಮವಾದರೂ ಹೊರಬಂದಿದೆಯೇ? ಒಬ್ಬರಾದರೂ ರಾಜೀನಾಮೆ ನೀಡಿದ್ದಾರಾ?
ಏನೂ ಆಗಿಲ್ಲ. ಫೇಸ್ಬುಕ್ಕಿನ ಲೈಕಿ, ಕಾಮೆಂಟುಗಳು ಮತವಾಗುವುದಿಲ್ಲ. ಫೇಸ್ಬುಕ್ನಲ್ಲಿ ಫೇಮಸ್ ಆದವರೆಲ್ಲ ಚುನಾವಣೆಗೆ ಸ್ಪರ್ಧಿಸುವಂತಿದ್ದರೆ ಚುನಾವಣೆಗೆ ಅ್ಪರ್ಧಿಸುವವರ ದೊಡ್ಡ ಸಾಲೇ ಇರುತ್ತಿತ್ತು. ಆದರೆ ಚುನಾವಣೆ ಫೇಸ್ಬುಕ್ಕಿನ ಲೈಕ್, ಕಾಮೆಂಟ್ ಗಳಿಗಿಂತ ತುಂಬ ವಿಶಾಲವಾದುದು. ಫೇಸ್ಬುಕ್ ಲೈಕ್ಗಳ ಭ್ರಮೆಯಿಂದ ಅನುಪಮಾ ಎಷ್ಟು ಬೇಗ ಹೊರಬರುತ್ತಾರೊ ಅಷ್ಟು ಅವರಿಗೆ ಒಳ್ಳೆಯದು.
ಮುಖ್ಯಮಂತ್ರಿ ಅಭ್ಯರ್ಥಿಯೇ ಆಗಬೇಕೆಂದಿದ್ದರೆ ಅವರು ಸದ್ಯಕ್ಕೆ ಆಮ್ ಆದ್ಮಿ ಪಕ್ಷ ಸೇರಬಹುದು. ಅನುಪಮಾ ಮಾತು ಕೇಳಿದರೆ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ನೆನಪಾಗುತ್ತಿದೆ!
Leave A Reply