ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷನಾಗುವ ಯಾವ ಅರ್ಹತೆ ರಾಹುಲ್ ಗಾಂಧಿಗಿದೆ?
ದೇಶದ ಚುಕ್ಕಾಣಿ ಹಿಡಿಯಲು, ಉನ್ನತ ಹುದ್ದೆ ಹಿಡಿಯಲು ನೀವು ನೆಹರೂ ಕುಟುಂಬಸ್ಥರೇ ಆಗಿರಬೇಕು…
ಜವಾಹರ್ ಲಾಲ್ ನೆಹರೂ ಪುತ್ರಿ ಎಂಬ ಒಂದೇ ಕಾರಣಕ್ಕೆ ಇಂದಿರಾಗಾಂಧಿ ಪ್ರಧಾನಿಯಾದಾಗ…
ಇಂದಿರಾ ಗಾಂಧಿ ಪುತ್ರ ಎಂಬ ಕಾರಣಕ್ಕೇ ಸಂಜಯ್ ಗಾಂಧಿ ರಾಜಕೀಯ ಪಡಸಾಲೆಯಲ್ಲಿ ಹೊರಳಾಡಲು ಆರಂಭಿಸಿದಾಗ…
ಮತ್ತದೇ ಇಂದಿರಾ ಪುತ್ರನಾಗಿದ್ದಕ್ಕೇ ಎಲ್ಲೋ ಪೈಲಟ್ ಆಗಿದ್ದ ರಾಜೀವ್ ಗಾಂಧಿ ದೇಶದ ಪ್ರಧಾನಿ ಗದ್ದುಗೆ ಏರಿದಾಗ…
ಇಂದಿರಾ ಸೊಸೆಯಾದ ಪುಣ್ಯಕ್ಕೆ ಇಟಲಿಯ ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷೆಯಾದಾಗ…
ಸೋನಿಯಾ ಗಾಂಧಿಯ ವರಪುತ್ರ ಎಂಬುದಕ್ಕೇ ರಾಹುಲ್ ಗಾಂಧಿ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷರಾದಾಗ…
ಹೀಗೆಂದರೆ, ಹೀಗೆ, ಎಲ್ಲ ಸಮಯದಲ್ಲೂ, ಇವರೆಲ್ಲರೂ ನೆಹರೂ ವಂಶಸ್ಥರು ಎಂಬ ಕಾರಣಕ್ಕೇ ದೇಶದ ಪ್ರಮುಖ ಹುದ್ದೆ, ಪ್ರಧಾನಿ, ಕಾಂಗ್ರೆಸ್ಸಿನ್ನ ಉನ್ನತ ಹುದ್ದೆ ಹೊಂದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಈಗ ಮತ್ತೆ ರಾಹುಲ್ ಗಾಂಧಿ ಅವರು ಸೋನಿಯಾ ಗಾಂಧಿ ಪುತ್ರ ಎಂಬ ಕಾರಣಕ್ಕೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಲು ಹೊರಟಿದ್ದಾರೆ. ಸೋನಿಯಾ ಗಾಂಧಿಯೂ ಅದಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.
ಆದರೆ ಒಂದೇ ಪ್ರಶ್ನೆ…
ಕಾಂಗ್ರೆಸ್ ಅಧ್ಯಕ್ಷನಾಗುವ ಯಾವ ಅರ್ಹತೆ ರಾಹುಲ್ ಗಾಂಧಿಗಿದೆ?
ದಿಸ್ ಮಾರ್ನಿಂಗ್ ಐ ಗಾಟ್ ಅಪ್ ಅಟ್ ನೈಟ್ ಎನ್ನುವ, ಲೇಡೀಸ್ ಟಾಯ್ಲೆಟ್ಟಿಗೆ ನುಗ್ಗುವ, ವಿದೇಶಕ್ಕೆ ಹೋಗಿ ಭಾರತದ ಮಾನ ಹರಾಜು ಹಾಕುವ, ಅಭಿವೃದ್ಧಿ ಎಂದರೆ ಮಹಿಳಾ ಸಬಲೀಕರಣ, ಉದ್ಯೋಗ ಎಂದು ಉಗುಳು ನುಂಗುವ, ಮಾತಿಗೆ ನಿಂತರೆ ನಗೆಪಾಟಲಿಗೀಡಾಗುವ, ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗೆ ತಡಕಾಡುವ, ಪಪ್ಪು ಎಂದೇ ಖ್ಯಾತಿಯಾದ ರಾಹುಲ್ ಗಾಂಧಿ ಅದ್ಹೇಗೆ ಕಾಂಗ್ರೆಸ್ ಅಧ್ಯಕ್ಷರಾದಾರೂ? ಇದನ್ನೇ ಏಣಿಯಾಗಿಟ್ಟುಕೊಂಡು ದೇಶದ ಪ್ರಧಾನಿಯಾದಾರೂ?
ಹೌದು, ನೆಹರೂ ವಂಶಸ್ಥರೆಂಬ ಕಾರಣಕ್ಕೆ ಇಂದಿರಾ ಗಾಂಧಿ ಪ್ರಧಾನಿಯಾದರೂ ಬ್ಯಾಂಕುಗಳ ರಾಷ್ಟ್ರೀಕರಣ, ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ಜಯಶೀಲರಾದದ್ದು, ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದು, ಮಹಿಳೆಯೊಬ್ಬರು ದೇಶವಾಳಿದ್ದು ಮೆಚ್ಚುವಂಥಾದ್ದೇ. ರಾಜೀವ್ ಗಾಂಧಿ ಸಹ ದೇಶದ ಡಿಜಟಲೀಕರಣದಂಥ ಉದಾತ್ತ ಕನಸು ಕಂಡರು. ವರ್ಚಸ್ಸಿನಿಂದ ದೇಶದ ಗದ್ದುಗೆಯೇರಿದರೂ ತಮ್ಮ ಸ್ಥಾನಕ್ಕೆ ಬೆಲೆ ತಂದರು. (ಹಲವು ಹಗರಣಗಳನ್ನೂ ಸೃಷ್ಟಿಸಿದರು ಎಂಬುದು ಬೇರೆ ಮಾತು). ಅಷ್ಟೇ ಏಕೆ, ಜೀನ್ಸ್ ಪ್ಯಾಂಟ್ ತೊಟ್ಟು ದೇಶಕ್ಕೆ ಬಂದ ಸೋನಿಯಾ ಗಾಂಧಿ ಸೀರೆ ತೊಟ್ಟು ಹಿಂಬಾಗಿಲಿನಿಂದ ದೇಶವನ್ನು 10 ವರ್ಷ ಆಳಲಿಲ್ಲವೇ?
ಇಂಥ ಯಾವ ಚಾಣಕ್ಷತನ, ರಾಜಕೀಯ ಪ್ರಬುದ್ಧತೆ, ದೇಶವನ್ನಾಳುವ ಸಾಮರ್ಥ್ಯ, ಮುಂದೆ ಪ್ರಧಾನಿಯಾಗುವ ಚಾಕಚಕ್ಯತೆ ರಾಹುಲ್ ಗಾಂಧಿಗಿದೆ?
ಅಷ್ಟಕ್ಕೂ, ರಾಹುಲ್ ಗಾಂಧಿ ಸೋನಿಯಾ ಪುತ್ರ ಎಂಬ ಕಾರಣಕ್ಕೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಬೇಕೆ? ಕಾಂಗ್ರೆಸ್ಸಿನಲ್ಲಿ ಬೇರೆ ನಾಯಕರೇ ಇಲ್ಲವೇ? ಮಲ್ಲಿಕಾರ್ಜುನ ಖರ್ಗೆಯಂಥ ಹಿರಿಯ ನಾಯಕರೇಕೆ ಕಾಂಗ್ರೆಸ್ ಅಧ್ಯಕ್ಷರಾಗಬಾರದು? ಹಾಗೆ ಮಾಡಲು ಸೋನಿಯಾ ಗಾಂಧಿಯೇಕೆ ಮನಸ್ಸು ಮಾಡಬಾರದು?
ರಾಹುಲ್ ಗಾಂಧಿ ಎಂಥ ರಾಷ್ಟ್ರೀಯ ನಾಯಕ ಎಂಬುದು 2014ರ ಲೋಕಸಭೆ ಚುನಾವಣೆಯಲ್ಲಿಯೇ ಗೊತ್ತಾಗಿದೆ. ಅದರ ನಂತರ ನಡೆದ ಬಿಹಾರ, ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಸೇರಿ ನಾನಾ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲೂ ರಾಹುಲ್ ಗಾಂಧಿ ತಾಕತ್ತು ಪ್ರದರ್ಶನವಾಗಿದೆ.
ಅದಾಗಲೇ ರಾಹುಲ್ ಗಾಂಧಿ ಬಿಜೆಪಿಯ ಕಾಂಗ್ರೆಸ್ ಮುಕ್ತ ಕನಸಿಗೆ ನೀರೆರೆಯುತ್ತಿದ್ದಾರೆ, ರಾಹುಲ್ ಗಾಂಧಿಯೇ ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸುತ್ತಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇದೆಲ್ಲದರ ನಡುವೆಯೇ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಲು ಹೊರಟಿರುವುದು ಕಾಂಗ್ರೆಸ್ ಮುಕ್ತ ರಾಷ್ಟ್ರಕ್ಕೆ ಅಣಕು ಪ್ರದರ್ಶನವಂತೆ ಕಾಣುತ್ತಿಲ್ಲವೇ?
ದೇಶವನ್ನು 60 ವರ್ಷ ಆಳಿದ ಕಾಂಗ್ರೆಸ್, ಭಾರತ ಎಂಬ ಹಸುವಿನ ಹಾಲನ್ನು ತಾನು ಕುಡಿದು, ಸಗಣಿಯನ್ನು ದೇಶದ ಜನರಿಗೆ ನೀಡಿತು ಎಂಬ ಕಾರ್ಟೂನೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈಗ ಮತ್ತದೇ ದೇಶವೆಂಬ ಹಸುವಿನ ಹಾಲು ಹೀರಲು ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಲು ಹೊರಟಿದ್ದಾರೆ. ಆದರೆ ನರೇಂದ್ರ ಮೋದಿ ಎಂಬ 56 ಇಂಚಿನ ಎದೆಗಾರ ರಾಹುಲ್ ಗಾಂಧಿಯಂಥ ಕುಟುಂಬ ರಾಜಕಾರಣದ ಕುಡಿ ಭೇದಿಸಲು ಸಾಧ್ಯವೇ? ಒಂದು ವಿಧಾನಸಭೆ ಚುನಾವಣೆ ಗೆಲ್ಲಿಸದ ರಾಹುಲ್ ದೇಶದ ಜನರ ಮನ ಗೆಲ್ಲುತ್ತಾರೆಯೇ? ಒಮ್ಮೊಮ್ಮೆ ಅಂತೂ ಈ ಪ್ರಶ್ನೆಗಳೇ ಬಾಲಿಶ ಎನಿಸುತ್ತವೆ!
Leave A Reply