ನೀತಿ ಸಂಹಿತೆ ಉಲ್ಲಂಘಿಸಿದ ಹಾರ್ದಿಕ್ ಪಟೇಲ್ ವಿರುದ್ಧ ಎಫ್ಐಆರ್!
ಗಾಂಧಿನಗರ: ಚುನಾವಣೆಯಲ್ಲಿ ಗೆದ್ದರೆ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಒಪ್ಪಿಕೊಂಡ ಬಳಿಕ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಬೆಂಬಲಿಸಿರುವ ಪಿಎಎಎಸ್ ಮುಖ್ಯಸ್ಥ ಹಾರ್ದಿಕ್ ಪಟೇಲ್ ವಿರುದ್ಧ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ನವೆಂಬರ್ 29ರಂದು ರಾಜ್ ಕೋಟ್ ನಲ್ಲಿ ರ್ಯಾಲಿ ನಡೆಸಲು ಜಿಲ್ಲಾಡಳಿತ ನಿರಾಕರಿಸಿದ್ದರೂ, ರ್ಯಾಲಿ ನಡೆಸಿದ ಹಿನ್ನೆಲೆಯಲ್ಲಿ ಹಾರ್ದಿಕ್ ಪಟೇಲ್ ಹಾಗೂ ಬೆಂಬಲಿಗ ತುಷಾರ್ ನಂದಾನಿ ವಿರುದ್ಧ ಮಾಳವೀಯ ನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ನಗರದ 8,9,10ನೇ ವಾರ್ಡಿನಲ್ಲಿ ಪಟೇಲ್ ಸಮುದಾಯದವರೆಲ್ಲರನ್ನೂ ಸೇರಿಸಿ ಸಭೆ ನಡೆಸಲು ಅನುಮತಿ ಕೋರಿ ನಂದಾನಿ ಮನವಿ ಸಲ್ಲಿಸಿದ್ದರು. ಅದೇ ದಿನ, ಅದೇ ಸ್ಥಳದಲ್ಲಿ ಮಹಾ ಕ್ರಾಂತಿ ರ್ಯಾಲಿ ನಡೆಸಲು ಅನುಮತೀ ನೀಡುವಂತೆ ಪಿಎಎಎಸ್ ಮನವಿ ಸಲ್ಲಿಸಿತ್ತು. ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಎರಡೂ ಮನವಿ ತಿರಸ್ಕರಿಸಲಾಗಿತ್ತು ಎಂದು ಚುನಾವಣೆ ಅಧಿಕಾರಿ ಪಿ.ಆರ್.ಜಾನಿ ತಿಳಿಸಿದ್ದಾರೆ.
ಆದರೂ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಸುಮಾರು 15 ಸಾವಿರ ಜನರನ್ನು ಸೇರಿಸಿ ರ್ಯಾಲಿ ಮಾಡಲಾಗಿದೆ. ಹಾಗಾಗಿ ಕೇಸ್ ದಾಖಲಿಸಲು ಅನುಮತಿ ನೀಡಲಾಗಿದೆ ಎಂದು ವಿವರಿಸಿದ್ದಾರೆ.
ಹಾರ್ದಿಕ್ ಪಟೇಲ್ ಸೇರಿ ಹಲವರ ವಿರುದ್ಧ ಭಾರತೀಯ ದಂಡ ಸಂಹಿತೆ 143 (ಕಾನೂನಾತ್ಮಕವಲ್ಲದ ಸಭೆ) ಹಾಗೂ 188 (ಸರ್ಕಾರದ ನಿಯಮ ಉಲ್ಲಂಘನೆ) ಪ್ರಕರಣ ದಾಖಲಾಗಿದೆ.
Leave A Reply