ಮೂರು ರಾಜ್ಯಗಳಲ್ಲಿ ಚುನಾವಣೆ ಭರಾಟೆ ಶುರು ನೋಡಿ, ಮಾಡುವರೇ ಅಮಿತ್ ಶಾ-ನರೇಂದ್ರ ಮೋದಿ ಮೋಡಿ?
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ – ನವೆಂಬರ್ 9
ಗುಜರಾತ್ ವಿಧಾನಸಭೆ ಚುನಾವಣೆ – ಡಿಸೆಂಬರ್ 9
ಕರ್ನಾಟಕ ವಿಧಾನಸಭೆ ಚುನಾವಣೆ – 2018
ಅದು 2014ರ ಲೋಕಸಭೆ ಚುನಾವಣೆ. ಇಡೀ ದೇಶಕ್ಕೆ ದೇಶವೇ ನರೇಂದ್ರ ಮೋದಿ ಪ್ರಧಾನಿಯಾಗಲಿ ಎಂದು ಬಯಸಿದ್ದು ಚುನಾವಣೆಗೂ ಮುನ್ನವೇ ಅಂದಾಜಿಗೆ ಸಿಕ್ಕಿತ್ತು. ಎಲ್ಲೆಡೆ ಮೋದಿ ಹವಾ ಜೋರಾಗಿತ್ತು. ಕಾಂಗ್ರೆಸ್ಸಿನ 10 ವರ್ಷದ ಕೆಟ್ಟ ಆಡಳಿತ, ಸಾಲು ಸಾಲ ಭ್ರಷ್ಟಾಚಾರ, ಹಗರಣ, ಉಗ್ರರ ದಾಳಿ… ಹೀಗೆ ನಾನಾ ವಿಷಯಗಳಿಂದ ಜನ ರೋಸಿ ಹೋಗಿ ಮೋದಿಯವರು ಪ್ರಧಾನಿ ಆಗಲಿ ಎಂದು ಹಂಬಲಿಸಿದ್ದರು ಜನ. ಎಲ್ಲವೂ ಸರಿಯಾಗಿಯೇ ಇತ್ತು. ಎಲ್ಲೆಡೆ ಮೋದಿ ಅಲೆಯ ಸೆಲೆ ಪುಟಿಯುತ್ತಿತ್ತು.
ಆದರೂ ಒಂದು ಅಳಕು ಕಾಡಿತ್ತು…
ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಹೆಚ್ಚು ಸ್ಥಾನ ಗೆದ್ದವರು ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತಾರೆ ಎಂಬ ಮಾತಿತ್ತು. ಈ ಮಾತಿಗೆ ವಿರೋಧವಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಪರವಾದ ಯಾವ ಅಂಶಗಳೂ ಇರಲಿಲ್ಲ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ಸಿಗೂ ಮಣ್ಣು ಮುಕ್ಕಿಸಿ ಸಮಾಜವಾದಿ ಪಕ್ಷ ಆಡಳಿತದಲ್ಲಿತ್ತು. ಬಿಎಸ್ಪಿಯ ಮಾಯಾವತಿಯೂ ಪ್ರಬಲವಾಗಿಯೇ ಇದ್ದರು. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದರೂ, ಮೋದಿ ಅಲೆಯಿದ್ದರೂ ಪ್ರಾದೇಶಿಕ ಪಕ್ಷಗಳೇ ರಾಷ್ಟ್ರೀಯ ಪಕ್ಷಗಳಾಂಗಿರುವ ಉತ್ತರ ಪ್ರದೇಶದಲ್ಲಿ ಕಮಲ ಅರಳಿಸುವುದು ಹೇಗೆ ಎಂಬ ಯೋಚನೆ ಬಿಜೆಪಿಯನ್ನು ಬಲವಾಗಿಯೇ ಕಾಡಿತ್ತು.
ಅಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಣ್ಣಿಗೆ ಉತ್ತರವಾಗಿ ಕಂಡವರು ಅಮಿತ್ ಶಾ…
ಮಹೋನ್ನತ ಜವಾಬ್ದಾರಿಯೊಂದು ಹೆಗಲೇರುತ್ತಲೇ ಅಮಿತ್ ಶಾ ಉತ್ತರ ಪ್ರದೇಶಕ್ಕೆ ತೆರಳಿದರು. ನಗರ ನಗರ, ಜಿಲ್ಲೆ ಜಿಲ್ಲೆ, ತಾಲೂಕು, ಗಲ್ಲಿ ಗಲ್ಲಿ ಸುತ್ತಿದರು. ಯುಪಿಎ ಆಡಳಿತದ ವೈಫಲ್ಯ ಬಿಚ್ಚಿಟ್ಟರು. ಪ್ರಾದೇಶಿಕ ಪಕ್ಷಗಳ ಭ್ರಷ್ಟಾಚಾರ ಬಯಲಿಗೆಳೆದರು. ಗುಜರಾತಿನಲ್ಲಿ ನರೇಂದ್ರ ಮೋದಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿದರು. ತಿಂಗಳುಗಟ್ಟಲೇ ಉತ್ತರ ಪ್ರದೇಶದಲ್ಲಿ ಪಕ್ಷ ಸಂಘಟಿಸಿದರು ಅಮಿತ್ ಶಾ.
ರಾಷ್ಟ್ರೀಯ ಪಕ್ಷ ಕಾಂಗ್ರೆಸ್ಸಿಗೆ 2 ಸ್ಥಾನ
ಆಡಳಿತಾರೂಢ ಸಮಾಜವಾದಿ ಪಕ್ಷಕ್ಕೆ 5 ಸ್ಥಾನ
ಅಪ್ನಾ ದಳಕ್ಕೆ 2 ಸ್ಥಾನ
ಪ್ರಧಾನಿ ಕನಸು ಕಂಡಿದ್ದ ಮಾಯಾವತಿ ಅವರ ಪಕ್ಷ ಬಿಎಸ್ಪಿ ಸೊನ್ನೆ ಸುತ್ತಿತ್ತು.
ಆದರೆ ಬಿಜೆಪಿಗೆ ದಕ್ಕಿದ್ದು ಬರೋಬ್ಬರಿ 71 ಲೋಕಸಭೆ ಸ್ಥಾನ.
ಅಮಿತ್ ಶಾ ಎಂಬ ಗುಜರಾತ್ ಸರ್ಕಾರದ ಸಚಿವ ರಾಷ್ಟ್ರೀಯ ನಾಯಕ, ಸಂಘಟನಾ ಚತುರ, ಮೋದಿಯ ಆಪ್ತ, ಚಾಣಾಕ್ಷ ಎಂದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದೇ ಆಗ. ಹೌದು, ಅಂದು, ಇಡೀ ದೇಶವನ್ನು ಮೋದಿ ಆವರಿಸಲು ಎಷ್ಟು ಶ್ರಮಪಟ್ಟರೋ, ಅಷ್ಟೇ ಶ್ರಮವನ್ನು ಉತ್ತರ ಪ್ರದೇಶದಲ್ಲಿ ಶಾ ಸುರಿದರು. ಫಲಿತಾಂಶ ಬಂದು ಮೋದಿ ಗದ್ದುಗೆಯೇರಿದರೆ, ಅಮಿತ್ ಶಾ ರಾಷ್ಟ್ರೀಯ ನಾಯಕರಾದರು. ಇಬ್ಬರ ಜುಗಲ್ ಬಂದಿ ನೋಡಿದರೆ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಬಹದ್ದೂರ್ ಶಾಸ್ತ್ರಿಯ ಗೆಳೆತನ ನೆನಪಾಗಿತ್ತು.
ಇನ್ನೊಂದು ವರ್ಷದಲ್ಲಿ ಕಣಿವೆ ರಾಜ್ಯ ಉತ್ತರ ಪ್ರದೇಶ, ಗುಜರಾತ್ ಹಾಗೂ ಕರ್ನಾಟಕದಲ್ಲಿ ಚುನಾವಣೆ ಎದುರಾದಾಗ ಮೋದಿ-ಅಮಿತ್ ಶಾ ತಂತ್ರ ನೋಡಿ, ಅವರ ವೇಳಾಪಟ್ಟಿ ನೋಡಿ, ಕಾರ್ಯಕ್ಷಮತೆ ಬದ್ಧತೆ ನೋಡಿದಾಗ, ಇಷ್ಟೆಲ್ಲ ಮೆಲುಕು ಹಾಕಬೇಕಾಯಿತು.
ತೀರಾ ಹಿಂದಿನ ವಿಚಾರ ಬೇಡ. ನಿನ್ನೆ ಗುರುವಾರವನ್ನೇ ನೋಡಬೇಕಿತ್ತು. ಕರ್ನಾಟಕದಲ್ಲಿ ಬಿಜೆಪಿ ಆಯೋಜಿಸಿರುವ ಬೃಹತ್ ಪರಿವರ್ತನಾ ರ್ಯಾಲಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಿ, ಮಿಶನ್ 150ಗೆ ನಿಶಾನೆ ತೋರಿದರೆ. ಅತ್ತ ಪ್ರಧಾನಿ ನರೇಂದ್ರ ಮೋದಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿದ್ದರು. ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತವಾಗಿಸಲು (ಗುಜರಾತಿನಲ್ಲಿ ಬಿಜೆಪಿ ಸರ್ಕಾರವೇ ಇದೆ) ಇಬ್ಬರೂ ಪಣತೊಟ್ಟಂತೆ ಮಾತನಾಡುತ್ತಿದ್ದರು.
ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿ ಮೂರೂ ರಾಜ್ಯಗಳಲ್ಲಿ ಮೋಡಿ ಮಾಡುವರೆ? ಕರ್ನಾಟಕ ಹಾಗೂ ಹಿಮಾಚಲ ಪ್ರದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸುವರೆ? ದಕ್ಷಿಣ ಭಾರತದಲ್ಲಿ ಮತ್ತೆ ಕಮಲ ಅರಳುವುದೇ?
ಏಕೆ ಸಾಧ್ಯವಿಲ್ಲ ಎನ್ನುತ್ತದೆ ಇಬ್ಬರ ಉತ್ಸಾಹ ಹಾಗೂ ತಂತ್ರಗಾರಿಕೆ.
ಈ ರುಸ್ತುಂ ಜೋಡಿ ದೇಶದ ಹಲವು ಚುನಾವಣೆಗಳನ್ನು ಎದುರಿಸಿದ ರೀತಿ, ಮಾಡಿದ ತಂತ್ರ, ಅಭಿವೃದ್ಧಿ ಆಧಾರಿತ ಭರವಸೆ ಹಾಗೂ ಜಾರಿಗೊಳಿರುವ ಯೋಜನೆಗಳನ್ನು ಜನರ ಮುಂದಿಟ್ಟು ಮತಬೇಟೆಯಾಡುವುದನ್ನು ನೋಡಿ ಕಲಿಯಬೇಕು ಎಂಬಂತೆ ಮಾಡುತ್ತಾರೆ.
ನರೇಂದ್ರ ಮೋದಿ ಅವರು ದೇಶದಲ್ಲಿ ಭಾರಿ ಅಲೆ ಸೃಷ್ಟಿಸಿ ಗೆಲುವು ಸಾಧಿಸಿದ ಬೆನ್ನಲ್ಲೇ ದೇಶದಲ್ಲಿ ಮೂರ್ನಾಲ್ಕು ವಿಧಾನಸಭೆ ಚುನಾವಣೆಗಳು ನಡೆದವು. ಅವುಗಳಲ್ಲಿ ಬಹುತೇಕವನ್ನು ಬಿಜೆಪಿ ಗೆಲುವು ಸಾಧಿಸುವಲ್ಲಿ ಮೋದಿ-ಶಾ ಜೋಡಿಯೇ ಮೋಡಿ ಮಾಡಿತು ಎಂಬುದರಲ್ಲಿ ಎರಡು ಮಾತಿಲ್ಲ. 2014ರಲ್ಲಿ ವಿಧಾನಸಭೆ ಚನಾವಣೆ ಬೇಟೆ ಆಡಲು ಹೊರಟ ಈ ಜೋಡಿ ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವಂತೆ ಮಾಡಿತು. ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳನ್ನು ಧೂಳೀಪಟ ಮಾಡಿ ಕಮಲ ಅರಳುವಂತೆ ಮಾಡಿತು. ಇದೇ ವರ್ಷ ಜಮ್ಮು-ಕಾಶ್ಮೀರದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಹಿಂದಿಗಿಂತಲೂ ಹೆಚ್ಚು ಸ್ಥಾನ ಗೆಲ್ಲಿಸಿಕೊಟ್ಟು, ನ್ಯಾಷನಲ್ ಕಾಂಗ್ರೆಸ್ಸಿಗೆ ಚಿಪ್ಪು ನೀಡಿ ಪಿಡಿಪಿ ಜತೆ ಸಮ್ಮಿಶ್ರ ಸರ್ಕಾರ ರಚಿಸುವಂತೆ ಮಾಡಿದ್ದೂ ಇಬ್ಬರ ಹೆಗ್ಗಳಿಕೆ. ಪ್ರಸ್ತುತ ಪಿಡಿಪಿ ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರ ಹಾಗೂ ಉಗ್ರರ ನಿಗ್ರಹದತ್ತ ದಾಪುಗಾಲು ಇಡುತ್ತಿರುವುದರ ಹಿಂದೆ ಈ ಇಬ್ಬರ ಕೊಡುಗೆ ಸಾಕಷ್ಟಿದೆ. ಅಷ್ಟಕ್ಕೂ ಮೋದಿ-ಶಾ ಮೋಡಿ ಆರಂಭವಾಗಿದ್ದೇ ಅಲ್ಲಿಂದ.
2015ರಲ್ಲಿ ಅಷ್ಟೇನೂ ಮುನ್ನಡೆ ಸಾಧಿಸದ ಈ ಜೋಡಿ ಆಟ ಮುಗಿಯಿತು ಎಂದೇ ಎಲ್ಲರೂ ಲೆಕ್ಕಾಚಾರ ಹಾಕತ್ತಿರುವ ಬೆನ್ನಲ್ಲೇ ಆ ಲೆಕ್ಕಾಚಾರ ತಲೆಕೆಳಗು ಮಾಡಿ 2016ರಲ್ಲಿ ಅಸ್ಸಾಂ ರಾಜ್ಯವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಂಡಿತು. ಅಲ್ಲಿಂದ ಕಾಂಗ್ರೆಸ್ ಮುಕ್ತ ಭಾರತ ಎಂಬ ಕನಸು ಚಿಗುರೊಡೆಯುವಂತಾಯಿತು.
2017 ಅಂತೂ ಕಾಂಗ್ರೆಸ್ ಮುಕ್ತ ಭಾರತದ ಕನಸಿಗೆ ನೀರೆರೆದ, ನೀರೆರೆಯುತ್ತಿರುವ ವರ್ಷ. 2017 ಆರಂಭದಲ್ಲೇ ಗೋವಾ, ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಮಣಿಪುರ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯನ್ನೇ ಅಧಿಕಾರಕ್ಕೆ ತಂದ ಈ ರುಸ್ತುಂ ಜೋಡಿ ಅಕ್ಷರಶಃ ಮೋಡಿ ಮಾಡಿತು. ಈ ವರ್ಷವೇ ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ಕಹಳೆ ಮೊಳಗುವಂತಾಗಿದ್ದೂ ಈ ಜೋಡಿಯ ಅಲೆಯ ಮೇಲೆಯೇ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಸುದೀರ್ಘ ಅವಧಿಯ ಬಳಿಕ ಬಿಜೆಪಿ ಗೆಲುವು ಸಾಧಿಸುವಂತಾಗಿದ್ದು, ಯೋಗಿ ಆದಿತ್ಯನಾಥರೆಂಬ ಫೈರ್ ಬ್ರ್ಯಾಂಡ್ ಮುಖ್ಯಮಂತ್ರಿಯಾಗಿಸಿದ್ದು ದೇಶದ ಗಮನ ಸೆಳೆಯುವಂತಾಯಿತು.
ಬರೀ ವಿಧಾನಸಭೆ ಚುನಾವಣೆ ಮಾತ್ರವಲ್ಲ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲೂ ಇವರಿಬ್ಬರ ತಂತ್ರಗಾರಿಕೆಗೇ ಮುನ್ನಡೆ ದೊರೆಯಿತು. ಮೊದಲ ಬಾರಿಗೆ ದಲಿತರೊಬ್ಬರನ್ನು ಬಿಜೆಪಿ ರಾಷ್ಟ್ರಪತಿ (ರಾಮನಾಥ ಕೋವಿಂದ್) ಅಭ್ಯರ್ಥಿಯನ್ನಾಗಿಸಿದ್ದು, ಉಪ ರಾಷ್ಟ್ರಪತಿ ಸ್ಥಾನಕ್ಕೆ ದಕ್ಷಿಣ ಭಾರತ(ವೆಂಕಯ್ಯ ನಾಯ್ಡು) ಅವರನ್ನು ನಿಲ್ಲಿಸಿ ಗೆಲ್ಲಿಸಿದ್ದು ಇವರ ತಂತ್ರಗಾರಿಕೆ ಹಾಗೂ ಲೆಕ್ಕಾಚಾರಕ್ಕೆ ಹಿಡಿದ ಕನ್ನಡಿ.
ಇನ್ನು ರಾಜ್ಯಸಭೆ ಚುನಾವಣೆಯಲ್ಲೂ ಇದೇ ಮುಂದುವರಿಯಿತು. ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೇ ಒಂದೂ ಸ್ಥಾನ ಸಿಗದ ಪರಿಸ್ಥಿತಿ ನಿರ್ಮಿಸಿದ್ದು, ಕೊನೆಯ ಗಳಿಗೆಯಲ್ಲಿ ಕಾಂಗ್ರೆಸ್ ಮಾನ ಉಳಿಸಿಕೊಂಡಿದ್ದು, ಪ್ರಸ್ತುತ ರಾಜ್ಯಸಭೆಯಲ್ಲಿ ಬಜೆಪಿ ಸದಸ್ಯರೇ ಹೆಚ್ಚಾಗಿರುವಂತೆ ಮಾಡಿರುವ ಹಿಂದೆಯೂ ಇವರಿಬ್ಬರ ಕೊಡುಗೆ, ಶ್ರಮ, ತಂತ್ರ ಇರುವುದನ್ನು ಅಲ್ಲಗಳೆಯುವಂತಿಲ್ಲ. ಹಾಗೆಯೇ ಈ ಎಲ್ಲ ಚುನಾವಣೆಗಳಲ್ಲೂ ಆಮಿಷ, ಹಿಂಬಾಗಲಿನ ಲೆಕ್ಕಾಚಾರ, ಹಣದ ಹೊಳೆ ಹರಿಸುವಿಕೆ… ಹೂಂ ಹೂಂ, ಯಾವುದೇ ಅಡ್ಡ ಹಾಗೂ ಗಿಡ್ಡ ದಾರಿಯಲ್ಲೇ, ಅಭಿವೃದ್ಧಿಯನ್ನು ಮಾನದಂಡವಾಗಿಟ್ಟುಕೊಂಡೇ ಗೆಲುವು ಸಾಧಿಸಲು ಕಾರಣರಾದರಲ್ಲ ಎಂಬುದೇ ಗಮನಾರ್ಹ.
ಇನ್ನೇನು ಹಿಮಾಚಲ ಪ್ರದೇಶ, ಗುಜರಾತ್ ಹಾಗೂ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲೂ ಇಂಥಾದ್ದೇ ನಿರೀಕ್ಷೆ ಇದೆ. ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತವಾಗಿಸುವ ಆಶಾಭಾವನೆಯಿದೆ. ಅದಕ್ಕಾಗಿ ಇಬ್ಬರೂ ಕಂಕಣಬದ್ಧರಾಗಿದ್ದು, ಸಾಲು ಸಾಲು ರ್ಯಾಲಿಗಳು, ಭಾಷಣ, ಪರಿವರ್ತನಾ ಯಾತ್ರೆಯಂಥ ಮಹತ್ತರ ರ್ಯಾಲಿ ಸೇರಿ ಹಲವು ಕಾರ್ಯಗಳಲ್ಲಿ ತೊಡಗಿದ್ದಾರೆ. ತಂತ್ರಗಾರಿಕೆ ಭಾಗವಾಗಿ ಹಿಮಾಚಲ ಪ್ರದೇಶದಲ್ಲಿ ಪ್ರೇಮ್ ಕುಮಾರ್ ಧುಮಾಲ್ ಎಂಬ ಠಾಕೂರರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯಲ್ಲಿದ್ದ ಆಂತರಿಕ ಕಿತ್ತಾಟಕ್ಕೆ ಇತಿಶ್ರೀ ಇಟ್ಟು ಪರಿವರ್ತನಾ ರ್ಯಾಲಿಯಲ್ಲಿ ಎಲ್ಲರೂ ಒಗ್ಗೂಡುವಂತೆ ಮಾಡಿದ್ದಾರೆ. ಗುಜರಾತ್ ಅಂತೂ ಬಿಜೆಪಿ ಹಿಡಿತದಲ್ಲೇ ಇದೆ. ಹಾಗಾಗಿ ಇಬ್ಬರೂ ಹಿಮಾಚಲ ಪ್ರದೇಶ ಹಾಗೂ ಕರ್ನಾಟಕಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ.
ನಾವು ಬಿಜೆಪಿ ಇತಿಹಾಸವನ್ನು ಕೆದಕಿ ನೋಡಿದಾಗ 4 ಸ್ಥಾನದಿಂದ ಕೇಂದ್ರದಲ್ಲಿ ಗದ್ದುಗೆ ಹಿಡಿಯುವಂತೆ ಮಾಡುವಲ್ಲಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಲಾಲ್ ಕೃಷ್ಣ ಆಡ್ವಾಣಿಯಂಥ ಶ್ರೇಷ್ಠ ಜೋಡಿ ಹೇಗೆ ಸಿಗುತ್ತದೆಯೋ, ಪ್ರಸ್ತುತ ಮೋದಿ ಹಾಗೂ ಶಾ ಜೋಡಿ ಬಿಜೆಪಿಯನ್ನು ದೇಶವ್ಯಾಪಿ ವಿಸ್ತರಿಸಲು ಹೊರಟಿದ್ದೂ ಇತಿಹಾಸದ ಜೋಡಿ ನೆನಪಿಸುತ್ತಿದೆ. ಈ ಜೋಡಿಯಲ್ಲಿ ಮತ್ತೊಂದು ಸಾಮ್ಯತೆ ಇದೆ. ಹೇಗೆ ವಾಜಪೇಯಿ ಅವರೇ ಪ್ರಧಾನಿಯಾಗಲಿ ಎಂದು ತ್ಯಾಗ ಮಾಡಿ ಅವರ ಬೆನ್ನೆಲುಬಿಗೆ ನಿಂತರೋ, ಹಾಗೆಯೇ ನಿಸ್ವಾರ್ಥದಿಂದ ಮೋದಿ ಅವರನ್ನು ಮುಂದೆ ಬಿಟ್ಟು ಹಿಂದೆ ನಿಲ್ಲುವ ತ್ಯಾಗ ಮನೋಭಾವನೆ ಅಮಿತ್ ಶಾ ಅವರಿಗಿದೆ. ಹಾಗಾಗಿ ನಿಸ್ವಾರ್ಥ, ತ್ಯಾಗ, ಜನಮೆಚ್ಚಿದವರು ಮುಂದಿರಲಿ ಎಂಬ ಅಮಿತ್ ಶಾರ ಗುಣ, ದೇಶಕ್ಕಾಗಿ ರಜೆಯನ್ನೇ ತೆಗೆದುಕೊಳ್ಳಲ್ಲ, ಯಾರೇನೇ ಹೇಳಿದರೂ ದಿಟ್ಟ ನಿರ್ಧಾರ ಕೈಗೊಳ್ಳುವುದನ್ನು ಬಿಡಲ್ಲ, ದೇಶಕ್ಕಾಗಿಯೇ ಜೀವನವನ್ನೇ ಮುಡಿಪಾಗಿಟ್ಟ ಹೆಮ್ಮೆಯ ಪ್ರಧಾನಿಯ ಕಾರ್ಯವೈಖರಿ ಜನರಿಗೆ ಆಪ್ತವಾಗಿರುವುದರಲ್ಲಿ ಎರಡು ಮಾತಿಲ್ಲ. ಈ ಜೋಡಿ ಮೂರೂ ರಾಜ್ಯಗಳ ವಿಧಾನಸಭೆಯಲ್ಲಿ ಮೋಡಿ ಮಾಡುತ್ತಾ? ಅದರಿಂದ ದೇಶಕ್ಕೆ ಒಳಿತಾಗುತ್ತಾ? ಎಲ್ಲ ಪ್ರಶ್ನೆಗೂ ಪ್ರಜ್ಞಾವಂತ ನಾಗರಿಕರ ಬಳಿಯೇ ಉತ್ತರವಿದೆ. ಉತ್ತರ ಪಡೆಯಲು ಫಲಿತಾಂಶದವರೆಗೂ ಕಾಯಲೇಬೇಕು. ಜೋಡಿ ಮೋಡಿ ಮಾಡಲಿ, ಅದರಿಂದ ದೇಶಕ್ಕೆ, ಜನರಿಗೆ ಒಳಿತಾಗಲಿ ಎಂಬುದೇ ಆಶಯ.
Leave A Reply