ಸಿಸಿಬಿ ಪೊಲೀಸರು ಬಂಧಿಸಿದ ಉಳ್ಳಾಲ ಯುವ ಕಾಂಗ್ರೆಸ್ ಉಪಾಧ್ಯಕ್ಷ ಟಾರ್ಗೆಟ್ ಗ್ರೂಪಿನ ಸದಸ್ಯನಾ?

ದಕ್ಷಿಣ ಕನ್ನಡ ಜಿಲ್ಲೆಗೆ ಗಾಂಜಾ, ಅಫೀಮು, ಡ್ರಗ್ಸ್ ಇದನ್ನು ಪೂರೈಸುವ ಹೆಬ್ಬಾಗಿಲು ಎಂದರೆ ಅದು ಉಳ್ಳಾಲ. ಕೇರಳದ ಮುಕುಟದಲ್ಲಿರುವ ನಗರವಾಗಿರುವ ಉಳ್ಳಾಲಕ್ಕೆ ಗಾಂಜಾ ಪೂರೈಸುವ ಪಡೆ ಯಾವತ್ತೂ ಆಕ್ಟಿವ್ ಆಗಿಯೇ ಇರುತ್ತದೆ. ಗಾಂಜಾ ಪಡೆಯ ಯುವಕರು ಬೂತ್ ಮಟ್ಟದಲ್ಲಿ ಯುವಕರಿಗೆ ಆರ್ಥಿಕ ಶಕ್ತಿ ಇರುವುದರಿಂದ ಆಡಳಿತ ಪಕ್ಷದ ನಾಯಕರು ತಮಗೆ ಗೊತ್ತಿದ್ದರೂ ಅವರನ್ನು ಏನೂ ಮಾಡಲು ಸಾಧ್ಯವಿಲ್ಲ. ಇದು ಕೇವಲ ಕಾಂಗ್ರೆಸ್ ಅಂತ ಅಲ್ಲ, ಬಿಜೆಪಿ ಸಹಿತ ಬೇರೆ ಬೇರೆ ಪಕ್ಷದ ತಳಮಟ್ಟದ ಕಾರ್ಯಕರ್ತರಿಗೆ ಬೂತ್ ಮಟ್ಟದಲ್ಲಿ ಬೇಕಾದ ನೆರವನ್ನು ನೀಡುವುದು ಇದೇ ಗಾಂಜಾ ವ್ಯಾಪಾರಿಗಳು. ಆದರೆ ಇಲ್ಲಿಯ ತನಕ ಇಂತಹ ಗಾಂಜಾ ವ್ಯಾಪಾರಿಗಳು ಅಥವಾ ಕ್ರಿಮಿನಲ್ ಹಿನ್ನಲೆಯ ವ್ಯಕ್ತಿಗಳು ಪಕ್ಷಗಳ ಪದಾಧಿಕಾರಿಗಳಾಗಿ ನೇಮಕವಾಗಿರಲಿಲ್ಲ. ಆದರೆ ಇತ್ತೀಚೆಗೆ ಉಳ್ಳಾಲದ ನೋಟೋರಿಯಸ್ ಗ್ಯಾಂಗ್ ಟಾರ್ಗೆಟ್ ಇದರ ಸದಸ್ಯನೊಬ್ಬ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ಸಿನ ಉಪಾಧ್ಯಕ್ಷನಾಗಿ ಆಯ್ಕೆಗೊಂಡಿರುವುದು ಆಶ್ಚರ್ಯ ಉಂಟು ಮಾಡಿದೆ. ಇದು ಉಳ್ಳಾಲದ ಬಿಜೆಪಿ ಮುಖಂಡರಿಗೆ ಕಾಂಗ್ರೆಸ್ಸಿನ ವಿರುದ್ಧ ಪ್ರಯೋಗಿಸಲು ಸುಲಭವಾಗಿರುವ ಅಸ್ತ್ರವೊಂದನ್ನು ಯುಟಿ ಖಾದರ್ ಅವರೇ ಕೊಟ್ಟಂತೆ ಆಗಿದೆ.
ಇಲ್ಯಾಸ್ ಟಾರ್ಗೆಟ್ ಗ್ರೂಪಿನ ಸದಸ್ಯ ಎನ್ನುವುದನ್ನು ಬಹಿರಂಗಪಡಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಅಪರಾಧ ಪತ್ತೆ ದಳದ ಪೊಲೀಸರು. ಉಳ್ಳಾಲದಲ್ಲಿ ಟಾರ್ಗೆಟ್ ಗ್ರೂಪ್ ಮೂಲಕ ಹಲವಾರು ಗಣ್ಯರನ್ನು ಬೆದರಿಸಿ ಹಣ ಲೂಟುತ್ತಿದ್ದ , ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಇಲ್ಯಾಸನನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಅವನ ಹಿನ್ನಲೆಯನ್ನು ನೋಡಿದಾಗ ಅವನು ಯುವ ಕಾಂಗ್ರೆಸ್ಸಿನ ಉಳ್ಳಾಲ ಬ್ಲಾಕ್ ನ ಉಪಾಧ್ಯಕ್ಷನಾಗಿ ಆಯ್ಕೆಯಾಗಿದ್ದ. ಇದು ಬಿಜೆಪಿ ಮುಖಂಡರ ಗಮನಕ್ಕೆ ಬರುತ್ತಿದ್ದ ಹಾಗೆ ಇಲ್ಯಾಸ್ ಯುವ ಕಾಂಗ್ರೆಸ್ಸಿನ ಪದಾಧಿಕಾರಿಯಾಗಲು ಸಚಿವ ಯುಟಿ ಖಾದರ್ ಅವರ ಕೃಪಾಕಟಾಕ್ಷವೇ ಕಾರಣ ಎನ್ನುವಂತೆ ಆರೋಪಿಸಲಾಗುತ್ತಿದೆ.
ಅಷ್ಟಕ್ಕೂ ಟಾರ್ಗೆಟ್ ಗ್ರೂಪ್ ಎಂದರೇನು?
ದೇರಳಕಟ್ಟೆಯಲ್ಲಿ ಮೆಡಿಕಲ್ ವಿದ್ಯಾರ್ಥಿನಿಯರನ್ನು ಕಿಡ್ನಾಪ್ ಮಾಡಿ ಅವಳನ್ನು ಅವಳ ಬಾಯ್ ಫ್ರೆಂಡ್ ಒಟ್ಟಿಗೆ ಅಶ್ಲೀಲ ಭಂಗಿಯಲ್ಲಿ ನಿಲ್ಲಿಸಿ ಫೋಟೋ ತೆಗೆದು ಹಣಕ್ಕಾಗಿ ಪೀಡಿಸಿ ಅವಳಿಗೆ ಲೈಂಗಿಕವಾಗಿ ಕಿರುಕುಳ ನೀಡಿದ ಪುಂಡರ ತಂಡವೇ ಟಾರ್ಗೆಟ್. ಆರೋಪಿಗಳನ್ನು ಹಿಡಿಯಲು ಪೊಲೀಸರು ಬಲೆ ಬೀಸಿದಾಗ ಪೊಲೀಸ್ ಅಧಿಕಾರಿಗಳೇ ಮೇಲೆನೆ ಹಲ್ಲೆ ಮಾಡಿದ ಕುಖ್ಯಾತಿ ಟಾಗರ್ೆಟ್ ಗ್ರೂಪಿಗೆ ಇದೆ. ಇತ್ತೀಚೆಗೆ ಉಳ್ಳಾಲದಲ್ಲಿ ಗಾಂಜಾ ಮಾಫಿಯಾದ ವಿರುದ್ಧ ಧ್ವನಿ ಎತ್ತಿದ್ದ ಝುಬೇರ್ ನನ್ನು ಭೀಕರವಾಗಿ ಹತ್ಯೆ ಮಾಡಿದ ಹಂತಕ ಪಡೆಗೆ ಟಾರ್ಗೆಟ್ ಗ್ರೂಪ್ ನೊಂದಿಗೆ ಸಂಪರ್ಕ ಇದೆ ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲ ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಯನ್ನು ರಾಷ್ಟ್ರೀಯ ಪಕ್ಷವೊಂದು ತನ್ನ ಪದಾಧಿಕಾರಿಯನ್ನಾಗಿ ಮಾಡಿದ್ದು ಸರಿಯಾ ಎನ್ನುವುದು ಬಿಜೆಪಿಯ ಪ್ರಶ್ನೆ.