ಫತ್ವಾ ಹೊರಡಿಸಿದ ಉಲೂಮ್ ಸಂಸ್ಥೆಯನ್ನೇ ನಿಷೇಧಿಸಿ: ಮುಸ್ಲಿಂ ಮಹಿಳೆಯ ಆಗ್ರಹ
ಮುಸ್ಲಿಂ ಮಹಿಳೆಯೊಬ್ಬಳು ಹುಬ್ಬು ನೀಟಾಗಿ ಕತ್ತರಿಸಿದ ಫೋಟೋ ಫೇಸ್ ಬುಕ್ ಗೆ ಪೋಸ್ಟ್ ಮಾಡಿದರಾ? ಫತ್ವಾ.
ಮುಸ್ಲಿಂ ಮಹಿಳೆಯರು ದೀಪಾವಳಿಯಲ್ಲಿ ಆರತಿ ಬೆಳಗಿದರಾ? ಫತ್ವಾ.
ಮುಸ್ಲಿಂ ಮಹಿಳೆಯರು, ಪುರುಷರು ಜಾಲತಾಣದಲ್ಲಿ ಫೋಟೋ ಅಪ್ ಲೋಡ್ ಮಾಡುವುದು ಇಸ್ಲಾಂ ವಿರೋಧಿ…
ಹೀಗೆ ಪ್ರತಿಯೊಂದರಲ್ಲೂ ಹುಳುಕು ಹುಡುಕಿ, ಸುಖಾಸುಮ್ಮನೆ ಫತ್ವಾ ಹೊರಡಿಸುತ್ತಿದ್ದ ಉತ್ತರ ಪ್ರದೇಶದ ಇಸ್ಲಾಮಿಕ್ ಸಂಸ್ಥೆ ದರೂಲ್ ಉಲೂಮ್ ದಿಯೋಬಂದ್ ವಿರುದ್ಧ ಮುಸ್ಲಿಂ ಮಹಿಳೆಯೊಬ್ಬರು ಗುಡುಗಿದ್ದು, ದ್ವೇಷ ಹಾಗೂ ಹಾಸ್ಯಾಸ್ಪದವಾಗಿ ಫತ್ವಾ ಹೊರಡಿಸುವ ಈ ಸಂಸ್ಥೆಯನ್ನೇ ಮುಚ್ಚಿ ಎಂದಿದ್ದಾರೆ.
ನಜೀನ್ ಅನ್ಸಾರಿ ಎಂಬ ಮಹಿಳೆ ಈ ಕುರಿತು ಮಾತನಾಡಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇವರ ನೇತೃತ್ವದಲ್ಲೇ ದೀಪಾವಳಿ ದಿನ ಆರತಿ ಬೆಳಗಲಾಗಿತ್ತು. ಹಾಗಾಗಿ ಉಲೂಮ್ ಸಂಸ್ಥೆ ಇವರ ವಿರುದ್ಧ ಫತ್ವಾ ಹೊರಡಿಸಿತ್ತು.
ಸುಮ್ಮಸುಮ್ಮನೆ ಫತ್ವಾ ಹೊರಡಿಸಿದ ಸಂಸ್ಥೆ ವಿರುದ್ಧ ಕಿಡಿಕಾರಿರುವ ನಜೀನ್, “ಈ ಇಸ್ಲಾಮಿಕ್ ಸಂಸ್ಥೆಯ ಹಣಕಾಸು ವ್ಯವಹಾರ, ರಾಷ್ಟ್ರೀಯ ಹಿತಾಸಕ್ತಿಗಳ ವಿರುದ್ಧ ಭಾಗಿಯಾದ ಚಟುವಟಿಕೆಗಳ ವಿರುದ್ಧ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.
ವೈಯಕ್ತಿಕ ವಿಚಾರಗಳ ಆಧಾರದ ಮೇಲೆ ಫತ್ವಾ ಹೊರಡಿಸುವ ಯಾವ ಹಕ್ಕೂ ಉಲೂಮ್ ದಿಯೋಬಂದ್ ಸಂಸ್ಥೆಗಿಲ್ಲ. ಯಾವ ಇಸ್ಲಾಂ, ಯಾವ ಅಲ್ಲಾನೂ ಈ ಹಕ್ಕು ನೀಡಿಲ್ಲ. ಅವರು ಬರೀ ಇಸ್ಲಾಂ ಕುರಿತ ಸಕಾರಾತ್ಮ ಅಂಶಗಳ ಕುರಿತು ಹೇಳುವ ಹಕ್ಕು ಹೊಂದಿದ್ದಾರೆಯೇ ಹೊರತು ಫತ್ವಾ ಹೊರಡಿಸುವಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಮುಸ್ಲಿಂ ಮಹಿಳೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಹಾಗೂ ಇಸ್ಲಾಂ ಧರ್ಮದ ನಿಯಮ ಪಾಲಿಸುತ್ತೇನೆ. ಆದರೆ ಇಂಥ ಆಧಾರರಹಿತ ಫತ್ವಾಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಹೆದರುವುದಿಲ್ಲ ಎಂದಿದ್ದಾರೆ.
Leave A Reply