ಪದ್ಮಾವತಿ ಚಿತ್ರ ಬಿಡುಗಡೆಯಾದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ: ಕೇಂದ್ರಕ್ಕೆ ಯೋಗಿ ಆದಿತ್ಯನಾಥ ಸರ್ಕಾರ ಮನವರಿಕೆ
ಲಖನೌ: ಬಿಡುಗಡೆಗೂ ಮುನ್ನವೇ ವಿವಾದ ಸೃಷ್ಟಿಸಿರುವ ಸಂಜಯ್ ಲೀಲ್ ಬನ್ಸಾಲಿ ನಿರ್ದೇಶನದ “ಪದ್ಮಾವತಿ” ಚಿತ್ರ ವಿವಾದ ಈಗ ಕೇಂದ್ರದ ಅಂಗಳ ತಲುಪಿದೆ.
ಪದ್ಮಾವತಿ ಚಲನಚಿತ್ರ ಬಿಡುಗಡೆಯಾದರೆ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಉತ್ತರ ಪ್ರದೇಶ ಸರ್ಕಾರ ವರದಿ ನೀಡಿದೆ.
ಅ.9ರಂದು ಪದ್ಮಾವತಿ ಚಿತ್ರದ ಟ್ರೇಲರ್ ಬಿಡುಗಡೆಯಾದ ಬಳಿಕ ಜನ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದಾಗ್ಯೂ, ಚಿತ್ರ ಬಿಡುಗಡೆಯಾದರೆ ಗಲಾಟೆ ಆರಂಭವಾಗುತ್ತದೆ ಎಂದು ಗುಪ್ತಚರ ಮಾಹಿತಿ ಬಂದಿದೆ. ಹಾಗಾಗಿ ಸೆನ್ಸಾರ್ ಮಂಡಳಿ ಜನರ ಅಭಿಪ್ರಾಯ ಪರಿಗಣಿಸಿ ಚಿತ್ರ ಬಿಡುಗಡೆಗೆ ಅನುಮತಿ ನೀಡಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಅಲ್ಲದೆ ಈ ತಿಂಗಳು ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದ್ದು, ಡಿ.1ರಂದೇ ಫಲಿತಾಂಶ ಹೊರಬೀಳಲಿದೆ. ಅದೇ ದಿನ ಪದ್ಮಾವತಿ ಚಿತ್ರ ಬಿಡುಗಡೆಯಾದರೆ ಗಲಭೆಗೆ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಚಿತ್ರದಲ್ಲಿ ರಾಣಿ ಪದ್ಮಿನಿಯನ್ನು ಅಶ್ಲೀಲವಾಗಿ ಚಿತ್ರಿಸಲಾಗಿದೆ ಎಂದು ರಜಪೂತರು ಆರೋಪಿಸಿದ್ದಲ್ಲದೇ, ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ ಡಿ.1ರಂದು ಭಾರತ ಬಂದ್ ಗೆ ಕರೆ ನೀಡಲಾಗಿದೆ.
Leave A Reply