ಮಂಗಳೂರಿನಲ್ಲಿ ಬಸ್ ಸ್ಟಾಪ್ ಎಂದರೆ ಕಾರುಗಳನ್ನು ನಿಲ್ಲಿಸುವ ಜಾಗ, ಉತ್ತರ ಸರಿನಾ!
ಬಸ್ ಸ್ಟಾಪ್ ಎಂದರೇನು? ಎನ್ನುವ ಪ್ರಶ್ನೆಯನ್ನು ಯಾವ ವಯಸ್ಸಿನ ಮಗುವಿಗೆ ಕೇಳಿದರೆ ಅದು ಸರಿಯಾದ ಉತ್ತರ ಕೊಡಬಹುದು. ಒಂದನೇ, ಐದನೇ ಅಥವಾ ಏಳನೇ. ನನ್ನ ಪ್ರಕಾರ ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದ ಎಷ್ಟೇ ಸಣ್ಣ ವಯಸ್ಸಿನ ಮಗುವಾದರೂ ಬಸ್ ಸ್ಟಾಪ್ ಎಂದರೆ ಏನು ಎನ್ನುವುದಕ್ಕೆ ಸರಿಯಾದ ಉತ್ತರ ಕೊಡುತ್ತದೆ. ಯಾಕೆಂದರೆ ಆ ಪ್ರಶ್ನೆಯಲ್ಲಿಯೇ ಉತ್ತರ ಇದೆ. ಆದ್ದರಿಂದ ಅದಕ್ಕೆ ತುಂಬಾ ತಲೆ ಖರ್ಚು ಮಾಡಬೇಕಿಲ್ಲ.
ಆದರೆ ಆಶ್ಚರ್ಯ ಎಂದರೆ ಬಸ್ ಸ್ಟಾಪ್ ನಲ್ಲಿ ಕಾರುಗಳು ಬಂದು ಪಾರ್ಕ್ ಮಾಡಿದರೂ ಮತ್ತು ಬಸ್ ಸ್ಟಾಪಿನ ಎದುರು ಕಾರುಗಳನ್ನು ನಿಲ್ಲಿಸಿ ಹೋದರೂ ನಮ್ಮಲ್ಲಿ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಅದನ್ನು ಕೇಳಬೇಕಾದ ಪೊಲೀಸರು ಅಲ್ಲಿ ಇರುವುದಿಲ್ಲ. ಅಂತಹುದೊಂದು ದೃಶ್ಯವನ್ನು ಇವತ್ತು ಬೆಳಿಗ್ಗೆ ನಾನು ನೋಡಿದೆ. ಸ್ಥಳ: ಮಂಗಳೂರಿನ ರಥಬೀದಿಯಲ್ಲಿರುವ ಸರಕಾರಿ ಹೆಣ್ಣುಮಕ್ಕಳ ಪದವಿ ಪೂರ್ವ ಕಾಲೇಜಿನ ಎದುರು. ಎರಡು ಐಷಾರಾಮಿ ಕಾರುಗಳು ಕಾಲೇಜಿನ ಹೊರಗಿರುವ ಬಸ್ ಸ್ಟಾಪಿನಲ್ಲಿ ಅಡ್ಡಾದಿಡ್ಡಿ ನಿಂತು ಆ ರಸ್ತೆಯಲ್ಲಿ ಹೋಗುವ ವಾಹನಗಳನ್ನು ತಮಾಷೆ ಮಾಡುತ್ತಿವೆನೊ ಎನ್ನುವಂತೆ ಕಾಣುತ್ತಿತ್ತು. ಮೊದಲೇ ಜನನಿಬಿಡ ಪ್ರದೇಶ. ಅದರಲ್ಲಿಯೂ ಅಲ್ಲಿ ಕೆಲವೇ ಹೆಜ್ಜೆಗಳ ನಂತರ ಒಂದು ರಸ್ತೆ ಬಲಭಾಗಕ್ಕೆ ತಿರುವು ಪಡೆದುಕೊಳ್ಳುತ್ತದೆ ಮತ್ತೊಂದು ಲೋವರ್ ಕಾರ್ ಸ್ಟ್ರೀಟ್ ಗೆ ಹೋಗುತ್ತದೆ. ಅಂತಹ ಪ್ರದೇಶದಲ್ಲಿ ಕಾರನ್ನು ರಸ್ತೆ ಪಕ್ಕ ನಿಲ್ಲಿಸಿ ಹೋದರೆ ಬರುವ ಬಸ್ಸುಗಳು ತಮ್ಮ ಬಾಡಿಯನ್ನು ಎಲ್ಲಿ ನಿಲ್ಲಿಸುವುದು. ಅವು ಅನಿವಾರ್ಯವಾಗಿ ರಸ್ತೆಯ ಮಧ್ಯಕ್ಕೆ ನಿಲ್ಲಿಸಬೇಕಾಗುತ್ತದೆ. ಆಗ ಅದರ ಹಿಂದೆ ಬರುವ ವಾಹನಗಳು ಎಲ್ಲಿ ನಿಲ್ಲಿಸುವುದು. ಅವು ಕಾಯಲು ಸಮಯ ಇಲ್ಲದೆ ಹಾರ್ನ್ ಬಾರಿಸುತ್ತಲೇ ಇರುತ್ತವೆ. ಕೆಲವು ಸೆಕೆಂಡ್ ಅಲ್ಲಿ ಬಸ್ ನಿಂತರೂ ಹಿಂದೆ ಬರುವ ವಾಹನಗಳ ಸಾಲು ಹಳೆ ತಾಜ್ ಮಹಾಲ್ ತನಕ ಹೋಗುತ್ತದೆ. ಅದರ ನಂತರ ಅವು ಕ್ಲೀಯರ್ ಆಗುವ ಒಳಗೆ ಇನ್ನೊಂದು ಬಸ್ ಕುದ್ರೋಳಿ ಕಡೆಯಿಂದ ಬಂದು ಅದೇ ಬಸ್ ಸ್ಟಾಪಿನ ಎದುರು ನಿಲ್ಲುತ್ತದೆ. ಈ ಕಡೆ ಈ ಬಸ್. ಆ ಕಡೆ ಎರಡು ಕಾರುಗಳು. ನಡುವಿನ ಓಣಿಯಂತಹ ಜಾಗದಲ್ಲಿ ಯಾರಾದರೂ ತಮ್ಮ ವಾಹನವನ್ನು ನುಗ್ಗಿಸಿ ಯಾವುದಕ್ಕೂ ತಾಗಿಸದೇ ಹೋಗಬೇಕು. ಈ ಪರಿಸ್ಥಿತಿ ಕೇವಲ ರಥಬೀದಿಗೆ ಮಾತ್ರ ಸೀಮಿತವಲ್ಲ. ಇವತ್ತು ಈ ದೃಶ್ಯವನ್ನು ಸಾಕ್ಷಾತ್ ನೋಡಿದ ಕಾರಣ ಇಲ್ಲಿನ ಉದಾಹರಣೆ ಕೊಡಬೇಕಾಯಿತು. ಅದು ಬಂಟ್ಸ್ ಹಾಸ್ಟೆಲ್ ಇರಲಿ ಮತ್ತೊಂದು ಜಂಕ್ಷನ್ ಇರಲಿ ಎಲ್ಲವೂ ಸೇಮ್. ಪೊಲೀಸರನ್ನು ಇಲ್ಲಿ ಇತ್ತೀಚೆಗೆ ಡ್ಯೂಟಿಗೆ ಹಾಕುತ್ತಿಲ್ಲವಾದ ಕಾರಣ ಇಲ್ಲಿ ಇಂತಹ ಆವಾಂತರಗಳು ನಡೆಯುತ್ತವೆ.
ಆದರೆ ನಮ್ಮ ಪೊಲೀಸರು ತಮಗೆ ಕೊಟ್ಟ ಟಾರ್ಗೆಟ್ ಅನ್ನು ಫಿನಿಶ್ ಮಾಡಲು ರಸ್ತೆಗಳ ತಿರುವಿನಲ್ಲಿ ನಿಂತು ಹೆಲ್ಮೆಟ್ ಹಾಕದವರನ್ನು ಹಿಡಿಯುವ ಕೆಲಸ ಮಾಡುತ್ತಾರೆ. ಪ್ರತಿಯೊಬ್ಬ ಪೊಲೀಸ್ ಸಬ್ ಇನ್ಸಪೆಕ್ಟರ್ ಗೆ ಕೂಡ ಕನಿಷ್ಟ ಹತ್ತು ಸಾವಿರ ರೂಪಾಯಿ ಫೈನ್ ಸಂಗ್ರಹಿಸಬೇಕೆನ್ನುವ ಒತ್ತಡ ಮೇಲಿನಿಂದ ಇರುವಾಗ ಅವರು ಅದಕ್ಕೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ ವಿನ: ಈ ರಸ್ತೆ ಬದಿಯಲ್ಲಿ ನಿಲ್ಲುವ ವಾಹನಗಳನ್ನು ಓಡಿಸಲು ಅವರು ಸಮಯ ವೇಸ್ಟ್ ಮಾಡುವುದಿಲ್ಲ. ಯಾಕೆಂದರೆ ಅವರಿಗೆ ಗೊತ್ತಿದೆ. ಈ ಕಾರುಗಳನ್ನು ಅಲ್ಲಿಂದ ಓಡಿಸಬೇಕಾದರೆ ಅದರ ಮಾಲೀಕನೇ ಬರಬೇಕು. ಇಲ್ಲದಿದ್ದರೆ ಇವರು ಅದರ ಟೈಯರ್ ಗೆ ಲಾಕ್ ಹಾಕಬೇಕು. ಒಂದು ವೇಳೆ ಕಾರಿನ ಮಾಲೀಕ ಪ್ರಭಾವಿಯಾದರೆ ಲಾಕ್ ಮಾಡಿದ ಪೊಲೀಸನಿಗೆ ಮುಜುಗರ ಆಗುವಂತೆ ಮೇಲಿನಿಂದ ಹೇಳಿಸಿ ಲಾಕ್ ತೆಗೆಸುತ್ತಾನೆ. ಅದರ ಬದಲಿಗೆ ನಮ್ಮ ಜನರೇನೂ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಹೆಚ್ಚೆಂದರೆ ಟಿವಿಯಲ್ಲಿ ಇಂತಹ ಡಿಸ್ಕಷನ್ ಇಟ್ಟ ದಿನ ಎಲ್ಲಿಯಾದರೂ ಫೋನ್ ಮಾಡಿ ಮಾತನಾಡಬಹುದು. ಅದರ ಬದಲಿಗೆ ಬೇರೆನೂ ಮಾಡಲಾರರು. ಆದ್ದರಿಂದ ಪೊಲೀಸರು ಕೂಡ ದಂಡ ವಸೂಲಿಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ವಿನ: ಈ ಟ್ರಾಫಿಕ್ ಓಡಿಸುವ ದಂಡದ ಕೆಲಸ ಮಾಡುವುದಿಲ್ಲ.
ಆದರೆ ಏನೇ ಆಗಲಿ ಪೊಲೀಸ್ ಕಮಿಷನರ್ ಅವರು ಜನರ ಉಪಯೋಗಕ್ಕಾಗಿ ಒಂದು ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು. ಅದೇನೆಂದರೆ ಸಂಜೆ ಏಳು ಗಂಟೆಯ ನಂತರ ಟ್ರಿಪ್ ಕ್ಯಾನ್ಸಲ್ ಮಾಡುವ ಬಸ್ಸುಗಳನ್ನು ಕಡ್ಡಾಯವಾಗಿ ಟ್ರಿಪ್ ಕ್ಯಾನ್ಸಲ್ ಮಾಡದ ಹಾಗೆ ನೋಡಬೇಕು. ಆ ಮೂಲಕ ಅನೇಕ ಪ್ರಯಾಣಿಕರಿಗೆ ಸಹಾಯ ಮಾಡಿದಂತೆ ಆಗುತ್ತದೆ. ಇನ್ನು ಸಿಟಿ ಬಸ್ಸಿನಲ್ಲಿ ಟಿಕೇಟ್ ವೆಡಿಂಗ್ ಮಿಶೀನ್ ಮೂಲಕ ಕಡ್ಡಾಯವಾಗಿ ಟಿಕೇಟ್ ಕೊಡಬೇಕು ಎನ್ನುವ ನಿಯಮ ಬಂದಿರುವುದು ನಿಮಗೆಲ್ಲಾ ಗೊತ್ತೆ ಇದೆ. ಆದರೆ ಟ್ರಾಫಿಕ್ ಪೊಲೀಸರ ವಾಹನ ಅಥವಾ ಆರ್ ಟಿಒ ವೆಹಿಕಲ್ ಗಳನ್ನು ದೂರದಿಂದ ನೋಡಿದ ತಕ್ಷಣ ಹಾರವನ್ನು ಕುತ್ತಿಗೆಗೆ ಹಾಕಿದ ಹಾಗೆ ಕಂಡಕ್ಟರ್ ಗಳು ಆ ಘಳಿಗೆ ಮಾತ್ರ ಟಿಕೇಟ್ ಹರಿದ ಹಾಗೆ ಮಾಡುತ್ತಾರೆ. ಇಲ್ಲದಿದ್ದರೆ ಆ ಮೆಶೀನ್ ಬಸ್ಸಿನ ಚಾಲಕ ಕುಳಿತುಕೊಳ್ಳುವ ಸೀಟಿನ ಪಕ್ಕದ ಇಂಜಿನ್ ಬಾಕ್ಸ್ ಮೇಲೆ ತೆಪ್ಪಗೆ ಬಿದ್ದಿರುತ್ತದೆ. ಇದು ಗೊತ್ತಾದ ನಂತರ ಟಿಕೇಟ್ ಕೊಡದೇ ಹಣ ಕೊಡಬೇಡಿ ಎಂದು ಆರ್ ಟಿಒ ಮತ್ತು ಪೊಲೀಸ್ ಕಮೀಷನರ್ ಸೂಚನೆ ಹೊರಡಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಪ್ರಾಕ್ಟಿಕಲ್ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.
ಕೆಲವು ಹೋಟೇಲ್ ಗಳಲ್ಲಿ ಊಟ ಮಾಡಿ ಬಿಲ್ ಕೊಡುವುದು ಮತ್ತು ಕೆಲವು ಹೋಟೇಲ್ ಗಳಲ್ಲಿ ಟೋಕನ್ ತೆಗೆದುಕೊಂಡು ಊಟ ಮಾಡುವುದು. ಎರಡೂ ಪದ್ಧತಿ ಓಕೆ. ಆದರೆ ಬಸ್ಸಿನಲ್ಲಿ ಹಾಗಲ್ಲ. ಅದರ ಗಮ್ಮತ್ತನ್ನು ಹೇಳಿ ನಾಳೆ ಈ ವಾರವನ್ನು ಮುಗಿಸುತ್ತೇನೆ!
Leave A Reply