ಇನ್ನು ವೈಷ್ಣೋದೇವಿ ದೇವಸ್ಥಾನಕ್ಕೆ ದಿನಕ್ಕೆ 50 ಸಾವಿರ ಜನರಿಗೆ ಮಾತ್ರ ಪ್ರವೇಶ!
ಕಳೆದ ವರ್ಷ ಸರಿಯಾಗಿ ಜನವರಿ, 2016, ರಾಷ್ಟ್ರೀಯ ಹಸಿರು ಪೀಠ ಜಮ್ಮು-ಕಾಶ್ಮೀರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ನೀವು ಕಾಟ್ರಾದ ಸ್ವಚ್ಚತೆಗೆ ಏನು ಕ್ರಮ ತೆಗೆದುಕೊಂಡಿದ್ದಿರಿ? ಕಾಟ್ರಾ ಎಂದರೆ ಹಿಂದೂಗಳ ಪರಮಪವಿತ್ರ ಸ್ಥಳ ವೈಷ್ಣೋದೇವಿ ಮಂದಿರ ಇದೆಯಲ್ಲ, ಆ ಊರಿನ ಬೇಸ್ ಕ್ಯಾಂಪ್ ಹೆಸರು. ಜಮ್ಮುವಿನ ರೆಸೀ ಜಿಲ್ಲೆಯಲ್ಲಿ ಇರುವ ಊರು ಕಾಟ್ರಾ ಇಡೀ ಜಿಲ್ಲೆಯ ಮಟ್ಟಿಗೆ ಆರ್ಥಿಕ ಸಂಪನ್ಮೂಲವನ್ನು ಕ್ರೋಢಿಕರಿಸುವ ಜಾಗ. ವರ್ಷಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಹರಿದುಬರುತ್ತಿದ್ದರೂ ಯಾಕೆ ಒಂದೇ ಒಂದು ತ್ಯಾಜ್ಯ ಸಂಸ್ಕರಣ ಘಟಕವನ್ನು ನಿರ್ಮಿಸಿಲ್ಲ ಎಂದು ಎನ್ ಜಿಟಿ ಪ್ರಶ್ನೆ ಮಾಡಿತ್ತು. ಕಾಟ್ರಾ ಬಸ್ ನಿಲ್ದಾಣ ನೋಡಿದರೆ ಅದೊಂದು ತ್ಯಾಜ್ಯದ ಕೊಂಪೆ. ಭಾರತದ ಹಲವೆಡೆಯಿಂದ ಬರುವ ಜನರನ್ನು ಎದುರುಗೊಳ್ಳುವ ಸ್ಥಳ ಅದು. ಊರಿನ ತುಂಬೆಲ್ಲಾ ಪ್ಲಾಸ್ಟಿಕ್ ತ್ಯಾಜ್ಯದ ರಾಶಿ. ನೀವಾಗಿ ಏನಾದ್ರೂ ಮಾಡ್ತಿರೋ ಅಥವಾ ನಾವೇ ಏನೂಂತ ನೋಡಬೇಕೋ ಎಂದು ರಾಷ್ಟ್ರೀಯ ಹಸಿರು ಪೀಠ ಹೇಳಿದ ಮೇಲೆಯೂ ಅಲ್ಲಿ ಅಂತದ್ದೇನೂ ಆದಂತೆ ಕಾಣಲಿಲ್ಲ. ಜನ ತಾವು ತಿಂದ, ಉಂಡ ಬಳಿಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಹಾಕಲು ಸರಿಯಾದ ಡಸ್ಟ್ ಬಿನ್ ಕೂಡ ಇಲ್ಲದೆ ತ್ಯಾಜ್ಯವನ್ನು ಪಕ್ಕದ ಬ್ಯಾನಂಗಾ ನದಿಗೆ ಬಿಸಾಡುತ್ತಿದ್ದರು. ಹೀಗೆ ನದಿ ಕೂಡ ಹಾಳಾಗಲು ಶುರುವಾಗಿತ್ತು. ಅಲ್ಲಿಂದ ಬಹುತೇಕ ಒಂದು ವರ್ಷ ಹತ್ತು ತಿಂಗಳ ನಂತರ ಹಸಿರು ಪೀಠ ಒಂದು ಮಹತ್ವದ ನಿರ್ದೇಶನ ನೀಡಿದೆ. ದಿನಕ್ಕೆ ಐವತ್ತು ಸಾವಿರಕ್ಕಿಂತ ಹೆಚ್ಚು ಜನರು ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳುವಂತಿಲ್ಲ.
ದಿನದ ನಿರ್ಧಿಷ್ಟ ಸಂಖ್ಯೆ ತಲುಪಿದ ಕೂಡಲೇ ಉಳಿದ ಜನರನ್ನು ನಿರ್ಭಂದಿಸಲಾಗುವುದು. ಹೀಗೆ ಸೂಚನೆ ಎಲ್ಲಾ ಕಡೆ ಪ್ರಚಾರವಾದ ನಂತರ ಅನೇಕ ಯಾತ್ರಿಕರ ಪ್ರವಾಸದ ವೇಳಾಪಟ್ಟಿ ಮೇಲೆ ಕೆಳಗೆ ಆಗುವುದು ಖಂಡಿತ. ವೈಷ್ಣೋದೇವಿ ದೇವಾಲಯ ಇರುವ ಊರು ಸ್ವಚ್ಚವಾಗಿರಬೇಕು. ಅದರಲ್ಲಿ ನನ್ನದೇನೂ ಆಕ್ಷೇಪವಿಲ್ಲ. ಆದರೆ ಭಕ್ತಜನರ ಸಂಖ್ಯೆಯನ್ನು ಕಡಿತ ಮಾಡುವುದರಿಂದ ಅದಕ್ಕೆ ಪರಿಹಾರ ಸಿಗುತ್ತದೆ ಎಂದರೆ ಏನೋ ಅಸಂಬದ್ಧ ಅನಿಸುತ್ತದೆ. ಅದರ ಬದಲು ಎಷ್ಟೇ ಜನರು ಬರಲಿ, ಅವರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ನಡೆಯಬೇಕು. ಒಮ್ಮೆ ಜನರಲ್ಲಿ ಜಾಗೃತಿ ಮೂಡಿದರೆ ದಿನಕ್ಕೆ ಐದು ಲಕ್ಷ ಜನರು ಬಂದರೂ ಊರು ಹಾಳಾಗುವುದಿಲ್ಲ.
ಈ ಜಾಗೃತಿ ಮೂಡಿಸುವ ವಿಷಯ ಬಂದಾಗ ನಮ್ಮ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ನೆನಪಿಗೆ ಬರುತ್ತದೆ. ಅಲ್ಲಿನ ಭೋಜನಾಲಯದಲ್ಲಿ ಅಲ್ಲಲ್ಲಿ ಅನ್ನದ ಮಹತ್ವವನ್ನು ವಿವರಿಸುವ ಫಲಕಗಳನ್ನು ಗೋಡೆಗಳಲ್ಲಿ ಯಾರೋ ಪುಣ್ಯಾತ್ಮರು ಅಂಟಿಸಿದ್ದಾರೆ. ನೀವು ದೇವರ ಅನ್ನ ಪ್ರಸಾದ ಸ್ವೀಕರಿಸಲು ಸರದಿಯಲ್ಲಿ ಹೋಗುವಾಗಿನಿಂದ ಹಿಡಿದು ಊಟ ಮಾಡಿ ಕೈತೊಳೆಯುವ ಜಾಗದ ತನಕ ಅಲ್ಲಲ್ಲಿ ಅನ್ನದ ಮಹತ್ವ, ಅದನ್ನು ಬೆಳೆಯುವ ರೈತನ ಮಹತ್ವ, ನಾವು ಅನ್ನವನ್ನು ಬಿಟ್ಟರೆ ಅದರಿಂದ ಆಗುವ ನಷ್ಟ, ಕೃಷಿಯ ಮಹತ್ವ ಹೀಗೆ ಚಿಕ್ಕದಾಗಿ ಚೊಕ್ಕದಾಗಿ ಬರೆಯಲಾಗಿದೆ. ಅದನ್ನು ಒಮ್ಮೆ ಓದಿದರೆ ಮತ್ತೆ ತಟ್ಟೆಯಲ್ಲಿ ಒಂದು ಅನ್ನದ ಅಗಳು ಕೂಡ ಬಿಡುವ ಮನಸ್ಸು ಬರುವುದಿಲ್ಲ. ಒಂದೊಂದು ಅನ್ನದ ಅಗಳಿಗೂ ಇರುವ ಜೀವಸತ್ವವನ್ನು ನೀವು ಓದಿಕೊಂಡೇ ಊಟಕ್ಕೆ ಕುಳಿತ ಕಾರಣ ನಿಮಗೆ ಎಷ್ಟು ಬೇಕೋ ಅಷ್ಟೇ ತೆಗೆದುಕೊಂಡು ಊಟ ಮಾಡಿ ಬರುತ್ತೀರಿ. ಇದು ಜಾಗೃತಿ.
ವೈಷ್ಣೋದೇವಿ ಪರಿಸರದಲ್ಲಿ ಕೂಡ ಆಗಬೇಕಾಗಿರುವುದು ಇಂತದ್ದೇ ಕ್ರಮ. ಇಲ್ಲಿ ದೇವಾಲಯದ ದಾರಿಯುದ್ದಕ್ಕೂ ಇರುವ ಅಂಗಡಿಗಳಲ್ಲಿ ಯೂಸ್ ಎಂಡ್ ಥ್ರೋ ವಸ್ತುಗಳನ್ನು ಮಾರುವುದನ್ನು ನಿಷೇಧಿಸಬೇಕು. ನೀವು ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಮಾರಿ ನಂತರ ಅದನ್ನು ಬಿಸಾಡಲು ಡಸ್ಟ್ ಬಿನ್ ಇಡದೇ ಇದ್ದರೆ ಜನ ತಾನೇ ಏನು ಮಾಡಿಯಾರು? ಅದಕ್ಕಾಗಿ ಮೊದಲು ಆಗಬೇಕಾಗಿರುವುದು ಯಾವುದರಿಂದ ಪರಿಸರ ಹಾನಿ ಹಾಳಾಗುತ್ತದೆಯೋ ಅಂತದ್ದು ಅಲ್ಲಿ ಜನರ ಕೈಗೆ ಸಿಗದ ಹಾಗೆ ಮಾಡಿಬಿಡುವುದು. ಆದರೆ ನನಗೆ ಆಶ್ಚರ್ಯವಾಗುವುದು ಈ ದೇವಸ್ಥಾನಗಳಿಗೆ ಬರುವ ಭಕ್ತರ ಸಂಖ್ಯೆ ಕಡಿಮೆ ಮಾಡಲು ಆಸಕ್ತಿ ತೋರುವ ಹಸಿರು ಪೀಠಗಳು ಅದೇ ಹಳೆ ವಾಹನಗಳಿಂದ ನಿರಂತರವಾಗಿ ಹೊಗೆ ಹೊರಗೆ ಬಂದು ಪ್ರಕೃತಿ ಹಾಳಾಗುತ್ತಿದೆಯಲ್ಲ, ಅದಕ್ಕೆ ಯಾಕೆ ಏನು ಹೇಳುವುದಿಲ್ಲ. ಉದಾಹರಣೆಗೆ ದೆಹಲಿಯನ್ನೇ ತೆಗೆದುಕೊಳ್ಳಿ. ಅಲ್ಲಿ ಉಂಟಾಗಿರುವ ವಾಯು ಮಾಲಿನ್ಯವನ್ನು ಎನ್ ಜಿಟಿ ಮನಸ್ಸು ಮಾಡಿದರೆ ಕಠಿಣ ನೀತಿಗಳನ್ನು ಜಾರಿಗೆ ತಂದು ನಿಲ್ಲಿಸಲು ಆಗುವುದಿಲ್ಲವೇ. ಈಗಲೂ ನಮ್ಮ ದೇಶದಲ್ಲಿ 10-15 ವರ್ಷಗಳಷ್ಟು ಹಳೆಯ ವಾಹನಗಳು ಇನ್ನೂ ಕೂಡ ರಸ್ತೆಯ ಮೇಲೆ ಓಡಾಡುತ್ತಿವೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೂಡಲೇ ಯಾರಾದರೂ ನ್ಯಾಯಾಲಯಕ್ಕೆ ಹೋಗಿ ಸ್ಟೇ ತರಬಹುದು. ಆದರೆ ನಾನು ಹೇಳುವುದು ಸರಕಾರಿ ಸಂಸ್ಥೆಗಳು ಕೇವಲ ಪ್ರಫೋಸಲ್ ಮಾಡಿ ಇಟ್ಟರೆ ವಿರೋಧ ಬರುತ್ತದೆ. ಕಠಿಣ ನಿಯಮ ತನ್ನಿ, ನೋಡೋಣ ಯಾರು ನಿಲ್ಲಿಸುತ್ತಾರೆ
Leave A Reply