ಕಾಂಗ್ರೆಸ್ಸಿನ ಹೊಲಸು ಬಾಣಗಳನ್ನು ಎದುರಿಸಿ ನಿಲ್ತಾರಾ ವಜ್ರದೇಹಿ?
ಮಂಗಳೂರಿನ ಹಿಂದೂತ್ವದ ಫೈರ್ ಬ್ರಾಂಡ್ ಸನ್ಯಾಸಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಕರಾವಳಿಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಚುನಾವಣೆಗೆ ನಿಲ್ಲುತ್ತಾರೆ ಎಂದು ಸುದ್ದಿಯಾಗುತ್ತಿದೆ. ಅದನ್ನು ಸ್ವಾಮೀಜಿ ಸ್ಪಷ್ಟವಾಗಿ ನಿರಾಕರಿಸಿಯೂ ಇಲ್ಲ, ಒಪ್ಪಿಕೊಂಡಿರುವುದು ಇಲ್ಲ. ಎಲ್ಲದಕ್ಕೂ ಸಮಯವೇ ಉತ್ತರ ನೀಡಲಿದೆ ಎಂದು ಪತ್ರಕತ್ತರು ಕೇಳಿದರೆ ಹೇಳುತ್ತಿದ್ದಾರೆ.
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿ ಆದ ಬಳಿಕ ಕರ್ನಾಟಕದಲ್ಲಿಯೂ ಅನೇಕ ಸಂತರಿಗೆ ರಾಜ್ಯವನ್ನು ರಾಜಕೀಯವಾಗಿ ಮುನ್ನಡೆಸಬೇಕೆಂಬ ಮಹತ್ವಾಕಾಂಕ್ಷೆ ಬಂದಿರುವುದು ಸುಳ್ಳಲ್ಲ. ಆದರೆ ರಾಜಕೀಯ ಮತ್ತು ಆಧ್ಯಾತ್ಮ ಎನ್ನುವುದು ಅಕ್ಷರಶ: ಬೇರೆ ಬೇರೆ. ಎರಡಕ್ಕೂ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ. ಆಧ್ಯಾತ್ಮ ಲೋಕದಲ್ಲಿರುವವರಿಗೆ ಬೇಕಾದ ಮನಸ್ಥಿತಿ, ಸ್ಥಿತಪ್ರಜ್ಞೆ, ಭಗವಂತನೆಡೆಗೆ ತುಡಿತ, ವ್ರತ, ಪೂಜೆ ಮತ್ತು ಪುನಸ್ಕಾರ ಮತ್ತು ಸಮಾಜದಲ್ಲಿ ತನ್ನವರು ದಾರಿ ತಪ್ಪಿದಾಗ ಭೋದಿಸುವ ತತ್ವಗಳು ರಾಜಕೀಯದಕ್ಕೆ ಹೋದ ಬಳಿಕ ಉಳಿಯಲು ಅಸಾಧ್ಯ. ಅಲ್ಲಿ ಒಮ್ಮೆ ಪ್ರವೇಶ ಮಾಡಿದರೆ ಅದು ಒಂದು ರೀತಿಯಲ್ಲಿ ಅಂಟು ಇದ್ದ ಹಾಗೆ. ನಂತರ ಅಧಿಕಾರ ಬಿಟ್ಟು ಇಳಿಯಲು ಮನಸ್ಸು ಬರುವುದಿಲ್ಲ. ಅಧಿಕಾರದಿಂದ ಇಳಿಯಬಾರದು ಎಂದಾದರೆ ಎಲ್ಲರನ್ನೂ ಸಂತೋಷವಾಗಿ ಇಡಬೇಕಾಗುತ್ತದೆ. ಎದುರಾಳಿ ಪಕ್ಷದವರು ಉರುಳಿಸುವ ದಾಳಕ್ಕೆ ತಿರುಗೇಟು ನೀಡಲು ವಾಮ ಮಾರ್ಗ ಅನುಸರಿಸುವ ಅಗತ್ಯ ಕೂಡ ಬರಬಹುದು. ಏಕಾಗ್ರತೆ ಉಳಿಯುವುದು ಕಷ್ಟಸಾಧ್ಯ. ಕಾರಣ ದಿನ ಬೆಳಗಾದರೆ ಜನರ ಸಮಸ್ಯೆ ಎದುರಿಸಬೇಕಾದ ಅನಿವಾರ್ಯತೆ. ಅದು ಬಿಟ್ಟರೆ ಜನರಿಂದ ದೂರ ಎನ್ನುವ ಆರೋಪ. ಸಂತರಾಗಿದ್ದಲ್ಲಿ ಗಂಟೆಗಟ್ಟಲೆ ಪೂಜೆ, ಪುನಸ್ಕಾರ, ಜಪ, ತಪ, ಶ್ಲೋಕ ಪಾರಾಯಣ ಮಾಡಲು ಸಮಯಾವಕಾಶವಿದೆ. ಅದೇ ರಾಜಕಾರಣಿಯಾದರೆ ಅದನ್ನು ಮಾಡಲು ಅಲ್ಲ, ಇದಕ್ಕೆ ಹೋಗಲು ಇಲ್ಲ. ಕೊನೆಗೆ ಒಬ್ಬ ಒಳ್ಳೆಯ ಸನ್ಯಾಸಿಯೂ ಆಗದೆ, ಒಳ್ಳೆಯ ರಾಜಕಾರಣಿಯೂ ಆಗದೆ ಉಳಿಯುವ ಅಪಾಯ ಇದೆ.
ಸನ್ಯಾಸಿಯಾಗಿದ್ದರೆ ಹಿಂದೂ ಧರ್ಮದವರಿಗೆ ಮಾರ್ಗದಶ್ಯಕರಾಗಿ ಈ ಧರ್ಮಕ್ಕೆ ನಿಷ್ಟರಾಗಿರಬಹುದು. ಅದೇ ಸನ್ಯಾಸಿ ರಾಜಕಾರಣಿಯಾದರೆ ಬೇರೆ ಧರ್ಮದವರನ್ನು ಹೀಯಾಳಿಸಿ ಮಾತನಾಡಲು ಆಗುತ್ತಾ? ವಜ್ರದೇಹಿ ಸ್ವಾಮೀಜಿಯವರಿಗೆ ರಾಜಕೀಯಕ್ಕೆ ಬರಲು ಯಾರ ಆಕ್ಷೇಪವೂ ಇರಲಿಕ್ಕಿಲ್ಲ. ಆದರೆ ಚುನಾವಣೆಯ ಸಂದರ್ಭದಲ್ಲಿ ಎದುರು ಪಕ್ಷದವರು ಬಿಡುವ ಬಾಣಗಳಿಗೆ ಉತ್ತರ ಕೊಡಲು ಎಲ್ಲದಕ್ಕೂ ಸಿದ್ಧರಾಗಿರಬೇಕಾಗುತ್ತದೆ. ಆಲ್ ದಿ ಬೆಸ್ಟ್ ಸ್ವಾಮೀಜಿ.
Leave A Reply