ಒಂದಾದ ಬೆನ್ನಲ್ಲೇ ಬಿರುಕು, ಹಾರ್ದಿಕ್ ಪಟೇಲ್ ಪಿಎಎಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷ
ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ಮುಖ್ಯಸ್ಥ ಹಾರ್ದಿಕ್ ಪಟೇಲ್ ಹಾಗೂ ಕಾಂಗ್ರೆಸ್ ಒಂದಾದ ಬೆನ್ನಲ್ಲೇ ಇಬ್ಬರ ನಡುವೆ ಜಟಾಪಟಿ ಆರಂಭವಾಗಿದ್ದು, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎರಡು ಬಣಗಳ ನಡುವೆ ಸೂರತ್ ನಲ್ಲಿ ಗಲಾಟೆ ನಡೆದಿದೆ.
ಕಾಂಗ್ರೆಸ್ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಪಿಎಎಎಸ್ ನ ಇಬ್ಬರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿದೆ. ಆದರೆ ಬಿಡುಗಡೆಗೂ ಮುನ್ನ ಕಾಂಗ್ರೆಸ್ ಐವರಿಗೆ ಟಿಕೆಟ್ ನೀಡುವುದಾಗಿ ತಿಳಿಸಿ, ಈಗ ಇಬ್ಬರಿಗೆ ನೀಡಿದೆ ಎಂದು ಪಿಎಎಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ವೇಳೆ ಎರಡೂ ಬಣಗಳ ಕಾರ್ಯಕರ್ತರ ನಡುವೆ ವಾಗ್ವಾದ ಜೋರಾಗಿದ್ದು, ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಏತನ್ಮಧ್ಯೆ, ಪಿಎಎಎಸ್ ಕೋರ್ ಕಮಿಟಿ ಜತೆ ಚರ್ಚಿಸದೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ ಎಂದು ಪಿಎಎಎಸ್ ಸಂಚಾಲಕ ದಿನೇಶ್ ಬಂಭಾನಿಯಾ ಆರೋಪಿಸಿದ್ದಾರೆ.
ಕಾಂಗ್ರೆಸ್ ಭಾನುವಾರ ರಾತ್ರಿ 77 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ಡಿ.8 ಹಾಗೂ 14ರಂದು ಗುಜರಾತಿನಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಆದರೆ, ಚುನಾವಣೆಗೂ ಮೊದಲೇ ಪಿಎಎಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಟಿಕೆಟ್ ಹಂಚಿಕೆ ವಿಚಾರದಲ್ಲೇ ಜಗಳವಾಡಿದ್ದು, ಅಧಿಕಾರಕ್ಕೆ ಬಂದರೆ ಹೇಗೆ ವರ್ತಿಸುತ್ತಾರೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.
Leave A Reply