ಪಾಲಿಕೆಯ ಬಜೆಟ್ ತಯಾರಿಸುವಾಗ ನಿಮ್ಮದೂ ಸಲಹೆ ಇರಲಿ!
ನಿಮ್ಮ ಮನೆಯಲ್ಲಿ ಮುಂದಿನ ವರ್ಷ ಮಾರ್ಚ್ ನಲ್ಲಿ ಮಗನದ್ದೋ. ಮಗಳದ್ದೋ ಮದುವೆ ಇದೆ ಎಂದು ಇಟ್ಟುಕೊಳ್ಳಿ. ಅದಕ್ಕೆ ನೀವು ಈಗಿನಿಂದಲೇ ತಯಾರಿ ಶುರು ಇಟ್ಟುಕೊಂಡಿರುತ್ತೀರಿ. ಆಗಾಗ ಮನೆಯ ಸದಸ್ಯರು ಒಂದೆಡೆ ಸೇರುತ್ತೀರಿ. ಮದುವೆಯ ಛತ್ರ ಯಾವುದು, ಯಾವ ಸಭಾಂಗಣಕ್ಕೆ ಎಷ್ಟಾಗುತ್ತದೆ, ಹಿಂದಿನ ದಿನ ಮೆಹಂದಿ ಇದ್ರೆ ಎಷ್ಟು ಖರ್ಚು ಜಾಸ್ತಿಯಾಗತ್ತದೆ, ಮದುವೆಯ ಮರುದಿನ ಸತ್ಯನಾರಾಯಣ ಪೂಜೆಗೆ ಎಷ್ಟು ಖರ್ಚಾಗುತ್ತದೆ, ಕ್ಯಾಟರಿಂಗ್ ಯಾರಿಗೆ ಕೊಡುವುದು, ವಾಲಗ ಯಾರದ್ದು, ಹೂವಿನ ಡೆಕೋರೇಶನ್ ಯಾರಿಗೆ ಕೊಡುವುದು, ಫೋಟೊ, ವಿಡಿಯೋ ಯಾರದ್ದು ಹೀಗೆ ಪ್ರತಿಯೊಂದನ್ನು ನಿಮ್ಮ ಬಜೆಟಿಗೆ ತಕ್ಕಂತೆ ಪ್ಲಾನ್ ಮಾಡುತ್ತಿರಿ. ಎಲ್ಲಿ ಕೂಡ ಹಣ ವೇಸ್ಟ್ ಆಗದ ಹಾಗೆ ನೋಡಿಕೊಳ್ಳುತ್ತೀರಿ. ಎಲ್ಲಿ ಕಡಿಮೆಗೆ ಒಳ್ಳೆಯ ವ್ಯವಸ್ಥೆ ಆಗುತ್ತೆ ಎಂದು ನೋಡಿ ಅಳೆದು ತೂಗಿ ಅವರಿಗೆ ಆರ್ಡರ್ ಕೊಟ್ಟಿರುತ್ತೀರಿ. ಇದು ನೀವು ನಿಮ್ಮ ದುಡಿಮೆಯ ಹಣವನ್ನು ಬೇಕಾದ ರೀತಿಯಲ್ಲಿ ಬೇಕಾದ ಶೈಲಿಯಲ್ಲಿ ಖರ್ಚು ಮಾಡಲು ಅದೆಷ್ಟೋ ಮೀಟಿಂಗ್ ಮಾಡಿ ಕೊನೆಗೆ ಒಂದು ನಿರ್ಧಾರಕ್ಕೆ ಬರುವ ಪ್ರಮುಖ ಕಾಲಘಟ್ಟ.
ಈಗ ಇದನ್ನೇ ಸ್ವಲ್ಪ ವಿಸ್ತಾರವಾಗಿ ನೋಡೋಣ. ನಮ್ಮ ಮಂಗಳೂರು ಮಹಾನಗರ ಪಾಲಿಕೆ ಕೂಡ ಮುಂದಿನ ವರ್ಷದ ಬಜೆಟಿಗೆ ಸಿದ್ಧತೆಯನ್ನು ಆರಂಭಿಸಿದೆ. 2018-19ರಂದು ಯಾವುದಕ್ಕೆ ಎಷ್ಟು ಹಣ ಮೀಸಲಿಡಬೇಕು ಎನ್ನುವುದೇ ಬಜೆಟ್, ಸೇಮ್ ಟು ಸೇಮ್ ಮದುವೆಯ ಸಮಾರಂಭ ಇದ್ದ ಹಾಗೆ. ಇಲ್ಲೂ ಕೂಡ ರಸ್ತೆ ಕಾಮಗಾರಿಗೆ ಎಷ್ಟು ಇಡಬೇಕು, ಒಳಚರಂಡಿಗೆ ಎಷ್ಟು ಇಡಬೇಕು, ನೀರು ಪೂರೈಕೆ, ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗೆ, ಬಿಪಿಎಲ್ ಕಾರ್ಡ್ ಹೋಲ್ಡರ್ಸ್ ನವರಿಗೆ ಮನೆ ರಿಪೇರಿಗೆ, ಆಶ್ರಯ ಯೋಜನೆಗೆ, ಕ್ರೀಡಾ ಚಟುವಟಿಕೆಗಳಿಗೆ ಹೀಗೆ ಯಾವುದಕ್ಕೆ ಎಷ್ಟು ಹಣ ಮೀಸಲಿಡಬೇಕು ಎನ್ನುವುದರ ಕುರಿತು ಚರ್ಚೆಯಾಗುತ್ತದೆ. ಅದಕ್ಕಾಗಿ ಸಾರ್ವಜನಿಕರಿಂದ ಫೀಡ್ ಬ್ಯಾಕ್ ತೆಗೆದುಕೊಳ್ಳುವ ಕಾರ್ಯ ಇನ್ನೇನೂ ಶುರುವಾಗಲಿದೆ. ಮೊನ್ನೆಯಷ್ಟೇ ಒಂದು ದಿನ ನಿಗದಿಗೊಳಿಸಲಾಗಿತ್ತು. ಆದರೆ ಆವತ್ತು ಸಭೆ ನಡೆದಿಲ್ಲ. ಅದನ್ನು ಮುಂದೂಡಲಾಗಿದೆ. ಬಹುಶ: ಬೇಗದಲ್ಲಿ ಮತ್ತೊಂದು ದಿನ ಸೂಚಿಸಬಹುದು. ಅದು ಪತ್ರಿಕೆಗಳಲ್ಲಿ ಬರುತ್ತದೆ. ಆವತ್ತು ದಯವಿಟ್ಟು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು. ಯಾಕೆಂದರೆ ಪಾಲಿಕೆಯ ಬಜೆಟ್ ಎಂದರೆ ಅದು ನಮ್ಮ ನಿಮ್ಮ ತೆರಿಗೆಯ ಹಣ. ಹೇಗೆ ನಿಮ್ಮ ಮನೆಯ ಯಾವುದಾದರೂ ಖರ್ಚು ಬಂದಾಗ ನೀವು ಮನೆಯ ಬೇರೆ ಸದಸ್ಯರೊಂದಿಗೆ ಸೇರಿ ಇದಕ್ಕೆ ಇಷ್ಟು ಖರ್ಚು ಮಾಡಿದರೆ ಸಾಕು, ಅದಕ್ಕೆ ಅಷ್ಟು ಖರ್ಚು ಮಾಡಿದರೆ ಸಾಕು ಎಂದು ಹೇಳುತ್ತಿರಲ್ಲವೋ ಹಾಗೆ ಇಲ್ಲಿ ಕೂಡ ಹೇಳಬೇಕು. ಇಲ್ಲದಿದ್ದರೆ ಪಾಲಿಕೆಯ ಸದಸ್ಯರು, ಅಧಿಕಾರಿಗಳು ತಮಗೆ ಬೇಕಾದ ರೀತಿಯಲ್ಲಿ, ತಮಗೆ ಲಾಭ ಆಗುವ ರೀತಿಯಲ್ಲಿ ಅಂಕಿಅಂಶಗಳನ್ನು ಬರೆದು ಮತ್ತು ಅವರಿಗೆ ಬೇಕಾದ ಕೆಲಸ ಮಾಡಿಸುವುದರಿಂದ ನಂತರ ಸಾರ್ವಜನಿಕರಿಗೆ ಮಾತನಾಡಲು ಅವಕಾಶ ಇರುವುದಿಲ್ಲ. ಜನರ ಭಾಗಿದಾರಿಕೆ ಇಲ್ಲದೆ ಹೋದರೆ ಬಜೆಟ್ ಅದರ ಪಾಡಿಗೆ ಅದು ಯಾರ್ಯಾರ ಮರ್ಜಿಯಿಂದಲೋ ನಡೆದು ಹೋಗುತ್ತದೆ.
ಪ್ರತಿ ಬಾರಿ ಬಜೆಟ್ ಮಾಡುವಾಗಲೂ ಅದಕ್ಕೊಂದು ನಿಯಮ ಎಂದು ಇರುತ್ತದೆ. ಅದನ್ನು ಪಾಲಿಕೆ ಸರಿಯಾಗಿ ಪಾಲಿಸಬೇಕೆಂದರೆ ಅವರಿಗೆ ನಿಮ್ಮ ಅಂದರೆ ನಾಗರಿಕರ ಹೆದರಿಕೆ ಇರಬೇಕು. ಜನರು ನಮ್ಮ ಪ್ರತಿ ಹೆಜ್ಜೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಗ್ಯಾರಂಟಿ ಇದ್ದರೆ ಪಾಲಿಕೆ ಕೂಡ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತದೆ. ಆದ್ದರಿಂದ ನಾನು ಹೇಳುವುದು ನೀವು ಸಾರ್ವಜನಿಕರ ಫೀಡ್ ಬ್ಯಾಕ್ ತೆಗೆದುಕೊಳ್ಳುವ ದಿನ ಅಗತ್ಯವಾಗಿ ಪಾಲಿಕೆಗೆ ಬನ್ನಿ. ಅಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ. ಪಾಲಿಕೆಗೆ ಹೇಗೆಲ್ಲ ಆದಾಯ ಕೂಡ ಹೆಚ್ಚುವರಿಯಾಗಿ ಬರಬಹುದು ಎನ್ನುವುದರ ಕುರಿತು ಕೂಡ ನೀವು ಅಭಿಪ್ರಾಯ ತಿಳಿಸಬಹುದು. ಉದಾಹರಣೆಗೆ ಹೋರ್ಡಿಂಗ್ ಗಳಿಂದ ಪಾಲಿಕೆಗೆ ಬರುವ ಆದಾಯಕ್ಕೂ ನಗರದಲ್ಲಿರುವ ಹೋರ್ಡಿಂಗ್ಸ್ ಗಳಿಗೂ ಅಜಗಜಾಂತರವಿದ್ದರೆ ಅದನ್ನು ಕೂಡ ತಿಳಿಸಬಹುದು. ಹಾಗೆ ಎಲ್ಲಿ ಪಾಲಿಕೆಯಿಂದ ಹಣ ವ್ಯರ್ಥವಾಗಿ ಪೋಲಾಗುತ್ತಿರುತ್ತದೆಯೋ ಅದನ್ನು ಕೂಡ ಹೇಳಬಹುದು. ಟ್ಯಾಂಕರ್ ನಿಂದ ಮನೆಮನೆಗೆ ನೀರು ಪೂರೈಕೆ ಎಂದು ವ್ಯಯವಾಗುವ ಹಣಕ್ಕೂ, ವಾಸ್ತವಕ್ಕೂ ತಾಳೆಯಾಗದಿದ್ದರೆ ಅದನ್ನು ಕೂಡ ತಿಳಿಸಬಹುದು. ಸಾಮಾನ್ಯವಾಗಿ ಪಾಲಿಕೆಯಲ್ಲಿ ಆದಾಯವನ್ನು ಹೇಗೆ ಬಜೆಟಿನಲ್ಲಿ ನಮೂದಿಸುತ್ತಾರೆ ಎಂದರೆ ಹಿಂದಿನ ವರ್ಷದ ಆದಾಯಕ್ಕಿಂತ ಹತ್ತು ಶೇಕಡಾ ಆದಾಯವನ್ನು ಹೆಚ್ಚುವರಿಯಾಗಿ ಇಟ್ಟು ಬಜೆಟ್ ತಯಾರಿಸಲಾಗುತ್ತದೆ. ಹಾಗೆ ಬಜೆಟ್ ನಲ್ಲಿ ಆಯಾ ವರ್ಷದ ಪರಿಸ್ಥಿತಿಗೆ ಅನುಗುಣವಾಗಿ ಯಾವುದಕ್ಕೆ ಎಷ್ಟು ಹಣ ಮೀಸಲಿಡುವುದು ಸೂಕ್ತ ಎನ್ನುವುದನ್ನು ಸಾರ್ವಜನಿಕರು ಹೇಳಬೇಕು. ನಾನಂತೂ ಹೋಗುತ್ತೇನೆ. ನೀವು ಕೂಡ ಬಂದರೆ ಒಳ್ಳೆಯದು. ಆದರೆ ಬೇಸರದ ವಿಷಯ ಎಂದರೆ ಇಂತಹ ಸಭೆಗಳಾಗುವಾಗ ಪಾಲಿಕೆಯ ಅನೇಕ ಸದಸ್ಯರೇ ಗೈರು ಹಾಜರಾಗಿರುತ್ತಾರೆ. ನೀವು ಬಂದರೆ ನಿಮ್ಮ ವಾರ್ಡಿನ ಸದಸ್ಯ/ಸ್ಯೆಗೆ ಪಾಲಿಕೆಯ ಬಜೆಟ್ ಬಗ್ಗೆ, ನಿಮ್ಮ ತೆರಿಗೆಯ ಹಣದ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ಕೂಡ ಗೊತ್ತಾಗುತ್ತದೆ
Leave A Reply